ಬೈಬಲ್ ಒಂದು ವರ್ಷದಲ್ಲಿ ಅಕ್ಟೋಬರ್ ೧೦ಯೆರೆಮೀಯನ ಗ್ರಂಥ ೫:೧-೩೧೧. ಜೆರುಸಲೇಮಿನ ಜನರೇ, ಬೀದಿಗಳಲ್ಲಿ ಅತ್ತಿತ್ತ ಓಡಾಡಿ ನೋಡಿ ಅಲ್ಲಿನ ಚೌಕಗಳಲ್ಲಿ ಹುಡುಕಾಡಿ ನೋಡಿ. ನೀತಿಯನ್ನು ಕೈಗೊಂಡು ಸತ್ಯವನ್ನರಸುವವನು ಒಬ್ಬನಾದರೂ ಇದ್ದಾನೆಯೇ? ಅಂಥ ಸತ್ಪುರುಷ ಸಿಕ್ಕುತ್ತಾನೆಯೆ ಎಂಬುದನ್ನು ನೀವೇ ನಿಶ್ಚಯಿಸಿರಿ; ಸಿಕ್ಕಿದ್ದೇ ಆದರೆ ಸರ್ವೇಶ್ವರ ಸ್ವಾಮಿ ಆ ನಗರವನ್ನು ಕ್ಷಮಿಸುವರು.೨. ನೀವು ‘ಸರ್ವೇಶ್ವರನ ಜೀವದಾಣೆ’ ಎಂದು ಪ್ರಮಾಣ ಮಾಡಿದರೂ ಆ ಪ್ರಮಾಣ ಸುಳ್ಳೇ ಸುಳ್ಳು ಎನ್ನುತ್ತಾರೆ ಸರ್ವೇಶ್ವರ.೩. ಸ್ವಾಮಿ ಸರ್ವೇಶ್ವರನ ಕಣ್ಣು ನಾಟಿಸುವುದು ಸತ್ಯದ ಮೇಲೆ. ಅವರು ದಂಡಿಸಿದರೂ ನೀವು ಪಶ್ಚಾತ್ತಾಪಪಡಲಿಲ್ಲ. ಅವರು ನಸುಕಿದರೂ ನೀವು ತಿದ್ದುಕೊಳ್ಳಲು ಒಪ್ಪಲಿಲ್ಲ. ನಿಮ್ಮ ಮುಖವನ್ನು ಕಲ್ಲಿಗಿಂತ ಕಠಿಣ ಮಾಡಿಕೊಂಡಿರಿ. ಅವರಿಗೆ ಅಭಿಮುಖರಾಗಲು ಸಮ್ಮತಿಸದೆಹೋದಿರಿ.೪. ಹೀಗಿರಲು ನಾನು, “ಈ ಜನರು ಬಡವರು, ಮೂಢರು, ಸರ್ವೇಶ್ವರನ ಮಾರ್ಗವನ್ನೂ ದೇವರ ನ್ಯಾಯವಿಧಿಗಳನ್ನೂ ತಿಳಿಯದವರು.೫. ಆದುದರಿಂದ ಗಣ್ಯವ್ಯಕ್ತಿಗಳ ಬಳಿಗೆ ಹೋಗಿ ಮಾತಾಡುವೆನು ಅವರು ಸರ್ವೇಶ್ವರನ ಮಾರ್ಗ ಹಾಗೂ ಅವರ ದೇವರ ನ್ಯಾಯವಿಧಿಗಳನ್ನು ಬಲ್ಲವರು,” ಎಂದುಕೊಂಡೆನು. ಆದರೆ ಆ ವ್ಯಕ್ತಿಗಳು ಕೂಡ ನೊಗವನ್ನು ಮುರಿದವರು, ಕಣ್ಣಿಗಳನ್ನು ಕಿತ್ತುಬಿಟ್ಟವರು.೬. ಆದಕಾರಣ ಅಡವಿಯ ಸಿಂಹ ಅವರನ್ನು ಕೊಲ್ಲುವುದು ಕಾಡಿನ ತೋಳ ಕೊಳ್ಳೆಹೊಡೆಯುವುದು ಚಿರತೆ ಅವರ ಪಟ್ಟಣಗಳಿಗೆ ಹೊಂಚುಹಾಕುವುದು ಅಲ್ಲಿಂದ ಹೊರಬರುವ ಪ್ರತಿಯೊಬ್ಬನನ್ನು ಸೀಳುವುದು. ಅವರ ಅಪರಾಧಗಳೋ ಬಹಳ, ಅವರ ದ್ರೋಹಗಳೋ ಅಪಾರ!೭. ಸರ್ವೇಶ್ವರ ಸ್ವಾಮಿ ಹೀಗೆಂದು ಪ್ರಶ್ನಿಸುತ್ತಾರೆ; “ಎಲೈ ಜೆರುಸಲೇಮ್, ನಾನು ನಿನ್ನನ್ನು ಹೇಗೆ ಕ್ಷಮಿಸಲಿ? ನಿನ್ನ ಜನರು ನನ್ನನ್ನು ತೊರೆದುಬಿಟ್ಟಿದ್ದಾರೆ; ದೇವರಲ್ಲದವುಗಳ ಮೇಲೆ ಆಣೆಯಿಟ್ಟಿದ್ದಾರೆ. ನಾನು ಅವರಿಗೆ ಹೊಟ್ಟೆತುಂಬ ಊಟಕೊಟ್ಟೆ; ಅವರೋ ವ್ಯಭಿಚಾರ ಮಾಡಿದ್ದಾರೆ, ವೇಶ್ಯೆಯರ ಮನೆಗಳಲ್ಲಿ ಗುಂಪು ಸೇರಿದ್ದಾರೆ!೮. ಅತ್ತಿತ್ತ ಓಡಾಡುವ ಕೊಬ್ಬಿದ ಕುದುರೆಗಳಂತೆ ಅವರಲ್ಲಿ ಪ್ರತಿಯೊಬ್ಬನೂ ಕೆನೆಯುತ್ತಾನೆ ತನ್ನ ನೆರೆಯವನ ಹೆಂಡತಿಯನ್ನು ನೋಡಿ!೯. ಇವುಗಳ ನಿಮಿತ್ತ ನಾನು ದಂಡಿಸಬಾರದೋ? ಇಂಥ ಜನತೆಯ ಮೇಲೆ ನನ್ನ ಕೋಪವನ್ನು ತೀರಿಸದಿರುವೆನೋ?೧೦. ಆಕ್ರಮಣಕಾರರಿಗೆ ಕರೆ; ಸಿಯೋನೆಂಬ ದ್ರಾಕ್ಷಾತೋಟದ ಸಾಲುಗಿಡಗಳನ್ನು ಹಾಳುಮಾಡಿ. ಆದರೆ ಅದನ್ನು ನಿರ್ಮೂಲಮಾಡಬೇಡಿ. ಅದರ ರೆಂಬೆಗಳನ್ನು ಕಿತ್ತುಹಾಕಿ. ಅವು ಸರ್ವೇಶ್ವರನಾದ ನನಗೆ ಸೇರಿದವುಗಳಲ್ಲ.೧೧. ಇಸ್ರಯೇಲ್ ವಂಶದವರೂ ಜುದೇಯ ವಂಶದವರೂ ನನಗೆ ಬಹಳವಾಗಿ ದ್ರೋಹವೆಸಗಿದ್ದಾರೆ. ಇದು ಸರ್ವೇಶ್ವರನಾದ ನನ್ನ ನುಡಿ.”೧೨. ಆ ಜನರು ಸರ್ವೇಶ್ವರ ಸ್ವಾಮಿಯನ್ನು ಅಲ್ಲಗಳೆದಿದ್ದಾರೆ. “ಆತ ಏನು ಮಾಡಿಯಾನು? ನಮಗೆ ಕೇಡು ಬರುವುದೂ ಇಲ್ಲ, ಖಡ್ಗವಾಗಲಿ, ಕ್ಷಾಮವಾಗಲಿ ನಮ್ಮ ಕಣ್ಣಿಗೆ ಬೀಳುವುದೂ ಇಲ್ಲ.೧೩. ಪ್ರವಾದಿಗಳು ಆಡುವುದೆಲ್ಲ ಬರೀ ಗಾಳಿಮಾತುಗಳು. ದೈವೋಕ್ತಿಯೆಂಬುದು ಅವುಗಳಲ್ಲಿ ಇಲ್ಲ. ಅವರಿಗೇ ತಗಲಲಿ ಅವರು ಹೇಳುವುದೆಲ್ಲ,” ಎಂದುಕೊಂಡಿದ್ದಾರೆ.೧೪. ಆದುದರಿಂದ ಸೇನಾಧೀಶ್ವರ ಸರ್ವೇಶ್ವರ ಆದ ದೇವರು ಯೆರೆಮೀಯನಿಗೆ ಹೀಗೆಂದರು: “ಇಗೋ, ಅವರು ಹೀಗೆ ಮಾತಾಡಿದ್ದರಿಂದ ನಿನ್ನ ಬಾಯಲ್ಲಿನ ನನ್ನ ಮಾತುಗಳನ್ನು ಬೆಂಕಿಯನ್ನಾಗಿಸುವೆನು; ಆ ಜನರನ್ನು ಅದಕ್ಕೆ ಸೌದೆಯನ್ನಾಗಿಸುವೆನು; ಆ ಬೆಂಕಿ ಅವರನ್ನು ಸುಟ್ಟುಹಾಕುವುದು.೧೫. ಇಸ್ರಯೇಲ್ ವಂಶವೇ, ಸರ್ವೇಶ್ವರ ಸ್ವಾಮಿಯ ಮಾತನ್ನು ಗಮನದಿಂದ ಕೇಳು: “ನಾನು ಒಂದು ರಾಷ್ಟ್ರವನ್ನು ದೂರದಿಂದ ನಿನ್ನ ವಿರುದ್ಧ ಬರಮಾಡುವೆನು. ಅದು ಪ್ರಾಚೀನ ಹಾಗೂ ಪ್ರಬಲ ರಾಷ್ಟ್ರ. ಅದರ ಭಾಷೆ ನಿನಗೆ ತಿಳಿಯದು. ಅದು ಆಡುವ ಮಾತು ನಿನಗೆ ಅರ್ಥವಾಗದು.೧೬. ಅದರ ಬತ್ತಳಿಕೆ ಬಾಯ್ದೆರೆದ ಗೋರಿ; ಅದರ ಯೋಧರೆಲ್ಲರು ಶೂರರು,೧೭. ಅವರು ನಿನ್ನ ದವಸಧಾನ್ಯಗಳನ್ನು ತಿಂದುಬಿಡುವರು. ನಿನ್ನ ಗಂಡುಹೆಣ್ಣುಮಕ್ಕಳನ್ನು ಕೊಲ್ಲುವರು. ನಿನ್ನ ದನಕುರಿಗಳನ್ನು ಕಬಳಿಸಿಬಿಡುವರು. ದ್ರಾಕ್ಷಾಲತೆಗಳನ್ನೂ ಅಂಜೂರದ ಗಿಡಗಳನ್ನೂ ಹಾಳುಮಾಡುವರು. ನೀನು ನಂಬಿಕೊಂಡಿರುವ ಕೋಟೆಕೊತ್ತಲಗಳುಳ್ಳ ಪಟ್ಟಣಗಳನ್ನು ಅಸ್ತ್ರಗಳಿಂದ ಹಾಳುಮಾಡುವರು.೧೮. “ಆದರೂ ಆ ದಿನಗಳಲ್ಲಿ ನಾನು ನಿಮ್ಮನ್ನು ಸಂಪೂರ್ಣವಾಗಿ ನಿರ್ಮೂಲ ಮಾಡುವುದಿಲ್ಲ. ಇದು ಸರ್ವೇಶ್ವರನಾದ ನನ್ನ ನುಡಿ.೧೯. ‘ನಮ್ಮ ದೇವರಾದ ಸರ್ವೇಶ್ವರ ಸ್ವಾಮಿಯೇ ಇವುಗಳನ್ನೆಲ್ಲ ನಮಗೇಕೆ ಮಾಡಿದ್ದಾರೆ?’ ಎಂದು ಕೇಳುವಾಗ ನೀನು ಅವರಿಗೆ, ‘ನೀವು ಸರ್ವೇಶ್ವರನನ್ನೇ ತೊರೆದು, ಸ್ವಂತನಾಡಿನಲ್ಲೆ ಅನ್ಯದೇವತೆಗಳಿಗೆ ಸೇವೆಸಲ್ಲಿಸಿದ್ದೀರಿ. ಅಂತೆಯೇ ಹೊರನಾಡಿನಲ್ಲಿ ಅನ್ಯರಿಗೆ ಸೇವೆಮಾಡುವಿರಿ’ ಎಂದು ಹೇಳು.”೨೦. ಸರ್ವೇಶ್ವರ ಸ್ವಾಮಿ ಹೀಗೆನ್ನುತ್ತಾರೆ: “ಯಕೋಬ ಮನೆತನಕ್ಕೆ ಇದನ್ನು ಸಾರಿರಿ, ಜುದೇಯದಲ್ಲಿ ಹೀಗೆ ಪ್ರಕಟಿಸಿರಿ:೨೧. ಕಣ್ಣಿದ್ದರೂ ಕಾಣದ, ಕಿವಿಯಿದ್ದರೂ ಕೇಳದ, ಬುದ್ಧಿಯಿಲ್ಲದ ಜನರೇ, ಸರ್ವೇಶ್ವರನ ಈ ಮಾತನ್ನು ಕೇಳಿರಿ;೨೨. ನೀವು ನನಗೆ ಅಂಜುವುದಿಲ್ಲವೋ? ನನ್ನೆದುರಿಗೆ ನಡುಗುವುದಿಲ್ಲವೊ? ಕಡಲು ದಾಟದ ಹಾಗೆ ಅದಕ್ಕೆ ಮರಳನ್ನು ನಿತ್ಯನಿಬಂಧನೆಯಿಂದ ಮೇರೆಯನ್ನಾಗಿ ನೇಮಿಸಿದವನು ನಾನು.ತೆರೆಗಳು ಅಲ್ಲಕಲ್ಲೋಲವಾದರೂ ಅದನ್ನು ಮೀರಲಾರವು. ಭೋರ್ಗರೆದರೂ ಹಾಯಲಾರವು.೨೩. ನೀವಾದರೋ ನನ್ನ ಅಧೀನದಿಂದ ತಪ್ಪಿಸಿಕೊಂಡು ಎದುರಿಬೀಳುವ ಹೃದಯವುಳ್ಳವರಾಗಿ ಇದ್ದೀರಿ. ಹದ್ದುಮೀರಿ ನನ್ನನ್ನು ಬಿಟ್ಟುಹೋಗಿ ಇದ್ದೀರಿ.೨೪. ಮುಂಗಾರು, ಹಿಂಗಾರು ಹೀಗೆ ಸಕಾಲದ ಮಳೆಯನ್ನು ಬರಮಾಡುವವನು ನಾನು. ಸುಗ್ಗಿಯ ಕ್ಲುಪ್ತವಾರಗಳನ್ನು ಪ್ರತ್ಯೇಕಿಸುವವನು ನಾನು. ಆದರೆ ನೀವು ನನ್ನಲ್ಲಿ ಭಯಭಕ್ತಿ ಇಡಲು ಮನದಲ್ಲಿ ನೆನೆಯದೆ ಇದ್ದೀರಿ.೨೫. ನಿಮ್ಮ ಅಪರಾಧಗಳು ಈ ಪ್ರಯೋಜನಗಳನ್ನು ತಡೆಗಟ್ಟಿವೆ. ನಿಮ್ಮ ಪಾಪಗಳು, ಈ ಒಳಿತು ನಿಮಗೆ ಸಿಗದಂತೆ ತಪ್ಪಿಸಿವೆ.೨೬. “ನನ್ನ ಜನರ ನಡುವೆ ಕೆಟ್ಟವರು ಕಂಡುಬಂದಿದ್ದಾರೆ. ಬೇಡರು ಹೊಂಚುಹಾಕುವ ಹಾಗೆ ಅವರು ಹೊಂಚುಹಾಕುತ್ತಾರೆ. ಬೋನೊಡ್ಡಿ ಜನರನ್ನು ಹಿಡಿಯುತ್ತಾರೆ.೨೭. ಪಂಜರಗಳಲ್ಲಿ ಪಕ್ಷಿಗಳು ತುಂಬಿರುವಂತೆ ಅವರ ಮನೆಗಳಲ್ಲಿ ಮೋಸ ವಂಚನೆಯಿಂದ ಬಂದ ಆದಾಯಗಳು ತುಂಬಿವೆ. ಇದರಿಂದ ದೊಡ್ಡ ಹಣವಂತರಾಗಿ ಇದ್ದಾರೆ.೨೮. ಕೊಬ್ಬಿ ಮೆರೆಯುತ್ತಿದ್ದಾರೆ. ಕೆಟ್ಟ ಕಾರ್ಯಗಳಲ್ಲಂತೂ ನಿಸ್ಸೀಮರಾಗಿದ್ದಾರೆ. ಅನಾಥರ ಏಳಿಗೆಗಾಗಿ ಅವರ ಪಕ್ಷ ಹಿಡಿದು ವಾದಿಸುವುದಿಲ್ಲ. ದಿಕ್ಕಿಲ್ಲದವರಿಗೆ ನ್ಯಾಯ ದೊರಕಿಸುವುದಿಲ್ಲ.೨೯. “ನಾನು ಇವುಗಳಿಗಾಗಿ ಇವರನ್ನು ದುಡಿಸಬಾರದೋ? ಇಂಥ ಜನತೆಯ ಮೇಲೆ ನನ್ನ ಕೋಪ ತೀರಿಸದೆ ಇರುವೆನೋ? ಇದು ಸರ್ವೇಶ್ವರನಾದ ನನ್ನ ನುಡಿ.೩೦. ಭೀಕರವಾದ ಹಾಗೂ ಅಸಹ್ಯವಾದ ಘಟನೆಗಳು ನಾಡಿನಲ್ಲಿ ನಡೆದುಬಂದಿವೆ.೩೧. ಪ್ರವಾದಿಗಳೇ ಸುಳ್ಳು ಪ್ರವಾದನೆಮಾಡುತ್ತಾರೆ. ಯಾಜಕರು ಅಂಥವರಿಂದ ಅಧಿಕಾರ ಪಡೆದು ದೊರೆತನಮಾಡುತ್ತಾರೆ. ನನ್ನ ಜನರಿಗೆ ಚೆನ್ನಾಗಿ ಹಿಡಿಸುವುದು ಇಂಥದ್ದೇ. ಆದರೆ ಅಂತ್ಯ ಬಂದಾಗ ಏನು ಮಾಡುವರು?”ಯೆರೆಮೀಯನ ಗ್ರಂಥ ೬:೧-೩೦೧. ಬೆನ್ಯಮೀನ್ ಕುಲದವರೇ, ಜೆರುಸಲೇಮಿನಿಂದ ವಲಸೆಹೋಗಿರಿ. ತೆಕೋವದಲ್ಲಿ ಕೊಂಬನ್ನೂದಿರಿ. ಬೇತ್ಹಕ್ಕೆರೆಮಿನಲ್ಲಿ ಧ್ವಜವನ್ನೆತ್ತಿರಿ. ಏಕೆಂದರೆ ಅತಿ ವಿನಾಶಕರವಾದ ವಿಪತ್ತು ಉತ್ತರದಿಂದ ತಲೆದೋರುತ್ತಿದೆ.೨. ಸುಂದರವೂ, ಸೊಂಪಾದ ಹಸಿರುಗಾವಲಿಗೆ ಸಮಾನವೂ ಆದ ಸಿಯೋನ್ ನಗರ ನಾಶವಾಗಲಿದೆ.೩. ವೈರಿಗಳಾದ ಕುರುಬರು ತಮ್ಮ ಹಿಂಡುಗಳೊಡನೆ ಅಲ್ಲಿಗೆ ಬಂದು ಅದರ ಎದುರಿಗೆ ಹಾಗೂ ಸುತ್ತಲೂ ತಮ್ಮ ಗುಡಾರಗಳನ್ನು ಹಾಕುವರು. ಪ್ರತಿಯೊಬ್ಬನೂ ತನಗೆ ಇಷ್ಟಬಂದ ಸ್ಥಳದಲ್ಲೇ ಮೇಯಿಸಿಬಿಡುವನು.೪. ಅವರು: “ಸಿಯೋನಿಗೆ ವಿರುದ್ಧ ಯುದ್ಧಸನ್ನದ್ಧರಾಗಿರಿ. ಏಳಿ, ನಡುಮಧ್ಯಾಹ್ನದಲ್ಲೆ ಅದರ ಮೇಲೆ ನುಗ್ಗುವ. ಅಯ್ಯೋ, ಇದೇನು ಹೊತ್ತುಮೀರಿ ಹೋಗುತ್ತಿದೆ ಅಲ್ಲಾ, ಸಂಜೆಯ ನೆರಳು ಉದ್ದುದ್ದವಾಗುತ್ತಿದೆಯಲ್ಲಾ!೫. ಎದ್ದು ರಾತ್ರಿಯಲ್ಲೆ ಅದರ ಮೇಲೆ ಬಿದ್ದು ಅಲ್ಲಿನ ಅರಮನೆಗಳನ್ನು ಹಾಳುಮಾಡೋಣ,” ಎಂದುಕೊಳ್ಳುತ್ತಿದ್ದಾರೆ.೬. ಸರ್ವಶಕ್ತನಾದ ಸರ್ವೇಶ್ವರ ಸ್ವಾಮಿ ಹೀಗೆ ಎನ್ನುತ್ತಾರೆ: “ಸಿಯೋನ್ ಸುತ್ತಣ ಮರಗಳನ್ನು ಕಡಿದುಬಿಡಿ. ಜೆರುಸಲೇಮ್ ಎದುರಿಗೆ ದಿಬ್ಬಗಳನ್ನು ಎಬ್ಬಿಸಿರಿ. ನೀವು ದಂಡಿಸಬೇಕಾದ ನಗರ ಇದುವೆ. ದರೋಡೆ ದಬ್ಬಾಳಿಕೆಗಳಿಂದ ಅದು ತುಂಬಿದೆ.೭. ತೊಟ್ಟಿ ತನ್ನಲ್ಲಿನ ನೀರನ್ನು ತಿಳಿಯಾಗಿ ಇಟ್ಟುಕೊಳ್ಳುವಂತೆ ಈ ನಗರ ತನ್ನಲ್ಲಿನ ನೀಚತನವನ್ನು ನಿಚ್ಚಳವಾಗಿ ಇಟ್ಟುಕೊಂಡಿದೆ. ಇಲ್ಲಿಂದ ಕೇಳಿಬರುವುದೆಲ್ಲ ಹಿಂಸಾಚಾರದ ಹಾಗೂ ಕೊಳ್ಳೆಯ ಸುದ್ದಿಯೆ. ರೋಗ ರುಜಿನಗಳೂ ಗಾಯಹುಣ್ಣುಗಳೂ ಸದಾ ನನ್ನ ಕಣ್ಣಿಗೆ ಬೀಳುತ್ತಿವೆ.೮. ಜೆರುಸಲೇಮ್, ಎಚ್ಚರಿಕೆಯಿಂದ ನಡೆದುಕೊ. ಇಲ್ಲವಾದರೆ ನಾನು ನಿನ್ನನ್ನು ಅಗಲಿಬಿಡುವೆನು. ನಿನ್ನನ್ನು ಪಾಳುಬಿದ್ದ ನಿರ್ಜನ ಪ್ರದೇಶವಾಗಿಸುವೆನು.”೯. ಸರ್ವಶಕ್ತರಾದ ಸರ್ವೇಶ್ವರ ಸ್ವಾಮಿ ನನಗೆ ಹೀಗೆಂದರು: “ಇಸ್ರಯೇಲಿನ ಅಳಿದುಳಿದವರನ್ನು ದ್ರಾಕ್ಷಿಯ ಹಕ್ಕಲನ್ನೋ ಎಂಬಂತೆ ಆಯ್ದುಕೊ. ದ್ರಾಕ್ಷಿಯ ಹಣ್ಣನ್ನು ಕೀಳುವವನಂತೆ ನಿನ್ನ ಕೈಯನ್ನು ಮತ್ತೆ ರೆಂಬೆಗಳಿಗೆ ಹಾಕು.”೧೦. ಅದಕ್ಕೆ ನಾನು, “ಅಯ್ಯೋ! ಯಾರ ಸಂಗಡ ನಾನು ಮಾತಾಡಿ ಅವರು ಗಮನಿಸುವಂತೆ ಮಾಡಲಿ? ಅವರ ಕಿವಿ ಮಂದ. ಅವರು ಕೇಳಿಸಿಕೊಳ್ಳುವುದಿಲ್ಲ. ಸರ್ವೇಶ್ವರ ಆದ ನಿಮ್ಮ ಮಾತು ಎಂದರೆ ಅವರಿಗೆ ತಿರಸ್ಕಾರ. ಅದು ಅವರಿಗೆ ರುಚಿಸುವುದಿಲ್ಲ.೧೧. ಆದಕಾರಣವೇ ನಿಮ್ಮ ಕೋಪ ನನ್ನಲ್ಲೂ ತುಂಬಿತುಳುಕುತ್ತಿದೆ. ಅದನ್ನು ತಡೆದು ನನಗೆ ಸಾಕಾಗಿದೆ,” ಎಂದೆನು. ಆಗ ಸರ್ವೇಶ್ವರ ನನಗೆ: “ಹಾಗಾದರೆ ಆ ಕೋಪವನ್ನು ಬೀದಿಯಲ್ಲಿನ ಮಕ್ಕಳ ಮೇಲೂ ಯುವಕರ ಕೂಟ಼ಗಳ ಮೇಲೂ ಕಾರಿಬಿಡು. ಗಂಡಹೆಂಡತಿಯರನ್ನೂ ಮುದುಕರನ್ನೂ ವಯೋವೃದ್ಧರನ್ನೂ ಅಪಹರಿಸಲಾಗುವುದು.೧೨. ಅವರ ಹೆಂಡತಿ, ಮನೆ, ಹೊಲ, ಗದ್ದೆ ಎಲ್ಲವೂ ಅನ್ಯರ ಪಾಲಾಗುವುದು.” “ನಾಡಿನ ನಿವಾಸಿಗಳ ಮೇಲೆ ಕೈಮಾಡುವೆನೆಂಬುದು ಖಚಿತ. ಇದು ಸರ್ವೇಶ್ವರನಾದ ನನ್ನ ನುಡಿ.೧೩. ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ಅನ್ಯಾಯವಾಗಿ ದೋಚಿಕೊಳ್ಳುತ್ತಲೇ ಇದ್ದಾರೆ. ಪ್ರವಾದಿಗಳು ಮೊದಲಾಗಿ ಯಾಜಕರವರೆಗೆ ಸಕಲರು ಮೋಸಮಾಡುತ್ತಾ ಇದ್ದಾರೆ.೧೪. ಅವರು, ನನ್ನ ಜನರ ಗಾಯಗಳು ಗುಣವಾಗದಿದ್ದರೂ ಅವು ಕೇವಲ ಮಚ್ಚೆಗಳೋ ಎಂಬಂತೆ ‘ಎಲ್ಲ ಚೆನ್ನಾಗಿದೆ’ ಎಂದು ಸಮಾಧಾನ ಹೇಳಿ ವಂಚಿಸುತ್ತಿದ್ದಾರೆ.೧೫. ಅಸಹ್ಯಕಾರ್ಯಗಳನ್ನು ಮಾಡಿ ಅವಮಾನಕ್ಕೆ ಗುರಿಯಾಗಿದ್ದರೂ ಎಳ್ಳಷ್ಟೂ ನಾಚಿಕೆ ಇಲ್ಲದಿದ್ದಾರೆ. ಅವರಿಗೆ ಲಜ್ಜೆಯ ಗಂಧವೂ ಇಲ್ಲ. ಆದಕಾರಣ ಬೇರೆಯವರಂತೆ ಅವರೂ ಬೀಳುವರು. ನಾನು ದಂಡಿಸುವಾಗ ಅವರು ಏಳಲಾಗದಂತೆ ಮುಗ್ಗರಿಸಿ ಬೀಳುವರು. ಇದು ಸರ್ವೇಶ್ವರನಾದ ನನ್ನ ನುಡಿ,” ಎಂದರು.೧೬. ಸರ್ವೇಶ್ವರ ಸ್ವಾಮಿ ತಮ್ಮ ಜನರಿಗೆ: “ನೀವು ದಾರಿಗಳು ಕೂಡುವ ಸ್ಥಳಗಳಲ್ಲಿ ನಿಂತು ನೋಡಿ. ಸನಾತನ ಮಾರ್ಗಗಳು ಯಾವುವು? ಸನ್ಮಾರ್ಗ ಎಲ್ಲಿದೆ? ಎಂದು ವಿಚಾರಿಸಿರಿ. ಅದರಲ್ಲೆ ಮುನ್ನಡೆಯಿರಿ. ಆಗ ನಿಮಗೆ ಮನನೆಮ್ಮದಿ ದೊರಕುವುದು.” ಆದರೆ ಆ ಜನರು: “ಇಲ್ಲ, ನಾವು ಅದರಲ್ಲಿ ನಡೆಯುವುದೇ ಇಲ್ಲ” ಎಂದರು.೧೭. ಸರ್ವೇಶ್ವರ ಸ್ವಾಮಿ ಕಾವಲುಗಾರರನ್ನು ನೇಮಿಸಿ, “ಕಹಳೆಯ ಕೂಗನ್ನು ಕೇಳಿ” ಎಂದರು. ಅವರು “ಇಲ್ಲ, ಕೇಳುವುದಿಲ್ಲ” ಎಂದು ಉತ್ತರಿಸಿದರು.೧೮. ಆದುದರಿಂದ ಸರ್ವೇಶ್ವರ: “ರಾಷ್ಟ್ರಗಳೇ ಆಲಿಸಿ. ನನ್ನ ಜನರಿಗೆ ಸಂಭವಿಸಲಿರುವುದನ್ನು ಗಮನಿಸಿ.೧೯. ಜಗವೇ ಕೇಳು. ಇದೋ, ಈ ಜನರು ನನ್ನ ಮಾತುಗಳನ್ನು ಕೇಳದೆ, ನನ್ನ ಧರ್ಮಬೋಧನೆಯನ್ನು ಅಸಡ್ಡೆಮಾಡಿದ್ದಾರೆ. ಆದ್ದರಿಂದ ಅವರ ಮೇಲೆ ಕೇಡನ್ನು ಬರಮಾಡುವೆನು. ಅವರ ಯೋಜನೆಗಳಿಗೆ ಅದೇ ತಕ್ಕ ಪ್ರತಿಫಲ.೨೦. ಅವರು ಶೆಬದ ಧೂಪವನ್ನಾಗಲಿ, ದೂರದೇಶದ ಒಳ್ಳೆಯ ಸುಗಂಧವನ್ನಾಗಲಿ ತಂದು ನನಗೆ ಅರ್ಪಿಸುವುದರಿಂದ ನನಗೆ ಏನೂ ಪ್ರಯೋಜನವಿಲ್ಲ. ಅವರು ಒಪ್ಪಿಸುವ ದಹನಬಲಿಗಳನ್ನು ನಾನು ಮೆಚ್ಚುವುದಿಲ್ಲ. ಅವರ ಯಜ್ಞಬಲಿಗಳೂ ನನಗೆ ಇಷ್ಟವಿಲ್ಲ.೨೧. ಆದಕಾರಣ ಈ ಜನರಿಗೆ ಅಡ್ಡಿಆತಂಕಗಳನ್ನು ಒಡ್ಡುವೆನು. ಹೆತ್ತವರೂ ಮಕ್ಕಳೂ ಎಡವಿಬೀಳುವರು, ನೆಂಟರಿಷ್ಟರೂ ನಾಶವಾಗಿ ಹೋಗುವರು. ಇದು ಸರ್ವೇಶ್ವರನಾದ ನನ್ನ ನುಡಿ.”೨೨. ಮತ್ತೆ ಸರ್ವೇಶ್ವರ ಸ್ವಾಮಿ, “ಇಗೋ, ಉತ್ತರದಿಂದ ಒಂದು ರಾಷ್ಟ್ರ ಬರುತ್ತಿದೆ. ಅದು ಮಹಾ ಬಲಿಷ್ಠ ರಾಷ್ಟ್ರ. ಜಗದ ಕಟ್ಟಕಡೆಯಿಂದ ಹೊರಟುಬರುತ್ತಿದೆ.೨೩. ಅವರು ಬಿಲ್ಲನ್ನೂ ಈಟಿಯನ್ನೂ ಹಿಡಿದಿದ್ದಾರೆ. ಅವರು ಕ್ರೂರಿಗಳು, ನಿಷ್ಕರುಣಿಗಳು. ಅವರ ಧ್ವನಿ ಸಮುದ್ರದಂತೆ ಭೋರ್ಗರೆಯುತ್ತಿದೆ. ಕುದುರೆಗಳನ್ನು ಏರಿದ್ದಾರೆ. ಎಲೌ ಸಿಯೋನ್ ನಗರಿಯೇ, ಆ ಶತ್ರುಸೈನ್ಯ ಶೂರನಂತೆ ನಿನ್ನ ಮೇಲೆ ಯುದ್ಧಸನ್ನದ್ಧವಾಗಿದೆ.”೨೪. ಜೆರುಸಲೇಮಿನ ಜನರು: “ಈ ಸುದ್ದಿಯನ್ನು ಕೇಳಿದಾಗ ನಮ್ಮ ಕೈಗಳು ಜೋಲುಬಿದ್ದುವು. ಪ್ರಸವವೇದನೆಯಂಥ ಯಾತನೆ ನಮ್ಮನ್ನು ಆವರಿಸಿತು.೨೫. ಊರ ಹೊರಗೆ ಹೋಗುವಂತಿಲ್ಲ, ದಾರಿಯಲ್ಲಿ ನಡೆಯುವಂತಿಲ್ಲ. ಸುತ್ತಮುತ್ತಲೂ ಶತ್ರುವಿನ ಕತ್ತಿ, ಎಲ್ಲೆಲ್ಲೂ ದಿಗಿಲು ಎಂದರೆ ದಿಗಿಲು!”೨೬. ಸರ್ವೇಶ್ವರ ಜನರಿಗೆ: “ನನ್ನ ಪ್ರಜೆಯೆಂಬ ಕುವರಿಯೇ, ಗೋಣಿತಟ್ಟನ್ನು ಸುತ್ತಿಕೊ, ಬೂದಿಯಲ್ಲಿ ಬಿದ್ದು ಹೊರಳಾಡು. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡವಳಂತೆ ದುಃಖಪಟ್ಟು ಘೋರವಾಗಿ ಪ್ರಲಾಪಮಾಡು. ಕೊಳ್ಳೆಗಾರ ತಟ್ಟನೆ ನಿನ್ನ ಮೇಲೆ ಬೀಳಲಿದ್ದಾನೆ ಎಂಬುದನ್ನು ಮನದಲ್ಲಿಡು.”೨೭. ಸರ್ವೇಶ್ವರ ಯೆರೆಮೀಯನಿಗೆ ಹೀಗೆ ಎಂದರು: “ನಿನ್ನನ್ನು ನನ್ನ ಜನವೆಂಬ ಅದುರಿಗೆ ಶೋಧಕನನ್ನಾಗಿ ನೇಮಿಸಿದ್ದೇನೆ. ನೀನು ಅವರ ನಡತೆಯನ್ನು ಪರೀಕ್ಷಿಸಿ ತಿಳಿದುಕೊಳ್ಳಬೇಕು.೨೮. ಅವರೆಲ್ಲರು ಕೇವಲ ದ್ರೋಹಿಗಳು, ಚಾಡಿ ಹೇಳುತ್ತಾ ತಿರುಗಾಡುವವರು. ತಾಮ್ರ, ಕಬ್ಬಿಣಕ್ಕೆ ಸಮಾನರು, ಎಲ್ಲರೂ ಕೇಡಿಗರು.೨೯. ತಿದಿ ಬುಸುಬುಸುಗುಟ್ಟುತ್ತದೆ. ಸೀಸ ಉರಿಯಿಂದ ಸುಟ್ಟುಹೋಗುತ್ತದೆ. ಅಕ್ಕಸಾಲಿಗನು ಎಷ್ಟು ಶೋಧಿಸಿದರೂ ಅವನ ಶ್ರಮವೆಲ್ಲ ವ್ಯರ್ಥ. ಏಕೆಂದರೆ ಕಲ್ಮಷವನ್ನು ಅವನಿಂದ ತೆಗೆಯಲಾಗಲಿಲ್ಲ.೩೦. ಸರ್ವೇಶ್ವರ ಆದ ನಾನು ಅವರನ್ನು ತಳ್ಳಿಬಿಟ್ಟಿರುವುದರಿಂದ ಅವರು ಕಂದುಬೆಳ್ಳಿ ಎನಿಸಿಕೊಳ್ಳುವರು.”ಕೀರ್ತನೆಗಳು ೧೧೭:೧-೨೧. ಸ್ತುತಿ ಮಾಡಿ ಪ್ರಭುವನು ಸಮಸ್ತ ರಾಷ್ಟ್ರಗಳೇ I ಆತನನು ಹೊಗಳಿ ಹಾಡಿ ಸರ್ವಜನಾಂಗಗಳೇ II೨. ನಮ್ಮ ಮೇಲೆ ಆತನಿಗಿರುವ ಪ್ರೀತಿ ಅಚಲ I ಆತನ ಸತ್ಯಪರತೆ ಇರುವುದು ಅನಂತ ಕಾಲ IIಜ್ಞಾನೋಕ್ತಿಗಳು ೨೭:೩-೪೩. ಕಲ್ಲು ಭಾರ, ಮರಳು ಭಾರ, ಮೂಢನ ರೇಗಾಟ ಇವೆರಡಕ್ಕೂ ಬಲುಭಾರ.೪. ಕೋಪವು ಕ್ರೂರ, ಕ್ರೋಧವು ಪ್ರವಾಹ, ಮತ್ಸರದ ಮುಂದೆ ನಿಲ್ಲಬಲ್ಲವರಾರು?ಕೊಲೊಸ್ಸೆಯರಿಗೆ ೧:೧-೨೯೧. ಕೊಲೊಸ್ಸೆಯಲ್ಲಿರುವ ದೇವಜನರಿಗೆ ಹಾಗೂ ಕ್ರಿಸ್ತಯೇಸುವಿನಲ್ಲಿ ವಿಶ್ವಾಸವಿಟ್ಟಿರುವ ಸಹೋದರರಿಗೆ -೨. ದೇವರ ಚಿತ್ತಾನುಸಾರ ಕ್ರಿಸ್ತಯೇಸುವಿನ ಪ್ರೇಷಿತನಾದ ಪೌಲನು ಮತ್ತು ಸಹೋದರ ತಿಮೊಥೇಯನು ಬರೆಯುವ ಪತ್ರ. ನಮ್ಮ ತಂದೆಯಾದ ದೇವರ ಅನುಗ್ರಹವೂ ಶಾಂತಿ ಸಮಾಧಾನವೂ ನಿಮ್ಮಲ್ಲಿರಲಿ!೩. ನೀವು ಪ್ರಭು ಯೇಸುಕ್ರಿಸ್ತರಲ್ಲಿ ಇಟ್ಟಿರುವ ವಿಶ್ವಾಸ ಹಾಗೂ ದೇವಜನರಲ್ಲಿ ನೀವು ಇರಿಸಿರುವ ಪ್ರೀತಿ ಇವುಗಳ ಬಗ್ಗೆ ನಾವು ಕೇಳಿದ್ದೇವೆ. ಇದಕ್ಕಾಗಿ ಪ್ರಭು ಯೇಸುಕ್ರಿಸ್ತರ ತಂದೆಯಾದ ದೇವರಲ್ಲಿ ಪ್ರಾರ್ಥಿಸುವಾಗಲೆಲ್ಲ ನಿಮಗಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.೪. ೫. ಸತ್ಯ ವಾಕ್ಯದ, ಅಂದರೆ ಶುಭಸಂದೇಶದ ಮೂಲಕ ನೀವು ಕೇಳಿ ತಿಳಿದಂಥ ಹಾಗೂ ನಿರೀಕ್ಷಿಸುವಂಥ ಸೌಭಾಗ್ಯವನ್ನು ಸ್ವರ್ಗಲೋಕದಲ್ಲಿ ನಿಮಗಾಗಿ ಕಾದಿರಿಸಲಾಗಿದೆ.೬. ದೇವಾನುಗ್ರಹದ ಸತ್ಯಾರ್ಥವನ್ನು ನೀವು ತಿಳಿದ ದಿನದಿಂದಲೂ ನಿಮ್ಮಲ್ಲಿ ಶುಭಸಂದೇಶವು ಹೇಗೆ ಫಲಭರಿತವಾಗುತ್ತಿದೆಯೋ ಹಾಗೆ ಈ ಶುಭಸಂದೇಶವು ಜಗತ್ತಿನ ಎಲ್ಲೆಡೆಯೂ ಹಬ್ಬಿಹರಡುತ್ತಲಿದೆ.೭. ಈ ಶುಭಸಂದೇಶವನ್ನು ಕ್ರಿಸ್ತಯೇಸುವಿನ ನಂಬಿಕಸ್ಥ ದಾಸನೂ ನಮ್ಮ ಜೊತೆಯ ಸೇವಕನೂ ಆದ ಎಪಫ್ರನಿಂದ ಕಲಿತುಕೊಂಡಿದ್ದೀರಿ.೮. ಪವಿತ್ರಾತ್ಮ ಅವರು ನಿಮಗೆ ಅನುಗ್ರಹಿಸಿದ ಪ್ರೀತಿಯ ಬಗ್ಗೆ ನಮಗೆ ತಿಳಿಸಿದವನು ಸಹ ಆತನೇ.೯. ಹೀಗಿರುವುದರಿಂದ ಈ ವಿಷಯವನ್ನು ನಾವು ಕೇಳಿದ ದಿನದಿಂದಲೂ ನಿಮಗಾಗಿ ಸದಾ ಪ್ರಾರ್ಥಿಸುತ್ತಲೇ ಇದ್ದೇವೆ. ನೀವು ಪರಿಪೂರ್ಣ ವಿವೇಕದಿಂದಲೂ ಆಧ್ಯಾತ್ಮಿಕ ಜ್ಞಾನದಿಂದಲೂ ದೇವರ ಚಿತ್ತವನ್ನು ಸಂಪೂರ್ಣವಾಗಿ ಅರಿಯಬೇಕೆಂಬುದೇ ನಮ್ಮ ಕೋರಿಕೆ.೧೦. ಆಗ ಎಲ್ಲ ವಿಷಯಗಳಲ್ಲಿಯೂ ಪ್ರಭುಯೇಸು ಮೆಚ್ಚುವ ರೀತಿಯಲ್ಲಿ ನೀವು ಜೀವಿಸುವಿರಿ. ನಾನಾ ತರಹದ ಸತ್ಕಾರ್ಯಗಳನ್ನು ಕೈಗೊಳ್ಳುವಿರಿ. ಸತ್ಫಲವನ್ನೀಯುವ ದೈವಜ್ಞಾನದಲ್ಲಿ ವೃದ್ಧಿಹೊಂದುವಿರಿ.೧೧. ದೇವರ ಮಹಿಮಾಶಕ್ತಿಯಿಂದ ನೀವು ಬಲಗೊಂಡು ಎಲ್ಲವನ್ನೂ ತಾಳ್ಮೆಯಿಂದಲೂ ಸಮಾಧಾನದಿಂದಲೂ ಸಹಿಸಿಕೊಳ್ಳುವಿರಿ.೧೨. ಪಿತನಿಗೆ ಹರ್ಷದಿಂದ ಕೃತಜ್ಞತಾಸ್ತುತಿ ಸಲ್ಲಿಸುವಿರಿ. ಏಕೆಂದರೆ, ಬೆಳಕಿನಲ್ಲಿರುವ ದೇವಜನರಿಗೆ ಕಾಯ್ದಿರಿಸಿರುವ ಸ್ವಾಸ್ತ್ಯದಲ್ಲಿ ಪಾಲುಗಾರರಾಗಲು ನಿಮ್ಮನ್ನು ಯೋಗ್ಯರನ್ನಾಗಿ ಅವರು ಮಾಡಿದ್ದಾರೆ.೧೩. ದೇವರು ನಮ್ಮನ್ನು ಅಂಧಕಾರದ ಆಡಳಿತದಿಂದ ಬಿಡುಗಡೆಮಾಡಿ ತಮ್ಮ ಪುತ್ರನ ಸಾಮ್ರಾಜ್ಯಕ್ಕೆ ಸುರಕ್ಷಿತವಾಗಿ ತಂದಿದ್ದಾರೆ.೧೪. ಈ ಪುತ್ರನಲ್ಲಿ ನಮಗೆ ಪಾಪಕ್ಷಮೆ ದೊರಕಿದೆ, ವಿಮೋಚನೆ ಲಭಿಸಿದೆ.೧೫. ಅದೃಶ್ಯ ದೇವನ ಸದೃಶ್ಯರೂಪನು ಕ್ರಿಸ್ತ, ಸೃಷ್ಟಿಗೆಲ್ಲ ಜೇಷ್ಠಪುತ್ರನಾತ,೧೬. ಇರಲಿ ಇಹದಲಿ, ಇರಲಿ ಪರದಲಿ, ಅಶರೀರ ಒಡೆಯರಾಗಲಿ, ಒಡೆತನವಾಗಲಿ, ಅಧಿಕಾರಿಗಳಾಗಲಿ, ಆಧಿಪತ್ಯವಾಗಿರಲಿ, ಆದುದೆಲ್ಲವೂ ಆತನಲಿ, ಆತನಿಂದ, ಆತನಿಗಾಗಿ.೧೭. ಎಲ್ಲಕ್ಕೂ ಮೊದಲೇ ಇರುವನಾತ, ಸಮಸ್ತಕ್ಕೂ ಆಧಾರಭೂತ.೧೮. ಸಭೆಯೆಂಬ ಶರೀರಕ್ಕೆ ಶಿರಸ್ಸಾತ, ಆದಿಸಂಭೂತ, ಆಗಲೆಲ್ಲದರಲೂ ಅಗ್ರಸ್ಥ, ಸತ್ತವರಿಂದ ಮೊದಲೆದ್ದು ಬಂದನಾತ.೧೯. ಆ ಸುತನಲ್ಲೇ ಇರಿಸಲು ನಿರ್ಧರಿಸಿದನು ಪಿತದೇವ ತನ್ನ ಸರ್ವಸಂಪೂರ್ಣತೆಯನು.೨೦. ಶಿಲುಬೆಯಿಂದಾತ ಹರಿಸಿದ ರಕುತದಿಂದ ಆಗುತಲಿದೆ ಶಾಂತಿಸಮಾಧಾನ, ನಡೆದಿದೆ ದೇವರೊಡನೆ ಸಂಧಾನ, ಇಹಪರಗಳೆಲ್ಲಕ್ಕೂ ಆತನ ಮುಖೇನ.೨೧. ಹಿಂದೆ, ನೀವು ಆಚಾರ-ವಿಚಾರಗಳಲ್ಲಿ ಕೆಟ್ಟವರಾಗಿದ್ದರಿಂದ ದೇವರ ವಿರೋಧಿಗಳಾಗಿದ್ದು ಅವರಿಂದ ದೂರವಿದ್ದಿರಿ.೨೨. ಈಗಲಾದರೋ ಯೇಸುಕ್ರಿಸ್ತರ ದೈವಿಕ ಮರಣದ ಫಲವಾಗಿ ನಿಮಗೂ ದೇವರಿಗೂ ಸಂಧಾನ ನಡೆದಿದೆ. ಹೀಗೆ ದೇವರು ನಿಮ್ಮನ್ನು ತಮ್ಮ ಸನ್ನಿಧಿಗೆ ಸೇರಿಸಿಕೊಳ್ಳಲು ನೀವು ಪವಿತ್ರರೂ ನಿಷ್ಕಳಂಕರೂ ದೋಷರಹಿತರೂ ಆಗಿರುವಂತೆ ಮಾಡಿದ್ದಾರೆ.೨೩. ಇನ್ನು ನೀವು ವಿಶ್ವಾಸದಲ್ಲಿ ದೃಢವಾಗಿ ಮುನ್ನಡೆಯಬೇಕು. ಶುಭಸಂದೇಶವನ್ನು ಕೇಳಿದಾಗ ನೀವು ಹೊಂದಿದ ಭರವಸೆಯನ್ನು ಕಳೆದುಕೊಳ್ಳದಂತೆ ಜಾಗರೂಕರಾಗಿರಬೇಕು. ಪೌಲನಾದ ನಾನು ಇದೇ ಶುಭಸಂದೇಶದ ಪ್ರಚಾರಕ. ಈ ಶುಭಸಂದೇಶವನ್ನು ಜಗತ್ತಿನಲ್ಲಿರುವ ಸರ್ವಸೃಷ್ಟಿಗೂ ಸಾರಲಾಗುತ್ತಿದೆ.೨೪. ಈಗ ನಿಮಗೋಸ್ಕರ ಸಂಕಟಪಡುವುದರಲ್ಲಿ ನನಗೆ ಸಂತೋಷವಿದೆ. ಕ್ರಿಸ್ತಯೇಸು ತಮ್ಮ ಶರೀರವಾದ ಧರ್ಮಸಭೆಗೋಸ್ಕರ ಅನುಭವಿಸಬೇಕಾದ ಯಾತನೆಗಳಲ್ಲಿ ಉಳಿದದ್ದನ್ನು ನಾನು ನನ್ನ ದೇಹದಲ್ಲಿ ಅನುಭವಿಸಿ ಪೂರ್ಣಗೊಳಿಸುತ್ತಿದ್ದೇನೆ.೨೫. ದೇವರು ನನ್ನನ್ನು ಧರ್ಮಸಭೆಯ ದಾಸನನ್ನಾಗಿ ನೇಮಿಸಿದ್ದಾರೆ. ನಿಮ್ಮ ಹಿತಕ್ಕಾಗಿ ಒಂದು ಮಹತ್ವದ ಕಾರ್ಯವನ್ನು ನನಗೆ ವಹಿಸಿರುತ್ತಾರೆ.೨೬. ಯುಗಯುಗಾಂತರಗಳಿಂದಲೂ ತಲತಲಾಂತರಗಳಿಂದಲೂ ನಿಗೂಢವಾಗಿದ್ದ ರಹಸ್ಯಗಳನ್ನು, ಅಂದರೆ ತಮ್ಮ ವಾಕ್ಯವನ್ನು, ಈಗ ತಮ್ಮ ಜನರಿಗೆ ದೇವರು ಪ್ರಕಟಿಸಿದ್ದಾರೆ.೨೭. ಈ ರಹಸ್ಯ ಎಷ್ಟು ಶ್ರೀಮಂತವಾದುದು, ಎಷ್ಟು ಮಹಿಮಾನ್ವಿತವಾದುದು ಎಂಬುದನ್ನು ಎಲ್ಲಾ ಜನಾಂಗಗಳಿಗೂ ತಿಳಿಸಲು ದೇವರು ಇಚ್ಛಿಸಿದರು. ಕ್ರಿಸ್ತಯೇಸು ನಿಮ್ಮಲ್ಲಿದ್ದು ಮುಂದಿನ ಮಹಿಮೆಯ ನಿರೀಕ್ಷೆಗೆ ಆಧಾರವಾಗಿದ್ದಾರೆ ಎಂಬುದೇ ಈ ರಹಸ್ಯ.೨೮. ನಾವು ಸಾರುತ್ತಲಿರುವುದೂ ಯೇಸುಕ್ರಿಸ್ತರನ್ನೇ. ಎಲ್ಲರಿಗೂ ಬುದ್ಧಿಹೇಳುತ್ತಾ ಎಲ್ಲರಿಗೂ ಪೂರ್ಣಜ್ಞಾನವನ್ನು ಉಪದೇಶಿಸುತ್ತಾ ದೇವರ ಮುಂದೆ ಎಲ್ಲರನ್ನು ಕ್ರಿಸ್ತಯೇಸುವಿನಲ್ಲಿ ಪರಿಣತರನ್ನಾಗಿ ಊರ್ಜಿತಗೊಳಿಸಲು ಪ್ರಯತ್ನಿಸುತ್ತಿದ್ದೇವೆ.೨೯. ನನ್ನನ್ನು ಚೇತನಗೊಳಿಸುತ್ತಿರುವ ಯೇಸುಕ್ರಿಸ್ತರ ಶಕ್ತಿಯಿಂದ ಈ ಗುರಿಯನ್ನು ಸಾಧಿಸಲು ಶ್ರಮವಹಿಸಿ ಹೋರಾಡುತ್ತಿದ್ದೇನೆ. Kannada Bible (KNCL) 2016 Kannada C.L. Bible - ಸತ್ಯವೇದವು C.L. Copyright © 2016 by The Bible Society of India Used by permission. worldwide