“ ‘ಯಾರಾದರೂ ಯೆಹೋವ ದೇವರಿಗೆ ಧಾನ್ಯ ಸಮರ್ಪಣೆಯನ್ನು ಸಮರ್ಪಿಸುವುದಾದರೆ ಅವನ ಸಮರ್ಪಣೆಯು ನಯವಾದ ಹಿಟ್ಟಿನದ್ದಾಗಿರಬೇಕು. ಅವನು ಅದರ ಮೇಲೆ ಎಣ್ಣೆಯನ್ನು ಸುರಿಸಬೇಕು, ಅದರ ಮೇಲೆ ಸಾಂಬ್ರಾಣಿಯನ್ನು ಹಾಕಬೇಕು.
ಇದಲ್ಲದೆ ಅವನು ಅದನ್ನು ಯಾಜಕರಾದ ಆರೋನನ ಪುತ್ರರ ಬಳಿಗೆ ತರಬೇಕು. ಅವನು ಹಿಟ್ಟಿನಲ್ಲಿಯೂ, ಎಣ್ಣೆಯಲ್ಲಿಯೂ ಒಂದು ಹಿಡಿಯನ್ನು ಅದರ ಎಲ್ಲಾ ಸಾಂಬ್ರಾಣಿಯ ಸಂಗಡ ತೆಗೆದುಕೊಳ್ಳಬೇಕು. ಯಾಜಕನು ಅದನ್ನು ಜ್ಞಾಪಕಾರ್ಥವಾಗಿ ಬಲಿಪೀಠದ ಮೇಲೆ ಯೆಹೋವ ದೇವರಿಗೆ ಸುವಾಸನೆಯ ಸಮರ್ಪಣೆಯಾಗಿ ಬೆಂಕಿಯಿಂದ ಸುಡಬೇಕು.
ಆಗ ಯಾಜಕನು ಅದರಿಂದ ಜ್ಞಾಪಕಾರ್ಥವಾಗಿ ಧಾನ್ಯ ಸಮರ್ಪಣೆಯನ್ನಾಗಿ ತೆಗೆದುಕೊಂಡು ಅದನ್ನು ಬಲಿಪೀಠದ ಮೇಲೆ ಸುಡಬೇಕು. ಅದು ಬೆಂಕಿಯಿಂದ ಮಾಡಿದ್ದಾಗಿದ್ದು, ಯೆಹೋವ ದೇವರಿಗೆ ಸುವಾಸನೆಯ ಸಮರ್ಪಣೆಯಾಗಿರುವುದು.
“ ‘ಯೆಹೋವ ದೇವರಿಗೆ ನೀನು ತರುವ ಧಾನ್ಯ ಸಮರ್ಪಣೆಯು ಯಾವುದೂ ಹುಳಿಯಿಂದ ಮಾಡಿದ್ದಾಗಿರಬಾರದು. ಏಕೆಂದರೆ ಯೆಹೋವ ದೇವರಿಗೆ ನೀವು ಬೆಂಕಿಯಿಂದ ಮಾಡುವ ಯಾವ ಸಮರ್ಪಣೆಯಲ್ಲಿ ಹುಳಿಯನ್ನಾಗಲಿ, ಜೇನನ್ನಾಗಲಿ ಬೆರೆಸಬಾರದು.
ನಿನ್ನ ಪ್ರತಿಯೊಂದು ಧಾನ್ಯ ಸಮರ್ಪಣೆಯೂ ಉಪ್ಪಿನಲ್ಲಿ ಬೆರಕೆಯಾಗಿರಬೇಕು. ನಿನ್ನ ದೇವರ ಒಡಂಬಡಿಕೆಯ ಉಪ್ಪು ನಿನ್ನ ಸಮರ್ಪಣೆಯಲ್ಲಿ ಇಲ್ಲದೆ ಇರಬಾರದು. ನಿನ್ನ ಎಲ್ಲಾ ಸಮರ್ಪಣೆಗಳಲ್ಲಿ ನೀನು ಉಪ್ಪನ್ನು ಸಮರ್ಪಿಸಬೇಕು.
“ ‘ನೀನು ನಿನ್ನ ಪ್ರಥಮ ಫಲಗಳ ಧಾನ್ಯ ಸಮರ್ಪಣೆಯನ್ನು ಯೆಹೋವ ದೇವರಿಗೆ ಮಾಡಿದರೆ, ನಿನ್ನ ಪ್ರಥಮ ಫಲ ಧಾನ್ಯ ಕಾಣಿಕೆಯನ್ನು ಬೆಂಕಿಯಿಂದ ಸುಟ್ಟ ಕಾಳಿನ ಹಸಿರು ತೆನೆಗಳನ್ನೂ ಅಲ್ಲದೆ ತುಂಬಿದ ತೆನೆಗಳಿಂದ ಬಡಿದ ಒಣಗಿದ ಕಾಳುಗಳನ್ನೂ ಸಮರ್ಪಿಸಬೇಕು.