ಕನ್ನಡ ಸಮಕಾಲಿಕ ಅನುವಾದ
|
| 1 |
| ಅನಂತರ ಯೆಹೋವ ದೇವರು ಮೋಶೆಗೆ ಹೇಳಿದ್ದೇನಂದರೆ, “ಫರೋಹನ ಬಳಿಗೆ ಹೋಗಿ ಅವನಿಗೆ, ‘ಹಿಬ್ರಿಯರ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನನ್ನನ್ನು ಆರಾಧಿಸುವಂತೆ ನನ್ನ ಜನರನ್ನು ಕಳುಹಿಸು.” |
| 2 |
| ಅವರನ್ನು ಕಳುಹಿಸುವುದಕ್ಕೆ ನಿರಾಕರಿಸಿ ಇನ್ನೂ ತಡೆದರೆ, |
| 3 |
| ಯೆಹೋವ ದೇವರ ಕೈ ಹೊಲದಲ್ಲಿರುವ ನಿನ್ನ ಪಶುಗಳ ಮೇಲೆ ಇರುವುದು. ಕುದುರೆ, ಕತ್ತೆ, ಒಂಟೆ, ಎತ್ತು, ಕುರಿ, ಆಡು ಇವುಗಳ ಮೇಲೆ ಕಠಿಣವಾದ ಉಪದ್ರವ ಬರುವುದು. |
| 4 |
| ಯೆಹೋವ ದೇವರು ಇಸ್ರಾಯೇಲರ ಪಶುಗಳನ್ನೂ ಈಜಿಪ್ಟಿನವರ ಪಶುಗಳನ್ನೂ ವಿಂಗಡಿಸುವರು. ಇಸ್ರಾಯೇಲರ ಪಶುಗಳಲ್ಲಿ ಒಂದೂ ಸಾಯುವುದಿಲ್ಲ,’ ” ಎಂದರು. |
| 5 |
| ಇದಲ್ಲದೆ ಯೆಹೋವ ದೇವರು, “ನಿರ್ದಿಷ್ಟವಾದ ಒಂದು ಸಮಯವನ್ನು ನೇಮಿಸಿ, ನಾಳೆ ಯೆಹೋವ ದೇವರು ಈ ಕಾರ್ಯವನ್ನು ಈ ದೇಶದಲ್ಲಿ ಮಾಡುವರು, ಎಂದು ಹೇಳು,” ಎಂದರು. |
| 6 |
| ಮಾರನೆಯ ದಿನವೇ ಯೆಹೋವ ದೇವರು ಆ ಕಾರ್ಯವನ್ನು ಮಾಡಲಾರಂಭಿಸಿದರು. ಈಜಿಪ್ಟಿನ ಪಶುಗಳೆಲ್ಲಾ ಸತ್ತು ಹೋದವು. ಆದರೆ ಇಸ್ರಾಯೇಲರ ಪಶುಗಳಲ್ಲಿ ಒಂದೂ ಸಾಯಲಿಲ್ಲ. |
| 7 |
| ಫರೋಹನು ಆಳುಗಳನ್ನು ಕಳುಹಿಸಿ ನೋಡಿದಾಗ, ಇಸ್ರಾಯೇಲರ ಪಶುಗಳಲ್ಲಿ ಒಂದೂ ಸತ್ತಿರಲಿಲ್ಲ. ಆದರೆ ಫರೋಹನ ಹೃದಯವು ಕಠಿಣವಾಗಿದ್ದುದರಿಂದ ಅವನು ಜನರನ್ನು ಹೋಗಗೊಡಿಸಲಿಲ್ಲ. |
| 8 |
| ಆಗ ಯೆಹೋವ ದೇವರು ಮೋಶೆ ಆರೋನರಿಗೆ, “ಕೈತುಂಬಾ ಒಲೆಯ ಬೂದಿಯನ್ನು ತೆಗೆದುಕೊಳ್ಳಿರಿ. ಅದನ್ನು ಮೋಶೆಯು ಫರೋಹನ ಮುಂದೆ ಆಕಾಶದ ಕಡೆಗೆ ತೂರಲಿ. |
| 9 |
| ಆಗ ಅದು ಈಜಿಪ್ಟ್ ದೇಶದಲ್ಲೆಲ್ಲಾ ಪುಡಿಯಾಗುವುದು. ಅದು ಈಜಿಪ್ಟ್ ದೇಶದಲ್ಲೆಲ್ಲಾ ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಹುಣ್ಣುಗಳಾಗುವ ಬೊಕ್ಕೆಗಳು ಏಳುವಂತೆ ಮಾಡುವುದು,” ಎಂದು ಹೇಳಿದರು. |
| 10 |
| ಆಗ ಅವರು ಒಲೆಯ ಬೂದಿಯನ್ನು ತೆಗೆದುಕೊಂಡು ಫರೋಹನ ಮುಂದೆ ನಿಂತರು. ಮೋಶೆಯು ಅದನ್ನು ಆಕಾಶದ ಕಡೆಗೆ ತೂರಿದನು. ಆಗ ಅದು ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಹರಡಿ ಹುಣ್ಣುಗಳಾಗುವಂಥ ಬೊಕ್ಕೆಗಳಾದವು. |
| 11 |
| ಇದಲ್ಲದೆ ಮಂತ್ರಗಾರರು ಹುಣ್ಣಿನ ನಿಮಿತ್ತ ಮೋಶೆಯ ಮುಂದೆ ನಿಂತುಕೊಳ್ಳಲಾರದೆ ಹೋದರು. ಏಕೆಂದರೆ ಹುಣ್ಣುಗಳು ಮಂತ್ರಗಾರರ ಮೇಲೆಯೂ ಈಜಿಪ್ಟಿನವರ ಮೇಲೆಯೂ ಇದ್ದವು. |
| 12 |
| ಆದರೆ ಯೆಹೋವ ದೇವರು ಫರೋಹನ ಹೃದಯವನ್ನು ಕಠಿಣ ಮಾಡಿದರು. ಯೆಹೋವ ದೇವರು ಮೋಶೆಗೆ ಹೇಳಿದಂತೆಯೇ ಅವನು ಅವರ ಮಾತನ್ನು ಕೇಳಲಿಲ್ಲ. |
| 13 |
| ಯೆಹೋವ ದೇವರು ಮೋಶೆಗೆ, “ಬೆಳಿಗ್ಗೆ ಎದ್ದು ಫರೋಹನ ಮುಂದೆ ನಿಂತುಕೊಂಡು ಅವನಿಗೆ, ‘ಹಿಬ್ರಿಯರ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನನ್ನು ಅವರು ಆರಾಧಿಸುವ ಹಾಗೆ ನನ್ನ ಜನರನ್ನು ಕಳುಹಿಸು. |
| 14 |
| ಭೂಲೋಕದಲ್ಲೆಲ್ಲಾ ನನ್ನ ಹಾಗೆ ಯಾರೂ ಇಲ್ಲವೆಂದು ನೀನು ತಿಳಿದುಕೊಳ್ಳುವ ಹಾಗೆ, ಈ ಸಾರಿ ನಾನು ಎಲ್ಲಾ ಉಪದ್ರವಗಳನ್ನು ನಿನ್ನ ಮೇಲೆಯೂ ನಿನ್ನ ಸೇವಕರ ಮೇಲೆಯೂ ನಿನ್ನ ಜನರ ಮೇಲೆಯೂ ಬರಮಾಡುವೆನು. |
| 15 |
| ಈಗ ನನ್ನ ಕೈಚಾಚಿ ನಿನ್ನನ್ನೂ, ನಿನ್ನ ಜನರನ್ನೂ ಉಪದ್ರವದಿಂದ ಬಾಧಿಸುವೆನು. ನಿನ್ನನ್ನು ಭೂಮಿಯೊಳಗಿಂದ ನಿರ್ಮೂಲ ಮಾಡುವೆನು. |
| 16 |
| ಆದರೆ ನಿಶ್ಚಯವಾಗಿ ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ, ನನ್ನ ಹೆಸರನ್ನು ಭೂಮಿಯ ಮೇಲೆಲ್ಲಾ ಪ್ರಸಿದ್ಧಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಸಾಯಿಸದೆ ಉಳಿಸಿದ್ದೇನೆ. |
| 17 |
| ನೀನು ಇನ್ನೂ ಅವರನ್ನು ಕಳುಹಿಸದೆ ನನ್ನ ಜನರಿಗೆ ವಿರೋಧವಾಗಿ ನಿನ್ನನ್ನು ನೀನೇ ಹೆಚ್ಚಿಸಿಕೊಳ್ಳುತ್ತೀಯೋ? |
| 18 |
| ಹಾಗಾದರೆ ನಾಳೆ ಇಷ್ಟು ಹೊತ್ತಿಗೆ ಮಹಾ ಕಠಿಣವಾದ ಆಲಿಕಲ್ಲಿನ ಮಳೆಯನ್ನು ಬೀಳುವಂತೆ ಮಾಡುವೆನು. ಅಂಥದ್ದು ಈಜಿಪ್ಟಿನಲ್ಲಿ, ಅದರ ರಾಜ್ಯವು ಸ್ಥಾಪಿತವಾದಂದಿನಿಂದ ಇಲ್ಲಿಯವರೆಗೂ ಆಗಿಲ್ಲ. |
| 19 |
| ಹೀಗಿರುವುದರಿಂದ ಯಾರನ್ನಾದರೂ ಕಳುಹಿಸಿ ನಿನ್ನ ಪಶುಗಳನ್ನೂ, ಹೊಲದಲ್ಲಿ ನಿನಗಿರುವವುಗಳನ್ನೂ ಭದ್ರಪಡಿಸು. ಏಕೆಂದರೆ ಮನೆಗಳಿಗೆ ಬಾರದೆ ಹೊಲದಲ್ಲಿ ಸಿಕ್ಕುವ ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಆಲಿಕಲ್ಲಿನ ಮಳೆಯು ಸುರಿದು ಕೊಲ್ಲುವುದು,’ ಎಂದು ಹೇಳು,” ಎಂದರು. |
| 20 |
| ಆಗ ಫರೋಹನ ಸೇವಕರಲ್ಲಿ ಯೆಹೋವ ದೇವರ ವಾಕ್ಯಕ್ಕೆ ಭಯಪಟ್ಟವರೆಲ್ಲರೂ ತಮ್ಮ ದಾಸರನ್ನೂ ಪಶುಗಳನ್ನೂ ಮನೆಗಳಿಗೆ ಓಡಿ ಬರುವಂತೆ ಮಾಡಿದರು. |
| 21 |
| ಆದರೆ ಯೆಹೋವ ದೇವರ ವಾಕ್ಯಕ್ಕೆ ಮನಸ್ಸು ಕೊಡದವರು, ತಮ್ಮ ದಾಸರನ್ನೂ ಪಶುಗಳನ್ನೂ ಹೊಲದಲ್ಲಿ ಬಿಟ್ಟರು. |
| 22 |
| ಆಗ ಯೆಹೋವ ದೇವರು ಮೋಶೆಗೆ, “ಆಕಾಶದ ಕಡೆಗೆ ನಿನ್ನ ಕೈಚಾಚು. ಈಜಿಪ್ಟ್ ದೇಶದಲ್ಲೆಲ್ಲಾ ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಮತ್ತು ಈಜಿಪ್ಟ್ ದೇಶದಲ್ಲಿ ಇರುವ ಎಲ್ಲಾ ಹೊಲದ ಬೆಳೆಯ ಮೇಲೆಯೂ ಆಲಿಕಲ್ಲಿನ ಮಳೆ ಸುರಿಯುವುದು,” ಎಂದು ಪ್ರಕಟಪಡಿಸಿದರು. |
| 23 |
| ಮೋಶೆಯು ಆಕಾಶದ ಕಡೆಗೆ ತನ್ನ ಕೋಲನ್ನು ಚಾಚಿದನು. ಆಗ ಯೆಹೋವ ದೇವರು ಗುಡುಗುಗಳನ್ನೂ ಆಲಿಕಲ್ಲಿನ ಮಳೆಯನ್ನೂ ಸುರಿಸಿದರು. ಸಿಡಿಲು ನೆಲಕ್ಕೆ ಬಡಿಯಿತು. ಸಿಡಿಲಿನ ಆರ್ಭಟದೊಂದಿಗೆ ಯೆಹೋವ ದೇವರು ಈಜಿಪ್ಟ್ ದೇಶದ ಮೇಲೆ ಆಲಿಕಲ್ಲಿನ ಮಳೆಯನ್ನು ಸುರಿಸಿದರು. |
| 24 |
| ಸಿಡಿಲಿನ ಆರ್ಭಟದೊಂದಿಗೆ ಕಠಿಣವಾದ ಆಲಿಕಲ್ಲಿನ ಮಳೆಯೂ ಸುರಿಯಿತು. ಈಜಿಪ್ಟ್ ಒಂದು ರಾಷ್ಟ್ರವಾದಂದಿನಿಂದ ಅಂಥ ಘೋರವಾದ ಆಲಿಕಲ್ಲಿನ ಮಳೆಯೂ ಆ ದೇಶದಲ್ಲಿ ಆಗಿರಲಿಲ್ಲ. |
| 25 |
| ಆ ಆಲಿಕಲ್ಲಿನ ಮಳೆಯು ಈಜಿಪ್ಟ್ ದೇಶದಲ್ಲೆಲ್ಲಾ ಮನುಷ್ಯರು ಮೊದಲುಗೊಂಡು ಪಶುಗಳವರೆಗೂ ಹೊಲದಲ್ಲಿ ಇದ್ದದ್ದನ್ನೆಲ್ಲಾ ಹಾಳುಮಾಡಿತು. ಹೊಲದ ಎಲ್ಲಾ ಸೊಪ್ಪನ್ನೂ ಹಾಳು ಮಾಡಿ, ಎಲ್ಲಾ ಮರಗಳನ್ನು ಮುರಿದುಹಾಕಿತು. |
| 26 |
| ಇಸ್ರಾಯೇಲರು ಇದ್ದ ಗೋಷೆನ್ ಪ್ರಾಂತದಲ್ಲಿ ಆಲಿಕಲ್ಲಿನ ಮಳೆಯು ಇರಲಿಲ್ಲ. |
| 27 |
| ಆಗ ಫರೋಹನು ಮೋಶೆ ಆರೋನರನ್ನು ಕರೆಕಳುಹಿಸಿ ಅವರಿಗೆ, “ಈ ಸಲ ನಾನು ಪಾಪಮಾಡಿದ್ದೇನೆ, ಯೆಹೋವ ದೇವರು ನೀತಿವಂತನು. ಆದರೆ ನಾನೂ, ನನ್ನ ಜನರೂ ತಪ್ಪಿತಸ್ಥರು. |
| 28 |
| ಆದ್ದರಿಂದ ಈ ಬಲವಾದ ಗುಡುಗುಗಳೂ ಆಲಿಕಲ್ಲಿನ ಮಳೆಯೂ ಇನ್ನು ಸಾಕು. ಇವುಗಳು ನಿಂತುಹೋಗುವಂತೆ ಯೆಹೋವ ದೇವರನ್ನು ಬೇಡಿಕೊಳ್ಳಿರಿ, ನೀವು ಇನ್ನು ಇಲ್ಲಿ ಇರದಂತೆ ನಾನು ನಿಮ್ಮನ್ನು ಕಳುಹಿಸಿಬಿಡುವೆನು,” ಎಂದನು. |
| 29 |
| ಮೋಶೆಯು ಅವನಿಗೆ, “ನಾನು ಪಟ್ಟಣವನ್ನು ಬಿಟ್ಟುಹೋದ ಕೂಡಲೇ, ಯೆಹೋವ ದೇವರ ಕಡೆಗೆ ನನ್ನ ಕೈಗಳನ್ನು ಚಾಚಿ ಪ್ರಾರ್ಥಿಸುವೆನು. ಭೂಮಿಯು ಯೆಹೋವ ದೇವರದೇ ಎಂದು ನೀನು ತಿಳಿದುಕೊಳ್ಳುವಂತೆ ಗುಡುಗುಗಳು ನಿಂತುಹೋಗುವುವು. ಆಲಿಕಲ್ಲಿನ ಮಳೆಯು ಇನ್ನು ಇರದು. |
| 30 |
| ಆದರೂ ನೀನು ಮತ್ತು ನಿನ್ನ ಅಧಿಕಾರಿಗಳು ದೇವರಾದ ಯೆಹೋವ ದೇವರಿಗೆ ಭಯಪಡುವುದಿಲ್ಲವೆಂದು ನಾನು ಬಲ್ಲೆನು,” ಎಂದನು. |
| 31 |
| ಜವೆಗೋಧಿಗೆ ತೆನೆಯೂ ಅಗಸೆಯ ಮೊಗ್ಗುಗಳೂ ಇದ್ದುದರಿಂದ ಅಗಸೆಯೂ ಜವೆಗೋಧಿಯೂ ಹಾಳಾದವು. |
| 32 |
| ಆದರೆ ಗೋಧಿ ಮತ್ತು ಕಡಲೆ ಬೆಳೆದಿಲ್ಲವಾದ್ದರಿಂದ ಹಾಳಾಗಲಿಲ್ಲ. |
| 33 |
| ತರುವಾಯ ಮೋಶೆಯು ಫರೋಹನನ್ನು ಬಿಟ್ಟು ಪಟ್ಟಣದ ಹೊರಗೆ ಬಂದಾಗ, ತನ್ನ ಕೈಗಳನ್ನು ಯೆಹೋವ ದೇವರ ಕಡೆಗೆ ಚಾಚಿದನು. ಆಗ ಗುಡುಗುಗಳೂ ಆಲಿಕಲ್ಲಿನ ಮಳೆಯೂ ನಿಂತುಹೋದವು. ಇನ್ನು ಮಳೆಯು ಭೂಮಿಯ ಮೇಲೆ ಬೀಳಲಿಲ್ಲ. |
| 34 |
| ಮಳೆ, ಆಲಿಕಲ್ಲಿನ ಮಳೆ, ಗುಡುಗುಗಳು ನಿಂತುಹೋದದ್ದನ್ನು ಫರೋಹನು ನೋಡಿದಾಗ, ಅವನು ಪುನಃ ಪಾಪಮಾಡಿದನು. ತನ್ನ ಅಧಿಕಾರಿಗಳ ಸಹಿತವಾಗಿ ತನ್ನ ಹೃದಯವನ್ನು ಕಠಿಣ ಮಾಡಿಕೊಂಡನು. |
| 35 |
| ಫರೋಹನ ಹೃದಯವು ಕಠಿಣವಾಯಿತು. ಯೆಹೋವ ದೇವರು ಮೋಶೆಗೆ ಹೇಳಿದಂತೆ, ಅವನು ಇಸ್ರಾಯೇಲರನ್ನು ಕಳುಹಿಸಲೇ ಇಲ್ಲ. |
|
| ಟಿಪ್ಪಣಿಗಳನ್ನು ಉಳಿಸಿ |
https://beblia.bible:81/BibleAudio/kannada2022/exodus/009.mp3
40
9