|
| 1 |
|
| ಯೆಹೋವನೇ, ಪೂರ್ಣಹೃದಯದಿಂದ ನಿನ್ನನ್ನು ಕೊಂಡಾಡುವೆನು. ನಿನ್ನ ಅದ್ಭುತಕಾರ್ಯಗಳನ್ನೆಲ್ಲಾ ವರ್ಣಿಸುವೆನು. |
|
| 2 |
|
| ದೇವರೇ, ನಿನ್ನಲ್ಲಿ ನಾನು ಸಂತೋಷಿಸುತ್ತಾ ಉಲ್ಲಾಸಪಡುವೆನು. ಮಹೋನ್ನತನೇ, ನಿನ್ನ ಹೆಸರನ್ನೇ ಸಂಕೀರ್ತಿಸುವೆನು. |
|
| 3 |
|
| ನನ್ನ ವೈರಿಗಳು ನಿನ್ನ ಎದುರಿನಿಂದ ಹಿಂತಿರುಗಿ ಓಡಿಹೋದರು. ಆದರೆ ಅವರು ಬಿದ್ದು ನಾಶವಾದರು. |
|
| 4 |
|
| ನೀನು ನೀತಿವಂತನಾದ ನ್ಯಾಯಾಧಿಪತಿ. ಸಿಂಹಾಸನದ ಮೇಲೆ ಕುಳಿತು ನೀನು ನ್ಯಾಯತೀರಿಸುವೆ. ನೀನು ನನ್ನ ಮೊಕದ್ದಮೆಯನ್ನು ಕೇಳಿ ನನ್ನ ವಿಷಯದಲ್ಲಿ ತೀರ್ಪು ಮಾಡಿರುವೆ. |
|
| 5 |
|
| ನೀನು ಜನಾಂಗಗಳನ್ನು ಟೀಕಿಸಿ ಆ ದುಷ್ಟರನ್ನು ನಾಶಮಾಡಿದೆ. ನೀನು ಅವರ ಹೆಸರುಗಳನ್ನು ಜೀವಿತರ ಪಟ್ಟಿಯಿಂದ ಶಾಶ್ವತವಾಗಿ ಅಳಿಸಿಹಾಕಿರುವೆ. |
|
| 6 |
|
| ವೈರಿಗಳು ಇಲ್ಲವಾದರು. ನೀನು ಅವರ ನಗರಗಳನ್ನು ನಾಶಮಾಡಿದೆ! ಈಗ ಹಾಳಾದ ಕಟ್ಟಡಗಳು ಮಾತ್ರ ಉಳಿದಿವೆ. ದುಷ್ಟರನ್ನು ಜ್ಞಾಪಕಕ್ಕೆ ತರುವ ಯಾವುದೂ ಉಳಿದಿಲ್ಲ. |
|
| 7 |
|
| ಯೆಹೋವನಾದರೋ ಶಾಶ್ವತವಾಗಿ ಆಳುವನು. ಆತನು ಭೂಲೋಕಕ್ಕೆ ನ್ಯಾಯದೊರಕಿಸುವುದಕ್ಕಾಗಿ ತನ್ನ ರಾಜ್ಯವನ್ನು ಬಲಗೊಳಿಸಿದ್ದಾನೆ. |
|
| 8 |
|
| ಆತನು ಭೂನಿವಾಸಿಗಳಿಗೆಲ್ಲಾ ನ್ಯಾಯವಾಗಿ ತೀರ್ಪುಮಾಡುವನು. ಆತನು ಜನಾಂಗಗಳಿಗೆಲ್ಲಾ ಯಥಾರ್ಥವಾಗಿ ತೀರ್ಪುಮಾಡುವನು. |
|
| 9 |
|
| ಯೆಹೋವನು ಕುಗ್ಗಿಹೋದವರಿಗೆ ಆಶ್ರಯಸ್ಥಾನವೂ ಇಕ್ಕಟ್ಟಿನಲ್ಲಿರುವವರಿಗೆ ಆಶ್ರಯದುರ್ಗವೂ ಆಗಿದ್ದಾನೆ. |
|
| 10 |
|
| ಯೆಹೋವನೇ, ನಿನ್ನ ಹೆಸರನ್ನು ಬಲ್ಲವರು ನಿನ್ನಲ್ಲಿ ಭರವಸೆಯಿಡುವರು. ಯಾಕೆಂದರೆ ನಿನ್ನ ಸಹಾಯಕ್ಕಾಗಿ ಬರುವವರನ್ನು ನೀನು ತೊರೆದುಬಿಡುವುದಿಲ್ಲ. |
|
| 11 |
|
| ಚೀಯೋನಿನ ನಿವಾಸಿಗಳೇ, ಯೆಹೋವನನ್ನು ಸಂಕೀರ್ತಿಸಿರಿ. ಆತನ ಮಹತ್ಕಾರ್ಯಗಳನ್ನು ಜನಾಂಗಗಳಲ್ಲಿ ಪ್ರಕಟಿಸಿರಿ. |
|
| 12 |
|
| ಪ್ರಾಣಾಪರಾಧಕ್ಕೆ ಮುಯ್ಯಿತೀರಿಸುವ ಆತನು ಕುಗ್ಗಿಹೋದವರ ಮೊರೆಯನ್ನು ಮರೆಯದೆ ಅವರನ್ನು ಜ್ಞಾಪಿಸಿಕೊಂಡನು. |
|
| 13 |
|
| “ಯೆಹೋವನೇ, ನನ್ನನ್ನು ಕನಿಕರಿಸು. ಇಗೋ, ವೈರಿಗಳು ನನಗೆ ಕೇಡುಮಾಡುತ್ತಿದ್ದಾರೆ. ‘ಮರಣ ದ್ವಾರ’ದಿಂದ ತಪ್ಪಿಸಿ ಕಾಪಾಡು.” |
|
| 14 |
|
| ಆಗ ಜೆರುಸಲೇಮಿನ ದ್ವಾರಗಳ ಬಳಿಯಲ್ಲಿ ನಿನ್ನನ್ನು ಸಂಕೀರ್ತಿಸುವೆನು. ನೀನು ನನ್ನನ್ನು ರಕ್ಷಿಸಿದ್ದರಿಂದ ಹರ್ಷಿಸುವೆನು. |
|
| 15 |
|
| ಅನ್ಯಜನಾಂಗಗಳವರು ತಾವು ತೋಡಿದ ಕುಣಿಗಳಲ್ಲಿ ತಾವೇ ಬಿದ್ದುಹೋಗುವರು; ತಾವು ಹಾಸಿದ ಬಲೆಗಳಲ್ಲಿ ತಾವೇ ಸಿಕ್ಕಿಬೀಳುವರು. |
|
| 16 |
|
| ಯೆಹೋವನು ಅವರನ್ನು ಅವರ ಕುಯುಕ್ತಿಯಲ್ಲಿಯೇ ಸಿಕ್ಕಿಸಿದ್ದರಿಂದ ಆತನ ನೀತಿಯು ಪ್ರಖ್ಯಾತವಾಯಿತು. |
|
| 17 |
|
| ದೇವರನ್ನು ಅಲಕ್ಷ್ಯ ಮಾಡುವ ಜನರೆಲ್ಲ ಕೆಟ್ಟವರು. ಅವರು ಮರಣದ ಸ್ಥಳಕ್ಕೆ ಹೋಗುವರು. |
|
| 18 |
|
| ಕೆಲವೊಮ್ಮೆ, ಇಕ್ಕಟ್ಟಿನಲ್ಲಿರುವವರನ್ನು ದೇವರು ಮರೆತಿರುವಂತೆ ಕಾಣುತ್ತದೆ; ಕುಗ್ಗಿಹೋದ ಅವರಿಗೆ ನಿರೀಕ್ಷೆಯೇ ಇಲ್ಲದಂತೆ ಕಂಡರೂ ದೇವರು ಅವರನ್ನು ಮರೆತುಬಿಡುವುದಿಲ್ಲ. |
|
| 19 |
|
| ಯೆಹೋವನೇ, ಎದ್ದೇಳು! ಜನಾಂಗಗಳಿಗೆ ನ್ಯಾಯತೀರಿಸು. ಅವರು ಬಲಿಷ್ಠರಾಗಕೂಡದು. |
|
| 20 |
|
| ಯೆಹೋವನೇ, ಅವರಿಗೆ ಭಯಹುಟ್ಟಿಸು; ತಾವು ಕೇವಲ ಮನುಷ್ಯರೆಂಬುದನ್ನು ಅವರು ಗ್ರಹಿಸಿಕೊಳ್ಳಲಿ. |
|
|
|
|