ಬೈಬಲ್ ಒಂದು ವರ್ಷದಲ್ಲಿ ಫೆಬ್ರುವರಿ ೧೩ವಿಮೋಚನಾಕಾಂಡ ೩೭:೧-೨೯೧. ಬೆಚಲೇಲನು ಜಾಲೀಮರದಿಂದ ಮಂಜೂಷವನ್ನು ಮಾಡಿದನು. ಅದು ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಆಗಿತ್ತು.೨. ಚೊಕ್ಕಬಂಗಾರದ ತಗಡುಗಳನ್ನು ಅದರ ಹೊರಗಡೆಯೂ ಒಳಗಡೆಯೂ ಹೊದಿಸಿದನು; ಅದರ ಮೇಲೆ ಸುತ್ತಲೂ ಚಿನ್ನದ ತೋರಣ ಕಟ್ಟಿಸಿದನು.೩. ನಾಲ್ಕು ಬಂಗಾರದ ಬಳೆಗಳನ್ನು ಎರಕಹೊಯಿಸಿ ಅದರ ನಾಲ್ಕು ಮೂಲೆಗಳಲ್ಲಿ, ಅಂದರೆ ಒಂದೊಂದು ಕಡೆಯಲ್ಲಿ ಎರಡೆರಡು ಬಳೆಗಳನ್ನು ಇರಿಸಿದನು.೪. ಮತ್ತು ಜಾಲೀಮರದ ಗದ್ದುಗೆಗಳನ್ನು ಮಾಡಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿ೫. ಮಂಜೂಷದ ಎರಡು ಕಡೆಗಳಲ್ಲಿರುವ ಬಳೆಗಳಲ್ಲಿ ಅದನ್ನು ಹೊರುವುದಕ್ಕಾಗಿ ಸೇರಿಸಿದನು.೬. ಅದಲ್ಲದೆ ಚೊಕ್ಕಬಂಗಾರದ ಕೃಪಾಸನವನ್ನು ಮಾಡಿದನು. ಅದು ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಆಗಿತ್ತು.೭. ಕೃಪಾಸನದ ಎರಡು ಕೊನೆಗಳಲ್ಲಿ ಕೆರೂಬಿಯರ ಎರಡು ಬಂಗಾರದ ಆಕಾರಗಳನ್ನು ನಕಾಸಿಕೆಲಸದಿಂದ ಮಾಡಿದನು.೮. ಕೃಪಾಸನದ ಒಂದೊಂದು ಕೊನೆಯಲ್ಲಿ ಒಂದೊಂದು ಕೆರೂಬಿಯನ್ನು ಮಾಡಿ ಕೃಪಾಸನಕ್ಕೆ ಜೋಡಿಸಿದನು.೯. ಆ ಕೆರೂಬಿಗಳು ಮೇಲಕ್ಕೆ ರೆಕ್ಕೆಗಳನ್ನು ಚಾಚಿರುವಂತೆಯೂ ಇದ್ದವು. ಅವುಗಳ ಮುಖಗಳು ಎದುರುಬದುರಾಗಿ ಕೃಪಾಸನವನ್ನು ನೋಡುತ್ತಿದ್ದವು.೧೦. ಬೆಚಲೇಲನು ಜಾಲೀಮರದ ಮೇಜನ್ನು ಮಾಡಿದನು. ಅದು ಎರಡು ಮೊಳ ಉದ್ದವೂ ಒಂದು ಮೊಳ ಅಗಲವೂ ಒಂದೂವರೆ ಮೊಳ ಎತ್ತರವೂ ಆಗಿತ್ತು.೧೧. ಅದಕ್ಕೆ ಚೊಕ್ಕಬಂಗಾರದ ತಗಡುಗಳನ್ನು ಹೊದಿಸಿ ಸುತ್ತಲೂ ಚಿನ್ನದ ತೋರಣ ಕಟ್ಟಿದನು.೧೨. ಮೇಜಿನ ಸುತ್ತಲೂ ಅಂಗೈ ಅಗಲದ ಅಡ್ಡಪಟ್ಟಿಯನ್ನು ಮಾಡಿ ಅದಕ್ಕೂ ಚಿನ್ನದ ತೋರಣ ಕಟ್ಟಿದನು.೧೩. ಮೇಜನ್ನು ಎತ್ತುವ ಗದ್ದಿಗೆಗಳನ್ನು ಸೇರಿಸುವುದಕ್ಕಾಗಿ ಅದಕ್ಕೆ ನಾಲ್ಕು ಚಿನ್ನದ ಬಳೆಗಳನ್ನು ಎರಕ ಹೊಯಿಸಿ ಅದರ ನಾಲ್ಕು ಕಾಲುಗಳಲ್ಲಿ ಹಚ್ಚಿದನು.೧೪. ಆ ಬಳೆಗಳು ಅಡ್ಡಪಟ್ಟಿಗೆ ಹತ್ತಿಕೊಂಡಿದ್ದವು.೧೫. ಮೇಜನ್ನು ಹೊರುವುದಕ್ಕೆ ಗದ್ದಿಗೆಗಳನ್ನು ಜಾಲೀಮರದಿಂದ ಮಾಡಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿದನು.೧೬. ಮೇಜಿನ ಮೇಲೆ ಇಡಬೇಕಾದ ಉಪಕರಣಗಳನ್ನು, ಅಂದರೆ ಹರಿವಾಣಗಳು, ಧೂಪಾರತಿಗಳು, ಹೂಜಿಗಳು, ಪಾನದ್ರವ್ಯವನ್ನು ಅರ್ಪಿಸುವುದಕ್ಕೆ ಬೇಕಾದ ಬಟ್ಟಲುಗಳು ಇವುಗಳನ್ನು ಚೊಕ್ಕಬಂಗಾರದಿಂದ ಮಾಡಿದನು.೧೭. ಚೊಕ್ಕಬಂಗಾರದ ದೀಪವೃಕ್ಷವನ್ನು ಮಾಡಿದನು. ಅದರ ಬುಡವನ್ನೂ ಕಂಬವನ್ನೂ ನಕಾಸಿ ಕೆಲಸದಿಂದ ಮಾಡಿದನು. ಆ ದೀಪಸ್ತಂಭವೆಲ್ಲಾ ಅಖಂಡವಾಗಿ ಮೊಗ್ಗುಗಳಂತೆಯೂ ಪುಷ್ಪಗಳಂತೆಯೂ ಅಲಂಕಾರವಾಗಿ ಕೆತ್ತಿತ್ತು.೧೮. ಕಂಬದ ಒಂದೊಂದು ಪಾರ್ಶ್ವದಲ್ಲಿ ಮೂರು ಮೂರು ಕೊಂಬೆಗಳು, ಅಂತೂ ಆರು ಕೊಂಬೆಗಳಿದ್ದವು.೧೯. ಪ್ರತಿಯೊಂದು ಕೊಂಬೆಯಲ್ಲಿ ಬಾದಾಮಿ ಹೂವುಗಳಂತಿರುವ ಮೂರು ಮೂರು ಪುಷ್ಪಾಲಂಕಾರಗಳಿದ್ದವು; ಒಂದೊಂದು ಅಲಂಕಾರಕ್ಕೆ ಒಂದು ಮೊಗ್ಗೂ ಒಂದು ಪುಷ್ಪವೂ ಇದ್ದವು. ಆರು ಕೊಂಬೆಗಳನ್ನೂ ಹಾಗೆಯೇ ಮಾಡಿದನು.೨೦. ದೀಪವೃಕ್ಷ ಕಡ್ಡಿಯಲ್ಲಿ ಮೊಗ್ಗುಗಳೂ ಪುಷ್ಪಗಳೂ ಇರುವ ಬಾದಾಮಿ ಹೂವುಗಳಂತೆ ನಾಲ್ಕು ಪುಷ್ಪಾಲಂಕಾರಗಳು ಇದ್ದವು.೨೧. ಎರಡೆರಡು ಕೊಂಬೆಗಳು ಕವಲು ಒಡೆದಿರುವ ಸ್ಥಳಗಳಲ್ಲೆಲ್ಲಾ ಒಂದೊಂದು ಮೊಗ್ಗು ಇತ್ತು.೨೨. ಮೊಗ್ಗುಗಳೂ ಕೊಂಬೆಗಳೂ ಸಹಿತವಾದ ದೀಪವೃಕ್ಷವನ್ನೆಲ್ಲಾ ಒಟ್ಟಿಗೆ ಚೊಕ್ಕಬಂಗಾರದಿಂದ ನಕಾಸಿ ಕೆಲಸದಿಂದ ಮಾಡಿದನು.೨೩. ಅದರ ಏಳು ಹಣತೆಗಳನ್ನೂ ಅದರ ಕತ್ತರಿಗಳನ್ನೂ ದೀಪದ ಕುಡಿತೆಗೆಯುವ ಬಟ್ಟಲುಗಳನ್ನೂ ಚೊಕ್ಕಬಂಗಾರದಿಂದ ಮಾಡಿದನು.೨೪. ದೀಪವೃಕ್ಷವೂ ಅದರ ಎಲ್ಲಾ ಉಪಕರಣಗಳೂ ಮೂವತ್ತೈದು ಕಿಲೋಗ್ರಾಂ ಚೊಕ್ಕಬಂಗಾರದವುಗಳಾಗಿದ್ದವು.೨೫. ಅವನು ಜಾಲೀಮರದಿಂದ ಧೂಪವೇದಿಕೆಯನ್ನು ಮಾಡಿದನು. ಅದು ಒಂದು ಮೊಳ ಉದ್ದವಾಗಿಯೂ ಒಂದು ಮೊಳ ಅಗಲವಾಗಿಯೂ ಚಚ್ಚೌಕವಾಗಿತ್ತು; ಅದರ ಎತ್ತರವು ಎರಡು ಮೊಳವಾಗಿತ್ತು. ಅದರ ಕೊಂಬುಗಳು ಅದರ ಅಂಗಗಳಾಗಿದ್ದವು.೨೬. ಅದರ ಮೇಲ್ಭಾಗಕ್ಕೂ ನಾಲ್ಕು ಪಕ್ಕಗಳಿಗೂ ಕೊಂಬುಗಳಿಗೂ ಚೊಕ್ಕಬಂಗಾರದ ತಗಡುಗಳನ್ನು ಹೊದಿಸಿದನು. ಸುತ್ತಲೂ ಚಿನ್ನದ ತೋರಣ ಕಟ್ಟಿದನು.೨೭. ಅದನ್ನು ಎತ್ತುವ ಗದ್ದಿಗೆಗಳನ್ನು ಸೇರಿಸುವುದಕ್ಕಾಗಿ ಆ ತೋರಣದ ಕೆಳಗೆ ವೇದಿಕೆಯ ಎರಡು ಪಾರ್ಶ್ವಗಳ ಮೂಲೆಗಳಲ್ಲಿ ಎರಡೆರಡು ಚಿನ್ನದ ಬಳೆಗಳನ್ನು ಬಿಗಿಸಿದನು.೨೮. ವೇದಿಕೆಯನ್ನು ಹೊರುವುದಕ್ಕೆ ಗದ್ದಿಗೆಗಳನ್ನು ಜಾಲೀಮರದಿಂದ ಮಾಡಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿದನು.೨೯. ಅದಲ್ಲದೆ ಅವನು ದೇವರ ಸೇವೆಗೆ ನೇಮಕವಾದ ಅಭಿಷೇಕ ತೈಲವನ್ನು ಹಾಗು ಪರಿಮಳದ್ರವ್ಯಗಳಿಂದ ಮಾಡಲಾದ ಅಪ್ಪಟವಾದ ಧೂಪದ್ರವ್ಯವನ್ನೂ ಸುಗಂಧದ್ರವ್ಯಕಾರರ ವಿಧಾನದ ಮೇರೆಗೆ ತಯಾರಿಸಿದನು.ವಿಮೋಚನಾಕಾಂಡ ೩೮:೧-೩೧೧. ಅವನು ಬಲಿಪೀಠವನ್ನು ಜಾಲಿಮರದಿಂದ ಮಾಡಿದನು. ಅದು ಐದು ಮೊಳ ಉದ್ದವಾಗಿಯೂ ಐದು ಮೊಳ ಅಗಲವಾಗಿಯೂ ಚಚ್ಚೌಕವಾಗಿತ್ತು; ಅದರ ಎತ್ತರ ಮೂರು ಮೊಳವಾಗಿತ್ತು.೨. ಅದರ ನಾಲ್ಕು ಮೂಲೆಗಳಲ್ಲಿ ನಾಲ್ಕು ಕೊಂಬೆಗಳನ್ನು ಮಾಡಿದನು; ಅವು ಬಲಿಪೀಠದ ಅಂಗಾಂಗಗಳಾಗಿದ್ದವು. ಆ ಪೀಠಕ್ಕೆ ತಾಮ್ರದ ತಗಡುಗಳನ್ನು ಹೊದಿಸಿದನು.೩. ಪೀಠದ ಉಪಕರಣಗಳನ್ನೆಲ್ಲಾ ಅಂದರೆ ಅದರ ಬಟ್ಟಲುಗಳು, ಸಲಿಕೆಗಳು, ಬೋಗುಣಿಗಳು, ಮುಳ್ಳುಗಳು, ಅಗ್ಗಿಷ್ಟಿಕೆಗಳು ಇವುಗಳನ್ನೆಲ್ಲಾ ತಾಮ್ರದಿಂದ ಮಾಡಿದನು.೪. ಪೀಠದ ಹೆಣಿಗೇ ಕೆಲಸದಿಂದ ತಾಮ್ರದ ಜಾಳಿಗೆಯನ್ನು ಮಾಡಿದನು. ಅದು ಪೀಠದ ಸುತ್ತಲಿರುವ ಕಟ್ಟೆಯ ಕೆಳಗೆ ಪೀಠದ ಬುಡದಿಂದ ನಡುವಿನ ತನಕ ಇರುವಂತೆ ಹಾಕಿದನು.೫. ಪೀಠವನ್ನು ಎತ್ತುವ ಗದ್ದಿಗೆಗಳನ್ನು ಸೇರಿಸುವುದಕ್ಕಾಗಿ ತಾಮ್ರದ ಜಾಳಿಗೆಯ ನಾಲ್ಕು ಮೂಲೆಗಳಲ್ಲಿ ನಾಲ್ಕು ಬಳೆಗಳನ್ನು ಎರಕಹೊಯಿದನು.೬. ಪೀಠವನ್ನು ಹೊರುವ ಗದ್ದಿಗೆಗಳನ್ನು ಜಾಲಿಮರದಿಂದ ಮಾಡಿ ತಾಮ್ರದ ತಗಡುಗಳನ್ನು ಹೊದಿಸಿ೭. ಅದರ ಎರಡು ಪಕ್ಕಗಳಲ್ಲಿರುವ ಬಳೆಗಳಲ್ಲಿ ಸೇರಿಸಿದನು. ಆ ಪೀಠವನ್ನು ಹಲಗೆಗಳಿಂದ ಪೆಟ್ಟಿಗೆಯಂತೆ ಮಾಡಿದನು.೮. ದೇವದರ್ಶನದ ಗುಡಾರದ ಬಾಗಿಲಲ್ಲಿ ಸೇವೆಮಾಡುತ್ತಿದ್ದ ಮಹಿಳೆಯರು ಕೊಟ್ಟ ತಾಮ್ರದ ದರ್ಪಣಗಳಿಂದ ನೀರಿನ ತೊಟ್ಟಿಯನ್ನೂ ಅದರ ಪೀಠವನ್ನೂ ಮಾಡಿದನು.೯. ಗುಡಾರಕ್ಕೆ ಅಂಗಳವನ್ನೂ ಮಾಡಿದನು. ಆ ಅಂಗಳದ ದಕ್ಷಿಣದ ಕಡೆಯಲ್ಲಿ ಇದ್ದ ತೆರೆಗಳನ್ನು ಹುರಿನಾರಿನ ಬಟ್ಟೆಯಿಂದ ಮಾಡಲಾಗಿತ್ತು. ಅವು ನೂರು ಮೊಳ ಉದ್ದವಾಗಿದ್ದವು.೧೦. ಆ ಕಡೆಯಲ್ಲಿ ಇಪ್ಪತ್ತು ಕಂಬಗಳೂ ಅವುಗಳಿಗೆ ಇಪ್ಪತ್ತು ತಾಮ್ರದ ಗದ್ದಿಗೇಕಲ್ಲುಗಳೂ ಇದ್ದವು; ಕಂಬಗಳ ಕೊಂಡಿಗಳೂ ಕಟ್ಟುಗಳೂ ಬೆಳ್ಳಿಯವು.೧೧. ಉತ್ತರ ಕಡೆಯಲ್ಲಿಯೂ ನೂರು ಮೊಳ ಉದ್ದವಾದ ತೆರೆಗಳೂ ಇಪ್ಪತ್ತು ಕಂಬಗಳೂ ಇಪ್ಪತ್ತು ತಾಮ್ರದ ಗದ್ದಿಗೇಕಲ್ಲುಗಳೂ ಇದ್ದವು; ಕಂಬಗಳ ಕೊಂಡಿಗಳೂ ಕಟ್ಟುಗಳೂ ಬೆಳ್ಳಿಯವು.೧೨. ಪಶ್ಚಿಮ ಕಡೆಯಲ್ಲಿ ಐವತ್ತು ಮೊಳ ಉದ್ದವಾದ ತೆರೆಗಳೂ ಹತ್ತು ಕಂಬಗಳೂ ಹತ್ತು ಗದ್ದಿಗೇಕಲ್ಲುಗಳೂ ಇದ್ದವು; ಕಂಬಗಳ ಕೊಂಡಿಗಳೂ ಕಟ್ಟುಗಳೂ ಬೆಳ್ಳಿಯವು೧೩. ಪೂರ್ವದಿಕ್ಕಿನಲ್ಲಿಯೂ ಅಂಗಳದ ಅಗಲವು ಐವತ್ತು ಮೊಳವಾಗಿತ್ತು.೧೪. ಅಲ್ಲಿ ಬಾಗಿಲಿನ ಎರಡು ಕಡೆಗಳಲ್ಲಿಯೂ ಹದಿನೈದು ಮೊಳ ಉದ್ದವಾದ ತೆರೆಗಳೂ ಅವುಗಳಿಗೆ ಮೂರು ಮೂರು ಗದ್ದಿಗೇಕಲ್ಲುಗಳೂ ಇದ್ದವು.೧೫. ***೧೬. ಅಂಗಳದ ಸುತ್ತಲಿರುವ ತೆರೆಗಳೆಲ್ಲಾ ಹುರಿನಾರಿನ ಬಟ್ಟೆಯಿಂದಲೇ ಮಾಡಲಾಗಿತ್ತು.೧೭. ಕಂಬಗಳ ಗದ್ದಿಗೇಕಲ್ಲುಗಳು ತಾಮ್ರದವುಗಳು; ಕಂಬಗಳ ಕೊಂಡಿಗಳೂ ಕಟ್ಟುಗಳೂ ಬೆಳ್ಳಿಯವು; ಅವುಗಳ ಬೋದಿಗೆಗಳು ಬೆಳ್ಳಿಯ ತಗಡುಗಳಿಂದ ಮಾಡಲ್ಪಟ್ಟವು. ಅಂಗಳದ ಎಲ್ಲಾ ಕಂಬಗಳಿಗೂ ಬೆಳ್ಳಿಯ ಕಟ್ಟುಗಳಿದ್ದವು.೧೮. ಅಂಗಳದ ಬಾಗಲಲ್ಲಿದ್ದ ಪರದೆಯು ಹುರಿನಾರಿನ ಬಟ್ಟೆಯಿಂದಲೂ ನೀಲಿ, ಊದ ಹಾಗು ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ಕಸೂತಿ ಕೆಲಸದವರ ಕೈಯಿಂದ ಮಾಡಲ್ಪಟ್ಟಿತು. ಅದರ ಉದ್ದ ಇಪ್ಪತ್ತು ಮೊಳವಾಗಿತ್ತು; ಅದರ ಅಗಲ ಅಂಗಳದ ಮಿಕ್ಕ ತೆರೆಗಳಂತೆ ಐದು ಮೊಳ.೧೯. ಬಾಗಿಲಿಗೆ ನಾಲ್ಕು ಕಂಬಗಳೂ ನಾಲ್ಕು ತಾಮ್ರದ ಗದ್ದಿಗೇಕಲ್ಲುಗಳೂ ಇದ್ದವು. ಕಂಬಗಳ ಕೊಂಡಿಗಳೂ ಕಟ್ಟುಗಳೂ ಬೋದಿಗೆಗಳಿಗೆ ಹೊದಿಸಲ್ಪಟ್ಟ ತಗಡುಗಳೂ ಬೆಳ್ಳಿಯವು.೨೦. ಗುಡಾರದ ಗೂಟಗಳೂ ಅಂಗಳದ ಗೂಟಗಳೂ ಎಲ್ಲಾ ತಾಮ್ರದವುಗಳು.೨೧. ದೇವದರ್ಶನದ ಗುಡಾರವನ್ನು ನಿರ್ಮಿಸಿದಾಗ ಉಪಯೋಗಿಸಿದ ಲೋಹಗಳ ಲೆಕ್ಕ ಮೋಶೆಯ ಆಜ್ಞೆಯ ಮೇರೆಗೆ ಮಹಾಯಾಜಕನಾದ ಆರೋನನ ಮಗ ಈತಾಮಾರನು ಲೇವಿಯರ ಕೈಯಿಂದ ಮಾಡಿಸಿದ ಪಟ್ಟಿ:೨೨. ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಿದವನು ಯೆಹೂದ ಕುಲದ ಹೂರನ ಮೊಮ್ಮಗನೂ ಊರಿಯ ಮಗನೂ ಆಗಿದ್ದ ಬೆಚಲೇಲನು.೨೩. ಅವನ ಜೊತೆಯಲ್ಲಿ ದಾನ್ ಕುಲದ ಅಹೀಸಾಮಾಕನ ಮಗನಾದ ಒಹೋಲೀಯಾಬನು ಸೇರಿದ್ದನು. ಇವನು ಶಿಲ್ಪಕಲೆ ಬಲ್ಲವನು. ಕಲಾತ್ಮಕ ಕೆಲಸವನ್ನು ನಿಯೋಜಿಸುವವನು ಮತ್ತು ನಾರಿನ ಬಟ್ಟೆಯಲ್ಲಿ ನೀಲಿ, ಊದ ಹಾಗು ಕಡುಗೆಂಪುವರ್ಣಗಳುಳ್ಳ ನೂಲಿನಿಂದ ಕಸೂತಿ ಕೆಲಸಮಾಡುವವನು.೨೪. ದೇವಮಂದಿರದ ವಿವಿಧ ಕೆಲಸದಲ್ಲಿ ಉಪಯೋಗಿಸಿದ ಕಾಣಿಕೆಯ ಬಂಗಾರದ ತೂಕ ದೇವರ ಸೇವೆಗೆ ನೇಮಕವಾದ ತೂಕದ ಮೇರೆಗೆ ಸುಮಾರು ಒಂದು ಸಾವಿರ ಕಿಲೋಗ್ರಾಂ ಇತ್ತು.೨೫. ಬೆಳ್ಳಿಯ ತೂಕ ಸುಮಾರು ೩,೪೩೦ ಕಿಲೋಗ್ರಾಂ ಇತ್ತು. ಇದು ಜನಗಣತಿಯಲ್ಲಿ ಸೇರಿಸಲಾಗಿದ್ದ ಇಪ್ಪತ್ತು ವರ್ಷದವರು ಮತ್ತು ಅದಕ್ಕೂ ಹೆಚ್ಚಿನ ವಯಸ್ಸಿನವರು ದೇವರ ಸೇವೆಗೆ ನೇಮಕವಾದ ನಾಣ್ಯದ ಮೇರೆಗೆ ಕೊಟ್ಟ ಮೊತ್ತ. ಆರುಲಕ್ಷ, ಮೂರು ಸಾವಿರದ ಐನೂರ ಐವತ್ತು ಮಂದಿಯನ್ನು ಜನಗಣತಿಯಲ್ಲಿ ಹೀಗೆ ಸೇರಿಸಲಾಗಿತ್ತು.೨೬. ***೨೭. ಈ ಬೆಳ್ಳಿಯಲ್ಲಿ ೩,೪೦೦ ಕಿಲೋಗ್ರಾಂನ್ನು ದೇವಮಂದಿರದ ನೂರು ಗದ್ದಿಗೇಕಲ್ಲುಗಳನ್ನು ಹಾಗು ತೆರೆಯ ಕಂಬಗಳ ಗದ್ದಿಗೇಕಲ್ಲುಗಳನ್ನು ಎರಕ ಹೊಯ್ಯಲು ಉಪಯೋಗಿಸಲಾಗಿತ್ತು. ಒಂದೊಂದು ಗದ್ದಿಗೆಗೆ ೩೪ ಕಿಲೋಗ್ರಾಂನ್ನು ಉಪಯೋಗಿಸಲಾಗಿತ್ತು.೨೮. ಮಿಕ್ಕ ೩೪ ಕಿಲೋಗ್ರಾಂನಿಂದ ಕಂಬಗಳಿಗೆ ಕೊಂಡಿಗಳನ್ನು ಹಾಗು ಕಟ್ಟುಗಳನ್ನು ಮಾಡಿ ಅವುಗಳ ಬೋದಿಗೆಗಳಿಗೆ ತಗಡುಗಳನ್ನು ಹೊದಿಸಿದ್ದರು.೨೯. ಜನರು ಕಾಣಿಕೆಯಾಗಿ ಕೊಟ್ಟ ತಾಮ್ರದ ಮೊತ್ತ ೨,೪೨೫ ಕಿಲೋಗ್ರಾಂ.೩೦. ಇದರಿಂದ ದೇವದರ್ಶನದ ಗುಡಾರದ ಬಾಗಿಲಿಗೆ ಗದ್ದಿಗೇಕಲ್ಲುಗಳನ್ನು, ತಾಮ್ರದ ಬಲಿಪೀಠವನ್ನು, ಅದರ ತಾಮ್ರದ ಜಾಳಿಗೆಯನ್ನು, ಬಲಿಪೀಠದ ಎಲ್ಲ ಉಪಕರಣಗಳನ್ನು೩೧. ಅಂಗಳದ ಸುತ್ತಲಿನ ಗದ್ದಿಗೇಕಲ್ಲುಗಳನ್ನು, ಗುಡಾರದ ಮತ್ತು ಅಂಗಳದ ಎಲ್ಲಾ ಗೂಟಗಳನ್ನು ಮಾಡಿದನು.ಕೀರ್ತನೆಗಳು ೨೨:೯-೧೫೯. ಮಾತೆಯುದರದಿಂದ ಎನ್ನನು ಹೊರಬರಿಸಿದವನು ನೀನು I ನಿಶ್ಚಿಂತೆಯಾ ಕೂಸನು ಆಕೆಯ ಮಡಿಲಲಿ ಇರಿಸಿದವನು ನೀನು II೧೦. ಆಗರ್ಭದಿಂದಲೆ ನೀನೆನಗಧಾರ I ತಾಯಿ ಹೆತ್ತಂದಿನಿಂದಲೇ ಕರ್ತಾರ II೧೧. ದುರುಳರು ಅರುಗಲೇ ಇರೆ, ನೆರವಿಗಾರೂ ಇಲ್ಲ I ನನ್ನಿಂದ ನೀ ದೂರಸರಿವುದು ಸರಿಯಲ್ಲ II೧೨. ಸುತ್ತಿಕೊಂಡಿವೆಯೆನ್ನನು ಬಲವಂತ ಹೋರಿಗಳು I ಮುತ್ತಿಕೊಂಡಿವೆ ಬಾಷಾನಿನ ಹಲವು ಗೂಳಿಗಳು II೧೩. ಗರ್ಜಿಸುವ ಉಗ್ರಸಿಂಹಗಳಂತೆ ವೈರಿಗಳು I ಕಾದಿಹರು ಬಾಯಿ ತೆರೆದು ನನ್ನ ಕಬಳಿಸಲು II೧೪. ಕ್ಷಯಿಸುತ್ತಿರುವೆ ನಾ ಚೆಲ್ಲಿದ ನೀರಿನಂತೆ I ಎಲುಬುಗಳು ಅಲುಗಿವೆ, ಎದೆ ಕರಗಿದೆ ಮೇಣದಂತೆ II೧೫. ಎನ್ನ ಗೋಣು ಒಣಗಿಹೋಗಿದೆ ಒಡೆದ ಮಡಕೆಯಂತೆ I ಅಂಗುಳಕೆ ಜಿಹ್ವೆ ಅಂಟಿದೆ; ಮಣ್ಣಿಗೆನ್ನ ಸೇರಿಸಿದೆ IIಜ್ಞಾನೋಕ್ತಿಗಳು ೮:೧೨-೨೧೧೨. ಜ್ಞಾನವೆಂಬ ನನಗೆ ಜಾಣ್ಮೆಯೆ ಸಹವಾಸಿ ಯುಕ್ತ ತಿಳುವಳಿಕೆ ನನಗೆ ಸಂಗಾತಿ.೧೩. ದೈವಭಯದಿಂದ ಹುಟ್ಟುತ್ತದೆ ಪಾಪದ್ವೇಷ; ಗರ್ವ, ಅಹಂಕಾರ, ದುರಾಚಾರ, ಕಪಟ ಭಾಷಣ ನನಗೆ ಅಸಹ್ಯ.೧೪. ಸದಾಲೋಚನೆ, ಸುಜ್ಞಾನ, ವಿವೇಕ ನನ್ನಲ್ಲಿವೆ; ಎಂತಲೇ ಶಕ್ತಿಸಾಮರ್ಥ್ಯ ಹೊಂದಿರುವೆ.೧೫. ರಾಜರು ಆಳುವುದು ನನ್ನ ಸಹಾಯದಿಂದ ಅಧಿಪತಿಗಳು ನ್ಯಾಯತೀರ್ಪು ಮಾಡುವುದು ನನ್ನಿಂದ.೧೬. ನನ್ನ ಮೂಲಕ ಭೂಪತಿಗಳು ರಾಜ್ಯ ಆಳುವರು ನಾಯಕರು ಭೂಮಿಯ ಮೇಲೆ ದೊರೆತನ ಮಾಡುವರು.೧೭. ನನ್ನನ್ನು ಪ್ರೀತಿಸುವವರನ್ನು ನಾನು ಪ್ರೀತಿಸುತ್ತೇನೆ ಹಂಬಲಿಸಿ ಹುಡುಕುವವರು ನನ್ನನ್ನು ಕಂಡುಕೊಳ್ಳುತ್ತಾರೆ.೧೮. ನನ್ನಲ್ಲಿವೆ ಶ್ರೀಮಂತಿಕೆ ಮತ್ತು ಘನತೆ ಶಾಶ್ವತ ಸಂಪತ್ತು ಹಾಗೂ ಸಮೃದ್ಧಿ.೧೯. ನಾನು ನೀಡುವ ಫಲ ಬಂಗಾರಕ್ಕಿಂತ ಶ್ರೇಷ್ಠ ನನ್ನಿಂದ ದೊರಕುವ ಆದಾಯ ಅಪ್ಪಟ ಬೆಳ್ಳಿಗಿಂತ ಅಮೂಲ್ಯ.೨೦. ನಾನು ಹಿಡಿದಿರುವ ಹಾದಿ ನೀತಿಯುತ ನಾನು ನಡೆಯುವುದು ನ್ಯಾಯಪಥ.೨೧. ನನ್ನನ್ನು ಪ್ರೀತಿಸುವವರಿಗೆ ದೊರಕಿಸುವೆ ಸಿರಿಸಂಪತ್ತನ್ನು ಬಾಧ್ಯವಾಗಿ ನಾನವರ ಬೊಕ್ಕಸಗಳನ್ನು ತುಂಬಿಸುವೆ ಭರ್ತಿಯಾಗಿ.ಮತ್ತಾಯನು ೨೬:೫೧-೭೫೫೧. ಕೂಡಲೆ ಯೇಸುವಿನ ಸಂಗಡ ಇದ್ದ ಒಬ್ಬನು ತನ್ನ ಖಡ್ಗವನ್ನು ಹಿರಿದು, ಪ್ರಧಾನಯಾಜಕನ ಆಳನ್ನು ಹೊಡೆದು ಅವನ ಕಿವಿಯನ್ನು ಕತ್ತರಿಸಿಬಿಟ್ಟನು.೫೨. ಆಗ ಯೇಸು ಅವನಿಗೆ, “ನಿನ್ನ ಖಡ್ಗವನ್ನು ಒರೆಗೆ ಹಾಕು. ಖಡ್ಗ ಎತ್ತಿದವರೆಲ್ಲರೂ ಖಡ್ಗದಿಂದಲೇ ಹತರಾಗುವರು.೫೩. ನಾನು ನನ್ನ ಪಿತನನ್ನು ಕೇಳಿಕೊಂಡರೆ ಅವರು ತಕ್ಷಣವೇ ಹನ್ನೆರಡು ದಳಗಳಿಗಿಂತಲೂ ಹೆಚ್ಚು ದೇವದೂತರನ್ನು ಕಳಿಸುವುದಿಲ್ಲವೆಂದುಕೊಂಡೆಯಾ?೫೪. ಆದರೆ, ಈ ಪ್ರಕಾರವೇ ಆಗಬೇಕು ಎನ್ನುವ ಪವಿತ್ರಗ್ರಂಥದ ವಾಕ್ಯ ನೆರವೇರುವುದಾದರೂ ಹೇಗೆ?” ಎಂದರು.೫೫. ಅದೇ ಸಂದರ್ಭದಲ್ಲಿ ಯೇಸುಸ್ವಾಮಿ ಜನರ ಗುಂಪನ್ನು ಉದ್ದೇಶಿಸಿ, “ದರೋಡೆಗಾರನನ್ನು ಹಿಡಿಯುವುದಕ್ಕೋ ಎಂಬಂತೆ ಖಡ್ಗಗಳನ್ನೂ ಲಾಠಿಗಳನ್ನೂ ಹಿಡಿದುಕೊಂಡು ನನ್ನನ್ನು ಬಂಧಿಸಲು ಬರಬೇಕಾಗಿತ್ತೆ? ನಾನು ಪ್ರತಿದಿನವೂ ಮಹಾದೇವಾಲಯದಲ್ಲಿ ಕುಳಿತು ಬೋಧನೆಮಾಡುತ್ತಾ ಇದ್ದೆ. ಆಗ ನೀವು ನನ್ನನ್ನು ಬಂಧಿಸಲಿಲ್ಲ.೫೬. ಆದರೆ ಪವಿತ್ರಗ್ರಂಥದ ಪ್ರವಾದನೆಗಳು ಈಡೇರಲೆಂದೇ ಇದೆಲ್ಲಾ ಜರುಗಿದೆ,” ಎಂದರು. ಆಗ ಶಿಷ್ಯರೆಲ್ಲರೂ ಯೇಸುವನ್ನು ತೊರೆದು ಪಲಾಯನಮಾಡಿದರು.೫೭. ಬಳಿಕ ಯೇಸುಸ್ವಾಮಿಯನ್ನು ಬಂಧಿಸಿದ್ದವರು ಅವರನ್ನು ಪ್ರಧಾನಯಾಜಕ ಕಾಯಫನ ಬಳಿಗೆ ಕರೆದೊಯ್ದರು.೫೮. ಅಲ್ಲಿ ಧರ್ಮಶಾಸ್ತ್ರಿಗಳೂ ಪ್ರಮುಖರೂ ಸಭೆಸೇರಿದ್ದರು. ಪೇತ್ರನಾದರೋ ದೂರದಿಂದ ಯೇಸುವನ್ನು ಹಿಂಬಾಲಿಸುತ್ತಿದ್ದನು. ಅವನು ಪ್ರಧಾನಯಾಜಕನ ಭವನದವರೆಗೂ ಬಂದು, ಹೊರಾಂಗಣವನ್ನು ಹೊಕ್ಕು ಪಹರೆಯವರ ಜೊತೆ ಕುಳಿತುಕೊಂಡನು. ಇದೆಲ್ಲ ಹೇಗೆ ಕೊನೆಗೊಳ್ಳುವುದೆಂದು ನೋಡಬೇಕೆಂಬ ಉದ್ದೇಶ ಅವನದಾಗಿತ್ತು.೫೯. ಇತ್ತ ಮುಖ್ಯಯಾಜಕರೂ ಉಚ್ಛನ್ಯಾಯಸಭೆಯ ಸದಸ್ಯರೆಲ್ಲರೂ ಯೇಸುವನ್ನು ಮರಣದಂಡನೆಗೆ ಗುರಿಪಡಿಸುವ ಸಲುವಾಗಿ ಸುಳ್ಳುಸಾಕ್ಷಿಯನ್ನು ಹುಡುಕುತ್ತಿದ್ದರು.೬೦. ಹಲವಾರು ಸುಳ್ಳುಸಾಕ್ಷಿಗಳು ಮುಂದೆ ಬಂದರು. ಆದರೂ ಸರಿಯಾದ ಒಂದು ಸಾಕ್ಷ್ಯವೂ ಅವರಿಗೆ ದೊರಕಲಿಲ್ಲ. ಕಡೆಗೆ ಇಬ್ಬರು ಮುಂದೆ ಬಂದು,೬೧. “ ‘ಮಹಾದೇವಾಲಯವನ್ನು ಕೆಡವಿಬಿಟ್ಟು ಅದನ್ನು ಮೂರು ದಿನಗಳಲ್ಲಿ ಮರಳಿ ಕಟ್ಟುವ ಶಕ್ತಿ ನನಗಿದೆ,’ ಎಂದು ಇವನು ಹೇಳಿದ್ದಾನೆ,” ಎಂದರು.೬೨. ಆಗ ಪ್ರಧಾನಯಾಜಕರು ಎದ್ದುನಿಂತು ಯೇಸುವನ್ನು ನೋಡಿ, “ಈ ಜನರು ನಿನಗೆ ವಿರುದ್ಧ ತಂದಿರುವ ಆರೋಪಣೆಗಳನ್ನು ಕೇಳುತ್ತಿರುವೆಯಾ? ಇವುಗಳಿಗೆ ನಿನ್ನ ಉತ್ತರ ಏನು?” ಎಂದು ಪ್ರಶ್ನಿಸಿದರು.೬೩. ಆದರೆ ಯೇಸು ಮೌನವಾಗಿದ್ದರು. “ಜೀವಂತ ದೇವರ ಮೇಲೆ ಆಣೆಯಿರಿಸಿ ನಾನು ನಿನ್ನನ್ನು ಕೇಳುತ್ತಿದ್ದೇನೆ, ‘ನೀನು ದೇವರ ಪುತ್ರ ಹಾಗೂ ಅಭಿಷಿಕ್ತನಾದ ಲೋಕೋದ್ಧಾರಕನೋ?’ ನಮಗೆ ಹೇಳು,” ಎಂದನು ಆ ಪ್ರಧಾನಯಾಜಕ.೬೪. ಅದಕ್ಕೆ ಯೇಸು, “ಅದು ನಿಮ್ಮ ಬಾಯಿಂದಲೇ ಬಂದಿದೆ; ಮಾತ್ರವಲ್ಲ, ನಾನು ಹೇಳುವುದನ್ನು ಕೇಳಿ; ನರಪುತ್ರನು ಸರ್ವಶಕ್ತ ದೇವರ ಬಲಗಡೆ ಆಸೀನನಾಗಿರುವುದನ್ನೂ ಆಕಾಶದ ಮೇಘಗಳ ಮೇಲೆ ಬರುವುದನ್ನೂ ಇನ್ನು ಮುಂದಕ್ಕೆ ಕಾಣುವಿರಿ,” ಎಂದರು.೬೫. ಇದನ್ನು ಕೇಳಿದ್ದೇ ಪ್ರಧಾನಯಾಜಕನು ತನ್ನ ಉಡುಪನ್ನು ಕೋಪದಿಂದ ಹರಿದುಕೊಂಡನು. “ಇವನು ದೇವದೂಷಣೆ ಆಡಿದ್ದಾನೆ. ಇನ್ನು ನಮಗೆ ಸಾಕ್ಷಿಗಳು ಏತಕ್ಕೆ?೬೬. ಇವನಾಡಿದ ದೇವದೂಷಣೆಯನ್ನು ನೀವೇ ಕೇಳಿದ್ದೀರಿ. ಈಗ ನಿಮ್ಮ ತೀರ್ಮಾನ ಏನು?” ಎಂದು ಕೇಳಿದನು. ಅವರು, “ಇವನಿಗೆ ಮರಣದಂಡನೆ ಆಗಬೇಕು,” ಎಂದು ಉತ್ತರಕೊಟ್ಟರು.೬೭. ಬಳಿಕ ಅವರು ಯೇಸುಸ್ವಾಮಿಯ ಮುಖದ ಮೇಲೆ ಉಗುಳಿದರು; ಅವರನ್ನು ಗುದ್ದಿದರು.೬೮. ಕೆಲವರು ಅವರ ಕೆನ್ನೆಗೆ ಹೊಡೆದು, “ಎಲೈ ಕ್ರಿಸ್ತಾ, ನಿನ್ನನ್ನು ಹೊಡೆದವರಾರು? ನಮಗೆ ಪ್ರವಾದಿಸಿ ಹೇಳು,” ಎಂದರು.೬೯. ಇತ್ತ ಪೇತ್ರನು ಹೊರಾಂಗಣದಲ್ಲಿ ಕುಳಿತು ಇದ್ದನು. ದಾಸಿಯೊಬ್ಬಳು ಆತನ ಬಳಿಗೆ ಬಂದು, “ನೀನು ಸಹ ಗಲಿಲೇಯದ ಯೇಸುವಿನೊಂದಿಗೆ ಇದ್ದವನು,” ಎಂದಳು.೭೦. “ನೀನು ಹೇಳುವುದು ಏನೆಂದು ನನಗೆ ತಿಳಿಯದು,” ಎಂದು ಪೇತ್ರನು ಎಲ್ಲರ ಮುಂದೆ ನಿರಾಕರಿಸಿದನು.೭೧. ಆತ ಅಲ್ಲಿಂದ ಎದ್ದು ಹೆಬ್ಬಾಗಿಲ ಬಳಿ ಬಂದಾಗ ಇನ್ನೊಬ್ಬ ದಾಸಿ ಆತನನ್ನು ಕಂಡು, “ಈತ ನಜರೇತಿನ ಯೇಸುವಿನೊಂದಿಗೆ ಇದ್ದವನೇ,” ಎಂದು ಅಲ್ಲಿದ್ದವರಿಗೆ ತಿಳಿಸಿದಳು.೭೨. ಪೇತ್ರನು, “ಆ ಮನುಷ್ಯ ಯಾರೋ ನಾನರಿಯೆ,” ಎಂದು ಆಣೆಯಿಟ್ಟು ಇನೊಮ್ಮೆ ನಿರಾಕರಿಸಿದನು.೭೩. ಸ್ವಲ್ಪಹೊತ್ತಾದ ಮೇಲೆ ಅಲ್ಲಿ ನಿಂತಿದ್ದವರು ಪೇತ್ರನ ಹತ್ತಿರಕ್ಕೆ ಬಂದು, “ಖಂಡಿತವಾಗಿ ನೀನೂ ಅವರಲ್ಲಿ ಒಬ್ಬನು. ನೀನು ಮಾತನಾಡುವ ರೀತಿಯೇ ನಿನ್ನನ್ನು ತೋರಿಸಿಕೊಡುತ್ತದೆ,” ಎಂದು ಹೇಳಿದರು.೭೪. ಆಗ ಪೇತ್ರನು ತನ್ನನ್ನೇ ಶಪಿಸಿಕೊಳ್ಳಲಾರಂಭಿಸಿ, “ಆ ಮನುಷ್ಯನನ್ನು ನಾನು ಖಂಡಿತವಾಗಿ ಅರಿಯೆನು,” ಎಂದು ಆಣೆಯಿಟ್ಟು ಹೇಳಿದನು.೭೫. ಆ ಕ್ಷಣವೇ ಕೋಳಿಕೂಗಿತು. “ಕೋಳಿಕೂಗುವ ಮೊದಲೇ, ‘ಆತನನ್ನು ನಾನರಿಯೆ’ಎಂದು ನನ್ನನ್ನು ಮೂರುಬಾರಿ ನಿರಾಕರಿಸುವೆ,” ಎಂದ ಸ್ವಾಮಿಯ ನುಡಿ ಪೇತ್ರನ ನೆನಪಿಗೆ ಬಂದಿತು. ಆತನು ಅಲ್ಲಿಂದ ಹೊರಗೆ ಹೋಗಿ, ಬಹಳವಾಗಿ ವ್ಯಥೆಪಟ್ಟು ಅತ್ತನು. Kannada Bible (KNCL) 2016 No Data