ಬೈಬಲ್ ಒಂದು ವರ್ಷದಲ್ಲಿ ಅಕ್ಟೋಬರ್ ೧೨ಯೆರೆಮೀಯನ ಗ್ರಂಥ ೯:೧-೨೬೧. ನನ್ನ ತಲೆ ಒಂದು ಚಿಲುಮೆಯಾಗಿರಬಾರದಿತ್ತೆ? ನನ್ನ ಕಣ್ಣು ಒಂದು ಒರತೆಯಾಗಿರಬಾರದಿತ್ತೆ? ಆಗ ನನ್ನ ಜನರಲ್ಲಿ ಹತರಾದವರಿಗಾಗಿ ಹಗಲಿರುಳು ಅಳುತ್ತಿದ್ದೆ.೨. ಅಕಟಾ, ದಾರಿಗರು ತಂಗುವ ಗುಡಿಸಲೊಂದು ಕಾಡಿನಲ್ಲಿ ಸಿಗಬಾರದೆ! ಆಗ ಜನರನ್ನು ತ್ಯಜಿಸಿಬಿಟ್ಟು ನಾನಲ್ಲಿಗೆ ತೆರಳುತ್ತಿದ್ದೆ! ಅವರೆಲ್ಲರು ವ್ಯಭಿಚಾರಿಗಳು, ದ್ರೋಹಿಗಳ ಗುಂಪೇ ಅಲ್ಲವೆ?೩. ಸರ್ವೇಶ್ವರ: “ಸುಳ್ಳಾಡಲು ಬಿಲ್ಲಿನಂತೆ ನಾಲಿಗೆ ಬಗ್ಗಿಸುತ್ತಾರೆ ಸತ್ಯಕ್ಕೆ ಪ್ರತಿಕೂಲವಾಗಿಯೆ ನಾಡಿನಲ್ಲಿ ಪ್ರಬಲಿಸಿದ್ದಾರೆ ಕೇಡಿನಿಂದ ಕೇಡಿಗೆ ಹಾರುತ್ತಾರೆ; ನನ್ನನ್ನಾದರೊ ಅರಿಯದೆ ಇದ್ದಾರೆ.”೪. ನಿಮ್ಮ ನಿಮ್ಮ ಗೆಳೆಯರ ವಿಷಯದಲ್ಲಿ ಎಚ್ಚರಿಕೆಯಾಗಿರಿ ಯಾರೇ ಆಗಲಿ, ತನ್ನ ಸಹೋದರನನ್ನೂ ನಂಬದಿರಲಿ. ಪ್ರತಿಯೊಬ್ಬ ಸೋದರನೂ ವಂಚಿಸುವುದರಲ್ಲಿ ಯಕೋಬನಿಗೆ ಸಮಾನ. ಒಬ್ಬೊಬ್ಬ ಗೆಳೆಯನೂ ತಿರುಗಾಡುತ್ತಾನೆ ಚಾಡಿಹೇಳುತ್ತಾ.೫. ಎಲ್ಲರು ತಂತಮ್ಮ ಗೆಳೆಯರಿಗೆ ಮೋಸಮಾಡುತ್ತಾರೆ ಸತ್ಯವನ್ನು ನುಡಿವುದೇ ಇಲ್ಲ; ನಾಲಿಗೆಗೆ ಸುಳ್ಳನ್ನು ಕಲಿಸಿದ್ದಾರೆ ಆಯಾಸವಾಗುವ ಮಟ್ಟಿಗೂ ಕೆಡಕನ್ನು ಮಾಡುತ್ತಿದ್ದಾರೆ.೬. ‘ನೀನು (ಯೆರೆಮೀಯ) ವಾಸವಾಗಿರುವುದು ಮೋಸಗಾರರ ಮಧ್ಯೆ ಮೋಸಗಾರರಾಗಿರುವುದರಿಂದಲೆ ಅವರು ನನ್ನನ್ನು ಅರಿಯಲೊಲ್ಲರು’ ಎನ್ನುತ್ತಾರೆ ಸರ್ವೇಶ್ವರ.೭. ಹೀಗಿರಲು ಸರ್ವಶಕ್ತರಾದ ಸರ್ವೇಶ್ವರನ ಮಾತನ್ನು ಕೇಳಿ: “ಅಕಟಾ, ನನ್ನ ಜನರ ದ್ರೋಹಕ್ಕೆ ಏನು ಮಾಡಲಿ? ಅವರನ್ನು ಶೋಧಿಸುವೆನು ಪುಟಕ್ಕೆ ಹಾಕಿ!೮. ಅವರ ನಾಲಿಗೆ ಕೊಲ್ಲುವ ಬಾಣ, ಅದು ಆಡುವುದು ಸುಳ್ಳನ್ನೇ ಬಾಯಲ್ಲಿ ಶುಭವೆಂದು ಹೇಳಿದರೂ ಹೃದಯದಲ್ಲಿ ಒಡ್ಡಿದ್ದಾರೆ ಹೊಂಚನ್ನೇ.೯. ಇಂಥವುಗಳಿಗಾಗಿ ನಾನು ಅವರನ್ನು ಹಿಂಸಿಸಬಾರದೆ? ಇಂಥ ಜನಾಂಗದ ಮೇಲೆ ಸೇಡನ್ನು ತೀರಿಸಿಕೊಳ್ಳದಿರುವೆನೆ?”೧೦. ನಾನು: ಪರ್ವತಗಳಿಗಾಗಿ ಅತ್ತು ಗೋಳಾಡುವೆನು ಅಡವಿಯ ಕಾವಲುಗಳಿಗಾಗಿ ಶೋಕಗೀತೆಯನ್ನು ಹಾಡುವೆನು ಅವು ಸುಟ್ಟುಹೋಗಿವೆ, ಯಾರೂ ಅಲ್ಲಿ ಹಾದುಹೋಗರು. ದನಕರುಗಳ ಸದ್ದೂ ಕಿವಿಗೆ ಬೀಳದು ತೊಲಗಿಹೋಗಿವೆ ಮೃಗಪಕ್ಷಿಗಳೂ!೧೧. ಸರ್ವೇಶ್ವರ: “ಹಾಳು ದಿಬ್ಬಗಳನ್ನಾಗಿಸುವೆನು ಜೆರುಸಲೇಮನ್ನು ನರಿಗಳ ಹಕ್ಕೆಯನ್ನಾಗಿಸುವೆನು ಜುದೇಯ ಪಟ್ಟಣಗಳನ್ನು ಜನರಿಲ್ಲದ ಬೀಳುಭೂಮಿಯನ್ನಾಗಿಸುವೆನು ಅವುಗಳನ್ನು.”೧೨. ನಾನು: “ಈ ನಾಡು ಯಾರೂ ಹಾದುಹೋಗದಷ್ಟು ಹಾಳಾಗಿ ಕಾಡಿನಂತೆ ಸುಟ್ಟುಹೋದದ್ದು ಏಕೆ? ಈ ವಿಷಯವನ್ನು ಗ್ರಹಿಸತಕ್ಕ ಜ್ಞಾನಿ ಯಾರು? ಅದನ್ನು ಸರ್ವೇಶ್ವರನ ಬಾಯಿಂದಲೆ ಕೇಳಿ ತಿಳಿಸಬಲ್ಲವನಾರು?”೧೩. ಇಸ್ರಯೇಲಿನ ದೇವರೂ ಸರ್ವಶಕ್ತರೂ ಆದ ಸರ್ವೇಶ್ವರ ಹೀಗೆನ್ನುತ್ತಾರೆ: “ನಾನು ಇವರ ಕಣ್ಣೆದುರಿಗೇ ಇಟ್ಟಿರುವ ಧರ್ಮೋಪದೇಶವನ್ನು ಇವರು ಲಕ್ಷ್ಯಕ್ಕೆ ತಂದುಕೊಳ್ಳಲಿಲ್ಲ.೧೪. ನನ್ನ ಮಾತನ್ನು ಕೇಳದೆ, ಧರ್ಮಮಾರ್ಗದಲ್ಲಿ ನಡೆಯದೆ, ಹಟಮಾರಿಗಳಂತೆ ಸ್ವೇಚ್ಛಾನುಸಾರ ನಡೆದುಕೊಂಡರು. ತಮ್ಮ ಪೂರ್ವಜರು ಕಲಿಸಿಕೊಟ್ಟ ಹಾಗೆ ಬಾಳ್ದೇವತೆಗಳನ್ನು ಹಿಂಬಾಲಿಸಿದರು.೧೫. ಆದುದರಿಂದ ಈ ಜನರು ಕಹಿಯಾದ ಇಟ್ಟಿಕಾಯನ್ನು ತಿನ್ನುವಂತೆ ಮಾಡುವೆನು; ವಿಷ ಬೆರೆತ ನೀರನ್ನು ಕುಡಿಯುವಂತೆ ಮಾಡುವೆನು.೧೬. ಇವರಿಗಾಗಲಿ ಇವರ ಪೂರ್ವಜರಿಗಾಗಲಿ ಪರಿಚಯವಿಲ್ಲದ ಜನಾಂಗಗಳ ನಡುವೆ ಇವರನ್ನು ಚದರಿಸಿಬಿಡುವೆನು. ಇವರು ಅಳಿದು ಹಾಳಾಗುವ ತನಕ ಇವರ ಹಿಂದೆ ಖಡ್ಗವನ್ನು ಕಳಿಸುವೆನು.”೧೭. ಸರ್ವಶಕ್ತ ಸರ್ವೇಶ್ವರ ಸ್ವಾಮಿಯ ಮಾತು: “ನಡೆಯುತ್ತಿರುವ ಕಾರ್ಯಗಳನ್ನು ಆಲೋಚಿಸಿ ನೋಡಿ ರೋದನಾ ಗಾಯಕಿಯರನ್ನು ಕರೆಯಿಸಿರಿ ಅವರಲ್ಲಿ ಜಾಣೆಯರನ್ನು ಕರೆಯ ಕಳಿಸಿರಿ ಅವರೂ ಬಂದು ಸೇರಲಿ.”೧೮. ಜನರು: “ಅವರು ತ್ವರೆಯಾಗಿ ಬಂದು ನಮಗೋಸ್ಕರ ಗೋಳೆತ್ತಲಿ ನಮ್ಮ ಕಣ್ಣುಗಳಿಂದ ನೀರು ಧಾರಾಕಾರವಾಗಿ ಸುರಿವಂತೆ ಮಾಡಲಿ ಕಣ್ಣಿನ ರೆಪ್ಪೆಗಳಿಂದ ನೀರು ಉಕ್ಕಿ ಹರಿವಂತೆ ಮಾಡಲಿ.”೧೯. ಸಿಯೋನಿನಿಂದ ಕೇಳಿಬಂದ ಪ್ರಲಾಪನೆ: “ಅಯ್ಯೋ ಹಾಳಾದೆವು, ನಮ್ಮ ಮಾನಮರ್ಯಾದೆ ಕಳೆದುಹೋಯಿತು! ನಾವು ನಮ್ಮ ನಾಡನ್ನೇ ಬಿಟ್ಟು ತೊಲಗಬೇಕಾಗಿ ಬಂದಿತು. (ಶತ್ರುಗಳಿಂದ) ನಮ್ಮ ಮನೆಮಠಗಳು ನೆಲಸಮವಾದವು.”೨೦. ನಾನು: “ಮಹಿಳೆಯರೇ, ಸರ್ವೇಶ್ವರ ಸ್ವಾಮಿಯ ನುಡಿಯನ್ನು ಕೇಳಿರಿ ಅವರ ಬಾಯಿಂದ ಹೊರಟ ಮಾತಿಗೆ ಕಿವಿ ತೆಗೆಯಿರಿ ನಿಮ್ಮ ಹೆಣ್ಣುಮಕ್ಕಳಿಗೂ ಗೋಳಾಟವನ್ನು ಕಲಿಸಿರಿ ಪ್ರತಿಯೊಬ್ಬಳೂ ತನ್ನ ನೆರೆಯವಳಿಗೆ ಶೋಕಗೀತೆಯನ್ನು ಹೇಳಿಕೊಡಲಿ.೨೧. ಏಕೆಂದರೆ ಮೃತ್ಯು ನಮ್ಮ ಕಿಟಕಿಗಳನ್ನು ಏರಿಬಂದಿದೆ ನಮ್ಮ ಉಪ್ಪರಿಗೆಗಳೊಳಗೆ ನುಗ್ಗಿಬಿಟ್ಟಿದೆ ಬೀದಿಗಳಲ್ಲಿ ಮಕ್ಕಳೂ ಕಡಿದುಬಿದ್ದರು ಚೌಕಗಳಲ್ಲಿ ಯುವಕರೂ ಇಲ್ಲವಾದರು.೨೨. ಜನರ ಹೆಣಗಳು ನೆಲದ ಮೇಲೆ ಬಿದ್ದು ಗೊಬ್ಬರವಾಗುವುವು ಅವು ಹೊಲ ಕೊಯ್ಯುವವನ ಹಿಂದೆ ಯಾರೂ ಕೂಡಿಸದೆ ಬಿದ್ದಿರುವ ಅರಿಗಳಂತಿರುವುವು - ಈ ಮಾತುಗಳನ್ನು ಸಾರುವಂತೆ ಸರ್ವೇಶ್ವರನಿಂದ ನನಗೆ ಅಪ್ಪಣೆಯಾಯಿತು.”೨೩. ಸರ್ವೇಶ್ವರ ಸ್ವಾಮಿ: “ಜ್ಞಾನಿ ತನ್ನ ಜ್ಞಾನಕ್ಕಾಗಿ, ಪರಾಕ್ರಮಿ ತನ್ನ ಪರಾಕ್ರಮಕ್ಕಾಗಿ ಐಶ್ವರ್ಯವಂತ ತನ್ನ ಐಶ್ವರ್ಯಕ್ಕಾಗಿ ಹೆಚ್ಚಳಪಡದಿರಲಿ.೨೪. ಹೆಚ್ಚಳಪಡುವವನು ನನ್ನನ್ನು ತಾನು ತಿಳಿದುಕೊಂಡದ್ದಕ್ಕಾಗಿ ಹೆಚ್ಚಳಪಡಲಿ; ಜಗದಲ್ಲಿ ಅಚಲ ಪ್ರೀತಿಯನ್ನೂ ನ್ಯಾಯನೀತಿಯನ್ನೂ ತೋರ್ಪಡಿಸುವ ಸರ್ವೇಶ್ವರ ನಾನೇ; ನನಗೆ ಪ್ರಿಯವಾದುವು ಪ್ರೀತಿ, ನೀತಿ, ನ್ಯಾಯಗಳೇ. ಇದನ್ನು ಗ್ರಹಿಸಿಕೊಂಡದ್ದಕ್ಕಾಗಿ ಹೆಚ್ಚಳಪಡಲಿ. ಇದು ಸರ್ವೇಶ್ವರನಾದ ನನ್ನ ನುಡಿ.”೨೫. “ಈಜಿಪ್ಟರು, ಯೆಹೂದ್ಯರು, ಎದೋಮ್ಯರು, ಅಮ್ಮೋನ್ಯರು, ಮೊವಾಬ್ಯರು, ಮುಂದಲೆ ಕೂದಲನ್ನು ಕತ್ತರಿಸಿಕೊಳ್ಳುವ ಅರಣ್ಯವಾಸಿಗಳು, ಅಂತು ದೇಹದಲ್ಲಿ ಮಾತ್ರ ಸುನ್ನತಿಯುಳ್ಳವರು, ಇವರೆಲ್ಲರನ್ನು ದಂಡಿಸುವ ದಿನಗಳು ಬರುತ್ತವೆ.೨೬. ಏಕೆಂದರೆ ಈ ಎಲ್ಲ ಜನಾಂಗದವರು, ಇಸ್ರಯೇಲ್ ವಂಶದವರು ಕೂಡ, ಹೃದಯದಲ್ಲಿ ಸುನ್ನತಿಯಿಲ್ಲದವರು. ಇದು ಸರ್ವೇಶ್ವರನಾದ ನಾನು ಆಡುವ ಮಾತು.”ಯೆರೆಮೀಯನ ಗ್ರಂಥ ೧೦:೧-೨೫೧. ಇಸ್ರಯೇಲ್ ವಂಶದವರೇ, ಸರ್ವೇಶ್ವರ ಸ್ವಾಮಿ ನಿಮಗೆ ನುಡಿಯುವ ಮಾತನ್ನು ಕೇಳಿರಿ; ಅವರು ಹೇಳುವುದು ಇದು:೨. “ಅನ್ಯಜನಾಂಗಗಳ ಆಚರಣೆಯನ್ನು ಅನುಸರಿಸಬೇಡಿ ಅವರು ಹೆದರುವ ಆಕಾಶದ ಉತ್ಪಾತಗಳಿಗೆ ನೀವು ಹೆದರಬೇಡಿ.೩. ಆ ಜನಾಂಗಗಳ ಧಾರ್ಮಿಕ ಪದ್ಧತಿಗಳು ಶೂನ್ಯ. ಅರಣ್ಯದ ಮರಗಳನ್ನು ಅವರು ಕತ್ತರಿಸುತ್ತಾರೆ ಬಡಗಿಯ ಕೈಯಿಂದ, ಅವನ ಉಳಿಯಿಂದ, ಅದನ್ನು ರೂಪಿಸುತ್ತಾರೆ.೪. ಅದನ್ನು ಅಲಂಕರಿಸುತ್ತಾರೆ ಬೆಳ್ಳಿಬಂಗಾರಗಳಿಂದ ಅದು ಅಲುಗದ ಹಾಗೆ ಭದ್ರಪಡಿಸುತ್ತಾರೆ ಮೊಳೆಸುತ್ತಿಗೆಯಿಂದ೫. ಸೌತೆ ತೋಟದ ಬೆದರುಗಂಬದಂತಿರುವ ಈ ಬೊಂಬೆಗಳು ಮಾತನಾಡಲಾರವು. ಅವನ್ನು ಹೊತ್ತುಕೊಂಡು ಹೋಗಬೇಕು, ಅವು ನಡೆಯಲಾರವು. ಅವುಗಳಿಗೆ ನೀವು ಅಂಜಬೇಕಾಗಿಲ್ಲ, ಅವು ಕೇಡುಮಾಡಲಾರವು; ಮೇಲುಮಾಡಲಿಕ್ಕೂ ಸಾಮರ್ಥ್ಯವಿಲ್ಲದಿರುವುವು.”೬. ಹೇ ಸರ್ವೇಶ್ವರಾ, ನಿಮಗೆ ಸಮಾನನು ಇಲ್ಲ, ನೀವು ಮಹೋತ್ತಮರು ಸಾಮರ್ಥ್ಯದಿಂದ ಕೂಡಿರುವ ನಿಮ್ಮ ನಾಮವೂ ಮಹತ್ತರವಾದುದು.೭. ಜನಾಂಗಗಳ ಒಡೆಯಾ, ಅರಸರೇ, ನಿಮಗೆ ಅಂಜದೆ ಇರುವವರಾರು? ಹೌದು, ನೀವು ಭಯಭಕ್ತಿಗೆ ಪಾತ್ರರು ರಾಷ್ಟ್ರಗಳ ಜ್ಞಾನಿಗಳಲ್ಲೂ ರಾಜಪರಂಪರೆಯಲ್ಲೂ ಯಾವನೂ ಇಲ್ಲ ನಿಮಗೆ ಸಮಾನನು.೮. ಕೇವಲ ಪಶುಪ್ರಾಯರು, ಮಂದಮತಿಗಳು, ಅವರೆಲ್ಲರು ಬೊಂಬೆ ಪೂಜೆಯಿಂದ ಬರುವ ಜ್ಞಾನ ಮರದಂತೆ ಮೊದ್ದು.೯. ಆ ಬೊಂಬೆಗಳ ಭೂಷಣಕ್ಕಾಗಿ ಸಾಗಿಬರುತ್ತವೆ ತಾರ್ಷೀಷಿನಿಂದ ಬೆಳ್ಳೀತಗಡುಗಳು, ಊಫಜಿನಿಂದ ಚಿನ್ನ. ಅವು ಕೆತ್ತನೆಗಾರನ, ಎರಕದವನ ಕೈಕೆಲಸಗಳು ಅವುಗಳ ಉಡುಪು ನೀಲಧೂಮ್ರ ವರ್ಣದ ವಸ್ತ್ರಗಳು. ಇವೆಲ್ಲವು ಕೇವಲ ಕಲಾಕುಶಲರ ಕೌಶಲ್ಯಗಳು.೧೦. ಹೇ ಸರ್ವೇಶ್ವರಾ, ನೀವಾದರೋ ಸತ್ಯದೇವರು, ಜೀವಸ್ವರೂಪ ದೇವರು, ಶಾಶ್ವತ ರಾಜರು ನಿಮ್ಮ ಕೋಪಕ್ಕೆ ನಡುಗುತ್ತದೆ ಭೂಲೋಕ ನಿಮ್ಮ ರೋಷವನ್ನು ತಾಳಲಾರದು ಜನಾಂಗ.೧೧. “ಭೂಮ್ಯಾಕಾಶಗಳನ್ನು ಸೃಷ್ಟಿಸದ ದೇವರುಗಳು ಭೂಮಿಯ ಮೇಲಿಂದಲೂ ಆಕಾಶದ ಕೆಳಗಿನಿಂದಲೂ ಅಳಿದುಹೋಗುವುವು” ಎಂದು ನೀವು ಆ ಜನಾಂಗಗಳಿಗೆ ತಿಳಿಸಿರಿ.೧೨. ಸರ್ವೇಶ್ವರ ಭೂಮಿಯನ್ನು ನಿರ್ಮಿಸಿದ್ದಾರೆ ಶಕ್ತಿಯಿಂದ ಲೋಕವನ್ನು ಸ್ಥಾಪಿಸಿದ್ದಾರೆ ಜ್ಞಾನದಿಂದ ಆಕಾಶಮಂಡಲವನ್ನು ಹರಡಿದ್ದಾರೆ ವಿವೇಕದಿಂದ.೧೩. ಆಕಾಶದಲ್ಲಿ ನೀರು ಭೋರ್ಗರೆಯುವಂತೆ ಭುವಿಯ ಕಟ್ಟಕಡೆಯಿಂದ ಮೋಡಗಳು ಏರುವಂತೆ ಮಳೆಗಾಗಿ ಮಿಂಚು ಹೊಳೆಯುವಂತೆ ತಮ್ಮ ಭಂಡಾರದಿಂದ ಗಾಳಿ ಬೀಸುವಂತೆ - ಮಾಡುತ್ತದೆ ಸರ್ವೇಶ್ವರನಾ ಗರ್ಜನೆ.೧೪. ಇದರ ಮುಂದೆ ತಿಳುವಳಿಕೆಯಿಲ್ಲದ ಪಶುಪ್ರಾಯರು ಜನರೆಲ್ಲರು. ತಾನು ಕೆತ್ತಿದ ವಿಗ್ರಹಕ್ಕಾಗಿ ಹೇಸುವನು ಪ್ರತಿಯೊಬ್ಬ ಅಕ್ಕಸಾಲಿಗನು. ಅವನು ಎರಕ ಹೊಯ್ದ ವಿಗ್ರಹಗಳು ಟೊಳ್ಳು, ಶ್ವಾಸವಿಲ್ಲದವುಗಳು.೧೫. ಅವು ವ್ಯರ್ಥವಾದುವುಗಳು, ಹಾಸ್ಯಾಸ್ಪದವಾದುವುಗಳು ದಂಡನೆಯ ಕಾಲದಲ್ಲಿ ಅಳಿದುಹೋಗುವಂಥವುಗಳು.೧೬. ಹಾಗಲ್ಲ ಯಕೋಬ್ಯರಿಗೆ ಸ್ವಂತವಾದ ದೇವರು ಅವರು ಸಮಸ್ತವನ್ನು ಸೃಷ್ಟಿಸಿದವರು. ಇಸ್ರಯೇಲ್ ಗೋತ್ರ ಅವರಿಗೆ ಸ್ವಾಸ್ತ್ಯ. ‘ಸೇನಾಧೀಶ್ವರ ಸರ್ವೇಶ್ವರ’ ಅವರ ನಾಮಧೇಯ.೧೭. ಮುತ್ತಿಗೆಗೆ ತುತ್ತಾದ ಜನತೆಯೇ, ಗಂಟು ಕಟ್ಟಿಕೊಂಡು ನಾಡುಬಿಟ್ಟು ನಡೆ.೧೮. ಏಕೆಂದರೆ ಸರ್ವೇಶ್ವರ ನುಡಿವ ಮಾತಿದು: “ಇಗೋ, ಈ ಸಾರಿ ಈ ನಾಡಿನ ನಿವಾಸಿಗಳನ್ನು ಕವಣೆಯ ಕಲ್ಲಂತೆ ಎಸೆದುಬಿಡುವೆನು; ಬುದ್ಧಿಬರಲೆಂದು ಅವರನ್ನು ಬಾಧಿಸುವೆನು.”೧೯. ಜೆರುಸಲೇಮಿನ ಗೋಳು: “ಅಯ್ಯೋ ನಾನು ಗಾಯಗೊಂಡೆ ನನಗೆ ಬಿದ್ದ ಪೆಟ್ಟು ಗಡಸು. ತಗಲಿದೆ ವ್ಯಾಧಿ, ಸಹಿಸಲೇಬೇಕಾದ ಕಾಯಿಲೆ.೨೦. ನನ್ನ ಗುಡಾರ ಹಾಳಾಗಿದೆ, ಹಗ್ಗಗಳು ಕಿತ್ತುಹೋಗಿವೆ. ಮಕ್ಕಳು ನನ್ನನ್ನು ಬಿಟ್ಟು ಕಾಣದೆಹೋಗಿದ್ದಾರೆ ಗುಡಾರ ಹಾಕಲು, ಪರದೆ ಬಿಗಿಯಲು, ಯಾರೂ ಇಲ್ಲವಾಗಿದ್ದಾರೆ.”೨೧. ನಮ್ಮ ಪಾಲಕರು ಪಶುಪ್ರಾಯರು ಸರ್ವೇಶ್ವರನ ಕಡೆಗೆ ಕಣ್ಣೆತ್ತದೆಹೋದರು. ಆ ಕಾರಣ ಅವರ ಕಾರ್ಯ ಸಾರ್ಥಕವಾಗಲಿಲ್ಲ ಚದರಿಹೋದವು ಅವರ ಹಿಂಡುಗಳೆಲ್ಲ.೨೨. ಇದೋ ಸುದ್ದಿ, ಕೇಳಿಬರುತ್ತಿದೆ ಸುದ್ದಿ! ದೊಡ್ಡ ಕೋಲಾಹಲವೆದ್ದಿದೆ ಉತ್ತರ ನಾಡಿನಲ್ಲಿ: ‘ಅದನ್ನು ನರಿಗಳ ಬೀಡಾಗಿಸಿರಿ ಜುದೇಯದ ನಗರಗಳನ್ನು ನಾಶಮಾಡಿ.’೨೩. ಸರ್ವೇಶ್ವರಾ, ಮಾನವನ ಗುರಿಸಾಧನೆ ಅವನ ಸ್ವಾಧೀನದಲ್ಲಿಲ್ಲ. ಸರಿದಿಸೆಯಲ್ಲಿ ಅವನು ಹೆಜ್ಜೆಯಿಡಲಾರನೆಂದು ನಿಮಗೆ ಗೊತ್ತಿದೆಯಲ್ಲಾ.೨೪. ಹೇ ಸರ್ವೇಶ್ವರಾ, ನಮ್ಮನ್ನು ದಂಡಿಸಿ ಸುಧಾರಿಸಿ ಆದರೆ ಮಿತಿಮೀರಬೇಡ, ಕೋಪದಿಂದ ದಂಡಿಸಬೇಡಿ. ಇಲ್ಲವಾದರೆ ನಾವು ನಶಿಸಿ ನಾಶವಾದೇವು!೨೫. ಸರ್ವೇಶ್ವರಾ, ನಿಮ್ಮನ್ನು ಅರಿತುಕೊಳ್ಳದವರ ಮೇಲೆ ನಿಮ್ಮ ನಾಮವನ್ನು ಉಚ್ಚರಿಸದವರ ಮೇಲೆ ನಿಮ್ಮ ಕೋಪಾಗ್ನಿಯನ್ನು ಸುರಿದುಬಿಡಿ. ಅವರು ಯಕೋಬ್ಯರನ್ನು ಕಬಳಿಸಿದ್ದಾರೆ ಹೌದು, ಪೂರ್ತಿಯಾಗಿ ಕಬಳಿಸಿಬಿಟ್ಟಿದ್ದಾರೆ ಅವರ ನಿವಾಸಗಳನ್ನು ನಾಶಮಾಡಿದ್ದಾರೆ.ಕೀರ್ತನೆಗಳು ೧೧೮:೫-೯೫. ಇಕ್ಕಟ್ಟಿನಲ್ಲಿ ಮೊರೆಯಿಟ್ಟೆನು ಪ್ರಭುವಿಗೆ I ಕಿವಿಗೊಟ್ಟು ಬಿಡುಗಡೆಯಿತ್ತನು ಆತನೆನಗೆ II೬. ಪ್ರಭು ನನ್ನ ಕಡೆ ಇರಲು ಭಯಪಡೆನು I ನನಗೇನು ಮಾಡಿಯಾನು ಮನುಜನು? II೭. ನೆರವು ನೀಡಲು ಪ್ರಭು ಎನ್ನಕಡೆ ಇಹನು I ಶತ್ರುಗಳತ್ತ ಜೇತಾರನಾಗಿ ನೋಡುವೆನು II೮. ಮನುಜರಲಿ ಭರವಸೆಯಿಡುವುದಕ್ಕಿಂತ I ಪ್ರಭುವನು ಆಶ್ರಯಿಸಿಕೊಳ್ಳುವುದು ಹಿತ II೯. ರಾಜರಲಿ ಭರವಸೆಯಿಡುವುದಕ್ಕಿಂತ I ಪ್ರಭುವನು ಆಶ್ರಯಿಸಿಕೊಳ್ಳುವುದು ಹಿತ IIಜ್ಞಾನೋಕ್ತಿಗಳು ೨೭:೭-೭೭. ಹೊಟ್ಟೆ ತುಂಬಿದವನಿಗೆ ಜೇನುಕೊಟ್ಟರೂ ಕಹಿ; ಹೊಟ್ಟೆ ಹಸಿದವನಿಗೆ ಏನು ಕೊಟ್ಟರು ಸಿಹಿ.ಕೊಲೊಸ್ಸೆಯರಿಗೆ ೩:೧-೨೫೧. ನೀವು ಯೇಸುಕ್ರಿಸ್ತರೊಂದಿಗೆ ಪುನರುತ್ಥಾನ ಹೊಂದಿರುವುದಾದರೆ ಸ್ವರ್ಗೀಯ ವಿಷಯಗಳ ಕಡೆಗೆ ಗಮನಕೊಡಿ. ಕ್ರಿಸ್ತಯೇಸು ಸ್ವರ್ಗದಲ್ಲಿ ದೇವರ ಬಲಗಡೆಯಲ್ಲಿ ಆಸೀನರಾಗಿದ್ದಾರೆ.೨. ನೀವು ಕ್ರಿಸ್ತಯೇಸುವಿನೊಂದಿಗೆ ಮರಣ ಹೊಂದಿರುವುದರಿಂದ ಅವರೊಂದಿಗೆ ನಿಮ್ಮ ಜೀವ ದೇವರಲ್ಲಿ ಮರೆಯಾಗಿದೆ. ನಿಮ್ಮ ಮನಸ್ಸು ಪ್ರಾಪಂಚಿಕ ವಿಷಯಗಳ ಮೇಲೆ ಅಲ್ಲ, ಸ್ವರ್ಗೀಯ ವಿಷಯಗಳ ಮೇಲೆ ಕೇಂದ್ರೀಕೃತವಾಗಿರಲಿ.೩. ೪. ಕ್ರಿಸ್ತಯೇಸುವೇ ನಿಮ್ಮ ನೈಜ ಜೀವವಾಗಿದ್ದಾರೆ. ಅವರು ಪುನರಾಗಮಿಸುವಾಗ ನೀವೂ ಸಹ ಅವರ ಮಹಿಮೆಯಲ್ಲಿ ಪಾಲುಗಾರರಾಗಿ ಅವರೊಂದಿಗೆ ಪ್ರತ್ಯಕ್ಷರಾಗುವಿರಿ.೫. ನಿಮ್ಮಲ್ಲಿರುವ ಪ್ರಾಪಂಚಿಕ ಆಶೆ ಆಕಾಂಕ್ಷೆಗಳನ್ನು ತ್ಯಜಿಸಿರಿ. ಹಾದರ, ಅನೈತಿಕತೆ, ಕಾಮಾಭಿಲಾಷೆ, ದುರಾಲೋಚನೆ, ವಿಗ್ರಹಾರಾಧನೆಗೆ ಸಮವಾಗಿರುವ ಲೋಭ - ಇವುಗಳನ್ನು ದಮನಮಾಡಿರಿ.೬. ಇಂಥವುಗಳಿಗೆ ಈಡಾಗುವ ದುಷ್ಕರ್ಮಿಗಳು ದೇವರ ಕೋಪಾಗ್ನಿಗೆ ಗುರಿಯಾಗುತ್ತಾರೆ.೭. ಒಮ್ಮೆ ಇವೆಲ್ಲ ನಿಮ್ಮ ಜೀವನದ ರೀತಿನೀತಿಗಳಾಗಿದ್ದು ಇವುಗಳಲ್ಲೇ ಮಗ್ನರಾಗಿದ್ದೀರಿ.೮. ಈಗಲಾದರೋ ಕೋಪ, ರೋಷ, ಮತ್ಸರ - ಇವುಗಳನ್ನು ತ್ಯಜಿಸಿರಿ; ದೂಷಣೆ ಮತ್ತು ಹೊಲಸು ಮಾತುಗಳು ನಿಮ್ಮ ಬಾಯಿಂದ ಬರಕೂಡದು.೯. ಒಬ್ಬರಿಗೊಬ್ಬರು ಸುಳ್ಳು ಹೇಳಬೇಡಿ. ಏಕೆಂದರೆ, ನಿಮ್ಮಲ್ಲಿದ್ದ ಹಳೆಯ ಸ್ವಭಾವವನ್ನೂ ಅದಕ್ಕೆ ಸಂಬಂಧಿಸಿದ ದುರಭ್ಯಾಸಗಳನ್ನೂ ತೊರೆದುಬಿಟ್ಟಿದ್ದೀರಿ.೧೦. ಮಾತ್ರವಲ್ಲ, ನೂತನ ಸ್ವಭಾವವನ್ನು ಧರಿಸಿಕೊಂಡಿದ್ದೀರಿ. ನೀವು ಸೃಷ್ಟಿಕರ್ತನನ್ನು ಸಂಪೂರ್ಣವಾಗಿ ಅರಿತುಕೊಳ್ಳಬೇಕು ಎಂಬ ಉದ್ದೇಶದಿಂದ ಈ ಸ್ವಭಾವವನ್ನು ಅನುದಿನವೂ ನವೀಕರಿಸಲಾಗುತ್ತಿದೆ.೧೧. ಇಂಥ ಹೊಸ ಜೀವನದಲ್ಲಿ ಯೆಹೂದ್ಯ-ಗ್ರೀಕ, ಸುನ್ನತಿ ಹೊಂದಿದವ-ಸುನ್ನತಿ ಇಲ್ಲದವ, ನಾಗರಿಕ-ಅನಾಗರಿಕ, ಯಜಮಾನ-ಗುಲಾಮ ಎಂಬ ಭಿನ್ನಭೇದಗಳಿಲ್ಲ, ಕ್ರಿಸ್ತಯೇಸುವೇ ಸಮಸ್ತದಲ್ಲಿ ಸಮಸ್ತವೂ ಆಗಿದ್ದಾರೆ.೧೨. ನೀವು ದೇವರಿಂದ ಆಯ್ಕೆಯಾದವರು. ದೇವರಿಗೆ ಪ್ರಿಯವಾದವರು. ದೇವರ ಸ್ವಂತಜನರು. ಹೀಗಿರಲಾಗಿ ಕನಿಕರ, ದಯೆ, ದೀನತೆ, ವಿನಯಶೀಲತೆ, ಶಾಂತಿ, ಸಹನೆ ಎಂಬ ಸದ್ಗುಣಗಳೇ ನಿಮ್ಮ ಆಭರಣಗಳಾಗಿರಲಿ.೧೩. ಒಬ್ಬರನ್ನೊಬ್ಬರು ಸೈರಿಸಿಕೊಳ್ಳಿ. ಒಬ್ಬನ ಮೇಲೆ ತಪ್ಪುಹೊರಿಸಲು ಕಾರಣವಿದ್ದರೂ ಕ್ಷಮಿಸಿಬಿಡಿ. ಪ್ರಭು ಯೇಸು ನಿಮ್ಮನ್ನು ಕ್ಷಮಿಸಿದಂತೆ ನೀವೂ ಇತರರನ್ನು ಕ್ಷಮಿಸಿರಿ.೧೪. ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮಲ್ಲಿ ಪ್ರೀತಿಯಿರಲಿ. ಪ್ರೀತಿಯೇ ಸಮಸ್ತವನ್ನು ಸಂಪೂರ್ಣಗೊಳಿಸುವ ಬಂಧನ.೧೫. ನಿಮ್ಮ ಹೃನ್ಮನಗಳು ಕ್ರಿಸ್ತಯೇಸುವಿನ ಶಾಂತಿಸಮಾಧಾನದಿಂದ ತುಂಬಿರಲಿ. ನೀವು ಒಂದೇ ಶರೀರವಾಗಿ ಬಾಳಲು ಕರೆಯಲ್ಪಟ್ಟಿದ್ದೀರಿ; ಕೃತಜ್ಞತೆ ಉಳ್ಳವರಾಗಿ ಜೀವಿಸಿರಿ.೧೬. ಕ್ರಿಸ್ತಯೇಸುವಿನ ವಾಕ್ಯ ನಿಮ್ಮಲ್ಲಿ ನೆಲೆಸಿ ಸಮೃದ್ಧಿಯಾಗಿ ಬೆಳೆಯಲಿ. ಜ್ಞಾನಸಂಪನ್ನರಾಗಿ ಒಬ್ಬರಿಗೊಬ್ಬರು ಉಪದೇಶಮಾಡಿರಿ ಹಾಗೂ ಬುದ್ಧಿ ಹೇಳಿಕೊಳ್ಳಿರಿ. ಕೃತಜ್ಞತೆಯುಳ್ಳವರಾಗಿ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಭಕ್ತಿಗೀತೆಗಳಿಂದಲೂ ಹೃದಯಾಂತರಾಳದಿಂದ ದೇವರಿಗೆ ಹಾಡಿರಿ.೧೭. ನುಡಿಯಲ್ಲಾಗಲೀ ನಡೆಯಲ್ಲಾಗಲೀ ನೀವು ಏನು ಮಾಡಿದರೂ ಯೇಸುಸ್ವಾಮಿಯ ಹೆಸರಿನಲ್ಲಿಯೇ ಮಾಡಿರಿ. ಅವರ ಮುಖಾಂತರವೇ ಪಿತನಾದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ.೧೮. ಮಹಿಳೆಯರೇ, ನಿಮ್ಮ ನಿಮ್ಮ ಪತಿಯರಿಗೆ ಪ್ರಭು ಮೆಚ್ಚುವಂತೆ ತಗ್ಗಿ ನಡೆದುಕೊಳ್ಳಿರಿ.೧೯. ಪುರುಷರೇ, ನಿಮ್ಮ ನಿಮ್ಮ ಪತ್ನಿಯರನ್ನು ಪ್ರೀತಿಸಿರಿ. ಅವರೊಡನೆ ಕಠಿಣವಾಗಿ ವರ್ತಿಸದಿರಿ.೨೦. ಮಕ್ಕಳೇ, ಎಲ್ಲದರಲ್ಲೂ ನಿಮ್ಮ ತಂದೆತಾಯಿಗಳ ಮಾತು ಕೇಳಿರಿ. ಹೀಗೆ ಮಾಡಿದರೆ ಪ್ರಭುವಿಗೆ ಮೆಚ್ಚುಗೆಯಾಗುತ್ತದೆ.೨೧. ತಂದೆತಾಯಿಯರೇ, ನಿಮ್ಮ ಮಕ್ಕಳನ್ನು ಕೆರಳಿಸಿ ಮನಕುಗ್ಗಿಸದಿರಿ.೨೨. ದಾಸ್ಯದಲ್ಲಿರುವವರೇ, ಎಲ್ಲಾ ವಿಷಯಗಳಲ್ಲೂ ನಿಮ್ಮ ನಿಮ್ಮ ಧಣಿಗಳಿಗೆ ವಿಧೇಯರಾಗಿರಿ. ಧಣಿಗಳನ್ನು ಮೆಚ್ಚಿಸುವ ಸಲುವಾಗಿ ಮುಖದಾಕ್ಷಿಣ್ಯದ ಸೇವೆಮಾಡಬೇಡಿ. ಪ್ರಭುವಿಗೆ ಭಯಪಟ್ಟು ಪ್ರಾಮಾಣಿಕತೆಯಿಂದ ದುಡಿಯಿರಿ.೨೩. ನೀವು ಏನನ್ನು ಮಾಡಿದರೂ ಪೂರ್ಣಮನಸ್ಸಿನಿಂದ ಮಾಡಿ; ಮನುಷ್ಯರನ್ನು ಮೆಚ್ಚಿಸುವುದಕ್ಕಾಗಿ ಅಲ್ಲ, ಪ್ರಭುವನ್ನು ಮೆಚ್ಚಿಸುವುದಕ್ಕಾಗಿ ಮಾಡಿ.೨೪. ಅದಕ್ಕೆ ಪ್ರತಿಫಲವಾಗಿ ಪ್ರಭುವಿನಿಂದ ನೀವು ಸ್ವರ್ಗೀಯ ಬಾಧ್ಯತೆಯನ್ನು ಪಡೆಯುವಿರೆಂದು ನಿಮಗೆ ತಿಳಿದೇ ಇದೆ.೨೫. ಅನ್ಯಾಯ ಮಾಡುವವನು ತಾನು ಮಾಡಿದ ಅನ್ಯಾಯಕ್ಕೆ ತಕ್ಕ ಶಿಕ್ಷೆಯನ್ನು ಪಡೆಯುವನು. ದೇವರು ಪಕ್ಷಪಾತಿಯಲ್ಲ. Kannada Bible (KNCL) 2016 Kannada C.L. Bible - ಸತ್ಯವೇದವು C.L. Copyright © 2016 by The Bible Society of India Used by permission. worldwide