ಬೈಬಲ್ ಒಂದು ವರ್ಷದಲ್ಲಿ ಜನವರಿ ೨೫ಆದಿಕಾಂಡ ೪೯:೧-೩೩೧. ಯಕೋಬನು ತನ್ನ ಮಕ್ಕಳನ್ನು ಕರೆಯಿಸಿ ಇಂತೆಂದನು: ಕೂಡಿಬನ್ನಿ ನೀವೆಲ್ಲರು, ನುಡಿವೆನು ನಿಮಗೆ ಮುಂದೆ ಸಂಭವಿಸುವುದನ್ನು;೨. ಯಕೋಬನ ಮಕ್ಕಳೇ, ಕೂಡಿಬಂದು ಕೇಳಿ ನೀವೆಲ್ಲರು ಆಲಿಸಿ ನಿಮ್ಮ ತಂದೆ ಇಸ್ರಯೇಲನ ಮಾತನ್ನು:೩. ರೂಬೇನನೇ, ನೀನೆನ್ನ ಜೇಷ್ಠಪುತ್ರನು ನನ್ನ ಚೈತನ್ಯಸ್ವರೂಪನು, ನನ್ನ ವೀರ್ಯದ ಪ್ರಥಮ ಫಲ ನೀನು ಹಿರಿಮೆಯಲು, ಒಲುಮೆಯಲು ಪ್ರಮುಖನೆನಿಸಿಕೊಳ್ಳುವವನು.೪. ಆದರೆ ದಡಮೀರಿದ ಪ್ರವಾಹ ನೀನು ಹತ್ತಿದೆ, ಹೊಲೆಮಾಡಿದೆ, ತಂದೆಯ ಹಾಸಿಗೆಯನು ಪ್ರಮುಖಸ್ಥಾನದಲ್ಲಿರೆ ನನ್ನ ಮಂಚವನ್ನೇರಿದೆ ನೀನು.೫. ಅಣ್ಣತಮ್ಮಂದಿರು ಸಿಮೆಯೋನ್ - ಲೇವಿಯರು ಅವರ ಕತ್ತಿಗಳು ಹಿಂಸಾತ್ಮಕ ಆಯುಧಗಳು.೬. ನನ್ನ ಮನವೇ, ಒಳಗಾಗಬೇಡ ಅವರ ದುರಾಲೋಚನೆಗೆ ನನ್ನ ಪ್ರಾಣವೇ, ಸೇರಬೇಡ ನೀನವರ ಗುಂಪಿಗೆ ಕೊಂದರವರು ನರರನು ಕೋಪೋದ್ರೇಕದಿಂದ ಊನಪಡಿಸಿದರು ಎತ್ತುಗಳನ್ನು ಮದದಿಂದ.೭. ಅವರ ಕೋಪ ಭೀಕರ, ಅದಕ್ಕಿರಲಿ ಧಿಕ್ಕಾರ! ಅವರ ರೌದ್ರ - ಕ್ರೂರ, ಅದಕ್ಕಿರಲಿ ಧಿಕ್ಕಾರ! ವಿಭಾಗಿಸುವೆನವರನು ಯಕೋಬ ಕುಲದಲಿ ಚದರಿಸುವೆನವರನು ಇಸ್ರಯೇಲರಲಿ.೮. ಯೆಹೂದನೇ, ವಂದಿಸುವರು ನಿನ್ನನು ಸಹೋದರರು ನಿನ್ನ ಕೈಯಲ್ಲಿರುವುದು ಶತ್ರುಗಳ ಕುತ್ತಿಗೆಯು ಎರಗುವರು ನಿನಗೆ ನಿನ್ನ ಅಣ್ಣತಮ್ಮಂದಿರು.೯. ನನ್ನ ಪುತ್ರ ಯೆಹೂದ, ನೀ ಪ್ರಾಯದ ಸಿಂಹದಂತೆ ಬೇಟೆಹಿಡಿದು ಬೆಟ್ಟ ಏರಿದ ಕಂಠೀರವನಂತೆ ಕಾಲು ಮಡಿಚಿ ಹೊಂಚು ಕೂತ ಕೇಸರಿಯಂತೆ ಈ ಸಿಂಹಿಣಿಯನ್ನು ಕೆಣಕುವ ಕೆಚ್ಚು ಯಾರಿಗಿದೆ?೧೦. ರಾಜ್ಯಾಧಿಕಾರ ಪಡೆದವನು ಬರುವ ತನಕ ರಾಷ್ಟ್ರಗಳು ಆತನಿಗೆ ತಲೆಬಾಗುವ ತನಕ ತಪ್ಪದು ರಾಜದಂಡ ಯೆಹೂದನ ಕೈಯಿಂದ ಕದಲದು ಮುದ್ರೆಕೋಲು ಅವನ ವಂಶದಿಂದ.೧೧. ಕಟ್ಟುವನು ತನ್ನ ವಾಹನಪಶುವನು ದ್ರಾಕ್ಷಾಲತೆಗೆ ಬಿಗಿಯುವನು ತನ್ನ ಹೇಸರಕತ್ತೆಯನು ರಾಜದ್ರಾಕ್ಷೆಗೆ ಒಗೆಯುವನು ತನ್ನ ಬಟ್ಟೆಯನು ದ್ರಾಕ್ಷಾರಸದಲಿ ತೊಳೆವನು ಮೇಲಂಗಿಯನು ಆ ರಕ್ತಗೆಂಪು ರಸದಲಿ.೧೨. ಅವನ ಕಣ್ಣು ಕೆಂಪಾಗಿರುವುವು ದ್ರಾಕ್ಷಾರಸದ ಸಮೃದ್ಧಿಯಿಂದ ಅವನ ಹಲ್ಲು ಬೆಳ್ಳಗಿರುವುವು ಹಾಲಿನ ಸಮೃದ್ಧಿಯಿಂದ.೧೩. ಜೆಬುಲೂನನು ವಾಸಿಸುವನು ಸಮುದ್ರದ ಕರಾವಳಿಯಲ್ಲಿ ಹಡಗುಗಳು ಬಂದು ಹೋಗುವ ರೇವಂತೆ ಇರುವನಲ್ಲಿ ಸಿದೋನಿನ ತನಕ ಹರಡಿರುವುದು ಅವನ ಪ್ರಾಂತ್ಯದ ಗಡಿ.೧೪. ಇಸ್ಸಾಕಾರನು ಕುರಿಹಟ್ಟಿಗಳ ನಡುವೆ ಮಲಗಿರುವ ದೊಡ್ಡ ಕತ್ತೆ.೧೫. ಸೂಕ್ತವೆಂದುಕೊಂಡು ತನ್ನ ನಾಡು ವಿಶ್ರಾಂತಿಗೆ, ಸುಖಾನುಭವಕೆ ಬಗ್ಗಿಸುವನು ಬೆನ್ನನು ಹೊರೆ ಹೊರುವುದಕ್ಕೆ, ಬಿಟ್ಟಿಯ ಕೆಲಸಕ್ಕೆ.೧೬. ದಾನನು ತನ್ನ ಜನರನ್ನಾಳುವನು ಇಸ್ರಯೇಲಿನಿತರ ಕುಲಗಳಂತೆ.೧೭. ಇರುವನವನು ದಾರಿಯಲ್ಲಿರುವ ವಿಷಸರ್ಪದಂತೆ, ಕುದುರೆಯ ಹಿಮ್ಮಡಿಕಚ್ಚಿ ರಾಹುತನನು ಕೆಡವುವ ಹಾವಿನಂತೆ.೧೮. ಸರ್ವೇಶ್ವರಾ, ಎದುರುನೋಡುತ್ತಿರುವೆನು ನಿನ್ನಿಂದ ಬರುವಾ ಸಂರಕ್ಷಣೆಯನು.೧೯. ಗಾದನು ಗುರಿಯಾಗುವನು ಸುಲಿಗೆಗಾರರಾಕ್ರಮಣಕೆ ಓಡುವನಾ ದರೋಡೆಗಾರರನ್ನು ಹಿಮ್ಮೆಟ್ಟಿಕೊಂಡೇ.೨೦. ಆಶೇರನಗಿರುವುದು ಸಮೃದ್ಧಿಯಾಗಿ ಧಾನ್ಯ ದೊರಕುವುದವನಲಿ ರಾಜನಿಗೂ ತಕ್ಕ ಭಕ್ಷ್ಯ.೨೧. ನಫ್ತಾಲಿ ಸ್ವಚ್ಛಂದ ಜಿಂಕೆಮರಿಯಂತೆ ಸಿಗುವುದವನಲಿ ಸುಮಧುರವಾದ ಮಾತುಕತೆ.೨೨. ಜೋಸೆಫನು ಫಲಭರಿತ ವೃಕ್ಷದಂತೆ ಒರತೆ ಬಳಿಯಲೆ ಬೆಳೆದ ದ್ರಾಕ್ಷಿಯಂತೆ ಚಾಚಿದೆ ಅದರ ರೆಂಬೆ ಬೇಲಿಯಿಂದಾಚೆ.೨೩. ಬಿಲ್ಲುಗಾರರೆಸಗಿದರು ಅವನ ಮೇಲೆ ಆಕ್ರಮಣ ಸುತ್ತುವರೆದರವನನು ಎಸೆದು ಬಿರುಸುಬಾಣ.೨೪. ಆದರೂ ಯಕೋಬಕುಲದ ಸರ್ವ ಬಲಾಢ್ಯನ ಶಕ್ತಿಯಿಂದ ಇಸ್ರಯೇಲನ ಪೊರೆಬಂಡೆ - ಪರಿಪಾಲಕನ ನಾಮದಿಂದ ನಿಂತಿತು ಸ್ಥಿರವಾಗಿ ಅವನ ಬಿಲ್ಲು ಚುರುಕುಗೊಂಡಿತು ಅವನ ಕೈಗಳ ಬಲ್ಬು.೨೫. ಹೀಗಾಯಿತು ನಿನ್ನ ತ೦ದೆಯ ದೇವರಿ೦ದ ಸಿಗಲಿ ನಿನಗಾತನ ಸಹಾಯ ಹೀಗಾಯಿತು ಸರ್ವವಲ್ಲಭ ದೇವರಿ೦ದ. ದೊರಕಲಿ ನಿನಗಾತನ ಆಶೀರ್ವಾದ. ಮೇಲಣ ಆಕಾಶದಿ೦ದ, ಕೆಳಗಣ ಸಾಗರ ಸೆಲೆಗಳಿ೦ದ ಸ್ತನ್ಯದಿ೦ದ, ಗರ್ಭದಿ೦ದ, ಆತ ನೀಡುವ ವರದಾನ.೨೬. ಪ್ರಾಚೀನ ಪರ್ವತಗಳಿಗಿ೦ತ, ಚಿರಸ್ಥಾಯಿ ಗುಡ್ಡಗಳಿಗಿಂತ ಉತ್ತಮೋತ್ತಮ ನಿನ್ನ ತಂದೆಯಿಂದ ಬರುವ ಆಶೀರ್ವಾದ. ಇಳಿದು ಬರಲೀ ವರದಾನಗಳು ಜೋಸೆಫನ ಮೇಲೆ ಸೋದರರಿಂದ ಬೇರ್ಪಟ್ಟವನ ಶಿರಸ್ಸಿನ ಮೇಲೆ.೨೭. ಕಿತ್ತು ತಿನ್ನುವ ತೋಳ ಬೆನ್ಯಾಮೀನನು ಬೆಳಿಗ್ಗೆ ತಿನ್ನುವನು ಹಿಡಿದುಕೊಂಡದುದನು ಸಂಜೆ ಹಂಚಿಕೊಳ್ಳುವನು ಕೊಳ್ಳೆಹೊಡೆದುದನು.೨೮. ಇವೇ ಇಸ್ರಯೇಲಿನ ಹನ್ನೆರಡು ಕುಲಗೋತ್ರಗಳು; ಇದೇ ಅವರ ತಂದೆ ಕೊಟ್ಟ ಆಶೀರ್ವಾದ: ಒಂದೊಂದು ಕುಲಕ್ಕೆ ಅವನು ನುಡಿದ ಒಂದೊಂದು ಆಶೀರ್ವಚನ.೨೯. ಯಕೋಬನು ತನ್ನ ಮಕ್ಕಳಿಗೆ ಕೊಟ್ಟ ಆಜ್ಞೆ ಇದು: “ನಾನು ನನ್ನ ದಿವಂಗತ ಪೂರ್ವಜರನ್ನು ಸೇರುವ ಕಾಲ ಸಮೀಪಿಸಿತು. ಹಿತ್ತಿಯನಾದ ಎಫ್ರೋನನ ಭೂಮಿಯಲ್ಲಿರುವ ಗವಿಯೊಳಗೆ, ಪಿತೃಗಳ ಬಳಿಯಲ್ಲಿ ನನ್ನನ್ನು ಸಮಾಧಿಮಾಡಬೇಕು.೩೦. ಆ ಗವಿ ಕಾನಾನ್ ನಾಡಿನ ಮಮ್ರೆಗೆದುರಾಗಿರುವ ಮಕ್ಪೇಲ ಎಂಬ ಬಯಲಿನಲ್ಲಿದೆ. ಅದನ್ನು ಅಬ್ರಹಾಮನು ಅದರ ಸುತ್ತಲಿರುವ ಭೂಮಿಸಹಿತ ಹಿತ್ತಿಯನಾದ ಎಫ್ರೋನನಿಂದ ಸ್ವಂತ ಸ್ಮಶಾನ ಭೂಮಿಗಾಗಿ ಕೊಂಡುಕೊಂಡನು.೩೧. ಅಲ್ಲೇ ಅಬ್ರಹಾಮನಿಗೂ ಅವನ ಪತ್ನಿ ಸಾರಳಿಗೂ ಸಮಾಧಿಯಾಯಿತು. ಅಲ್ಲೇ ಇಸಾಕನಿಗೂ ಅವನ ಮಡದಿ ರೆಬೆಕ್ಕಳಿಗೂ ಸಮಾಧಿ ಆಯಿತು. ಲೇಯಳನ್ನೂ ನಾನು ಅಲ್ಲಿ ಸಮಾಧಿಮಾಡಿದ್ದೇನೆ.೩೨. ಹೊಲದ ಸಮೇತ ಹಿತ್ತಿಯರಿಂದ ಕ್ರಯಕ್ಕೆ ಕೊಂಡುಕೊಂಡ ಆ ಗವಿಯೊಳಗೆ ನನಗೂ ಸಮಾಧಿಯಾಗಲಿ,” ಎಂದನು.೩೩. ಮಕ್ಕಳಿಗೆ ಈ ಆಜ್ಞೆಯನ್ನು ಕೊಟ್ಟು ಮುಗಿಸಿದ ನಂತರ ಯಕೋಬನು ಹಾಸಿಗೆಯಲ್ಲಿ ತನ್ನ ಕಾಲುಗಳನ್ನು ಮಡಚಿಕೊಂಡು ಪ್ರಾಣಬಿಟ್ಟು, ಮೃತರಾದ ಪಿತೃಗಳ ಬಳಿಗೆ ಸೇರಿದನು.ಆದಿಕಾಂಡ ೫೦:೧-೨೬೧. ಆಗ ಜೋಸೆಫನು ತನ್ನ ತಂದೆಯ ಶವದ ಮೇಲೆ ಬಿದ್ದು, ಕಣ್ಣೀರು ಇಡುತ್ತಾ, ಅವರಿಗೆ ಮುದ್ದಿಟ್ಟನು.೨. ತರುವಾಯ ತನ್ನ ಸೇವಕರಲ್ಲಿ ಶವಲೇಪಕರಾದವರಿಗೆ, “ನನ್ನ ತಂದೆಯ ಶವವನ್ನು ಸುಗಂಧ ದ್ರವ್ಯಗಳಿಂದ ಲೇಪಿಸಿ ಸಿದ್ಧಪಡಿಸಿರಿ,” ಎಂದು ಅಪ್ಪಣೆಕೊಟ್ಟನು. ಅವರು ಹಾಗೆಯೇ ಮಾಡಿದರು.೩. ಪದ್ಧತಿಯ ಪ್ರಕಾರ ನಲವತ್ತು ದಿನಗಳು ಸುಗಂಧ ದ್ರವ್ಯಗಳನ್ನು ಲೇಪಿಸಬೇಕಾಗಿತ್ತು. ಅಷ್ಟು ದಿನಗಳವರೆಗೂ ಅವನಿಗೋಸ್ಕರ ಈಜಿಪ್ಟಿನವರಿಂದ ಶೋಕಾಚರಣೆ ಇತ್ತು.೪. ದುಃಖದ ದಿನಗಳು ಕಳೆದ ನಂತರ ಜೋಸೆಫನು ಫರೋಹನ ಪರಿವಾರದವರಿಗೆ, “ದಯವಿಟ್ಟು ನೀವು ಫರೋಹನ ಬಳಿಗೆ ಹೋಗಿ ಈ ವಿಷಯವನ್ನು ಮನಮುಟ್ಟುವಂತೆ ಮಾಡಿ:೫. ನನ್ನ ತಂದೆಯವರು ತಾವು ಕಾನಾನ್ ನಾಡಿನಲ್ಲಿ ಸಿದ್ಧಮಾಡಿಕೊಂಡಿರುವ ಸ್ಥಳದಲ್ಲಿಯೇ ತಮಗೆ ಸಮಾಧಿಮಾಡಬೇಕೆಂದು ಸಾಯುವುದಕ್ಕೆ ಮೊದಲೇ ನನ್ನಿಂದ ಪ್ರಮಾಣ ಮಾಡಿಸಿದರು. ಆದ್ದರಿಂದ ನಾನು ಹೋಗಿ ತಂದೆಯನ್ನು ಸಮಾಧಿಮಾಡಿ ಬರುವುದಕ್ಕೆ ಅಪ್ಪಣೆಯಾಗಬೇಕೆಂದು ವಿನಂತಿಸುತ್ತಿದ್ದೇನೆ,” ಎಂದನು.೬. ಫರೋಹನು ಈ ಸಂಗತಿಯನ್ನು ಕೇಳಿ ಜೋಸೆಫನಿಗೆ, “ನಿನ್ನ ತಂದೆ ಪ್ರಮಾಣ ಮಾಡಿಸಿದ ಮೇರೆಗೆ ನೀನು ಹೋಗಿ ಅವನಿಗೆ ಸಮಾಧಿಮಾಡಿ ಬರಬಹುದು,” ಎಂದು ಅಪ್ಪಣೆಕೊಟ್ಟನು.೭. ಜೋಸೆಫನು ತಂದೆಯನ್ನು ಸಮಾಧಿಮಾಡಲು ಹೊರಟುಹೋದಾಗ, ಅವನ ಜೊತೆಯಲ್ಲಿ ಫರೋಹನ ಪರಿವಾರದವರೆಲ್ಲರು, ಅರಮನೆಯ ಮುಖಂಡರು, ಈಜಿಪ್ಟಿನ ಮುಖ್ಯಸ್ಥರೆಲ್ಲರು,೮. ಜೋಸೆಫನ ಮನೆಯವರೆಲ್ಲರು, ಅಣ್ಣತಮ್ಮಂದಿರು, ತಂದೆಯ ಮನೆಯವರೆಲ್ಲರು ಹೋದರು. ತಮ್ಮ ಮಡದಿಮಕ್ಕಳನ್ನೂ ಕುರಿದನಗಳನ್ನೂ ಮಾತ್ರ ಗೋಷೆನ್ ಪ್ರಾಂತ್ಯದಲ್ಲಿ ಬಿಟ್ಟುಹೋದರು.೯. ಅವನ ಸಂಗಡ ರಥಗಳೂ ಕುದುರೆಸವಾರರೂ ಸಹ ಇದ್ದರು. ಹೀಗೆ ದೊಡ್ಡ ಜನಸಮೂಹವೇ ಅವನೊಂದಿಗೆ ಹೋಯಿತು.೧೦. ಅವರು ಜೋರ್ಡನ್ ನದಿಯಿಂದಾಚೆ ಇರುವ ಆಟಾದ್ ಎಂಬ ಕಣಕ್ಕೆ ಬಂದು ಅಲ್ಲಿ ಅತ್ಯಧಿಕವಾಗಿ ಗೋಳಾಡಿದರು; ಜೋಸೆಫನು ತನ್ನ ತಂದೆಗೋಸ್ಕರ ಏಳು ದಿನದ ಶೋಕಾಚರಣೆಯನ್ನು ಏರ್ಪಡಿಸಿದನು.೧೧. ಆ ನಾಡಿನ ಜನರಾದ ಕಾನಾನ್ಯರು ಆಟಾದ್ ಕಣದಲ್ಲಿ ನಡೆದ ಶೋಕಾಚರಣೆಯನ್ನು ನೋಡಿ, “ಈಜಿಪ್ಟಿನವರಿಗೆ ಒದಗಿ ಇರುವ ಈ ಶೋಕ ಬಹು ವಿಶೇಷವಾದುದು!” ಎಂದರು. ಈ ಕಾರಣ ಜೋರ್ಡನ್ ನದಿಯಾಚೆ ಇರುವ ಆ ಸ್ಥಳಕ್ಕೆ ‘ಆಬೇಲ್ ಮಿಚ್ರಯೀಮ್’ ಎಂದು ಹೆಸರಾಯಿತು.೧೨. ಯಕೋಬನ ಮಕ್ಕಳು ತಂದೆಯ ಅಪ್ಪಣೆಯಂತೆ೧೩. ಅವನ ಶವವನ್ನು ಕಾನಾನ್ ನಾಡಿಗೆ ಹೊತ್ತುಕೊಂಡು ಹೋಗಿ ಮಕ್ಪೇಲ ಎಂಬ ಬಯಲಿನಲ್ಲಿರುವ ಗವಿಯೊಳಗೆ ಸಮಾಧಿಮಾಡಿದರು. ಅಬ್ರಹಾಮನು ಹಿತ್ತಿಯನಾದ ಎಫ್ರೋನನಿಂದ ಮಮ್ರೆಗೆದುರಿನಲ್ಲಿರುವ ಆ ಗವಿಯನ್ನು ಸುತ್ತಲು ಇರುವ ಭೂಮಿ ಸಮೇತ, ಸ್ವಂತ ಸ್ಮಶಾನಭೂಮಿಗಾಗಿ ಕೊಂಡುಕೊಂಡಿದ್ದನು.೧೪. ತಂದೆಯನ್ನು ಸಮಾಧಿಮಾಡಿದ ಮೇಲೆ ಜೋಸೆಫನೂ ಅವನ ಅಣ್ಣತಮ್ಮಂದಿರೂ ಆ ಶವಸಂಸ್ಕಾರಕ್ಕಾಗಿ ಅವನ ಜೊತೆಯಲ್ಲಿ ಹೋಗಿದ್ದ ಎಲ್ಲರೂ ಈಜಿಪ್ಟಿಗೆ ಹಿಂದಿರುಗಿದರು.೧೫. ತಂದೆ ಸತ್ತ ಬಳಿಕ ಜೋಸೆಫನ ಅಣ್ಣತಮ್ಮಂದಿರು, “ಜೋಸೆಫನು ಬಹುಶಃ ನಮ್ಮನ್ನು ದ್ವೇಷಿಸಿಯಾನು! ನಾವು ಅವನಿಗೆ ಮಾಡಿದ ಎಲ್ಲ ಹಾನಿಗೆ ಪ್ರತಿಯಾಗಿ ಶಿಕ್ಷಿಸಿಯಾನು,” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.೧೬. ಆದುದರಿಂದ ಜೋಸೆಫನಿಗೆ ಹೀಗೆಂದು ಹೇಳಿಕಳಿಸಿದರು: “ನಿನ್ನ ತಂದೆ ಸಾಯುವುದಕ್ಕೆ ಮುಂಚೆ ನಮಗೆ ಅಪ್ಪಣೆಮಾಡಿದ್ದೇನೆಂದರೆ -೧೭. ‘ನೀವು ಜೋಸೆಫನಿಗೆ - ನಿನ್ನ ಅಣ್ಣಂದಿರಾದ ನಾವು ನಿನಗೆ ಹಾನಿಮಾಡಿದ್ದೇನೋ ನಿಜ; ಆದರೂ ನಮ್ಮ ಅಪರಾಧವನ್ನು, ಪಾಪವನ್ನು ಕ್ಷಮಿಸು - ಎಂದು ಕೇಳಿಕೊಳ್ಳಬೇಕು, ಅವರು ಹೀಗೆ ವಿಧಿಸಿದ್ದರಿಂದ ನಾವು ಮಾಡಿದ ಅಪರಾಧವನ್ನು ಈಗ ನೀನು ಕ್ಷಮಿಸಬೇಕೆಂದು ಬೇಡಿಕೊಳ್ಳುತ್ತಿದ್ದೇವೆ.” ಈ ಮಾತುಗಳನ್ನು ಕೇಳಿ ಜೋಸೆಫನು ಕಣ್ಣೀರು ಸುರಿಸಿದನು.೧೮. ಇದೂ ಅಲ್ಲದೆ, ಅಣ್ಣಂದಿರು ತಾವೇ ಬಂದು ಅವನಿಗೆ ಅಡ್ಡಬಿದ್ದರು. “ಇಗೋ, ನಾವು ನಿನಗೆ ಗುಲಾಮರು,” ಎಂದು ಹೇಳಿದರು.೧೯. ಆದರೆ ಜೋಸೆಪನು ಅವರಿಗೆ, “ಹೆದರಬೇಡಿ; ನಾನು ದೇವರ ಸ್ಥಾನದಲ್ಲಿ ಇಲ್ಲ;೨೦. ನೀವೇನೋ ನನಗೆ ಹಾನಿಮಾಡಬೇಕೆಂದು ಎಣಿಸಿದರು. ಆದರೆ ದೇವರು ಒಳಿತಾಗಬೇಕೆಂದು ಸಂಕಲ್ಪಿಸಿದರು; ಇದರಿಂದ ಅನೇಕ ಜನರ ಪ್ರಾಣ ಉಳಿಯುವಂತೆ ಮಾಡಿದರು. ಇಂದಿಗೂ ಈ ಕಾರ್ಯ ನಡೆಯುತ್ತಿದೆ.೨೧. ಆದುದರಿಂದ ನೀವು ಸ್ವಲ್ಪವೂ ಸಂಕೋಚಪಡಬೇಕಾಗಿಲ್ಲ. ನಾನು ನಿಮ್ಮನ್ನೂ ನಿಮಗೆ ಸೇರಿದ ಎಲ್ಲರನ್ನೂ ಪೋಷಿಸುತ್ತೇನೆ,” ಎಂದು ಹೇಳಿ ಅವರನ್ನು ಸಂತೈಸಿ, ಅವರ ಸಂಗಡ ಪ್ರೀತಿಯಿಂದ ಮಾತಾಡಿದನು.೨೨. ಜೋಸೆಫನೂ ಅವನ ತಂದೆಯ ಕುಟುಂಬದವರೂ ಈಜಿಪ್ಟಿನಲ್ಲಿ ವಾಸಮಾಡುತ್ತಾ ಬಂದರು. ಜೋಸೆಫನು ನೂರಹತ್ತು ವರ್ಷ ಬದುಕಿದ್ದನು;೨೩. ಎಫ್ರಯಿಮನ ಮಕ್ಕಳ ಮೊಮ್ಮಕ್ಕಳನ್ನೂ ನೋಡಿದನು. ಮನಸ್ಸೆಯ ಮಗನಾದ ಮಾಕೀರನಿಗೂ ಮಕ್ಕಳು ಹುಟ್ಟಿದಾಗ ಜೋಸೆಫನು ಅವರನ್ನೂ ತನ್ನ ಮಡಲಿಗೆ ಬರಮಾಡಿಕೊಂಡನು.೨೪. ಜೋಸೆಫನು ತನ್ನ ಅಣ್ಣತಮ್ಮಂದಿರಿಗೆ, “ನನ್ನ ಮರಣಕಾಲವು ಸಮೀಪಿಸಿತು. ಆದರೆ ದೇವರು ನಿಶ್ಚಯವಾಗಿ ನಿಮ್ಮನ್ನು ಕಾಪಾಡಲು ಬರುವರು; ತಾವು ಅಬ್ರಹಾಮ್, ಇಸಾಕ್, ಯಕೋಬರಿಗೆ ಕೊಡುವುದಾಗಿ ವಾಗ್ದಾನಮಾಡಿರುವ ನಾಡಿಗೆ ನೀವು ಹೋಗಿ ಸೇರುವಂತೆ ಮಾಡುವರು,” ಎಂದು ಹೇಳಿದನು.೨೫. ಇದೂ ಅಲ್ಲದೆ ಜೋಸೆಫನು ಆ ಇಸ್ರಯೇಲನ ಮಕ್ಕಳಿಗೆ, “ದೇವರು ನಿಸ್ಸಂದೇಹವಾಗಿ ನಿಮ್ಮನ್ನು ಕಾಪಾಡಲು ಬರುವರು; ಆಗ ನೀವು ನನ್ನ ಶವವನ್ನು ನಿಮ್ಮ ಸಂಗಡ ಹೊತ್ತುಕೊಂಡು ಹೋಗಬೇಕು,” ಎಂದು ಹೇಳಿ, “ಹಾಗೆಯೇ ಮಾಡುತ್ತೇನೆ,” ಎಂಬುದಾಗಿ ಅವರಿಂದ ಪ್ರಮಾಣ ಮಾಡಿಸಿದನು.೨೬. ಜೋಸೆಫನು ಈಜಿಪ್ಟ್ ದೇಶದಲ್ಲಿ ತನ್ನ ನೂರಹತ್ತನೇ ವರ್ಷದಲ್ಲಿ ಸತ್ತನು. ಅವನ ಶವಕ್ಕೆ ಸುಗಂಧದ್ರವ್ಯಗಳನ್ನು ಲೇಪಿಸಿ, ಅದನ್ನು ಒಂದು ಪೆಟ್ಟಿಗೆಯಲ್ಲಿ ಇರಿಸಿದರು.ಕೀರ್ತನೆಗಳು ೧೪:೧-೭೧. “ದೇವನಿಲ್ಲ” ಎನ್ನುವವರು ಮನದಲಿ ದುರ್ಮತಿಗಳು I ಹೇಯ ಕೃತ್ಯವೆಸಗುವರು ಆ ಭ್ರಷ್ಟಚಾರಿಗಳು I ಒಳಿತನ್ನು ಮಾಡುವರಾರೂ ಇಲ್ಲ ಅವರೊಳು II೨. ಮಾನವರನು ಪ್ರಭು ಸ್ವರ್ಗದಿಂದ ಸಮೀಕ್ಷಿಸುತಿಹನು I ದೇವರನು ಅರಸುವ ಸನ್ಮತಿಗಳಾರೆಂದು ವೀಕ್ಷಿಸುತಿಹನು II೩. ದಾರಿತಪ್ಪಿಹೋದ ದ್ರೋಹಿಗಳು ಅವರೆಲ್ಲ I ಒಳಿತನ್ನು ಮಾಡುವವನಿಲ್ಲ; ಓರ್ವನೂ ಇಲ್ಲ II೪. ದುರ್ಜನರೆನ್ನ ಜನರನು ಅನ್ನದಂತೆ ನುಂಗುವುದೇಕೆ? I ಪ್ರಭುವನು ನೆನೆಯದಾ ದುಷ್ಕರ್ಮಿಗಳಿಗೆ ಅರಿವಿಲ್ಲವೇಕೆ? I೫. ಸಜ್ಜನರ ಸಂಗದೊಳು ದೇವನಿರಲು I ದುರ್ಜನರಿದೋ ದಿಗ್ಭ್ರಾಂತರಾಗುವರು II೬. ಕೆಡಿಸಬಹುದವರು ಬಡಜನರ ಯೋಜನೆಯನು I ಪ್ರಭುವಾದರೊ ಅವರಿಗೆ ಆಶ್ರಯವಾಗಿರುವನು II೭. ಬರಲಿ ಇಸ್ರಯೇಲಿಗೆ ಜೀವೋದ್ಧಾರ ಸಿಯೋನಿನಿಂದ I ತರಲಿ ಪ್ರಭು ತನ್ನ ಪ್ರಜೆಗೆ ಮರಳಿ ಸಿರಿಸಂಪತ್ತ I ಸಿಗಲಿ ಯಕೋಬ - ಇಸ್ರಯೇಲ ಜನತೆಗೆ ಹರ್ಷಾನಂದ IIಜ್ಞಾನೋಕ್ತಿಗಳು ೪:೨೦-೨೪೨೦. ಮಗನೇ, ನನ್ನ ಮಾತನ್ನು ಆಲಿಸು, ನನ್ನ ನುಡಿಗಳಿಗೆ ಕಿವಿಗೊಡು.೨೧. ಅವು ನಿನ್ನ ಕಣ್ಣಿಗೆ ಮರೆಯಾಗದಿರಲಿ, ನಿನ್ನ ಹೃದಯದೊಳಗೆ ಭದ್ರವಾಗಿರಲಿ.೨೨. ಕಂಡುಹಿಡಿಯಬಲ್ಲವನಿಗೆ ಅವು ಜೀವದಾಯಕ; ಇಡೀ ದೇಹಕ್ಕೆ ಅವು ಆರೋಗ್ಯಕರ.೨೩. ನಿನ್ನ ಹೃದಯವನ್ನು ಕಾಪಾಡು ಜಾಗರೂಕತೆಯಿಂದ; ಏಕೆಂದರೆ ಜೀವಧಾರೆ ಹೊರಡುವುದು ಅದರಿಂದ.೨೪. ಸೊಟ್ಟಮಾತುಗಳನ್ನು ನಿನ್ನಿಂದ ತೊಲಗಿಸು, ಕೆಟ್ಟನುಡಿಗಳನ್ನು ಬಾಯಿಂದ ದೂರಮಾಡು.ಮತ್ತಾಯನು ೧೬:೧-೨೮೧. ತರುವಾಯ ಫರಿಸಾಯರು ಮತ್ತು ಸದ್ದುಕಾಯರು ಯೇಸುಸ್ವಾಮಿಯ ಬಳಿಗೆ ಬಂದರು. ಸ್ವಾಮಿಯನ್ನು ಪರೀಕ್ಷಿಸುವ ದುರದ್ದೇಶದಿಂದ, “ನೀನು ದೇವರಿಂದ ಬಂದವನೆಂದು ಸೂಚಿಸಲು ಅದ್ಭುತವೊಂದನ್ನು ನಮಗೆ ಮಾಡಿತೋರಿಸು,” ಎಂದರು.೨. ಅದಕ್ಕೆ ಯೇಸು, “ಸಂಜೆಯಾದಾಗ ನೀವು ‘ಹವಾಮಾನವು ಹಿತಕರವಾಗಿರುತ್ತದೆ, ಏಕೆಂದರೆ ಆಕಾಶ ಕೆಂಪಗಿದೆ ಎನ್ನುತ್ತೀರಿ.’ ಬೆಳಗ್ಗೆ, ‘ಈ ದಿನ ಗಾಳಿಮಳೆ ಇರುತ್ತದೆ. ಏಕೆಂದರೆ ಕೆಂಪಾದ ಆಕಾಶದಲ್ಲಿ ಮೋಡ ಮುಚ್ಚಿದೆ’ ಎನ್ನುತ್ತೀರಿ.೩. ಆಕಾಶದಲ್ಲಿ ಕಾಣುವ ಲಕ್ಷಣಗಳನ್ನು ನೀವು ಅರ್ಥಮಾಡಿಕೊಳ್ಳಬಲ್ಲಿರಿ; ಆದರೆ ಈಗಿನ ಕಾಲದ ಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ನಿಮ್ಮಿಂದಾಗದು.೪. ಈ ದುಷ್ಟ ಹಾಗೂ ಅಧರ್ಮ ಪೀಳಿಗೆ ಅದ್ಭುತಗಳನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವಲ್ಲದೆ ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು,” ಎಂದು ಹೇಳಿ ಅವರನ್ನು ಬಿಟ್ಟು ಹೋದರು.೫. ಶಿಷ್ಯರು ಬುತ್ತಿಯನ್ನು ಕಟ್ಟಿಕೊಳ್ಳುವುದನ್ನು ಮರೆತು ಸರೋವರದ ಆಚೆ ದಡಕ್ಕೆ ಬಂದರು.೬. ಯೇಸುಸ್ವಾಮಿ ಅವರಿಗೆ, “ಎಚ್ಚರಿಕೆ, ಫರಿಸಾಯರ ಹಾಗೂ ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ!” ಎಂದರು.೭. ತಾವು ರೊಟ್ಟಿ ತಂದಿಲ್ಲವಾದ ಕಾರಣ ಯೇಸು ಹೀಗೆ ಹೇಳುತ್ತಿದ್ದಾರೆಂದು ಶಿಷ್ಯರು ತಮ್ಮತಮ್ಮಲ್ಲೇ ಮಾತನಾಡಿಕೊಳ್ಳಲಾರಂಭಿಸಿದರು.೮. ಇದನ್ನು ಗಮನಿಸಿದ ಯೇಸು, “ಅಲ್ಪವಿಶ್ವಾಸಿಗಳೇ, ರೊಟ್ಟಿಯನ್ನು ತಂದಿಲ್ಲವೆಂದು ನಿಮ್ಮನಿಮ್ಮಲ್ಲೇ ಚರ್ಚೆ ಏಕೆ?೯. ಏನು, ನಿಮಗಿನ್ನೂ ಅರಿವಿಲ್ಲವೆ? ಐದು ರೊಟ್ಟಿಗಳಿಂದ ನಾನು ಐದು ಸಾವಿರ ಜನರನ್ನು ತೃಪ್ತಿಪಡಿಸಿದ್ದು ನಿಮಗೆ ಜ್ಞಾಪಕವಿಲ್ಲವೆ? ಆಗ ಉಳಿದುದ್ದನ್ನು ಎಷ್ಟು ಬುಟ್ಟಿಗಳಲ್ಲಿ ತುಂಬಿಸಿಕೊಂಡಿರಿ?೧೦. ಅಲ್ಲದೆ ಏಳು ರೊಟ್ಟಿಗಳಿಂದ ನಾಲ್ಕು ಸಾವಿರ ಜನರನ್ನು ತೃಪ್ತಿಪಡಿಸಿದಾಗ, ಉಳಿದುದನ್ನು ಎಷ್ಟು ಕುಕ್ಕೆಗಳಲ್ಲಿ ತುಂಬಿಸಿಕೊಂಡಿರಿ?೧೧. ಹೀಗಿದ್ದೂ ನಾನು ಈಗ ರೊಟ್ಟಿಯನ್ನು ಕುರಿತು ಎಚ್ಚರಿಸಲಿಲ್ಲವೆಂದು ನೀವು ತಿಳಿಯದೆಹೋದಿರಲ್ಲಾ,” ಎಂದರು.೧೨. ರೊಟ್ಟಿಯ ಹಿಟ್ಟನ್ನು ಹುದುಗೆಬ್ಬಿಸುವ ಹುಳಿಯನ್ನು ಕುರಿತು ಅಲ್ಲ, ಫರಿಸಾಯರ ಮತ್ತು ಸದ್ದುಕಾಯರ ಬೋಧನೆಯ ವಿಷಯವಾಗಿ ಜಾಗರೂಕರಾಗಿರಬೇಕೆಂದು ಯೇಸು ಎಚ್ಚರಿಸಿದರೆಂದು ಆಗ ಶಿಷ್ಯರು ಅರ್ಥಮಾಡಿಕೊಂಡರು.೧೩. ಯೇಸುಸ್ವಾಮಿ ‘ಫಿಲಿಪ್ಪನ ಸೆಜರೇಯ’ ಎಂಬ ಪ್ರಾಂತ್ಯಕ್ಕೆ ಬಂದರು. ಅಲ್ಲಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, “ನರಪುತ್ರನನ್ನು ಜನರು ಯಾರೆಂದು ಹೇಳುತ್ತಾರೆ?” ಎಂದು ಕೇಳಿದರು.೧೪. ಅದಕ್ಕೆ ಶಿಷ್ಯರು, “ ‘ಸ್ನಾನಿಕ ಯೊವಾನ್ನ’, ಎಂದು ಕೆಲವರು ಹೇಳುತ್ತಾರೆ; ಮತ್ತೆ ಕೆಲವರು ' ಎಲೀಯನು' ಎನ್ನುತ್ತಾರೆ. ‘ಯೆರೆಮೀಯನು ಅಥವಾ ಪ್ರವಾದಿಗಳಲ್ಲಿ ತಾವೂ ಒಬ್ಬರು,’ ಎಂಬುದು ಇನ್ನೂ ಕೆಲವರ ಅಭಿಪ್ರಾಯ,” ಎಂದು ಉತ್ತರಕೊಟ್ಟರು.೧೫. ಆಗ ಯೇಸು, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಪ್ರಶ್ನಿಸಿದರು.೧೬. ಅದಕ್ಕೆ ಪೇತ್ರನು, “ಅಭಿಷಿಕ್ತರಾದ ಲೋಕೋದ್ಧಾರಕ ತಾವೇ, ಜೀವಸ್ವರೂಪರಾದ ದೇವರ ಪುತ್ರ ತಾವೇ,” ಎಂದನು.೧೭. ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಹೀಗೆಂದರು: “ಯೋನ್ನನ ಮಗ ಸಿಮೋನನೇ, ನೀನು ಧನ್ಯ! ಈ ವಿಷಯವನ್ನು ನಿನಗೆ ಶ್ರುತಪಡಿಸಿದ್ದು ನರಮಾನವ ಶಕ್ತಿ ಅಲ್ಲ. ಸ್ವರ್ಗದಲ್ಲಿರುವ ನನ್ನ ಪಿತನೇ.೧೮. ನಾನು ನಿನಗೆ ಹೇಳುತ್ತೇನೆ, ಕೇಳು: “ನಿನ್ನ ಹೆಸರು ಪೇತ್ರ! ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು, ಪಾತಾಳಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು.೧೯. ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಇಹದಲ್ಲಿ ನೀನು ಏನನ್ನು ಬಂಧಿಸುತ್ತಿಯೋ ಅದನ್ನು ಪರದಲ್ಲಿಯೂ ಬಂಧಿಸಲಾಗುವುದು. ಇಹದಲ್ಲಿ ನೀನು ಏನನ್ನು ಬಿಚ್ಚುತ್ತೀಯೋ ಅದನ್ನು ಪರದಲ್ಲಿಯೂ ಬಿಚ್ಚಲಾಗುವುದು,”೨೦. ಅನಂತರ ಯೇಸು ತಮ್ಮ ಶಿಷ್ಯರಿಗೆ ತಾವು ‘ಅಭಿಷಿಕ್ತರಾದ ಲೋಕೋದ್ಧಾರಕ’ ಎಂಬುದನ್ನು ಯಾರಿಗೂ ಹೇಳಕೂಡದೆಂದು ಕಟ್ಟಪ್ಪಣೆ ಮಾಡಿದರು.೨೧. ಯೇಸುಸ್ವಾಮಿ ತಮ್ಮ ಶಿಷ್ಯರಿಗೆ, “ನಾನು ಜೆರುಸಲೇಮಿಗೆ ಹೋಗಬೇಕಾಗಿದೆ; ಅಲ್ಲಿ ಸಭಾಪ್ರಮುಖರಿಂದಲೂ ಕಠಿಣವಾದ ಯಾತನೆಯನ್ನು ಅನುಭವಿಸಿ, ಮರಣಕ್ಕೆ ತುತ್ತಾಗಿ, ಮೂರನೆಯ ದಿನ ಪುನರುತ್ಥಾನ ಹೊಂದಬೇಕಾಗಿದೆ\ ಎಂದು ಅಂದಿನಿಂದಲೂ ಒತ್ತಿ ಹೇಳಲಾರಂಭಿಸಿದರು.೨೨. ಇದನ್ನು ಕೇಳಲಾಗದೆ ಪೇತ್ರನು ಯೇಸುವನ್ನು ಪಕ್ಕಕ್ಕೆ ಕರೆದು, “ಪ್ರಭೂ, ಹಾಗೆನ್ನಲೇಬೇಡಿ, ನಿಮಗೆಂದಿಗೂ ಹಾಗೆ ಸಂಭವಿಸದಿರಲಿ,” ಎಂದು ಪ್ರತಿಭಟಿಸಿದನು.೨೩. ಆದರೆ ಯೇಸು ಪೇತ್ರನತ್ತ ತಿರುಗಿ, “ಸೈತಾನನೇ, ತೊಲಗಿಲ್ಲಿಂದ; ನೀನು ನನಗೆ ಅಡೆತಡೆ; ನಿನ್ನ ಈ ಆಲೋಚನೆ ಮನುಷ್ಯರದ್ದೇ ಹೊರತು, ದೇವರದಲ್ಲ,” ಎಂದರು.೨೪. ಅನಂತರ ತಮ್ಮ ಶಿಷ್ಯರಿಗೆ ಹೀಗೆಂದರು: “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.೨೫. ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಂಡುಕೊಳ್ಳುವನು.೨೬. ಪ್ರಪಂಚವನ್ನೆಲ್ಲಾ ಗೆದ್ದುಕೊಂಡರೂ ಒಬ್ಬನು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅದರಿಂದ ಅವನಿಗೆ ದೊರಕುವ ಲಾಭವೇನು? ಅಥವಾ ಮನುಷ್ಯರು ತನ್ನ ಪ್ರಾಣಕ್ಕೆ ಈಡಾಗಿ ಏನನ್ನು ತಾನೇ ಕೊಡಬಲ್ಲನು?೨೭. ನರಪುತ್ರನು ತನ್ನ ಪಿತನ ಪ್ರಭಾವದೊಡನೆ ತನ್ನ ದೂತರ ಸಮೇತ ಬರಲಿದ್ದಾನೆ. ಆಗ ಪ್ರತಿಯೊಬ್ಬ ಮಾನವನಿಗೆ ಅವನವನ ಕೃತ್ಯಕ್ಕೆ ತಕ್ಕ ಪ್ರತಿಫಲ ಕೊಡುವನು.೨೮. ಇಲ್ಲಿರುವವರಲ್ಲಿ ಕೆಲವರು ನರಪುತ್ರನು ತನ್ನ ಸಾಮ್ರಾಜ್ಯದಲ್ಲಿ ಪ್ರತ್ಯಕ್ಷನಾಗುವುದನ್ನು ಕಾಣುವುದಕ್ಕೆ ಮುನ್ನ ಸಾವನ್ನು ಸವಿಯುವುದಿಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ,” ಎಂದರು. Kannada Bible (KNCL) 2016 No Data