|
| 1 |
|
| “ಯೋಬನೇ, ನೀನು ಲಿವ್ಯಾತಾನನನ್ನು ಗಾಳದಿಂದ ಹಿಡಿಯಬಲ್ಲೆಯಾ? ನೀನು ಅದರ ನಾಲಿಗೆಯನ್ನು ಅದುಮಿ ಹಗ್ಗದಿಂದ ಕಟ್ಟಬಲ್ಲೆಯಾ? |
|
| 2 |
|
| ಅದರ ಮೂಗಿನ ಮೂಲಕ ಹಗ್ಗವನ್ನಾಗಲಿ ದವಡೆಗಳ ಮೂಲಕ ಕೊಂಡಿಯನ್ನಾಗಲಿ ಹಾಕಬಲ್ಲೆಯಾ? |
|
| 3 |
|
| ತನ್ನನ್ನು ಸ್ವತಂತ್ರವಾಗಿ ಬಿಟ್ಟುಕೊಡಬೇಕೆಂದು ಅದು ನಿನ್ನನ್ನು ಬೇಡಿಕೊಳ್ಳುವುದೇ? ಅದು ನಯವಾದ ಪದಗಳಿಂದ ನಿನ್ನೊಂದಿಗೆ ಮಾತಾಡುತ್ತದೆಯೋ? |
|
| 4 |
|
| ಅದು ನಿನ್ನೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುವುದೇ? ಸದಾಕಾಲ ನಿನ್ನ ಸೇವೆಮಾಡುವುದಾಗಿ ವಾಗ್ದಾನ ಮಾಡುವುದೇ? |
|
| 5 |
|
| ನೀನು ಪಕ್ಷಿಯೊಂದಿಗೆ ಆಟವಾಡುವಂತೆ ಅದರ ಜೊತೆಯಲ್ಲಿ ಆಟವಾಡುವಿಯಾ? ನಿನ್ನ ದಾಸಿಯರು ಅದರೊಂದಿಗೆ ಆಟವಾಡಲೆಂದು ಹಗ್ಗದಿಂದ ಅದನ್ನು ಕಟ್ಟಿಹಾಕುವಿಯಾ? |
|
| 6 |
|
| ಯೋಬನೇ, ಬೆಸ್ತರು ಅದನ್ನು ನಿನ್ನಿಂದ ಕೊಂಡುಕೊಳ್ಳಲು ಪ್ರಯತ್ನಿಸುವರೇ? ಅವರು ಅದನ್ನು ವರ್ತಕರಿಗೆ ಮಾರುವುದಕ್ಕಾಗಿ ತುಂಡುತುಂಡಾಗಿ ಕತ್ತರಿಸುವರೇ? |
|
| 7 |
|
| ನೀನು ಭರ್ಜಿಗಳನ್ನು ಎಸೆದು ಅದರ ಚರ್ಮಕ್ಕೂ ತಲೆಗೂ ನಾಟಿಸಬಲ್ಲೆಯಾ? |
|
| 8 |
|
| “ಯೋಬನೇ, ನೀನು ಅದರ ಮೇಲೆ ನಿನ್ನ ಕೈಯಿಟ್ಟು ನೋಡು. ಆ ಪ್ರಯಾಸದ ಹೋರಾಟವನ್ನು ನೆನಸಿಕೊಂಡರೆ ಅದನ್ನು ನೀನು ಮುಟ್ಟುವುದೇ ಇಲ್ಲ. |
|
| 9 |
|
| ನೀನು ಅದನ್ನು ಸೋಲಿಸಬಹುದೆಂದು ಯೋಚಿಸಿಕೊಂಡಿದ್ದರೆ, ಇನ್ನಾದರೂ ಅದನ್ನು ಮರೆತುಬಿಡು! ಅದನ್ನು ನೋಡಿದರೇ ನಿನಗೆ ಭಯವಾಗುತ್ತದೆ! |
|
| 10 |
|
| ಅದನ್ನು ಕೋಪಗೊಳಿಸುವಷ್ಟು ಧೈರ್ಯ ಯಾರಿಗೂ ಇಲ್ಲ. “ಹೀಗಿರುವಲ್ಲಿ ನನಗೆ ವಿರುದ್ಧವಾಗಿ ನಿಂತುಕೊಳ್ಳುವಷ್ಟು ಶಕ್ತಿ ಯಾರಿಗಿದೆ? |
|
| 11 |
|
| ನಾನು ಯಾರಿಗೂ ಯಾವ ಸಾಲವನ್ನೂ ತೀರಿಸಬೇಕಿಲ್ಲ. ಆಕಾಶಮಂಡಲದ ಕೆಳಗಿರುವ ಸಮಸ್ತವೂ ನನ್ನದೇ. |
|
| 12 |
|
| “ಯೋಬನೇ, ಲಿವ್ಯಾತಾನನ ಅಂಗಗಳನ್ನೂ ಶಕ್ತಿಯನ್ನೂ ಸೊಗಸಾದ ಆಕಾರವನ್ನೂ ನಿನಗೆ ವರ್ಣಿಸುವೆನು. |
|
| 13 |
|
| ಯಾವನೂ ಅದರ ಚರ್ಮವನ್ನು ಸುಲಿಯಲಾರನು. ಯಾವನೂ ಅದರ ದವಡೆಗಳಿಗೆ ಚುಚ್ಚಲಾರನು. |
|
| 14 |
|
| ಬಲವಂತದಿಂದ ಅದರ ದವಡೆಗಳನ್ನು ತೆರೆಸಲು ಯಾರಿಗೂ ಸಾಧ್ಯವಿಲ್ಲ. ಅದರ ದವಡೆಹಲ್ಲುಗಳು ಜನರನ್ನು ಭಯಗೊಳಿಸುತ್ತವೆ. |
|
| 15 |
|
| ಅದರ ಹಿಂಬದಿಯಲ್ಲಿ ಗುರಾಣಿಗಳ ಸಾಲುಗಳು ಒಂದಕ್ಕೊಂದು ಬಿಗಿಯಲ್ಪಟ್ಟು ಮುದ್ರಿತವಾಗಿವೆ. |
|
| 16 |
|
| ಗಾಳಿಯೂ ಹಾದುಹೋಗದಂತೆ ಆ ಗುರಾಣಿಗಳು ಜೋಡಿಸಲ್ಪಟ್ಟಿವೆ. |
|
| 17 |
|
| ಗುರಾಣಿಗಳು ಒಂದಕ್ಕೊಂದು ಅಂಟಿಕೊಂಡು ಬಿಡಿಸಲು ಅಸಾಧ್ಯವಾಗಿದೆ. |
|
| 18 |
|
| ಅದರ ಸೀನಿನ ತುಂತುರುಗಳು ಥಳಥಳಿಸುತ್ತವೆ. ಅದರ ಕಣ್ಣುಗಳು ಮುಂಜಾನೆಯ ಬೆಳಕಿನಂತಿವೆ. |
|
| 19 |
|
| ಅದರ ಬಾಯೊಳಗಿಂದ ಉರಿಯುವ ಕೊಳ್ಳಿಗಳು ಹೊರಬರುತ್ತವೆ. ಬೆಂಕಿಯ ಜ್ವಾಲೆಗಳು ಹಾರುತ್ತವೆ. |
|
| 20 |
|
| ಕಾಯ್ದಮಡಕೆಯ ಕೆಳಗೆ ಉರಿಯುತ್ತಿರುವ ಆಪು ಹುಲ್ಲಿನಿಂದ ಬರುವ ಹೊಗೆಯಂತೆ ಅದರ ಮೂಗಿನಿಂದ ಹೊಗೆಯು ಹಾಯುವುದು. |
|
| 21 |
|
| ಅದರ ಉಸಿರು ಇದ್ದಲನ್ನು ಹೊತ್ತಿಸುವುದು; ಜ್ವಾಲೆಗಳು ಅದರ ಬಾಯೊಳಗಿಂದ ಹಾರುವವು. |
|
| 22 |
|
| ಅದರ ಕುತ್ತಿಗೆ ಬಹು ಶಕ್ತಿಯುತವಾಗಿದೆ; ಜನರು ಭಯಗೊಂಡು ಅದರ ಬಳಿಯಿಂದ ಓಡಿಹೋಗುವರು. |
|
| 23 |
|
| ಅದರ ಚರ್ಮದಲ್ಲಿ ಯಾವ ಬಲಹೀನತೆಯೂ ಇಲ್ಲ. ಅದು ಕಬ್ಬಿಣದಂತೆ ಗಟ್ಟಿಯಾಗಿದೆ. |
|
| 24 |
|
| ಅದರ ಹೃದಯ ಬಂಡೆಯಂತಿದೆ. ಅದಕ್ಕೆ ಭಯವೇ ಇಲ್ಲ. ಬೀಸುವ ಕೆಳಗಲ್ಲಿನಂತೆ ಅದು ಗಟ್ಟಿಯಾಗಿದೆ. |
|
| 25 |
|
| ಅದು ಎದ್ದಾಗ ಬಲಿಷ್ಠರು ಭಯಪಡುವರು. ಅದು ತನ್ನ ಬಾಲವನ್ನು ತೂಗಿದರೆ ಅವರು ಓಡಿಹೋಗುವರು. |
|
| 26 |
|
| ಅದಕ್ಕೆ ಬಡಿಯುವ ಖಡ್ಗ, ಭರ್ಜಿ ಈಟಿಗಳು ಹಿಂದಕ್ಕೆ ಪುಟಹಾರುತ್ತವೆ. ಯಾವ ಆಯುಧಗಳೂ ಅದನ್ನು ನೋಯಿಸಲಾರವು! |
|
| 27 |
|
| ಅದು ಕಬ್ಬಿಣವನ್ನು ಒಣಹುಲ್ಲಿನಂತೆಯೂ ತಾಮ್ರವನ್ನು ಲೊಡ್ಡುಮರದಂತೆಯೂ ಮುರಿದುಹಾಕುವುದು. |
|
| 28 |
|
| ಬಾಣಗಳೂ ಅದನ್ನು ಓಡಿಸಲಾರವು, ಕವಣಿಕಲ್ಲುಗಳೂ ಅದಕ್ಕೆ ಒಣಹುಲ್ಲಿನಂತಿವೆ. |
|
| 29 |
|
| ಅದು ತನಗೆ ಬಡಿದ ಮರದ ದೊಣ್ಣೆಯನ್ನು ಹುಲ್ಲುಕಡ್ಡಿಯೆಂದು ಭಾವಿಸಿಕೊಳ್ಳುವುದು. ಮನುಷ್ಯರು ಬಿರುಸಾಗಿ ಎಸೆಯುವ ಭರ್ಜಿಗಳನ್ನು ಕಂಡು ನಗುತ್ತದೆ. |
|
| 30 |
|
| ಅದರ ಕೆಳಭಾಗವು ಮಡಕೆಯ ಹರಿತವಾದ ಚೂರುಗಳಂತಿವೆ. ಅದು ನಡೆಯುವಾಗ ಒಕ್ಕಣೆಯ ಸುತ್ತಿಗೆಯಂತೆ ಮಣ್ಣಿನಲ್ಲಿ ಕುಳಿಗಳನ್ನು ಮಾಡುತ್ತದೆ. |
|
| 31 |
|
| ಮಡಕೆಯಲ್ಲಿ ಕುದಿಯುತ್ತಿರುವ ನೀರಿನಂತೆಯೂ ಮಡಕೆಯಲ್ಲಿ ಕುದಿಯುತ್ತಿರುವ ಎಣ್ಣೆಯಂತೆಯೂ ಅದು ನೀರನ್ನು ಕುದಿಸುವುದು. |
|
| 32 |
|
| ಅದು ಈಜುವಾಗ ಅದರ ಹಿಂದೆ ಒಂದು ದಾರಿಯೇ ನಿರ್ಮಿತವಾಗುವುದು. ಅದು ನೀರನ್ನು ಕಲಕಿ ತನ್ನ ಹಿಂದೆ ಬಿಳಿ ನೊರೆಯನ್ನು ಉಂಟುಮಾಡುವುದು. |
|
| 33 |
|
| ಭೂಮಿಯ ಮೇಲಿರುವ ಯಾವ ಪ್ರಾಣಿಯೂ ಅದರಂತಿಲ್ಲ. ಈ ಪ್ರಾಣಿಯೊಂದೇ ಯಾವುದಕ್ಕೂ ಭಯಪಡದು. |
|
| 34 |
|
| ಅತ್ಯಂತ ಗರ್ವಿಷ್ಠ ಪ್ರಾಣಿಗಳನ್ನೂ ಅದು ಕಡೆಗಣಿಸುವುದು. ಅದು ಕ್ರೂರಪ್ರಾಣಿಗಳಿಗೆಲ್ಲಾ ರಾಜನಾಗಿದೆ.” |
|
|
|
|