ಬೈಬಲ್ ಒಂದು ವರ್ಷದಲ್ಲಿ ನವೆಂಬರ್ ೧೦ಯೆಜೆಕಿಯೇಲನ ೧೧:೧-೨೫೧. ಆಮೇಲೆ ದೇವರಾತ್ಮ ನನ್ನನ್ನು ಎತ್ತಿ ಪೂರ್ವದಿಕ್ಕಿಗೆ ಅಭಿಮುಖವಾಗಿರುವ ಸರ್ವೇಶ್ವರನ ಆಲಯದ ಮೂಡಣ ಬಾಗಿಲಿಗೆ ತಂದುಬಿಟ್ಟಿತು. ಇಗೋ, ಬಾಗಿಲ ಮುಂದೆ ಇಪ್ಪತ್ತೈದು ಜನರು ನಿಂತಿದ್ದರು. ಅವರ ಮಧ್ಯೆ ಅಜ್ಜೂರನ ಮಗ ಯಾಜನ್ಯ, ಬೆನಾಯನ ಮಗ ಪೆಲತ್ಯ ಎಂಬ ಜನನಾಯಕರನ್ನು ನಾನು ನೋಡಿದೆ.೨. ಅಲ್ಲಿ ದೇವರು ನನಗೆ, “ನರಪುತ್ರನೇ, ಪಟ್ಟಣದಲ್ಲಿ ಕುತಂತ್ರಗಳನ್ನು ಕಲ್ಪಿಸಿ ದುರಾಲೋಚನೆಯನ್ನು ಹೇಳಿಕೊಡುವವರು ಈ ಜನರೇ;೩. ಇವರು, ‘ಮನೆಗಳನ್ನು ಕಟ್ಟಿಕೊಳ್ಳುವ ಕಾಲವು ಬಂದಿಲ್ಲ; ಈ ಪಟ್ಟಣವು ಒಂದು ಹಂಡೆ, ನಾವು ಅದರಲ್ಲಿನ ಮಾಂಸ’ ಎಂದು ಹೇಳುತ್ತಾರೆ.೪. ಆದಕಾರಣ, ನರಪುತ್ರನೇ, ನೀನು ಇವರ ವಿಷಯವಾಗಿ ಶಾಪಹಾಕು, ತಪ್ಪದೆ ಹಾಕು,” ಎಂದು ಆಜ್ಞಾಪಿಸಿದರು.೫. ಆಗ ಸರ್ವೇಶ್ವರನ ಆತ್ಮ ನನ್ನಲ್ಲಿ ಆವೇಶ ಉಂಟುಮಾಡಿತು. ಹೀಗೆ ಸಾರಬೇಕೆಂದು ಅಪ್ಪಣೆ ಆಯಿತು: ಸರ್ವೇಶ್ವರ ಇಂತೆನ್ನುತ್ತಾರೆ: “ಇಸ್ರಯೇಲ್ ವಂಶದವರೇ, ನೀವು ಹೀಗೆ ಮಾತಾಡುತ್ತಿದ್ದೀರಿ, ಸರಿ; ನಿಮ್ಮ ಮನಸ್ಸಿನಲ್ಲಿ ಹುಟ್ಟಿರುವ ಆಲೋಚನೆಗಳು ನನಗೆ ಗೊತ್ತೇ ಇವೆ.೬. ನೀವು ಈ ಪಟ್ಟಣದಲ್ಲಿ ನರಹತ್ಯವನ್ನು ಹೆಚ್ಚೆಚ್ಚಾಗಿ ಮಾಡಿ ಹತರಾದವರಿಂದ ಬೀದಿಗಳನ್ನು ತುಂಬಿಸಿದ್ದೀರಿ.೭. “ಆದಕಾರಣ ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ನಿಮ್ಮ ದೋಷದಿಂದ ಹತರಾಗಿ ಪಟ್ಟಣದಲ್ಲಿ ಬಿದ್ದಿರುವ ನಿಮ್ಮವರ ಶವಗಳೇ ಹಂಡೆಯಲ್ಲಿನ ಮಾಂಸ, ಈ ಪಟ್ಟಣವೇ ಹಂಡೆ, ನಿಮ್ಮನ್ನಾದರೋ ನಾನು ಪಟ್ಟಣದೊಳಗಿಂದ ಕಿತ್ತುಹಾಕುವೆನು.೮. ಖಡ್ಗಕ್ಕೆ ಹೆದರಿದ ನಿಮ್ಮನ್ನೇ ಖಡ್ಗಕ್ಕೆ ಗುರಿಮಾಡುವೆನು; ಇದು ಸರ್ವೇಶ್ವರನಾದ ದೇವರ ನುಡಿ.೯. ನಾನು ಪಟ್ಟಣದೊಳಗಿಂದ ನಿಮ್ಮನ್ನು ಕಿತ್ತು ಅನ್ಯರ ಕೈಗೆ ಕೊಟ್ಟು ದಂಡಿಸುವೆನು.೧೦. ನೀವು ಖಡ್ಗಕ್ಕೆ ತುತ್ತಾಗುವಿರಿ. ಇಸ್ರಯೇಲಿನ ಮೇರೆಯಲ್ಲೆ ನಿಮಗೆ ದಂಡನೆಯನ್ನು ವಿಧಿಸುವೆನು; ನಾನೇ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು.೧೧. ಈ ಪಟ್ಟಣ ನಿಮಗೆ ಹಂಡೆಯಾಗುವುದಿಲ್ಲ; ನೀವು ಅದರಲ್ಲಿ ಮಾಂಸವಾಗುವುದಿಲ್ಲ; ಇಸ್ರಯೇಲಿನ ಮೇರೆಯಲ್ಲೆ ನಿಮಗೆ ದಂಡನೆಯನ್ನು ವಿಧಿಸುವೆನು.೧೨. ನಾನೇ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು; ನೀವು ನನ್ನ ವಿಧಿಗಳನ್ನು ಕೈಗೊಳ್ಳದೆ, ನನ್ನ ನಿಯಮಗಳನ್ನು ಅನುಸರಿಸದೆ, ನಿಮ್ಮ ಸುತ್ತಲಿನ ಜನಾಂಗಗಳ ಆಚಾರಗಳನ್ನೇ ಅನುಸರಿಸಿದ್ದರಿಂದ ಇದೆಲ್ಲಾ ಆಗುವುದು.”೧೩. ನಾನು ಈ ಮಾತನ್ನು ನುಡಿಯುತ್ತಿರುವಾಗಲೇ ಬೆನಾಯನ ಮಗ ಪೆಲತ್ಯನು ಸತ್ತುಹೋದನು. ಆಗ ನಾನು ಅಡ್ಡಬಿದ್ದು ಗಟ್ಟಿಯಾಗಿ ಕೂಗಿಕೊಂಡೆ. “ಅಯ್ಯೋ, ಸರ್ವೇಶ್ವರನಾದ ದೇವರೇ, ಇಸ್ರಯೇಲಿನಲ್ಲಿ ಉಳಿದವರನ್ನು ಸಂಪೂರ್ಣವಾಗಿ ನಿರ್ಮೂಲನಮಾಡುವಿರೋ?” ಎಂದು ಮೊರೆಯಿಟ್ಟೆ.೧೪. ಆಗ ಸರ್ವೇಶ್ವರ ನನಗೆ ದಯಪಾಲಿಸಿದ ವಾಣಿ ಇದು:೧೫. “ನರಪುತ್ರನೇ, ನಿನ್ನ ಸಹೋದರರಿಗೆ, ನಿನ್ನ ಅಣ್ಣತಮ್ಮಂದಿರಿಗೆ, ನಿನ್ನ ನೆಂಟರಿಷ್ಟರಿಗೆ, ಅಂತು ಇಸ್ರಯೇಲ್ ವಂಶದ ಎಲ್ಲರಿಗೆ, ಜೆರುಸಲೇಮಿನಲ್ಲೇ ಉಳಿದಿರುವವರು, ‘ಸರ್ವೇಶ್ವರನ ಬಳಿಯಿಂದ ದೂರವಾಗಿ ತೊಲಗಿರಿ, ಈ ನಾಡು ನಮಗೇ ಸೊತ್ತಾಗಿ ಸಿಕ್ಕಿದೆ,’ ಎಂದು ಹೇಳಿ ಹೀನೈಸುತ್ತಿದ್ದಾರಲ್ಲವೆ?೧೬. “ಆದಕಾರಣ ನೀನು ಹೀಗೆ ಸಾರು; ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ನಾನು ಅವರನ್ನು ದೂರ ಗಡೀಪಾರುಮಾಡಿ, ಅನ್ಯದೇಶದ ಜನಾಂಗಗಳಲ್ಲಿ ಚದರಿಸಿದ್ದರೂ ಅವರು ಸೇರಿರುವ ದೇಶಗಳಲ್ಲಿಯೇ ನಾನು ಕೊಂಚಕಾಲದ ಮಟ್ಟಿಗೆ ಅವರಿಗೆ ಪವಿತ್ರಾಲಯವಾಗಿರುವೆನು.೧೭. “ಆಮೇಲೆ ಅವರನ್ನು ಜನಾಂಗಗಳಿಂದ ಒಟ್ಟುಗೂಡಿಸುವೆನು. ಚದರಿರುವ ದೇಶಗಳಿಂದ ಅವರನ್ನು ಒಟ್ಟಿಗೆ ಬರಮಾಡಿ ಇಸ್ರಯೇಲ್ ನಾಡನ್ನು ಅವರಿಗೆ ದಯಪಾಲಿಸುವೆನು.೧೮. ಅವರು ಅಲ್ಲಿಗೆ ಸೇರಿ ಎಲ್ಲ ಅಸಹ್ಯ ವಸ್ತುಗಳನ್ನೂ ಸಮಸ್ತ ಅನಿಷ್ಟ ವಿಗ್ರಹಗಳನ್ನೂ ತೆಗೆದುಹಾಕುವರು.೧೯. ಅವರು ನನ್ನ ನಿಯಮಗಳನ್ನು ಅನುಸರಿಸಿ, ನನ್ನ ವಿಧಿಗಳನ್ನು ಕೈಕೊಂಡು ನೆರವೇರಿಸುವಂತೆ ನಾನು ಅವರಿಗೆ ಒಂದೇ ಮನಸ್ಸನ್ನು ದಯಪಾಲಿಸಿ, ನೂತನ ಸ್ವಭಾವವನ್ನು ಅವರಲ್ಲಿ ಹುಟ್ಟಿಸುವೆನು;೨೦. ಕಲ್ಲಾದ ಹೃದಯವನ್ನು ಅವರೊಳಗಿಂದ ತೆಗೆದು ಮೃದುವಾದ ಹೃದಯವನ್ನು ಅವರಿಗೆ ಅನುಗ್ರಹಿಸುವೆನು; ಅವರು ನನಗೆ ಪ್ರಜೆಯಾಗಿರುವರು, ನಾನು ಅವರಿಗೆ ದೇವರಾಗಿರುವೆನು.೨೧. ಆದರೆ ಯಾರ ಮನಸ್ಸು ತಮ್ಮ ಅಸಹ್ಯವಸ್ತುಗಳನ್ನೂ ಅನಿಷ್ಟ ವಿಗ್ರಹಗಳನ್ನೂ ಅನುಸರಿಸುತ್ತದೋ ಅವರ ದುರ್ನಡತೆಯನ್ನು ಅವರ ತಲೆಗೆ ಕಟ್ಟುವೆನು, ಇದು ಸರ್ವೇಶ್ವರನಾದ ದೇವರ ನುಡಿ.”೨೨. ಬಳಿಕ ಚಕ್ರಗಳ ಪಕ್ಕದಲ್ಲಿದ್ದ ಕೆರೂಬಿಗಳು ರೆಕ್ಕೆಗಳನ್ನು ಹರಡಿಕೊಂಡವು. ಇಸ್ರಯೇಲಿನ ದೇವರ ತೇಜಸ್ಸು ಅವುಗಳ ಮೇಲ್ಗಡೆ ನೆಲಸಿತ್ತು.೨೩. ಆಗ ಸರ್ವೇಶ್ವರನ ತೇಜಸ್ಸು ಪಟ್ಟಣದ ಮಧ್ಯದಿಂದ ಏರಿ, ಪಟ್ಟಣಕ್ಕೆ ಪೂರ್ವದಲ್ಲಿರುವ ಗುಡ್ಡದ ಮೇಲೆ ನಿಂತಿತು.೨೪. ಆ ಮೇಲೆ ದೇವರಾತ್ಮ ಪರವಶನಾದ ನನ್ನನ್ನು ಎತ್ತಿ, ದಿವ್ಯದರ್ಶನದ ಮುಖಾಂತರ ಬಾಬಿಲೋನಿಯ ದೇಶದಲ್ಲಿ ಸೆರೆಯಾಗಿದ್ದವರ ಬಳಿಗೆ ಒಯ್ದು ತಂದಿತು. ನನಗಾದ ದಿವ್ಯದರ್ಶನವು ಆಗ ಮಾಯವಾಯಿತು.೨೫. ಸರ್ವೇಶ್ವರ ತೋರಿಸಿದ ಎಲ್ಲವುಗಳನ್ನು ಕೂಡಲೆ ಸೆರೆಯವರಿಗೆ ತಿಳಿಸಿದೆ.ಯೆಜೆಕಿಯೇಲನ ೧೨:೧-೨೮೧. ಸರ್ವೇಶ್ವರ ನನಗೆ ಅನುಗ್ರಹಿಸಿದ ವಾಣಿ ಇದು:೨. “ನರಪುತ್ರನೇ, ನೀನು ದ್ರೋಹಿವಂಶದ ಮಧ್ಯೆ ವಾಸಿಸುತ್ತಿರುವೆ. ಆ ವಂಶದವರು ದ್ರೋಹಿಗಳಾಗಿರುವುದರಿಂದ ಕಣ್ಣಿದ್ದರೂ ಕಾಣರು, ಕಿವಿಯಿದ್ದರೂ ಕೇಳರು.೩. “ನರಪುತ್ರನೇ, ವಲಸೆಹೋಗುವುದಕ್ಕೆ ಬೇಕಾದ ಸಾಮಗ್ರಿಗಳನ್ನು ನೀನು ಕೂಡಿಸಿಕೊಂಡು ಹಗಲಿನಲ್ಲಿ ಅವರ ಕಣ್ಣೆದುರಿಗೇ ಹೊರಡು. ಅಂದರೆ, ನಿನ್ನ ವಾಸಸ್ಥಳವನ್ನು ಬಿಟ್ಟು ಅವರು ನೋಡುವ ಹಾಗೆ ಬೇರೊಂದು ಸ್ಥಳಕ್ಕೆ ಹೋಗು: ಅವರು ದ್ರೋಹಿವಂಶದವರಾಗಿದ್ದರೂ ಒಂದು ವೇಳೆ ತಮ್ಮ ದ್ರೋಹವನ್ನು ಮನಸ್ಸಿಗೆ ತಂದುಕೊಳ್ಳಬಹುದು.೪. ನೀನು ನಿನ್ನ ಸಾಮಗ್ರಿಗಳನ್ನು ವಲಸೆಯ ಸಾಮಗ್ರಿಗಳನ್ನೊ ಎಂಬಂತೆ ಹಗಲಿನಲ್ಲಿ ಅವರ ಕಣ್ಣೆದುರಿಗೆ ಮನೆಯೊಳಗಿಂದ ಆಚೆಗೆ ಹಾಕಿ ವಲಸೆ ಹೋಗುವವನಂತೆ ಸಾಯಂಕಾಲ ಅವರ ಸಮಕ್ಷಮ ಹೊರಟುಹೋಗು.೫. ಅವರು ನೋಡುತ್ತಿರುವಾಗ, ನೀನು ಗೋಡೆಯನ್ನು ತೋಡಿ, ಕಂಡಿಯ ಮೂಲಕ ನಿನ್ನ ಸಾಮಗ್ರಿಗಳನ್ನು ಸಾಗಿಸಿಕೊಂಡು ಹೋಗು.೬. ಅವರ ಕಣ್ಣ ಮುಂದೆ, ಅದನ್ನು ಹೆಗಲ ಮೇಲೆಹಾಕಿ, ಕತ್ತಲಲ್ಲಿ ಹೊತ್ತುಕೊಂಡುಹೋಗು; ನೆಲವನ್ನು ನೋಡದಂತೆ ಮೋರೆಯನ್ನು ಮುಚ್ಚಿಕೋ; ನಾನು ನಿನ್ನನ್ನು ಇಸ್ರಯೇಲ್ ವಂಶದವರಿಗೆ ಮುಂಗುರುತನ್ನಾಗಿ ಮಾಡಿದ್ದೇನೆ.”೭. ಆಗ ನಾನು ನನಗಾದ ಅಪ್ಪಣೆಯನ್ನು ನೆರವೇರಿಸಿದೆ: ಹಗಲಿನಲ್ಲಿ ನನ್ನ ಸಾಮಗ್ರಿಗಳನ್ನು ವಲಸೆಯ ಸಾಮಗ್ರಿಗಳನ್ನೋ ಎಂಬಂತೆ ಮನೆಯೊಳಗಿನಿಂದ ಆಚೆಗೆ ಹಾಕಿದೆ; ಸಾಯಂಕಾಲ ನನ್ನ ಕೈಯಿಂದಲೇ ಗೋಡೆಯನ್ನು ಕಂಡಿಮಾಡಿ, ಕತ್ತಲಲ್ಲಿ ಆ ಸಾಮಗ್ರಿಗಳನ್ನು ಆಚೆಗೆ ಸಾಗಿಸಿ, ಅವರ ಕಣ್ಣ ಮುಂದೆ ಹೆಗಲ ಮೇಲೆ ಹೊತ್ತುಕೊಂಡು ಹೋದೆ.೮. ಬೆಳಿಗ್ಗೆ ಸರ್ವೇಶ್ವರನಿಂದ ಈ ವಾಣಿ ನನಗೆ ಕೇಳಿಸಿತು:೯. “ನರಪುತ್ರನೇ, ದ್ರೋಹಿವಂಶದವರಾದ ಇಸ್ರಯೇಲರು, ‘ನೀನು ಏನು ಮಾಡುತ್ತಿರುವೆ?’ ಎಂದು ನಿನ್ನನ್ನು ಕೇಳಿದ್ದಾರಲ್ಲವೆ?೧೦. ನೀನು ಅವರಿಗೆ ಹೀಗೆ ನುಡಿ, ‘ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ಈ ಹೊರೆ ಜೆರುಸಲೇಮಿನಲ್ಲಿರುವ ರಾಜನಿಗೂ ಅಲ್ಲಿನ ಇಸ್ರಯೇಲ್ ವಂಶದವರೆಲ್ಲರಿಗೂ ಸಂಬಂಧಪಟ್ಟಿದೆ;೧೧. ಇದನ್ನೂ ನುಡಿ, - ‘ನಾನು ನಿಮಗೆ ಮುಂಗುರುತಾಗಿದ್ದೇನೆ. ನಾನು ಮಾಡಿದಂತೆಯೇ ಅವರಿಗಾಗುವುದು: ಅವರು ವಲಸೆಯಾಗಿ ಸೆರೆಹೋಗುವರು.೧೨. ಅವರಲ್ಲಿನ ರಾಜನು ಹೆಗಲ ಮೇಲೆ ಹೊರೆಯನ್ನು ಹೊತ್ತುಕೊಂಡು ಕತ್ತಲಲ್ಲಿ ಹೊರಟುಹೋಗುವನು: ಅವನು ಗೋಡೆಯನ್ನು ತೋಡಿ, ಕಂಡಿಯ ಮೂಲಕ ಸಾಮಗ್ರಿಗಳನ್ನು ಆಚೆಗೆ ಸಾಗಿಸುವನು; ಅವನು ಮೋರೆಯನ್ನು ಮುಚ್ಚಿಕೊಳ್ಳುವನು, ಭೂಮಿಯು ಅವನ ಕಣ್ಣಿಗೆ ಕಾಣಿಸದು.೧೩. ನಾನು ಅವನಿಗೆ ನನ್ನ ಬಲೆಯೊಡ್ಡುವೆನು, ನಾನು ಹಾಕಿದ ಉರುಲಿನಲ್ಲಿ ಸಿಕ್ಕಿಬೀಳುವನು: ಬಾಬಿಲೋನಿಯಾ ದೇಶದ ಬಾಬಿಲೋನ್ ನಗರಕ್ಕೆ ಅವನನ್ನು ಒಯ್ಯುವೆನು; ಅಲ್ಲೇ ಇದ್ದು ಸಾಯುವನು, ಆದರೂ ಆ ದೇಶವನ್ನು ನೋಡನು.೧೪. ಅವನ ಸುತ್ತಲಿನ ಸಕಲ ಸಹಾಯಕರನ್ನೂ ಅವನ ಸಮಸ್ತವ್ಯೂಹಗಳವರನ್ನೂ ನಾನು ಎಲ್ಲ ಕಡೆಯ ಗಾಳಿಗೂ ತೂರಿ ಅವರ ಹಿಂದೆ ಕತ್ತಿಯನ್ನು ಬೀಸುವೆನು.೧೫. “ನಾನು ಅವರನ್ನು ಜನಾಂಗಗಳೊಳಗೆ ಚದರಿಸಿಬಿಟ್ಟು, ಅನ್ಯದೇಶಗಳಲ್ಲಿ ಚಲ್ಲಾಪಿಲ್ಲಿ ಮಾಡುವಾಗ ನಾನೇ ಸರ್ವೇಶ್ವರ ಎಂದು ಅವನಿಗೆ ಗೊತ್ತಾಗುವುದು.೧೬. ನಾನು ಕೆಲವರನ್ನು ಖಡ್ಗ-ಕ್ಷಾಮ-ವ್ಯಾಧಿಗಳಿಂದ ಉಳಿಸಿ, ಅವರು ತಮ್ಮ ಅಸಹ್ಯಕಾರ್ಯಗಳ ವಿಷಯವನ್ನು ತಾವು ಸೇರಿದ ಜನಾಂಗಗಳಲ್ಲಿ ತಿಳಿಸುವುದಕ್ಕೆ ಅವಕಾಶ ಮಾಡುವೆನು: ನಾನೇ ಸರ್ವೇಶ್ವರ ಎಂದು ಆ ಜನಾಂಗಗಳಿಗೂ ಗೊತ್ತಾಗುವುದು.”೧೭. ಇದಲ್ಲದೆ ಸರ್ವೇಶ್ವರನ ವಾಣಿ ನನಗೆ ಇಂತೆಂದಿತು:೧೮. “ನರಪುತ್ರನೇ, ನೀನು ಅನ್ನವನ್ನು ಅಂಜಿಕೆಯಿಂದ ತಿಂದು, ನೀರನ್ನು ನಡುಕದಿಂದ ಕುಡಿದು, ಆ ದೇಶದಲ್ಲಿರುವ ಜನರಿಗೆ ಹೀಗೆ ಹೇಳು:೧೯. ಸರ್ವೇಶ್ವರನಾದ ದೇವರು ಇಸ್ರಯೇಲ್ ನಾಡಿನ ಜೆರುಸಲೇಮ್ ನಿವಾಸಿಗಳನ್ನೂ ಕುರಿತು ಇಂತೆನ್ನುತ್ತಾರೆ: ‘ಅವರು ಅನ್ನವನ್ನು ಅಂಜಿಕೆಯಿಂದ ತಿಂದು ನೀರನ್ನು ನಡುಕದಿಂದ ಕುಡಿಯುವರು: ಏಕೆಂದರೆ ಆ ನಾಡಿನಲ್ಲಿರುವವರು ಹಿಂಸಾಚಾರಿಗಳು; ಈ ಕಾರಣ, ಅಲ್ಲಿನ ಸೊತ್ತೆಲ್ಲಾ ಸೂರೆಯಾಗಿ, ನಾಡು ಬರಿದಾಗುವುದು.೨೦. ಆಗ ಜನ ತುಂಬಿದ ಊರುಗಳು ಹಾಳಾಗಿ ನಾಡು ಪಾಳುಬೀಳುವುದು; ನಾನೇ ಸರ್ವೇಶ್ವರ ಎಂದು ನಿಮಗೆ ಆಗ ಗೊತ್ತಾಗುವುದು.”೨೧. ಆಮೇಲೆ ಸರ್ವೇಶ್ವರನ ವಾಣಿ ನನಗೆ ದಯಪಾಲಿಸಿದ್ದು:೨೨. “ನರಪುತ್ರನೇ, ‘ಕ್ಲುಪ್ತಕಾಲ ದೂರ ದೂರ ಹೋಗುತ್ತಲಿದೆ, ದಿವ್ಯದರ್ಶನಗಳೆಲ್ಲಾ ನಿರರ್ಥಕ’ ಎಂಬುದಾಗಿ ಇಸ್ರಯೇಲ್ ನಾಡಿನವರು ಆಡಿಕೊಳ್ಳುವ ಈ ಗಾದೆ ಏನು?೨೩. ಅವರಿಗೆ ಹೀಗೆ ಹೇಳು - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನಾನು ಈ ಗಾದೆಯನ್ನು ನಿಲ್ಲಿಸಿಬಿಡುವೆನು; ಅದು ಇಸ್ರಯೇಲಿನಲ್ಲಿ ಇನ್ನು ಸಲ್ಲದು; ನಾನು ನುಡಿಯುವ ಆ ಮಾತನ್ನು ಕೇಳಿರಿ: ಕ್ಲುಪ್ತಕಾಲ ಹತ್ತಿರಬಂದಿದೆ. ದಿವ್ಯದರ್ಶನಗಳೆಲ್ಲಾ ಸಾರ್ಥಕವಾಗುವ ಕಾಲ ಸಮೀಪಿಸಿದೆ.೨೪. “ಇನ್ನು ಮೇಲೆ ಇಸ್ರಯೇಲ್ ವಂಶದವರಲ್ಲಿ ಯಾರಿಗೂ ಸುಳ್ಳು ದರ್ಶನವಾಗದು; ಮೋಸದ ಕಣಿ ಇರದು.೨೫. ನಾನೇ ಸರ್ವೇಶ್ವರ; ನಾನು ನುಡಿದೆ ತೀರುವೆನು; ನಾನು ನುಡಿದ ಮಾತು ನೆರವೇರುವುದು, ಇನ್ನು ನಿಧಾನವಾಗದು. ದ್ರೋಹಿ ವಂಶದವರೇ, ನಾನು ನಿಮ್ಮ ಕಾಲದಲ್ಲಿ ನುಡಿಯುವುದು ಮಾತ್ರವಲ್ಲದೆ ನುಡಿದದ್ದನ್ನು ನೆರವೇರಿಸುವೆನು. ಇದು ಸರ್ವೇಶ್ವರನಾದ ದೇವರ ವಾಕ್ಯ.”೨೬. ಮತ್ತು ಸರ್ವೇಶ್ವರನ ವಾಣಿ ನನಗೆ ಹೀಗೆಂದಿತು:೨೭. “ನರಪುತ್ರನೇ, ಇಗೋ, ಇಸ್ರಯೇಲ್ ವಂಶದವರು, ‘ಇವನಿಗಾದ ದಿವ್ಯದರ್ಶನ ಮುಂದೆ ಬಹುದೂರ ಕಾಲಕ್ಕೆ ಸಂಬಂಧಪಟ್ಟದ್ದು; ಬಹಳ ದಿನಗಳ ಮೇಲೆ ಆಗತಕ್ಕನ್ನು ಮುಂತಿಳಿಸುತ್ತಾನೆ’ ಎಂದು ಹೇಳುತ್ತಾರೆ.೨೮. ಆದಕಾರಣ ನೀನು ಅವರಿಗೆ ಹೀಗೆ ಹೇಳು: ಸರ್ವೇಶ್ವರನಾದ ದೇವರು ಹೇಳುವುದನ್ನು ಗಮನಿಸಿ: ಇನ್ನು ಮೇಲೆ ನನ್ನ ಮಾತುಗಳಲ್ಲಿ ಯಾವುದೂ ಸಾವಕಾಶವಾಗದು; ನಾನಾಡುವ ಮಾತು ನೆರವೇರುವುದು ಖಂಡಿತ; ಇದು ಸರ್ವೇಶ್ವರನಾದ ದೇವರ ನುಡಿ.”ಕೀರ್ತನೆಗಳು ೧೨೨:೧-೫೧. (ಯಾತ್ರಾಗೀತೆ) ಪ್ರಭುವಿನಾಲಯಕೆ ಹೋಗೋಣ ಬಾ ಎಂದಾಗ I ಆಯಿತೆನಗೆ ಆನಂದ, ಜನರೆನ್ನ ಕರೆದಾಗ II೨. ನನ್ನ ಕಾಲುಗಳು ಓ ಜೆರುಸಲೇಮೇ I ತಲುಪಿವೆ ನಿನ್ನ ಪುರದ್ವಾರಗಳನೇ II೩. ನೋಡು, ಜೆರುಸಲೇಮ್ ಪಟ್ಟಣವಿದು I ಗಟ್ಟಿಯಾಗಿಯೆ ಕಟ್ಟಲ್ಪಟ್ಟಿಹುದು II೪. ಕುಲಗಳು ಯಾತ್ರೆಯಾಗಿ ಬರುವುವು ಇಲ್ಲಿಗೆ I ಮಾಡುವರಿಲ್ಲಿಯೆ ಪ್ರಭುವಿನ ನಾಮ ಕೀರ್ತನೆ I ಪಾಲಿಪರಿಂತು ಇಸ್ರೇಲರಿಗೆ ವಿಧಿಸಿದಾಜ್ಞೆ II೫. ಸ್ಥಾಪಿತವಾಗಿವೆಯಿಲ್ಲಿ ನ್ಯಾಯಪೀಠಗಳು I ದಾವೀದನ ಮನೆತನದವರ ಸಿಂಹಾಸನಗಳು IIಜ್ಞಾನೋಕ್ತಿಗಳು ೨೮:೧೭-೧೮೧೭. ನರಹತ್ಯಮಾಡಿದ ಪಾಪಾತ್ಮನು ಪಾತಾಳದತ್ತ ಓಡೋಡುತ್ತಿರುವನು; ಅವನನ್ನು ಯಾರೂ ತಡೆಯಬಾರದು.೧೮. ಸನ್ಮಾರ್ಗಿಗಳಿಗೆ ಸಂರಕ್ಷಣೆ, ದುರ್ಮಾರ್ಗಿಗಳಿಗೆ ಪತನ ತಟ್ಟನೆ.ಹಿಬ್ರಿಯರಿಗೆ ೬:೧-೨೦೧. ಆದುದರಿಂದ ಕ್ರಿಸ್ತಯೇಸುವನ್ನು ಕುರಿತಾದ ಪ್ರಾಥಮಿಕ ಪಾಠಗಳಲ್ಲೇ ನಿಂತುಬಿಡದೆ ಪ್ರೌಢ ವಿಷಯಗಳತ್ತ ಸಾಗೋಣ.೨. ಜಡ ಕರ್ಮಗಳನ್ನು ಬಿಟ್ಟು ದೇವರಲ್ಲಿ ವಿಶ್ವಾಸವಿಡುವುದು, ಸ್ನಾನಸಂಸ್ಕಾರಗಳು, ಹಸ್ತನಿಕ್ಷೇಪ, ಸತ್ತವರ ಪುನರುತ್ಥಾನ, ನಿತ್ಯವಾದ ನ್ಯಾಯತೀರ್ಪು - ಈ ಬೋಧನಾ ಅಸ್ತಿವಾರವನ್ನು ಮತ್ತೆ ಮತ್ತೆ ಹಾಕಬೇಕಾಗಿಲ್ಲ.೩. ದೇವರ ಚಿತ್ತವಾದರೆ ಪ್ರೌಢ ವಿಷಯಗಳತ್ತ ಪ್ರಗತಿಪರರಾಗೋಣ.೪. ಒಬ್ಬನು, ಒಮ್ಮೆ ಜ್ಞಾನೋದಯವನ್ನು ಪಡೆದು, ಸ್ವರ್ಗೀಯ ವರದಾನಗಳನ್ನು ಆಸ್ವಾದಿಸಿ, ಪವಿತ್ರಾತ್ಮ ಅವರ ಸಹಭಾಗಿಯಾಗಿ,೫. ದೇವರ ವಾಕ್ಯದ ಸವಿಯುಂಡು, ಬರಲಿರುವ ಯುಗದ ವೈಭವವನ್ನು ಮನಗಂಡು,೬. ಅನಂತರವೂ ವಿಶ್ವಾಸಭ್ರಷ್ಟನಾದರೆ, ಅಂಥವನು ಪಶ್ಚಾತ್ತಾಪಪಟ್ಟು ದೈವಾಭಿಮುಖನಾಗುವುದು ಅಸಾಧ್ಯ. ಏಕೆಂದರೆ, ಅಂಥವನು ತನ್ನ ಪಾಲಿಗೆ ದೇವರ ಪುತ್ರನನ್ನು ಪುನಃ ಶಿಲುಬೆಗೆ ಏರಿಸಿ ಅವರನ್ನು ಬಹಿರಂಗವಾಗಿ ಅವಮಾನಗೊಳಿಸುವವನಾಗುತ್ತಾನೆ.೭. ಭೂಮಿಯು ಕಾಲಾನುಕಾಲಕ್ಕೆ ತನ್ನ ಮೇಲೆ ಬೀಳುವ ಮಳೆಯ ನೀರನ್ನು ಹೀರಿಕೊಂಡು ವ್ಯವಸಾಯಗಾರನಿಗೆ ಅನುಕೂಲವಾದ ಬೆಳೆಯನ್ನು ಕೊಟ್ಟರೆ ದೇವರ ಆಶೀರ್ವಾದವನ್ನು ಪಡೆಯುತ್ತದೆ.೮. ಆದರೆ, ಅದು ಮುಳ್ಳುಗಿಡಗಳನ್ನೂ ಕಳೆಗಳನ್ನೂ ಬೆಳೆಸಿದರೆ ಅಪ್ರಯೋಜಕವೆನಿಸಿಕೊಂಡು ಶಾಪಕ್ಕೆ ಗುರಿಯಾಗುತ್ತದೆ; ಕೊನೆಗದು ಬೆಂಕಿಗೆ ತುತ್ತಾಗುತ್ತದೆ.೯. ಪ್ರಿಯರೇ, ನಾವು ಈ ರೀತಿ ಹೇಳಿದೆವಾದರೂ ನಿಮ್ಮ ಪರಿಸ್ಥಿತಿ ಉತ್ತಮವಾಗಿದೆ ಮತ್ತು ನೀವು ಜೀವೋದ್ಧಾರದ ಮಾರ್ಗದಲ್ಲಿ ಇದ್ದೀರಿ ಎಂಬ ದೃಢವಾದ ನಂಬಿಕೆ ನನಗಿದೆ.೧೦. ನೀವು ದೇವಜನರಿಗೆ ಉಪಚಾರಮಾಡಿದ್ದೀರಿ, ಮಾಡುತ್ತಲೂ ಇದ್ದೀರಿ. ದೇವರ ಹೆಸರಿನಲ್ಲಿ ನೀವು ಮಾಡಿದ ಪ್ರೀತಿಪೂರ್ವಕವಾದ ಸೇವೆಯನ್ನು ದೇವರು ಮರೆಯುವಂತಿಲ್ಲ, ಅವರು ಅನ್ಯಾಯ ಮಾಡುವವರೇನೂ ಅಲ್ಲ.೧೧. ನೀವು ಹೊಂದಿರುವ ನಿರೀಕ್ಷೆ ಪೂರ್ಣವಾಗಿ ಕೈಗೂಡುವಂತೆ ನಿಮ್ಮಲ್ಲಿ ಪ್ರತಿಯೊಬ್ಬನೂ ಮೊದಲಿನ ಆಸಕ್ತಿಯನ್ನು ಕಡೆಯತನಕವೂ ತೋರಿಸಬೇಕೆಂದು ಹಾರೈಸುತ್ತೇನೆ.೧೨. ನೀವು ಆಲಸಿಗಳಾಗಿರಬಾರದು; ವಿಶ್ವಾಸದಿಂದಲೂ ಬಹು ತಾಳ್ಮೆಯಿಂದಲೂ ದೈವ ವಾಗ್ದಾನಗಳನ್ನು ಬಾಧ್ಯವಾಗಿಸಿಕೊಂಡವರನ್ನು ಅನುಸರಿಸಬೇಕು.೧೩. ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದಾಗ ತಮ್ಮ ಮಾತನ್ನು ಈಡೇರಿಸುವುದಾಗಿ ಶಪಥಮಾಡಿದರು. ತಮಗಿಂತಲೂ ಮೇಲಾದವರಾರೂ ಇಲ್ಲವಾದ ಕಾರಣ ತಮ್ಮ ಸ್ವಂತ ಹೆಸರಿನಲ್ಲೇ ಶಪಥಮಾಡಿದರು.೧೪. “ಖಂಡಿತವಾಗಿಯೂ ನಾನು ನಿನ್ನನ್ನು ಆಶೀರ್ವದಿಸುವೆನು; ನಿನ್ನ ಸಂತಾನವನ್ನು ಹೆಚ್ಚಿಸಿಯೇ ತೀರುವೆನು,” ಎಂದರು.೧೫. ಅಂತೆಯೇ, ಅಬ್ರಹಾಮನು ದೀರ್ಘಕಾಲ ಕಾದಿದ್ದು ದೇವರ ವಾಗ್ದಾನದ ಫಲವನ್ನು ಪಡೆದನು.೧೬. ಮನುಷ್ಯರು ತಮಗಿಂತಲೂ ಹೆಚ್ಚಿನವರ ಮೇಲೆ ಆಣೆಯಿಡುವುದು ವಾಡಿಕೆ. ಹೀಗೆ ಆಣೆಯಿಟ್ಟು ಪ್ರಮಾಣಮಾಡಿದರೆ ಎಲ್ಲ ವಿವಾದಗಳು ಕೊನೆಗೊಳ್ಳುತ್ತವೆ.೧೭. ಹಾಗೆಯೇ, ದೇವರು ತಮ್ಮ ವಾಗ್ದಾನವನ್ನು ಬಾಧ್ಯವಾಗಿ ಪಡೆಯುವವರಿಗೆ ತಮ್ಮ ಸಂಕಲ್ಪ ಅಚಲವಾದುದು ಎಂಬುದನ್ನು ಸ್ಪಷ್ಟಪಡಿಸಲು, ಶಪಥಮಾಡಿ ಸ್ಥಿರಪಡಿಸಿದರು.೧೮. ದೇವರ ವಾಗ್ದಾನ ಮತ್ತು ಶಪಥ ಇವೆರಡೂ ಅಚಲವಾದ ಆಧಾರಗಳು. ಇವುಗಳ ವಿಷಯವಾಗಿ ದೇವರು ನಮಗೆ ಮೋಸಮಾಡುವವರೇ ಅಲ್ಲ. ಇದರಿಂದಾಗಿ, ದೇವರ ಆಶ್ರಯಕ್ಕಾಗಿ ಧಾವಿಸಿಬಂದಿರುವ ನಾವು, ನಮ್ಮ ಮುಂದಿರಿಸಿರುವ ನಂಬಿಕೆ ನಿರೀಕ್ಷೆಯಲ್ಲಿ ಸ್ಥಿರವಾಗಿ ನಿಲ್ಲಲು ಬಲವಾದ ಪ್ರೋತ್ಸಾಹ ದೊರೆತಂತಾಯಿತು.೧೯. ಈ ನಂಬಿಕೆ, ನಿರೀಕ್ಷೆ, ನಮ್ಮ ಬಾಳನೌಕೆಯ ಸ್ಥಿರವಾದ ಹಾಗೂ ಸುರಕ್ಷಿತವಾದ ಲಂಗರಿನಂತಿದೆ. ಇದು ತೆರೆಯ ಹಿಂದಿರುವ ಸ್ವರ್ಗೀಯ ಗರ್ಭಗುಡಿಯನ್ನು ಪ್ರವೇಶಿಸುವಂಥದ್ದು.೨೦. ಸದಾಕಾಲವೂ ಮೆಲ್ಕಿಸದೇಕನ ಪರಂಪರೆಗೆ ಸೇರಿದ ಪ್ರಧಾನಯಾಜಕರಾದ ಯೇಸು ನಮ್ಮ ಮುಂದಾಳಾಗಿ ಹೋಗಿ ಆ ಗರ್ಭಗುಡಿಯನ್ನು ಪ್ರವೇಶಿಸಿದ್ದಾರೆ. Kannada Bible (KNCL) 2016 No Data