ಬೈಬಲ್ ಒಂದು ವರ್ಷದಲ್ಲಿ ನವೆಂಬರ್ ೧೨ಯೆಜೆಕಿಯೇಲನ ೧೫:೧-೮೧. ಸರ್ವೇಶ್ವರ ನನಗೆ ಅನುಗ್ರಹಿಸಿದ ವಾಣಿ ಇದು:೨. “ನರಪುತ್ರನೇ, ವನವೃಕ್ಷಗಳಲ್ಲಿ ದ್ರಾಕ್ಷಾವೃಕ್ಷದ ವಿಶಿಷ್ಟತೆಯೇನು? ಕಾಡುಗಿಡಗಳ ಕಟ್ಟಿಗೆಗಿಂತ ದ್ರಾಕ್ಷಿಯ ಕಟ್ಟಿಗೆಯಲಿ ಹೆಚ್ಚಾದುದೇನು?೩. ದ್ರಾಕ್ಷಿಯ ಕಟ್ಟಿಗೆಯನ್ನು ಬಳಸಿ ಮಾಡುತ್ತಾರೆಯೆ ಏನನ್ನಾದರು? ಸಾಮಗ್ರಿಗಳನ್ನು ತಗಲಿಹಾಕಲು ಅದರಿಂದ ಮಾಡುತ್ತಾರೆಯೇ ಗೂಟವನ್ನಾದರು?೪. ಇಲ್ಲ, ಬೆಂಕಿಗೆ ಹಾಕುತ್ತಾರೆ. ಸೌದೆಯಾಗಿ, ಅದನ್ನು ಬೆಂಕಿ ಸುಟ್ಟುಬಿಡುತ್ತದೆ. ಅದರ ಎರಡು ಕೊನೆಗಳೂ ಇದ್ದಲಾಗುತ್ತವೆ. ಅದರ ಮಧ್ಯಭಾಗವು ಬಾರದು ಯಾವ ತರದ ಬಳಕೆಗು.೫. ಇದ್ದ ಹಾಗೆಯೆ ಇದ್ದಾಗ ಅದು ಬಾರಲಿಲ್ಲ ಯಾವ ಕೆಲಸಕ್ಕು. ಬೆಂಕಿಯಲ್ಲಿ ಸುಟ್ಟು ಇದ್ದಲಾದಾಗ ಯಾವುದಕ್ಕೆ ಬಂದೀತು?”೬. ಇಂತಿರಲು ಸರ್ವೇಶ್ವರನಾದ ದೇವರು ಹೇಳುವುದಿದು: “ವನವೃಕ್ಷಗಳಲ್ಲಿ ದ್ರಾಕ್ಷಾವೃಕ್ಷವನ್ನೆ ಅಗ್ನಿಗೆ ನಾನು ಸೌದೆಯನ್ನಾಗಿಸಿರುವಂತೆ ಕೊಟ್ಟಿರುವೆನು ಜೆರುಸಲೇಮನ್ನು ವಿನಾಶಕ್ಕೆ.೭. ನಾನವರ ಮೇಲಿಡುವೆನು ಕೋಪ ದೃಷ್ಟಿಯನ್ನು; ಬೆಂಕಿಯಿಂದ ತಪ್ಪಿಸಿಕೊಂಡರೂ ನುಂಗಿಬಿಡುವುದು ಅದು ಅವರನ್ನು. ನಾನವರ ಮೇಲೆ ಕೋಪ ದೃಷ್ಟಿಯನ್ನಿಟ್ಟಾಗ ನಾನೇ ಸರ್ವೇಶ್ವರನೆಂದು ನಿಮಗೆ ಮನದಟ್ಟಾಗುವುದು.೮. ಅವರು ದ್ರೋಹ ಮಾಡಿದ್ದರಿಂದ ನಾಡು ಕಾಡಾಗುವುದು ನನ್ನಿಂದ.” ಇದು ಸರ್ವೇಶ್ವರನಾದ ದೇವರ ನುಡಿ.ಯೆಜೆಕಿಯೇಲನ ೧೬:೧-೬೩೧. ಆಮೇಲೆ ಸರ್ವೇಶ್ವರ ನನಗೆ ದಯಪಾಲಿಸಿದ ವಾಣಿ -೨. “ನರಪುತ್ರನೇ, ನೀನು ಜೆರುಸಲೇಮಿಗೆ ಅದರ ಅಸಹ್ಯಕಾರ್ಯಗಳನ್ನು ತಿಳಿಯಪಡಿಸಿ ಹೀಗೆ ನುಡಿ -೩. ಸರ್ವೇಶ್ವರ ದೇವರು ಜೆರುಸಲೇಮೆಂಬಾಕೆಗೆ ಈ ಮಾತನ್ನು ಹೇಳಿ ಕಳುಹಿಸಿದ್ದಾರೆ: “ನೀನು ಹುಟ್ಟಿದ್ದು ಕಾನಾನ್ ದೇಶದಲ್ಲಿ, ಅದೇ ನಿನ್ನ ಜನ್ಮಭೂಮಿ. ನಿನ್ನ ತಂದೆ ಅಮೋರಿಯನು, ನಿನ್ನ ತಾಯಿ ಹಿತ್ತಿಯಳು.೪. ನಿನ್ನ ಜನನವನ್ನು ಕುರಿತು ಏನು ಹೇಳಲಿ! ನೀನು ಹುಟ್ಟಿದ ದಿನದಂದು ಯಾರೂ ನಿನ್ನ ಹೊಕ್ಕಳು ಕೊಯ್ದು ಕಟ್ಟಲಿಲ್ಲ. ನಿನ್ನನ್ನು ನೀರಿನಿಂದ ತೊಳೆದು ಶುಚಿಮಾಡಲಿಲ್ಲ, ನಿನಗೆ ಉಪ್ಪನ್ನು ಸ್ವಲ್ಪವು ಸವರಲಿಲ್ಲ, ನಿನ್ನನ್ನು ಬಟ್ಟೆಯಲ್ಲಿ ಸುತ್ತಲೇ ಇಲ್ಲ.೫. ನಿನ್ನನ್ನು ಕಟಾಕ್ಷಿಸಿ, ಕರುಣಿಸಿ ಯಾರೂ ನಿನಗೆ ಇಂಥಾ ಸಹಾಯ ಮಾಡಲಿಲ್ಲ; ನಿನ್ನ ಜನನ ದಿವಸದಲ್ಲಿ ನೀನು ಹೇಸಿಗೆಯಾಗಿದ್ದೆ, ನಿನ್ನನ್ನು ಬಯಲಿನಲ್ಲಿ ಬಿಸಾಡಿಬಿಟ್ಟರು.೬. “ನಾನು ಹಾದುಹೋಗುತ್ತಾ, ನಿನ್ನ ರಕ್ತದಲ್ಲೇ ಹೊರಳಾಡುತ್ತಿದ್ದ ನಿನ್ನನ್ನು ನೋಡಿ, ‘ನೀನು ರಕ್ತದಿಂದ ಅಶುದ್ಧವಾಗಿದ್ದರೂ ಬದುಕು’ ಎಂದು ಹೇಳಿದೆ; ಹೌದು, ‘ನೀನು ರಕ್ತದಿಂದ ಅಶುದ್ಧವಾಗಿದ್ದರೂ ಬದುಕು’ ಎಂದು ಹೇಳಿ ಬದುಕಿಸಿದೆ.೭. ಭೂಮಿಯಲ್ಲಿ ಮೊಳಕೆಯನ್ನೋ ಎಂಬಂತೆ ನಾನು ನಿನ್ನನ್ನು ಬೆಳೆಯಿಸಿದೆ; ನೀನು ಬಲಿತು ಪ್ರಾಯ ತುಂಬಿ ಅತಿ ಸುಂದರಿಯಾದೆ; ನಿನಗೆ ಸ್ತನಗಳು ಮೂಡಿದವು. ನಿನ್ನ ಕೂದಲು ಉದ್ದವಾಯಿತು; ಆದರೆ ನೀನು ಬಟ್ಟೆಯಿಲ್ಲದೆ ಬೆತ್ತಲೆಯಾಗಿದ್ದೆ.೮. “ನಾನು ಪುನಃ ಹಾದುಹೋಗುತ್ತಾ ನಿನ್ನನ್ನು ನೋಡಲು ಇಗೋ, ನೀನು ಮದುವೆಗೆ ಸಿದ್ಧಳಾಗಿದ್ದೆ; ಆಗ ನಾನು ನನ್ನ ಹೊದಿಕೆಯ ಸೆರಗನ್ನು ನಿನಗೆ ಹೊದಿಸಿ, ನಿನ್ನ ಮಾನವನ್ನು ಕಾಪಾಡಿದೆ; ಇದಲ್ಲದೆ ನಾನು ನಿನಗೆ ಮಾತುಕೊಟ್ಟು ಒಡಂಬಡಿಕೆ ಮಾಡಿಕೊಂಡೆ. ಆದ್ದರಿಂದ ನೀನು ನನ್ನವಳಾದೆ; ಇದು ಸರ್ವೇಶ್ವರನಾದ ದೇವರ ನುಡಿ.೯. “ಆಗ ನಾನು ನೀರಿನಲ್ಲಿ ನಿನಗೆ ಸ್ನಾನ ಮಾಡಿಸಿ, ನಿನ್ನ ಮೇಲಿನ ರಕ್ತವನ್ನು ತೊಳೆದುಬಿಟ್ಟು, ನಿನಗೆ ತೈಲವನ್ನು ಹಚ್ಚಿದೆ.೧೦. ಇದಲ್ಲದೆ ಕಸೂತಿಯ ಬಟ್ಟೆಯನ್ನು ನಿನಗೆ ತೊಡಿಸಿ, ಕಡಲು ಹಂದಿಯ ತೊಗಲಿನ ಕೆರಗಳನ್ನು ನಿನ್ನ ಕಾಲಿಗೆ ಮೆಟ್ಟಿಸಿ, ನಯವಾದ ನಾರುಮಡಿಯನ್ನು ನಿನಗೆ ಉಡಿಸಿ, ರೇಷ್ಮೆಯ ಹೊದಿಕೆಯನ್ನು ನಿನಗೆ ಹೊದಿಸಿದೆ.೧೧. ಮತ್ತು ನಾನು ನಿನ್ನ ಕೈಗಳಿಗೆ ಬಳೆಗಳನ್ನು,೧೨. ಕೊರಳಿಗೆ ಮಾಲೆಯನ್ನು, ಮೂಗಿಗೆ ಮೂಗುತಿಯನ್ನು, ಶಿರಸ್ಸಿಗೆ ಸುಂದರ ಕಿರೀಟವನ್ನು ಇಟ್ಟು, ನಿನ್ನನ್ನು ಆಭರಣಗಳಿಂದ ಸಿಂಗರಿಸಿದೆ.೧೩. ನಿನ್ನ ಒಡವೆಗಳು ಬೆಳ್ಳಿಬಂಗಾರದವು; ನಿನ್ನ ಉಡುಪು ನಯವಾದ ನಾರುಮಡಿ, ರೇಷ್ಮೆಯ ಹೊದಿಕೆ, ಕಸೂತಿಯ ವಸ್ತ್ರ; ನಿನ್ನ ಆಹಾರವು ಗೋದಿಹಿಟ್ಟು, ಜೇನುತುಪ್ಪ ಮತ್ತು ಎಣ್ಣೆ; ನಿನ್ನ ಲಾವಣ್ಯವು ಅತಿ ಮನೋಹರ; ನೀನು ಹೀಗೆ ವೃದ್ಧಿಗೊಂಡು ರಾಣಿಯಾದೆ.೧೪. ನಾನು ನಿನಗೆ ಅನುಗ್ರಹಿಸಿದ ನಿನ್ನ ವೈಭವದಿಂದ ನಿನ್ನ ಸೌಂದರ್ಯ ಪರಿಪೂರ್ಣವಾಯಿತು; ನಿನ್ನ ಚೆಲುವು ಜನಾಂಗಗಳಲ್ಲಿ ಪ್ರಸಿದ್ಧವಾಯಿತು; ಇದು ಸರ್ವೇಶ್ವರನಾದ ದೇವರ ನುಡಿ.೧೫. “ಆದರೆ ನೀನು ನಿನ್ನ ಸೌಂದರ್ಯವನ್ನೇ ನೆಚ್ಚಿಕೊಂಡೆ, ‘ನಾನು ಪ್ರಸಿದ್ಧಳಾದೆ’ ಎಂದು ಉಬ್ಬಿಕೊಂಡು ಸೂಳೆತನಮಾಡಿದೆ; ಹಾದುಹೋಗುವ ಪ್ರತಿಯೊಬ್ಬನ ಸಂಗಡ ಮಿತಿಮೀರಿ ಹಾದರಮಾಡಿದೆ. ಒಬ್ಬೊಬ್ಬನಿಗೂ ಒಳಗಾದೆ.೧೬. ನೀನು ಪುಣ್ಯಕ್ಷೇತ್ರಗಳನ್ನು ನಿರ್ಮಿಸಿ, ನಿನ್ನ ನಾನಾ ಶೈಲಿಯ ವಸ್ತ್ರಗಳಿಂದ ಅವುಗಳನ್ನು ಅಲಂಕರಿಸಿ, ಹಿಂದೆಂದೂ ನಡೆಯದಂತಹ, ಮುಂದೆ ಎಂದೂ ನಡೆಯಬಾರದಂತಹ ವ್ಯಭಿಚಾರವನ್ನು ನಡೆಸಿದೆ.೧೭. ನಾನು ನನ್ನ ಬೆಳ್ಳಿಬಂಗಾರದಿಂದ ನಿನಗೆ ಮಾಡಿಸಿಕೊಟ್ಟಿದ್ದ ಅಂದಚೆಂದವಾದ ಆಭರಣಗಳನ್ನು ತೆಗೆದು, ಅವುಗಳಿಂದ ಪುರುಷಮೂರ್ತಿಗಳನ್ನು ರೂಪಿಸಿಕೊಂಡು, ಅವುಗಳೊಡನೆ ಹಾದರ ಮಾಡಿದೆ;೧೮. ನಿನ್ನ ಕಸೂತಿಯ ವಸ್ತ್ರಗಳನ್ನು ತೆಗೆದು ಮೂರ್ತಿಗಳಿಗೆ ಹೊದಿಸಿ, ಅವುಗಳಿಗೆ ನನ್ನ ತೈಲವನ್ನೂ ನನ್ನ ಧೂಪವನ್ನೂ ಅರ್ಪಿಸಿದೆ.೧೯. ನಾನು ನಿನಗೆ ಕೊಟ್ಟ ರೊಟ್ಟಿಯನ್ನೂ ನಿನ್ನ ಆಹಾರಕ್ಕೆ ನಾನು ಒದಗಿಸಿದ ಗೋದಿಹಿಟ್ಟು, ಎಣ್ಣೆ, ಜೇನು, ಇವುಗಳನ್ನೂ, ನೀನು ಆ ಮೂರ್ತಿಗಳ ಮುಂದೆ ಸುಗಂಧಹೋಮ ಮಾಡಿದೆ; ಅಯ್ಯೋ, ನಿನಗೆ ಕೇಡು! ಇದು ಸರ್ವೇಶ್ವರನಾದ ದೇವರ ನುಡಿ.೨೦. “ಇದಲ್ಲದೆ ನೀನು ನನಗೆ ಹೆತ್ತ ಗಂಡು ಹೆಣ್ಣು ಮಕ್ಕಳನ್ನು ಹಿಡಿದು ಮೂರ್ತಿಗಳಿಗೆ ಆಹಾರವಾಗಲೆಂದು ಯಜ್ಞವಾಗಿ ಅರ್ಪಿಸಿದೆ.೨೧. ನಿನ್ನ ಈ ಸೂಳೆತನ ಅಲ್ಪಕಾರ್ಯವೆಂದು ಭಾವಿಸಿದೆಯೋ? ಅದನ್ನು ಮೀರಿಸಬೇಕೆಂದು ನೀನು ನನ್ನ ಮಕ್ಕಳನ್ನು ಹತಿಸಿ ಮೂರ್ತಿಗಳಿಗೆ ಆಹುತಿಯಾಗಿಟ್ಟೆ!೨೨. ಈ ನಿನ್ನ ಅಸಹ್ಯಕಾರ್ಯಗಳನ್ನೂ ಸೂಳೆತನವನ್ನೂ ನೀನು ಪದೇ ಪದೇ ನಡಿಸುತ್ತಿದ್ದಾಗ ನೀನು ಬಟ್ಟೆಯಿಲ್ಲದೆ ಬೆತ್ತಲೆಯಾಗಿ ನಿನ್ನ ರಕ್ತದಲ್ಲಿ ಹೊರಳಾಡುತ್ತಿದ್ದ ನಿನ್ನ ಎಳೆತನವನ್ನು ನೀನು ಜ್ಞಾಪಕಕ್ಕೆ ತಂದುಕೊಳ್ಳಲಿಲ್ಲ.೨೩. ಅಯ್ಯೋ, ನಿನಗೆ ಧಿಕ್ಕಾರ! ಇದು ಸರ್ವೇಶ್ವರನಾದ ದೇವರ ನುಡಿ.೨೪. “ನೀನು ಈ ದುಷ್ಕೃತ್ಯಗಳನ್ನೆಲ್ಲಾ ನಡೆಸಿದ್ದಲ್ಲದೆ ಪ್ರತಿಯೊಂದು ಚೌಕದಲ್ಲಿ ಮಂಟಪವನ್ನು ಮಾಡಿ ಜಗಲಿಯನ್ನು ಕಟ್ಟಿಕೊಂಡಿರುವೆ.೨೫. ಒಂದೊಂದು ಬೀದಿಯ ಕೊನೆಯಲ್ಲಿ ನೀನು ಜಗಲಿಯನ್ನು ಕಟ್ಟಿಕೊಂಡು, ನಿನ್ನ ಸೌಂದರ್ಯವನ್ನು ನೀಚಕೆಲಸಕ್ಕೆ ಒಪ್ಪಿಸಿ, ಹಾದುಹೋಗುವವರೆಲ್ಲರನ್ನೂ ಸೇರಿ ಸೂಳೆತನವನ್ನು ಅಧಿಕಗೊಳಿಸಿರುವೆ.೨೬. ನಿನ್ನ ನೆರೆಯವರೂ ಅತಿಕಾಮಿಗಳೂ ಆದ ಈಜಿಪ್ಟರೊಂದಿಗೆ ಸಹ ನೀನು ಕಲೆತು ಹೆಚ್ಚಾಗಿ ಹಾದರಮಾಡಿ ನನ್ನನ್ನು ಕೆರಳಿಸಿರುವೆ.೨೭. “ಆದಕಾರಣ ನಾನು ನಿನ್ನ ಮೇಲೆ ಕೈಯೆತ್ತಿ ನಿನ್ನ ಆಹಾರವನ್ನು ಕಡಿಮೆಮಾಡಿದೆ; ನಿನ್ನನ್ನು ದ್ವೇಷಿಸಿ, ನಿನ್ನ ಕೆಟ್ಟನಡತೆಗೆ ಅಸಹ್ಯಪಡುವ ಪಿಲಿಷ್ಟಿಯ ಕುವರಿಯರ ಕೈಗೆ ನಿನ್ನನ್ನು ಒಪ್ಪಿಸಿದೆ.೨೮. “ಇಷ್ಟೂ ಸಾಲದೆಂದು ನೀನು ಅಸ್ಸೀರಿಯರೊಂದಿಗೂ ಹಾದರಮಾಡಿದೆ; ಹೌದು, ಅವರೊಡನೆ ಹಾದರಮಾಡಿದರೂ ನಿನಗೆ ತೃಪ್ತಿಯಾಗಲಿಲ್ಲ.೨೯. ಇದಲ್ಲದೆ ನೀನು ವ್ಯಾಪಾರಸ್ಥರಾದ ಬಾಬಿಲೋನಿಯದವರೊಡನೆ ಸೇರಿ ಅಲ್ಲಿಯೂ ಬಹಳ ಸೂಳೆತನಮಾಡಿದೆ; ಆಗಲೂ ನಿನಗೆ ತೃಪ್ತಿಯಾಗಲಿಲ್ಲ.”೩೦. ಸರ್ವಶಕ್ತ ದೇವರು ಇಂತೆನ್ನುತ್ತಾರೆ: “ನಿನ್ನ ಮನಸ್ಸು ಮೋಹಪಾಶಕ್ಕೆ ಸಿಕ್ಕಿ ಎಷ್ಟೋ ಸೋತಿದೆ! ಇಷ್ಟೆಲ್ಲಾ ದುಷ್ಕೃತ್ಯಗಳನ್ನು ನಡೆಸಿ ಕಟ್ಟಿಲ್ಲದ ಜಾರಿಣಿಯಾಗಿರುವೆ.೩೧. ಒಂದೊಂದು ಬೀದಿಯ ಕೊನೆಯಲ್ಲೂ ನೀನು ಮಂಟಪವನ್ನು ಕಟ್ಟಿ ಎಲ್ಲಾ ಚೌಕಗಳಲ್ಲಿ ಜಗಲಿಯನ್ನು ಸ್ಥಾಪಿಸಿಕೊಂಡಿರುವೆ; ದೊರೆತದ್ದನ್ನು ಇದು ಕಡಿಮೆಯೆಂದು ತಿರಸ್ಕರಿಸುವ ಸೂಳೆಯಂತೆ ನೀನು ನಡೆಯುವವಳಲ್ಲ.೩೨. ನೀನು ಸೂಳೆತನಮಾಡುವ ಪತಿವ್ರತೆ; ಗಂಡನಿಗೆ ಬದಲಾಗಿ ಅನ್ಯರನ್ನು ಸೇರುವ ಜಾರಿಣಿ!೩೩. ಸಾಮಾನ್ಯವಾಗಿ ಸೂಳೆಯರಿಗೆ ಹಣ ಕೊಡುವುದುಂಟು; ನೀನಾದರೋ ನಿನ್ನ ಎಲ್ಲಾ ಮಿಂಡರಿಗೆ ನೀನೇ ಹಣ ನೀಡುತ್ತಿರುವೆ. ಅವರು ಎಲ್ಲ ಕಡೆಯಿಂದಲೂ ಬಂದು ನಿನ್ನಲ್ಲಿ ವ್ಯಭಿಚಾರಮಾಡುವಂತೆ ಅವರಿಗೆ ಬಹುಮಾನ ಕೊಡುತ್ತಿರುವೆ.೩೪. ನಿನ್ನ ಸೂಳೆತನಕ್ಕೂ ಇತರ ವೇಶ್ಯೆಯರ ಸೂಳೆತನಕ್ಕೂ ವ್ಯತ್ಯಾಸವುಂಟು; ನಿನ್ನಲ್ಲಿ ವ್ಯಭಿಚಾರಮಾಡಲಿಕ್ಕೆ ಯಾರೂ ನಿನ್ನ ಹಿಂದೆ ಬಾರರು; ನೀನೇ ಕೊಡುತ್ತೀಯೇ ಹೊರತು ನಿನಗೇನೂ ಸಿಕ್ಕದು; ನಿನ್ನ ದುರಾಚಾರ ಹೇಳತೀರದು!”೩೫. ಹೀಗಿರಲು ಎಲೌ ಜಾರಿಣಿಯೇ, ಸರ್ವೇಶ್ವರನ ಈ ವಾಕ್ಯವನ್ನು ಕೇಳು: ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ:೩೬. “ಆಹಾ, ಮಿತಿಮೀರಿದ ನಿನ್ನ ಕಾಮಾತುರ! ನಿನ್ನಲ್ಲಿ ವ್ಯಭಿಚಾರಮಾಡಿದ ನಿನ್ನ ಮಿಂಡರ ಮೂಲಕ ನಿನಗಾದ ಮಾನಭಂಗ, ನಿನ್ನ ಎಲ್ಲ ಅಸಹ್ಯವಿಗ್ರಹಗಳು, ನೀನು ಅವುಗಳಿಗೆ ಅರ್ಪಿಸಿದ ನಿನ್ನ ಮಕ್ಕಳ ರಕ್ತ,೩೭. ಇವುಗಳನ್ನು ನಾನು ನೋಡಿ, ನೀನು ರಮಿಸಿದ ನಿನ್ನ ಎಲ್ಲ ಮಿಂಡರನ್ನೂ, ನೀನು ಮೋಹಿಸಿದ ಸಮಸ್ತ ಜಾರರನ್ನೂ, ನೀನು ಹಗೆಮಾಡಿದ ಎಲ್ಲರನ್ನೂ, ಸುತ್ತುಮುತ್ತಲು ನಿನಗೆ ವಿರುದ್ಧ ಒಟ್ಟುಗೂಡಿಸಿ, ಅವರ ಕಣ್ಣೆದುರಿಗೆ ನಿನ್ನನ್ನು ಬೆತ್ತಲೆಗೈದು ನಿನ್ನ ಮಾನವನ್ನು ಬಟ್ಟಬಯಲು ಮಾಡುವೆನು.೩೮. ವ್ಯಭಿಚಾರಮಾಡುವಂಥ, ರಕ್ತ ಹರಿಸುವಂಥ ಹೆಂಗಸರಿಗೆ ವಿಧಿಸತಕ್ಕ ದಂಡನೆಗಳನ್ನು ನಾನು ನಿನಗೆ ವಿಧಿಸಿ ನನ್ನ ಕೋಪೋದ್ರೇಕವನ್ನೂ ರೋಷಾವೇಶವನ್ನೂ ರಕ್ತದಂತೆ ನಿನ್ನ ಮೇಲೆ ಸುರಿಸುವೆನು.೩೯. ನಾನು ನಿನ್ನನ್ನು ಸುತ್ತಲಿನವರ ಕೈವಶಮಾಡುವೆನು; ಅವರು ನಿನ್ನ ಮಂಟಪವನ್ನು ಕೆಡವಿ, ನಿನ್ನ ಜಗಲಿಗಳನ್ನು ಒಡೆದು, ನಿನ್ನ ಬಟ್ಟೆಗಳನ್ನು ಕಿತ್ತು, ನಿನ್ನ ಒಡವೆಗಳನ್ನು ಸುಲಿದುಕೊಂಡು, ನಿನ್ನನ್ನು ಬಟ್ಟಬರಿದಾಗಿ ಬಿಟ್ಟುಹೋಗುವರು.೪೦. “ಅವರು ನಿನ್ನ ವಿಷಯದಲ್ಲಿ ನ್ಯಾಯಸಭೆಯನ್ನು ಕೂಡಿಸಿ, ನಿನ್ನನ್ನು ಕಲ್ಲೆಸೆದು ಕೊಲ್ಲುವರು; ಕತ್ತಿಗಳಿಂದ ತುಂಡರಿಸುವರು.೪೧. ನಿನ್ನ ಮನೆಗಳನ್ನು ಬೆಂಕಿಯಿಂದ ಸುಡುವರು; ಬಹುಮಂದಿ ಹೆಂಗಸರ ಕಣ್ಣೆದುರಿನಲ್ಲಿ ನಿನ್ನನ್ನು ದಂಡಿಸುವರು; ನೀನು ನಿನ್ನ ಸೂಳೆತನವನ್ನು ನಿಲ್ಲಿಸಿಬಿಡುವಂತೆ ಮಾಡುವೆನು; ನೀನು ನಿನ್ನ ಮಿಂಡರಿಗೆ ಇನ್ನು ಬಹುಮಾನ ತರದಂತೆಮಾಡುವೆನು.೪೨. ಹೀಗೆ ನಾನು ನಿನ್ನ ಮೇಲಣ ಸಿಟ್ಟನ್ನು ತೀರಿಸುವೆನು. ಆಗ ನನ್ನ ರೋಷವು ನಿನ್ನಿಂದ ದೂರವಾಗುವುದು; ನಾನು ಶಾಂತನಾಗಿ ಇನ್ನು ಮೇಲೆ ಕೋಪಗೊಳ್ಳೆನು.೪೩. ನೀನು ನಿನ್ನ ಯೌವನಕಾಲವನ್ನು ನೆನೆಸಿಕೊಳ್ಳದೆ, ಈ ದುಷ್ಕೃತ್ಯಗಳನ್ನೆಲ್ಲಾ ನಡೆಸಿ, ನನ್ನನ್ನು ರೇಗಿಸಿದ್ದರಿಂದ ಇಗೋ, ನಾನು ನಿನ್ನ ದುರ್ಮಾರ್ಗದ ಫಲವನ್ನು ನಿನ್ನ ತಲೆಗೆ ಕಟ್ಟುವೆನು; ನೀನು ಲೆಕ್ಕವಿಲ್ಲದ ದುರಾಚಾರಗಳನ್ನು ನಡೆಸಿದ್ದಲ್ಲದೆ ಈ ಅಸಹ್ಯಕಾರ್ಯವನ್ನೂ ಮಾಡಿರುವೆ. ಇದು ಸರ್ವೇಶ್ವರನಾದ ದೇವರ ನುಡಿ.೪೪. “ಗಾದೆಗಳಲ್ಲಿ ಜಾಣರು ‘ತಾಯಿಯಂತೆ ಮಗಳು’ ಎಂಬ ಗಾದೆಯನ್ನು ನಿನ್ನ ಬಗ್ಗೆ ಖಂಡಿತವಾಗಿ ನುಡಿಯುವರು.೪೫. ಗಂಡನನ್ನೂ ಮಕ್ಕಳನ್ನೂ ಅಸಹ್ಯವಾಗಿ ಕಂಡ ನಿನ್ನ ತಾಯಿಗೆ ನೀನು ತಕ್ಕ ಮಗಳು; ಗಂಡನನ್ನೂ ಮಕ್ಕಳನ್ನೂ ಬೇಸರ ಪಡಿಸಿದ ನಿನ್ನ ಅಕ್ಕಂದಿರಿಗೆ ನೀನು ತಕ್ಕ ತಂಗಿ; ನಿನ್ನ ತಾಯಿ ಹಿತ್ತಿಯಳು, ನಿನ್ನ ತಂದೆ ಅಮೋರಿಯನು.೪೬. “ನಿನ್ನ ಉತ್ತರಕ್ಕೆ ತನ್ನ ಕುವರಿಯರೊಂದಿಗೆ ವಾಸಿಸುವ ಸಮಾರಿಯ, ನಿನ್ನ ಅಕ್ಕ; ನಿನ್ನ ದಕ್ಷಿಣ ಕಡೆಯಲ್ಲಿ ಕುವರಿಯರೊಂದಿಗೆ ವಾಸಿಸುವ ಸೊದೋಮ್, ನಿನ್ನ ತಂಗಿ.೪೭. “ಆದರೆ ನೀನು ನಡೆದ ದುರ್ಮಾರ್ಗ ಅವರು ನಡೆದಂಥದಲ್ಲ. ನಿನ್ನ ಅಸಹ್ಯಕಾರ್ಯಗಳು ಅವರು ನಡೆಸಿದಂಥವುಗಳಲ್ಲ. ಅವರ ದುರ್ನಡತೆ ಅತ್ಯಲ್ಪವೆಂದು ಸರ್ವದಾ ಅವರಿಗಿಂತ ಬಹುಕೆಟ್ಟವಳಾಗಿ ನಡೆದುಕೊಂಡೆ.೪೮. ಸರ್ವೇಶ್ವರ ದೇವರು ಇಂತೆನ್ನುತ್ತಾರೆ - ನನ್ನ ಜೀವದಾಣೆ, ನೀನೂ ನಿನ್ನ ಕುವರಿಯರೂ ನಡೆದಂತೆ ಸೊದೋಮೆಂಬ ನಿನ್ನ ತಂಗಿಯಾಗಲಿ ಆಕೆಯ ಕುವರಿಯರಾಗಲಿ ನಡೆಯಲಿಲ್ಲ.೪೯. ಸೊದೋಮೆಂಬ ನಿನ್ನ ತಂಗಿಯ ದೋಷವನ್ನು ನೋಡು; ಗರ್ವಪಡುವುದು, ಹೊಟ್ಟೆ ತುಂಬಿಸಿಕೊಳ್ಳುವುದು, ಸ್ವಸುಖದಲ್ಲಿ ಮುಳುಗಿರುವುದು, ಇವು ಆಕೆಯಲ್ಲಿಯೂ ಆಕೆಯ ಕುವರಿಯರಲ್ಲೂ ಇದ್ದವು. ಅಲ್ಲದೆ ಅವರು ದೀನದಲಿತರಿಗೆ ಬೆಂಬಲವಾಗಿರಲಿಲ್ಲ.೫೦. ಅವರು ಸೊಕ್ಕೇರಿ ನನ್ನ ಕಣ್ಣೆದುರಿಗೆ ಅಸಹ್ಯಾಚಾರಗಳನ್ನು ನಡೆಸಿದರು; ನಾನು ಅದನ್ನು ನೋಡಿ ಅವರನ್ನು ನಿರ್ಮೂಲಮಾಡಿದೆ.೫೧. “ಸಮಾರಿಯ ಎಂಬಾಕೆ ಕೂಡ ನೀನು ಮಾಡಿದ ಪಾಪಗಳಲ್ಲಿ ಅರ್ಧವನ್ನೂ ಮಾಡಲಿಲ್ಲ. ನೀನು ನಿನ್ನ ಅಕ್ಕತಂಗಿಯರಿಗಿಂತಲೂ ಅತ್ಯಧಿಕ ಅಸಹ್ಯಕಾರ್ಯಗಳನ್ನು ನಡೆಸಿರುವೆ; ನೀನು ಮಾಡಿದ ಲೆಕ್ಕವಿಲ್ಲದ ದುರಾಚಾರಗಳಿಂದ ಅವರನ್ನು ನಿರ್ದೋಷಿಗಳೆಂದು ತೋರ್ಪಡಿಸಿರುವೆ.೫೨. ನಿನ್ನ ದೋಷಗಳೇ ನಿನ್ನ ಅಕ್ಕತಂಗಿಯರ ಪರವಾಗಿ ನಿಂತದ್ದರಿಂದ ನೀನು ನಾಚಿಕೆಪಡಬೇಕು; ಅವರಿಗಿಂತ ಅಧಿಕವಾಗಿ ನೀನು ಅಸಹ್ಯ ಪಾಪಗಳನ್ನು ಮಾಡಿರುವುದರಿಂದ ಅವರು ನಿನಗಿಂತ ಉತ್ತಮರಾಗಿದ್ದಾರೆ. ಹೌದು, ನಿನ್ನ ಅಕ್ಕತಂಗಿಯರನ್ನು ನಿರ್ದೋಷಿಗಳೆಂದು ತೋರ್ಪಡಿಸಿದ್ದಕ್ಕಾಗಿ ಲಜ್ಜೆಪಡು, ನಾಚಿಕೆಪಡು.೫೩. “ಸೊದೋಮ್ ಮತ್ತು ಆಕೆಯ ಕುವರಿಯರ ಹಾಗೂ ಸಮಾರಿಯ ಮತ್ತು ಆಕೆಯ ಕುವರಿಯರ ಸೌಭಾಗ್ಯವನ್ನು ಪುನಃ ನೀಡುವೆನು. ಅದರೊಂದಿಗೆ ನಿನ್ನ ಸೌಭಾಗ್ಯವನ್ನೂ ಮರಳಿಸುವೆನು.೫೪. ಹೀಗಿರಲು, ನೀನು ನಿನ್ನ ಲೆಕ್ಕವಿಲ್ಲದ ದುಷ್ಕೃತ್ಯಗಳ ಮೂಲಕ ಅವರನ್ನು ಸಂತೈಸಿದ್ದರಿಂದ ಲಜ್ಜೆಪಡುವೆ, ನಾಚಿಕೆಪಡುವೆ.೫೫. ಆಗ ಸಮಾರಿಯ ಮತ್ತು ಸೊದೋಮ್ ಎಂಬ ನಿನ್ನ ಅಕ್ಕತಂಗಿಯರನ್ನೂ ಅವರ ಕುವರಿಯರನ್ನೂ ನಿನ್ನನ್ನೂ ನಿಮ್ಮ ಪೂರ್ವಸ್ಥಿತಿಗೆ ತರುವೆ.೫೬. ಅರಾಮಿನ ಕುವರಿಯರು ಆಕೆಯ ಸುತ್ತಮುತ್ತಲಿನ ಸಮಸ್ತರು, ನಿನ್ನನ್ನು ಎಲ್ಲೆಲ್ಲೂ ಹೀನೈಸುತ್ತಿರುವ ಫಿಲಿಷ್ಟಿಯದ ಕುವರಿಯರು, ಇವರೆಲ್ಲರ ದೂಷಣೆಗೆ ನೀನು ಗುರಿಯಾಗುವುದಕ್ಕೆ ಮುಂಚೆ, ನಿನ್ನ ಕೆಟ್ಟತನವು ಬೆಳಕಿಗೆ ಬರುವುದಕ್ಕೆ ಮೊದಲು,೫೭. ನೀನು ಗರ್ವಪಡುತ್ತಿದ್ದ ಆ ಕಾಲದಲ್ಲಿ ಸೊದೋಮೆಂಬ ನಿನ್ನ ತಂಗಿಯ ಹೆಸರು ನಿನ್ನ ಬಾಯಲ್ಲಿ ಬರಲೇ ಇಲ್ಲ;೫೮. ಈಗ ನಿನ್ನ ದುರ್ನಡತೆಯ ಮತ್ತು ದುರಾಚಾರಗಳ ಫಲವನ್ನು ಅವಳಂತೆ ಅನುಭವಿಸಬೇಕಾಗಿ ಬಂತು.” ಇದು ಸರ್ವೇಶ್ವರನ ನುಡಿ.೫೯. ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: - “ನೀನು ಒಡಂಬಡಿಕೆಯನ್ನು ಮೀರಿ ನಿನ್ನ ಆಣೆಯನ್ನು ತಿರಸ್ಕರಿಸಿದೆ. ನೀನು ಮಾಡಿದ್ದಕ್ಕೆ ತಕ್ಕದ್ದನ್ನು ನಾನು ನಿನಗೆ ಮಾಡುವೆನು.೬೦. ಆದರೂ ನಾನು ನಿನ್ನ ಯೌವನಕಾಲದಲ್ಲಿ ನಿನ್ನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡು ನಿನ್ನೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡು ದೃಢೀಕರಿಸುವೆನು.೬೧. ಇದಕ್ಕನುಸಾರ ನಾನು ಕುವರಿಯನ್ನೋ ಎಂಬಂತೆ ನಿನಗೆ ದಯಪಾಲಿಸುವ ನಿನ್ನ ಅಕ್ಕಂದಿರೂ ತಂಗಿಯರೂ ನಿನ್ನಲ್ಲಿ ಸೇರಿಕೊಳ್ಳುವರು. ಆಗ ನೀನು ನಿನ್ನ ದುರ್ಮಾರ್ಗಗಳನ್ನು ನೆನಸಿಕೊಂಡು ನಾಚಿಕೆಪಡುವೆ; ಈ ನನ್ನ ದಯೆ ನಿನ್ನ ಹಿಂದಿನ ಒಡಂಬಡಿಕೆಯ ಫಲವಲ್ಲ.೬೨. ನಾನು ಈ ಒಡಂಬಡಿಕೆಯನ್ನು ನಿನ್ನೊಂದಿಗೆ ಮಾಡಿಕೊಳ್ಳುವಾಗ ನಾನೇ ಸರ್ವೇಶ್ವರ ಎಂದು ನಿನಗೆ ಗೊತ್ತಾಗುವುದು.೬೩. ನಾನು ನಿನ್ನ ದುಷ್ಕೃತ್ಯಗಳನ್ನೆಲ್ಲಾ ಕ್ಷಮಿಸಿಬಿಟ್ಟ ಮೇಲೆ, ನೀನು ಅವುಗಳನ್ನು ನೆನಪಿಗೆ ತಂದು ನಾಚಿಕೆಪಟ್ಟು, ನಿನಗಾದ ಅವಮಾನದ ನಿಮಿತ್ತ ಇನ್ನು ಬಾಯಿ ತೆರೆಯದಿರುವೆ.” ಇದು ಸರ್ವೇಶ್ವರನಾದ ದೇವರ ನುಡಿ.ಕೀರ್ತನೆಗಳು ೧೨೩:೧-೪೧. (ಯಾತ್ರಾಗೀತೆ) ಪರಲೋಕದಲಿ ಆಸೀನನಾಗಿರುವ ಪ್ರಭುವೆ I ನನ್ನ ಕಣ್ಣುಗಳನು ನಿನ್ನ ಕಡೆಗೆ ಎತ್ತಿರುವೆ II೨. ದಾಸನ ಕಣ್ಣು ಯಜಮಾನನತ್ತ I ದಾಸಿಯ ಕಣ್ಣು ಯಜಮಾನಿಯತ್ತ II ನನ್ನ ಕಣ್ಣು ಸ್ವಾಮಿದೇವನತ್ತ I ಆತನ ಕಟಾಕ್ಷವನ್ನು ನಿರೀಕ್ಷಿಸುತ್ತಾ II೩. ದಯೆತೋರು ಪ್ರಭು, ನಮಗೆ ದಯೆ ತೋರು I ಅತ್ಯಧಿಕವಾಗಿ ನಾವು ತಿರಸ್ಕೃತರು II೪. ಬೇಸತ್ತಿದೆ ಮನ ಗರ್ವಿಗಳ ನಿಂದೆಯಿಂದ I ಸುಖಭೋಗಿಗಳು ಮಾಡುವ ಅಪಹಾಸ್ಯದಿಂದ IIಜ್ಞಾನೋಕ್ತಿಗಳು ೨೮:೨೦-೨೦೨೦. ಪ್ರಾಮಾಣಿಕನಿಗೆ ಪೂರ್ಣಾಶೀರ್ವಾದ; ಹಣವಂತನಾಗಲು ಹಾತೊರೆಯುವವನು ಶಿಕ್ಷಾರ್ಹ.ಹಿಬ್ರಿಯರಿಗೆ ೮:೧-೧೩೧. ಈಗ ಹೇಳುತ್ತಿರುವುದರ ಮುಖ್ಯಾಂಶ ಏನೆಂದರೆ: ಸ್ವರ್ಗದಲ್ಲಿ ಮಹೋನ್ನತ ದೇವರ ಸಿಂಹಾಸನದ ಬಲಗಡೆಯಲ್ಲಿ ಆಸೀನರಾಗಿರುವಂಥ ಪ್ರಧಾನಯಾಜಕ ನಮಗಿದ್ದಾರೆ.೨. ಅಲ್ಲಿ, ಆ ಪವಿತ್ರಸ್ಥಾನದಲ್ಲಿ ಮನುಷ್ಯರಿಂದಲ್ಲ, ದೇವರಿಂದಲೇ ನಿರ್ಮಿತವಾದ ನಿಜವಾದ ಗರ್ಭಗುಡಿಯಲ್ಲಿ, ಅವರು ಯಾಜಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ.೩. ಪ್ರತಿಯೊಬ್ಬ ಪ್ರಧಾನಯಾಜಕನು ಕಾಣಿಕೆಗಳನ್ನೂ ಬಲಿಗಳನ್ನೂ ಅರ್ಪಿಸುವುದಕ್ಕಾಗಿಯೇ ನೇಮಕಗೊಂಡಿರುತ್ತಾನೆ. ಆದ್ದರಿಂದ ಸಮರ್ಪಿಸುವುದಕ್ಕೆ ನಮ್ಮ ಈ ಪ್ರಧಾನಯಾಜಕರಿಗೂ ಏನಾದರೂ ಇರಲೇಬೇಕು.೪. ಇವರು ಧರೆಯಲ್ಲೇ ಇದ್ದಿದ್ದರೆ ಯಾಜಕರಾಗಿರುತ್ತಿರಲಿಲ್ಲ. ಏಕೆಂದರೆ ಧರ್ಮಶಾಸ್ತ್ರ ವಿಧಿಸುವ ಕಾಣಿಕೆಗಳನ್ನು ಸಮರ್ಪಿಸುವುದಕ್ಕೆ ಬೇರೆ ಯಾಜಕರು ಇದ್ದಾರೆ.೫. ಸ್ವರ್ಗೀಯ ಗರ್ಭಗುಡಿಯ ಚಿಹ್ನೆ ಹಾಗೂ ಛಾಯೆಯಾಗಿರುವ ಆಲಯಗಳಲ್ಲಿ ಇಲ್ಲಿಯ ಯಾಜಕರು ಉಪಾಸನೆ ಮಾಡುತ್ತಾರೆ. ಮೋಶೆ ಗರ್ಭಗುಡಿಯನ್ನು ನಿರ್ಮಿಸಲು ಆರಂಭಿಸಿದಾಗ, ದೇವರು ಆತನಿಗೆ, “ಬೆಟ್ಟದ ಮೇಲೆ ನಾನು ತೋರಿಸಿದ ನಕ್ಷೆಯ ಪ್ರಕಾರವೇ ನೀನು ಎಲ್ಲವನ್ನೂ ನಿರ್ಮಿಸಬೇಕು,” ಎಂದು ಆಜ್ಞೆಯನ್ನಿತ್ತರು.೬. ಯೇಸು, ಆ ಯಾಜಕರ ಸೇವೆಗಿಂತಲೂ ಶ್ರೇಷ್ಠವಾದ ಯಾಜಕಸೇವೆಯನ್ನು ಕೈಗೊಂಡಿದ್ದಾರೆ. ಯೇಸುವನ್ನು ಮಧ್ಯಸ್ಥರನ್ನಾಗಿ ಪಡೆದಿರುವ ಒಡಂಬಡಿಕೆಯು ಅಷ್ಟೇ ಶ್ರೇಷ್ಠವಾದುದು. ಏಕೆಂದರೆ ಅದು, ಹಿಂದಿನ ವಾಗ್ದಾನಗಳಿಗಿಂತಲೂ ಉತ್ತಮವಾದ ವಾಗ್ದಾನಗಳನ್ನು ಆಧರಿಸಿದೆ.೭. ಮೊದಲನೆಯ ಒಡಂಬಡಿಕೆ ದೋಷರಹಿತ ಆಗಿದ್ದಿದ್ದರೆ, ಎರಡನೆಯ ಒಡಂಬಡಿಕೆಯ ಅವಶ್ಯಕತೆಯೇ ಇರುತ್ತಿರಲಿಲ್ಲ.೮. ಆದರೆ ದೇವರು ಆ ಒಡಂಬಡಿಕೆಗೆ ಸೇರಿದ ಜನರನ್ನು ಆರೋಪಿಸುತ್ತಾ ಇಂತೆಂದಿದ್ದಾರೆ: “ಇಗೋ, ನಾನು ಇಸ್ರಯೇಲ್ ವಂಶದವರೊಂದಿಗೂ ಯೆಹೂದ್ಯ ವಂಶದವರೊಂದಿಗೂ ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವ ಕಾಲವು ಬರಲಿದೆ, ಎಂದರು ಸರ್ವೇಶ್ವರ.೯. ಈ ಒಡಂಬಡಿಕೆ, ನಾನು ಪೂರ್ವಜರನ್ನು ಈಜಿಪ್ಟ್ ದೇಶದಿಂದ ಕೈಹಿಡಿದು ಕರೆತಂದಾಗ ಮಾಡಿದ ಒಡಂಬಡಿಕೆಯಂತಲ್ಲ; ಅವರು ನನ್ನ ಒಡಂಬಡಿಕೆಯಲ್ಲಿ ಸ್ಥಿರವಾಗಿ ನಿಲ್ಲಲಿಲ್ಲ; ಎಂದೇ, ನಾನು ಅವರನ್ನು ಲಕ್ಷಿಸಲೂ ಇಲ್ಲ, ಎಂದರು ಸರ್ವೇಶ್ವರ.೧೦. ಆ ದಿನಗಳು ಬಂದಮೇಲೆ ಇಸ್ರಯೇಲ್ ವಂಶದವರೊಡನೆ ನಾನು ಮಾಡಿಕೊಳ್ಳುವ ಒಡಂಬಡಿಕೆ ಹೀಗಿರುವುದು, ಎಂದರು ಸರ್ವೇಶ್ವರ. ನಾಟಿಸುವೆನು ನನ್ನಾಜ್ಞೆಗಳನು ಅವರ ಮನದಲಿ ಬರೆಯುವೆನು ಅವುಗಳನು ಅವರ ಹೃದಯದಲಿ ದೇವನಾಗಿರುವೆನು ನಾನವರಿಗೆ ಅವರಾಗುವರು ಪ್ರಜೆಗಳು ನನಗೆ.೧೧. ‘ಸರ್ವೇಶ್ವರನನ್ನು ಅರಿತುಕೊಳ್ಳಿರಿ’ ಎಂದು ನೆರೆಯವನಿಗಾಗಲಿ, ಸೋದರನಿಗಾಗಲಿ ಯಾರೂ ಬೋಧಿಸಬೇಕಾಗಿಲ್ಲ. ಹಿರಿಯಕಿರಿಯರು ಎಲ್ಲರೂ ನನ್ನನ್ನು ಅರಿಯುವರು.೧೨. ಅವರ ಪಾಪಗಳನ್ನು ಕ್ಷಮಿಸುವೆನು ಅವರ ತಪ್ಪುನೆಪ್ಪುಗಳನು ನೆನಪಿಗೆ ತಂದುಕೊಳ್ಳೆನು ಎಂದರು ಸರ್ವೇಶ್ವರ.”೧೩. ಇಲ್ಲಿ ‘ಹೊಸ ಒಡಂಬಡಿಕೆ’ ಎಂದು ಹೇಳಿ, ಹಿಂದಿನದನ್ನು ಹಳೆಯದಾಗಿಸಿದ್ದಾರೆ. ಹಳತಾದುದು ಹಾಗೂ ಮುದಿಯಾದುದು ಅಳಿದುಹೋಗುವಂಥಾದ್ದು. Kannada Bible (KNCL) 2016 No Data