ಬೈಬಲ್ ಒಂದು ವರ್ಷದಲ್ಲಿ ಡಿಸೆಂಬರ್ ೯ಹೊಶೇಯನ ೯:೧-೧೭೧. ಇಸ್ರಯೇಲ್, ಹರ್ಷಿಸದಿರು; ಇತರ ರಾಷ್ಟ್ರಗಳೊಡನೆ ಆನಂದಿಸದಿರು. ನಿನ್ನ ದೇವರನ್ನು ತೊರೆದು ವ್ಯಭಿಚಾರ ಮಾಡಿರುವೆ. ಇತರರ ಕಣಗಳಿಂದ ದೊರಕುವ ಕಾಳು ನಿನ್ನ ವ್ಯಭಿಚಾರದ ಸಂಭಾವನೆಯೆಂದು ಹಂಬಲಿಸಿರುವೆ.೨. ಸುಗ್ಗಿಯ ಕಣವೂ ದ್ರಾಕ್ಷಾರಸದ ತೊಟ್ಟಿಯೂ ನಿನ್ನ ಜನರಿಗೆ ಜೀವನಾಧಾರವಾಗವು. ಹೊಸದ್ರಾಕ್ಷಾರಸದ ನಿರೀಕ್ಷೆ ಅವರನ್ನು ನಿರಾಶೆಗೊಳಿಸುವುದು.೩. ಅವರು ಸರ್ವೇಶ್ವರಸ್ವಾಮಿಯ ನಾಡಿನಲ್ಲಿ ವಾಸಮಾಡುವುದಿಲ್ಲ. ಎಫ್ರಯಿಮರು ಈಜಿಪ್ಟಿಗೆ ಹಿಂದಿರುಗುವರು. ಅಸ್ಸೀರಿಯದಲ್ಲಿ ಅವರು ತಿನ್ನುವ ಆಹಾರ ಹೊಲಸಾಗುವುದು.೪. ಇನ್ನವರು ಸರ್ವೇಶ್ವರಸ್ವಾಮಿಗೆ ನೈವೇದ್ಯವಾಗಿ ದ್ರಾಕ್ಷಾರಸವನ್ನು ಸುರಿಯರು. ಅವರ ಯಜ್ಞಗಳು ಆ ಸ್ವಾಮಿಗೆ ಮೆಚ್ಚುಗೆಯಾಗುವುದಿಲ್ಲ. ಅವರ ಆಹಾರ ಹೆಣದ ಮನೆಯ ಆಹಾರದಂತಿರುವುದು. ಅದನ್ನು ತಿನ್ನುವವರೆಲ್ಲರು ಅಶುದ್ಧರಾಗುವರು. ಅದು ಹೊಟ್ಟೆತುಂಬಲು ಮಾತ್ರ ಸರಿಯೇ ಹೊರತು ದೇವಾಲಯದಲ್ಲಿ ಮಾಡುವ ಅರ್ಪಣೆಗೆ ಸಲ್ಲದು.೫. ಹಬ್ಬದ ದಿನಗಳಲ್ಲಿ ಅವರೇನು ಮಾಡುವರು? ಸರ್ವೇಶ್ವರಸ್ವಾಮಿಯ ಮಹೋತ್ಸವಗಳನ್ನು ಹೇಗೆ ಆಚರಿಸುವರು?೬. ವಿನಾಶದ ದೇಶವನ್ನು ಅವರು ಬಿಟ್ಟುಹೋಗಬಹುದು. ಆದರೆ ಈಜಿಪ್ಟ್ ಅವರಿಗೆ ಸ್ಮಶಾನವಾಗುವುದು.ಮೋಫ್ ಪಟ್ಟಣದಲ್ಲಿ ಅವರಿಗೆ ಸಮಾಧಿಯಾಗುವುದು. ಅವರ ಬೆಳ್ಳಿಯ ಒಡವೆಗಳು ಮುಳ್ಳುಪೊದೆಗಳ ಪಾಲಾಗುವುವು; ಅವರ ಗುಡಾರಗಳಲ್ಲಿ ಕಳೆಗಳು ಬೆಳೆಯುವುವು.೭. ಇಗೋ, ದಂಡನೆಯ ದಿನಗಳು ಸಮೀಪಿಸಿವೆ; ಮುಯ್ಯಿ ತೀರಿಸುವ ದಿನಗಳು ಬಂದಿವೆ. ಇಸ್ರಯೇಲರಿಗೆ ಇದು ತಿಳಿದಿರಲಿ. “ಪ್ರವಾದಿಯು ಹುಚ್ಚನು; ದೇವರಾತ್ಮಪ್ರೇರಿತನು ಮೂರ್ಖನು,” ಎಂದು ಹೇಳಿಕೊಳ್ಳುತ್ತೀರಿ. ಅತ್ಯಧಿಕವಾಗಿರುವ ನಿಮ್ಮ ಅಧರ್ಮ, ಮಿತಿಮೀರಿರುವ ನಿಮ್ಮ ದ್ವೇಷ ಇದಕ್ಕೆ ಕಾರಣ.೮. ಎಫ್ರಯಿಮನ ದೇವಜನರಿಗೆ ಪ್ರವಾದಿಯೇ ಕಾವಲುಗಾರ. ಆದರೂ ಅವನ ಹಾದಿಯಲ್ಲೆಲ್ಲ ಬೇಟೆಯ ಬಲೆ ಒಡ್ಡಲಾಗಿದೆ. ದೇವರ ಆಲಯದಲ್ಲೂ ಅವನಿಗೆ ಹಗೆತನ ಕಾದಿದೆ.೯. ಪೂರ್ವದಲ್ಲಿ ಗಿಬ್ಯದವರು ಭ್ರಷ್ಟರಾದಂತೆ ಎಫ್ರಯಿಮಿನವರು ಅತಿ ಭ್ರಷ್ಟರಾಗಿದ್ದಾರೆ. ದೇವರು ಅವರ ಅಪರಾಧವನ್ನು ನೆನಪಿಗೆ ತಂದುಕೊಳ್ಳುವರು. ಅವರ ಪಾಪಕ್ಕೆ ತಕ್ಕ ದಂಡನೆಯನ್ನು ವಿಧಿಸುವರು.೧೦. ಬೆಂಗಾಡಿನಲ್ಲಿ ದ್ರಾಕ್ಷೆ ಸಿಕ್ಕಿದಂತೆ ಇಸ್ರಯೇಲ್ ನನಗೆ ಸಿಕ್ಕಿತು. ಅಂಜೂರದ ಮರದ ಮೊತ್ತಮೊದಲ ಹಣ್ಣು ಕಣ್ಣಿಗೆ ಬೀಳುವಂತೆ ನಿಮ್ಮ ಪಿತೃಗಳು ನನಗೆ ಕಾಣಿಸಿಕೊಂಡರು. ಆದರೆ ಅವರು ಬಾಳ್ಪೆಗೋರಿಗೆ ಬಂದು ಬಾಳ್ ದೇವತೆಯ ಭಕ್ತರಾದರು. ಅವರು ನೆಚ್ಚಿಕೊಂಡ ದೇವತೆಯಂತೆ ನೀಚರಾದರು.೧೧. ಎಫ್ರಯಿಮರ ಮಹಿಮೆ ಪಕ್ಷಿಯಂತೆ ಹಾರಿಹೋಗುವುದು. ಅಲ್ಲಿ ಯಾರೂ ಮಕ್ಕಳನ್ನು ಹೆರುವುದಿಲ್ಲ; ಯಾರೂ ಗರ್ಭಿಣಿಯಾಗುವುದಿಲ್ಲ; ಯಾರೂ ಗರ್ಭ ಧರಿಸುವುದಿಲ್ಲ.೧೨. ಒಂದು ವೇಳೆ ಮಕ್ಕಳನ್ನು ಹೆತ್ತು ಸಾಕಿದರೂ ಅವರಾರೂ ಉಳಿಯದಂತೆ ಅವರಿಗೆ ನಿರಂತರವಾಗಿ ಪುತ್ರಶೋಕವನ್ನುಂಟುಮಾಡುವೆನು. ನಾನು ಅವರಿಗೆ ವಿಮುಖನಾಗುವೆನು. ಅವರ ಗತಿ ಹೇಳತೀರದಂತಾಗುವುದು.೧೩. ಎಫ್ರಯಿಮಿನ ಮಕ್ಕಳು ಬೇಟೆಗೆ ಗುರಿ ಆದವರಂತೆ ಕಾಣಿಸುತ್ತಾರೆ. ಎಫ್ರಯಿಮ್ ತನ್ನ ಪುತ್ರರನ್ನು ವಧ್ಯಸ್ಥಾನಕ್ಕೆ ಕರೆದೊಯ್ಯಬೇಕಾಗುವುದು.೧೪. ಸರ್ವೇಶ್ವರಾ, ಇವರಿಗೆ ಏನನ್ನು ವಿಧಿಸುವೆ? ಇವರಿಗೆ ಎಂಥ ಗತಿಯನ್ನು ಬರಮಾಡುವೆ? ಅವರ ಮಹಿಳೆಯರಿಗೆ ಗರ್ಭಪಾತವಾಗಲಿ! ಅವರ ಮೊಲೆ ಬತ್ತಿಹೋಗಲಿ!೧೫. “ಅವರ ದುಷ್ಟತನ ಗಿಲ್ಗಾಲಿನಲ್ಲೇ ಪ್ರಾರಂಭವಾಯಿತು. ಅಲ್ಲೇ ಅವರು ನನ್ನ ದ್ವೇಷಕ್ಕೆ ಗುರಿಯಾದರು. ಅವರ ಪಾಪಕೃತ್ಯಗಳ ನಿಮಿತ್ತ ನನ್ನ ಆಲಯದಿಂದ ಹೊರಗಟ್ಟುವೆನು. ಅವರನ್ನು ಇನ್ನು ಪ್ರೀತಿಸೆನು; ಅವರ ಅಧಿಕಾರಿಗಳೆಲ್ಲ ದ್ರೋಹಿಗಳೇ.೧೬. ಎಫ್ರಯಿಮಿಗೆ ಏಟು ಬಿದ್ದಿದೆ; ಅವರ ವಂಶದ ಬೇರು ಬತ್ತಿಹೋಗಿದೆ. ಅವರು ಫಲಹೀನರಾಗಿದ್ದಾರೆ. ಮಕ್ಕಳನ್ನು ಹೆತ್ತರೂ ಅವಳ ಕರುಳ ಕುಡಿಯನ್ನು ಕತ್ತರಿಸಿಹಾಕುವೆನು.”೧೭. ತಮ್ಮ ಮಾತಿಗೆ ಕಿವಿಗೊಡದ ಈ ಜನರನ್ನು ಸರ್ವೇಶ್ವರ ತಳ್ಳಿಬಿಡುವರು. ಇತರ ಜನಾಂಗಗಳ ಮಧ್ಯೆ ಅವರು ಅಲೆಮಾರಿಗಳಂತೆ ಇರುವರು.ಹೊಶೇಯನ ೧೦:೧-೧೫೧. ಇಸ್ರಯೇಲ್ ಸೊಂಪಾಗಿ ಬೆಳೆದ ದ್ರಾಕ್ಷಾಲತೆ, ಫಲಭರಿತ ದ್ರಾಕ್ಷಾಬಳ್ಳಿ, ಅದರ ಫಲ ಹೆಚ್ಚಿದಂತೆಲ್ಲ ಬಲಿಪೀಠಗಳು ಹೆಚ್ಚಿಕೊಂಡಿವೆ. ಆ ನಾಡು ಅಭಿವೃದ್ಧಿಯಾದಂತೆಲ್ಲ, ಹೆಚ್ಚು ಸುಂದರವಾದ ವಿಗ್ರಹಸ್ತಂಭಗಳು ನಿರ್ಮಿತವಾಗಿವೆ.೨. ಅವರದು ವಂಚನೆಯ ಮನಸ್ಸು. ಈಗ ಅವರು ತಮ್ಮ ಪಾಪಕ್ಕೆ ತಕ್ಕ ದಂಡನೆಯನ್ನು ಅನುಭವಿಸಲೇಬೇಕು. ಸರ್ವೇಶ್ವರಸ್ವಾಮಿ ಅವರ ಯಜ್ಞವೇದಿಗಳನ್ನು ಕೆಡವುವರು. ಅವರ ಪೂಜಾಸ್ತಂಭಗಳನ್ನು ಒಡೆದುಹಾಕುವರು.೩. “ನಮಗೆ ರಾಜನೇ ಇಲ್ಲ. ನಾವು ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಲ್ಲ. ನಮಗೆ ರಾಜನಿದ್ದರೂ ಅವನು ನಮಗೆ ಏನು ತಾನೇ ಮಾಡಿಯಾನು?” ಎಂದು ಆ ಜನರು ಆಡಿಕೊಳ್ಳುತ್ತಾರೆ.೪. ಅವರು ಹರಟೆಹೊಡೆಯುತ್ತಾರೆ; ಸುಳ್ಳಾಣೆ ಇಟ್ಟು ಸಂಧಾನಮಾಡಿಕೊಳ್ಳುತ್ತಾರೆ. ಉತ್ತಹೊಲದಲ್ಲಿ ಬೆಳೆಯುವ ವಿಷದ ಕಳೆಗಳಂತೆ ನ್ಯಾಯಸ್ಥಾನಕ್ಕೆ ಬರುವ ಅವರ ವಾದವಿವಾದಗಳು ಹೆಚ್ಚಿಕೊಳ್ಳುತ್ತವೆ.೫. ಬೇತಾವೆನಿನ ಬಸವನಿಗೆ ಸಮಾರ್ಯದ ನಿವಾಸಿಗಳು ದಿಗಿಲುಗೊಳ್ಳುವರು; ಅದನ್ನು ಕಾಣದುದಕ್ಕಾಗಿ ಭಕ್ತಜನರು ಎದೆಬಡಿದುಕೊಳ್ಳುವರು. ಅದರ ಮಹಿಮೆ ನಂದಿಹೋಯಿತು ಎಂದು ಪೂಜಾರಿಗಳು ಗೋಳಾಡುವರು.೬. ಆ ವಿಗ್ರಹವನ್ನು ಅಸ್ಸೀರಿಯದ ಜಗಳಗಂಟಿ ರಾಜನಿಗೆ ಕಾಣಿಕೆಯಾಗಿ ಕೊಡಲಾಗುವುದು. ಎಫ್ರಯಿಮಿಗೆ ಅವಮಾನವಾಗುವುದು. ಇಸ್ರಯೇಲ್ ತಾನು ಕೆತ್ತಿಸಿಕೊಂಡ ವಿಗ್ರಹಕ್ಕಾಗಿ ನಾಚಿಕೆಗೀಡಾಗುವುದು.೭. ಸಮಾರ್ಯದ ರಾಜನು ಪ್ರವಾಹದಲ್ಲಿ ಕೊಚ್ಚಿಕೊಂಡುಹೋಗುವ ಕಡ್ಡಿಯಂತೆ ಕಣ್ಮರೆ ಆಗುವನು.೮. ಇಸ್ರಯೇಲಿನ ಪಾಪಕ್ಕೆ ಆಸ್ಪದ ಆಗಿದ್ದ ಆವೆನಿನ ಪೂಜಾಸ್ಥಾನಗಳು ನಾಶವಾಗುವುವು. ಪಾಳುಬಿದ್ದ ಬಲಿಪೀಠಗಳ ಮೇಲೆ ಮುಳ್ಳುಕಳ್ಳಿಗಳು ಹುಟ್ಟಿಕೊಳ್ಳುವುವು. ಅಲ್ಲಿನ ಜನರು: ‘ಪರ್ವತವೇ, ನಮ್ಮನ್ನು ತುಳಿದುಬಿಡಿ; ಗುಡ್ಡಗಳೇ ನಮ್ಮನ್ನು ನುಂಗಿಬಿಡಿ’ ಎಂದು ಕೂಗಿಕೊಳ್ಳುವರು.”೯. “ಇಸ್ರಯೇಲ್, ನೀನು ಗಿಬ್ಯದಲ್ಲಿದ್ದ ಕಾಲದಿಂದ ನನಗೆ ವಿರುದ್ಧ ಪಾಪಮಾಡುತ್ತಲೇ ಬಂದಿರುವೆ. ನಿನ್ನ ಜನರು ಪಾಪದಲ್ಲಿಯೇ ಮುಂದುವರಿಯುತ್ತಿದ್ದಾರೆ. ಗಿಬ್ಯದ ನಿವಾಸಿಗಳು ಯುದ್ಧಕ್ಕೆ ತುತ್ತಾಗಲಿದ್ದಾರೆ.೧೦. ಸಕಾಲದಲ್ಲಿ ನಾನು ಅವರನ್ನು ದಂಡಿಸುವೆನು; ಅವರ ಇಮ್ಮಡಿ ಅಪರಾಧಕ್ಕೆ ತಕ್ಕ ಶಾಸ್ತಿ ಆಗುವುದು; ಆಗ ಇತರ ರಾಷ್ಟ್ರಗಳು ಅವರಿಗೆ ವಿರುದ್ಧವಾಗಿ ಒಂದುಗೂಡುವುವು.೧೧. “ಎಫ್ರಯಿಮ್ ತೆನೆಹುಲ್ಲನ್ನು ತುಳಿಯುವುದರಲ್ಲಿ ಪಳಗಿರುವ ಹೋರಿಕರು. ಅದರ ಅಂದವಾದ ಹೆಗಲಮೇಲೆ ನೇಗಿಲನ್ನು ಇಟ್ಟಿರಲಿಲ್ಲ. ಜುದೇಯವು ಉಳುವಂತೆ ಮಾಡಿದೆನು. ಯಕೋಬ್ ಕುಂಟೆ ಎಳೆಯುವಂತೆ ಮಾಡಿದೆನು. ಈಗ ಎಫ್ರಯಿಮನ್ನು ನೊಗಕ್ಕೆ ಹೂಡುವೆನು.೧೨. ನಾನು ಇಂತೆಂದೆ: “ಪಾಳುಬಿದ್ದ ನೆಲವನ್ನು ಉತ್ತು ಹದಮಾಡಿರಿ; ನೀತಿಯ ಬೀಜವನ್ನು ಬಿತ್ತಿರಿ; ಪ್ರೀತಿಯ ಫಲವನ್ನು ಕೊಯ್ಯಿರಿ. ಸಮಯವು ಸನ್ನಿಹಿತವಾಗಿದೆ. ಸರ್ವೇಶ್ವರ ಆಗಮಿಸಿ ನಿಮ್ಮ ಮೇಲೆ ನೀತಿಯನ್ನು ಮಳೆಗರೆಯುವಂತೆ ಅವರಿಗೆ ಶರಣುಹೋಗಬೇಕು.೧೩. ಇದಕ್ಕೆ ಬದಲಾಗಿ ನೀನು ಅಧರ್ಮದ ಬೀಜವನ್ನು ಬಿತ್ತಿರುವೆ, ಅನ್ಯಾಯದ ಬೆಳೆಯನ್ನು ಕೊಯ್ದಿರುವೆ. ಅಸತ್ಯದ ಫಲವನ್ನು ಉಂಡಿರುವೆ. ನಿನ್ನ ಭುಜಬಲದಲ್ಲೂ ಸಮರಶೂರರಲ್ಲೂ ಭರವಸೆಯಿಟ್ಟೆ.೧೪. ಎಂತಲೇ ನಿನ್ನ ಜಾತಿಜನಾಂಗಗಳ ವಿರುದ್ಧ ಯುದ್ಧ ಘೋಷಣೆ ಮೊಳಗುವುದು. ಕಾಳಗದ ದಿನದಲ್ಲಿ ಕೋಟೆಕೊತ್ತಲಗಳು ಸೂರೆಯಾಗುವುವು. ಶಲ್ಮಾನ ರಾಜನು ಬೇತ್ಅರ್ಬೇಲ್ ಪಟ್ಟಣವನ್ನು ನೆಲಸಮಮಾಡಿದಂತೆ ಆಗುವುದು. ತಾಯಿ ಮಕ್ಕಳನ್ನು ಬಂಡೆಗೆ ಅಪ್ಪಳಿಸಿ ಸಾಯಿಸಿದಂತೆ ಇದೆಲ್ಲ ನಡೆಯುವುದು.೧೫. ಬೇತೇಲಿನ ಜನರೇ, ನಿಮಗೂ ಇಂಥ ದುರ್ಗತಿಯೇ ಸಂಭವಿಸಲಿರುವುದು. ಬೆಳಗಾಗುವುದರೊಳಗೆ ಇಸ್ರಯೇಲಿನ ರಾಜನು ಹತನಾಗುವನು. ಕಾರಣ, ನಿಮ್ಮ ಅಕ್ರಮವು ಘೋರವಾದುದು!”ಕೀರ್ತನೆಗಳು ೧೩೯:೧೩-೧೬೧೩. ನನ್ನ ಅಂತರಂಗವನು ಉಂಟುಮಾಡಿದಾತ ನೀನು I ತಾಯಗರ್ಭದಲೆ ನನ್ನ ರೂಪಿಸಿದಾತ ನೀನು II೧೪. ನಿನಗೆ ವಂದನೆ, ನೀ ನನ್ನ ಭಯಭಕ್ತಿಗೆ ಪಾತ್ರ I ನಿನ್ನ ಕೃತ್ಯಗಳು ಅದ್ಭುತಕರ ಹಾಗೂ ವಿಚಿತ್ರ I ನನ್ನ ಬಗ್ಗೆ ನಿನಗಿರುವ ಪೂರ್ಣ ಅರಿವು ಸಮರ್ಥ II೧೫. ನನ್ನ ಅಸ್ಥಿಪಂಜರವನು ರೂಪಿಸುವಾಗ I ತಾಯಗರ್ಭದೊಳು ಅಚ್ಚರದಿ ರಚಿಸುವಾಗ I ಗುಟ್ಟಾಗಿ ನಾನಲ್ಲಿ ಬೆಳೆಯುತ್ತಿದ್ದಾಗ I ಮರೆಯಾಗಿರಲಿಲ್ಲ ನಾನು ನಿನಗಾಗ II೧೬. ನಾನಿನ್ನೂ ಭ್ರೂಣವಾಗಿದ್ದಾಗ ನೋಡಿದವು ನಿನ್ನ ಕಣ್ಣುಗಳು I ಪ್ರಾರಂಭವಾಗುವುದಕ್ಕೆ ಮುನ್ನ ನನ್ನ ಆಯುಷ್ಕಾಲದ ದಿನಗಳು I ಲಿಖಿತವಾದವು ಅವುಗಳಲೊಂದೂ ತಪ್ಪದೆ ನಿನ್ನ ಪುಸ್ತಕದೊಳು IIಜ್ಞಾನೋಕ್ತಿಗಳು ೨೯:೨೧-೨೧೨೧. ಬಾಲ್ಯದಿಂದ ಕೋಮಲವಾಗಿ ಸಾಕಲಾದ ಸೇವಕನು, ಕೊನೆಗೆ ಕುಮಾರನಂತೆ ನಿನ್ನದೆಲ್ಲವನ್ನು ಕಿತ್ತುಕೊಂಡಾನು.ಯೊವಾನ್ನನು ಮೂರು ೧:೧-೧೪೧. ಯಥಾರ್ಥ ಪ್ರೀತಿಗೆ ಪಾತ್ರನಾದ ಗಾಯನಿಗೆ - ಸಭೆಯ ಹಿರಿಯನಾದ ನಾನು ಬರೆಯುವ ಪತ್ರ:೨. ಪ್ರಿಯನೇ, ಎಲ್ಲಾ ವಿಷಯಗಳಲ್ಲಿ ನಿನಗೆ ಶುಭವನ್ನು ಕೋರುತ್ತೇನೆ; ನಿನ್ನ ಸುಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ. ಆತ್ಮದ ವಿಷಯದಲ್ಲಿ ನೀನು ಅಭಿವೃದ್ಧಿಗೊಳ್ಳುತ್ತಿರುವೆ ಎಂದು ನಂಬಿದ್ದೇನೆ.೩. ನೀನು ಸತ್ಯದಲ್ಲಿ ನಿಷ್ಠಾವಂತನಾಗಿದ್ದು, ಸನ್ಮಾರ್ಗದಲ್ಲಿ ನಡೆಯುತ್ತಿರುವುದಾಗಿ ಕೆಲವು ಸಹೋದರರು ಇಲ್ಲಿಗೆ ಬಂದು ತಿಳಿಸಿದಾಗ ನನಗಾದ ಆನಂದ ಅಷ್ಟಿಷ್ಟಲ್ಲ.೪. ನನ್ನ ಪ್ರಿಯಮಕ್ಕಳು ಸತ್ಯಸಂಧರಾಗಿ ನಡೆಯುತ್ತಿದ್ದಾರೆಂದು ಕೇಳುವುದಕ್ಕಿಂತ ಮಿಗಿಲಾದ ಆನಂದ ನನಗಿಲ್ಲ.೫. ಪ್ರಿಯನೇ, ಸಹೋದರರಿಗೆ - ಮುಖ್ಯವಾಗಿ ಅಪರಿಚಿತರಿಗೆ ಸತ್ಕಾರ್ಯವನ್ನು ಮಾಡುವುದರಲ್ಲಿ ನೀನು ತುಂಬಾ ನಿಷ್ಠಾವಂತನು.೬. ಇಲ್ಲಿಯ ಸಭೆಯ ಮುಂದೆ ಅವರೇ ನಿನ್ನ ಪ್ರೀತ್ಯಾದರವನ್ನು ಪ್ರಶಂಶಿಸಿದ್ದಾರೆ. ಅವರು ತಮ್ಮ ಸಂಚಾರವನ್ನು ಇನ್ನೂ ಮುಂದುವರಿಸುವಂತೆ ದೇವರು ಮೆಚ್ಚುವ ರೀತಿಯಲ್ಲಿ ನೀನು ನೆರವಾಗಬೇಕು.೭. ಅವರು ಈ ಸಂಚಾರವನ್ನು ಕೈಗೊಂಡಿರುವುದು ಕ್ರಿಸ್ತಯೇಸುವಿನ ಸೇವೆಗಾಗಿಯೆ. ಅನ್ಯಧರ್ಮೀಯರಿಂದ ಅವರು ಯಾವ ಸಹಾಯವನ್ನೂ ಸ್ವೀಕರಿಸುವವರಲ್ಲ. ಆದ್ದರಿಂದ, ಇಂಥವರಿಗೆ ನಾವು ನೆರವಾಗಲೇಬೇಕು.೮. ಹೀಗೆ ಸತ್ಯಕ್ಕಾಗಿ ದುಡಿಯುವವರೊಂದಿಗೆ ನಾವು ಸಹಕರಿಸಬೇಕು.೯. ನಾನು ನಿಮ್ಮ ಸಭೆಗೆ ಚಿಕ್ಕ ಪತ್ರವೊಂದನ್ನು ಬರೆದಿದ್ದೇನೆ. ಆದರೆ ಅಲ್ಲಿಯ ಸಭೆಗೆ ಮುಖಂಡನಾಗ ಬಯಸುತ್ತಿರುವ ದಿಯೊತ್ರೇಫನು ನನ್ನ ಮಾತನ್ನು ಗೌರವಿಸುತ್ತಿಲ್ಲ.೧೦. ನಾನು ಬಂದಾಗ, ಅವನು ಮಾಡುತ್ತಿರುವುದನ್ನೆಲ್ಲಾ ಹೊರಗೆಡಹುತ್ತೇನೆ. ನಮ್ಮ ವಿರುದ್ಧ ಅವನು ಅಪಪ್ರಚಾರ ಮಾಡುತ್ತಾ ಹರಟೆಕೊಚ್ಚುತ್ತಿದ್ದಾನೆ. ಸಾಲದೆಂದು, ಸಹೋದರರನ್ನು ಸ್ವಾಗತಿಸಲು ನಿರಾಕರಿಸುತ್ತಿದ್ದಾನೆ. ಹಾಗೆ ಸ್ವಾಗತಿಸಬಯಸುವವರನ್ನು ನಿರ್ಬಂಧಿಸಿ ಸಭೆಯಿಂದ ಬಹಿಷ್ಕರಿಸುತ್ತಿದ್ದಾನೆ.೧೧. ಪ್ರಿಯನೇ, ನೀನು ಕೆಟ್ಟದ್ದನ್ನು ಅನುಸರಿಸದೆ ಒಳ್ಳೆಯದನ್ನೇ ಅನುಸರಿಸಿ ನಡೆ. ಒಳಿತನ್ನು ಮಾಡುವವನು ದೇವರಿಗೆ ಸೇರಿದವನು. ಕೆಡುಕನ್ನು ಮಾಡುವವನು ದೇವರನ್ನು ಕಾಣದವನು.೧೨. ದೆಮೇತ್ರಿಯನ ವಿಷಯದಲ್ಲಿ ಎಲ್ಲರೂ ಒಳ್ಳೆಯದನ್ನೇ ಹೇಳುತ್ತಾರೆ. ಸತ್ಯವೂ ಅವನ ಪರವಾಗಿದೆ. ನಾವು ಅವನ ಬಗ್ಗೆ ಸಾಕ್ಷಿ ಹೇಳಬಲ್ಲೆವು. ನಮ್ಮ ಸಾಕ್ಷ್ಯ ಸತ್ಯವೆಂದು ನೀನು ಬಲ್ಲೆ.೧೩. ನಾನು ನಿನಗೆ ತಿಳಿಸಬೇಕಾದುದು ಇನ್ನೂ ಎಷ್ಟೋ ಇದೆ. ಕಾಗದಪತ್ರಗಳ ಮೂಲಕ ತಿಳಿಸಲು ನನಗಿಷ್ಟವಿಲ್ಲ.೧೪. ಸದ್ಯದಲ್ಲೇ ನಿನ್ನನ್ನು ಕಾಣುವ ನಿರೀಕ್ಷೆ ನನಗಿದೆ. ಆಗ ನಾವು ಮುಖಾಮುಖಿಯಾಗಿ ಮಾತಾಡಬಹುದು. Kannada Bible (KNCL) 2016 No Data