ಬೈಬಲ್ ಒಂದು ವರ್ಷದಲ್ಲಿ ಮಾರ್ಚ್ ೨೪ಧರ್ಮೋಪದೇಷಕಾಂಡ ೯:೧-೨೯೧. “ಇಸ್ರಯೇಲರೇ ಕೇಳಿ: ನಿಮಗಿಂತ ಮಹಾಬಲಿಷ್ಠ ಜನಾಂಗಗಳನ್ನು ಹಾಗು ಗಗನ ಮುಟ್ಟುವ ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನು ಸ್ವಾಧೀನಮಾಡಿಕೊಳ್ಳಲು, ನೀವು ಈ ಜೋರ್ಡನ್ ನದಿಯನ್ನು ಇಂದು ದಾಟಲಿದ್ದೀರಿ.೨. ಆ ನಾಡಿನವರು ಅನಾಕ್ಯರೆಂಬ ಬಲಿಷ್ಠರಾದ ಎತ್ತರದ ಜನರು. ಅವರ ವಿಷಯ ನಿಮಗೆ ತಿಳಿದೇ ಇದೆ; ‘ಅನಾಕ್ಯರ ಮುಂದೆ ನಿಲ್ಲಬಲ್ಲವರು ಯಾರಿದ್ದಾರೆ’ ಎಂಬ ಮಾತನ್ನು ಕೇಳಿದ್ದೀರಷ್ಟೆ.೩. ಆದುದರಿಂದ ನಿಮ್ಮ ದೇವರಾದ ಸರ್ವೇಶ್ವರ ತಾವೇ, ವಿರೋಧಿಗಳನ್ನು ದಹಿಸುವ ಬೆಂಕಿಯೋಪಾದಿಯಲ್ಲಿ ನಿಮ್ಮ ಮುಂದೆ ಹೋಗುತ್ತಾರೆಂದು ಈಗ ತಿಳಿದುಕೊಳ್ಳಿ. ಅವರೇ ಆ ವಿರೋಧಿಗಳನ್ನು ನಾಶಮಾಡುವರು; ನಿಮ್ಮ ಮುಂದೆ ಆ ವಿರೋಧಿಗಳು ಸೋತುಹೋಗುವಂತೆ ಮಾಡುವರು. ಸರ್ವೇಶ್ವರ ನಿಮಗೆ ಹೇಳಿದಂತೆ ನೀವು ಅವರನ್ನು ಹೊರಡಿಸಿ ಬೇಗನೆ ನಾಶಮಾಡುವಿರಿ.೪. “ನಿಮ್ಮ ದೇವರಾದ ಸರ್ವೇಶ್ವರ ಅವರನ್ನು ನಿಮ್ಮ ಬಳಿಯಿಂದ ಹೊರಡಿಸಿದನಂತರ ನೀವು ಮನಸ್ಸಿನಲ್ಲೇ, ‘ಸರ್ವೇಶ್ವರ ನಮ್ಮನ್ನು ಈ ನಾಡಿಗೆ ಕರೆತಂದು ಅದನ್ನು ನಮಗೆ ಸ್ವಾಧೀನಪಡಿಸಿದ್ದು ನಮ್ಮ ಪುಣ್ಯಫಲವೇ’ ಎಂದುಕೊಳ್ಳಬಾರದು. ಆ ಜನಾಂಗಗಳ ದುರ್ನಡತೆಯ ಕಾರಣದಿಂದಲೇ ಸರ್ವೇಶ್ವರ ನಿಮ್ಮ ಬಳಿಯಿಂದ ಅವರನ್ನು ಹೊರದಬ್ಬುತ್ತಾರೆ.೫. ನೀವು ಅವರ ನಾಡಿಗೆ ಬಂದು ಅದನ್ನು ಸ್ವಾಧೀನಮಾಡಿಕೊಳ್ಳುವುದಕ್ಕೆ ನಿಮ್ಮ ಪುಣ್ಯವೇ ಆಗಲಿ, ನಿಮ್ಮ ಸುಸ್ವಭಾವವೇ ಆಗಲಿ, ಕಾರಣವಲ್ಲ. ಆ ಜನಾಂಗಗಳ ದುರ್ನಡತೆಯ ಕಾರಣ ಹಾಗು ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಪಿತೃಗಳಾದ ಅಬ್ರಹಾಮ್, ಇಸಾಕ್, ಯಕೋಬರಿಗೆ ಪ್ರಮಾಣಪೂರ್ವಕವಾಗಿ ಮಾಡಿದ ವಾಗ್ದಾನವನ್ನು ನೆರವೇರಿಸಬೇಕೆಂಬ ಕಾರಣ ಅವರನ್ನು ನಿಮ್ಮ ಬಳಿಯಿಂದ ಹೊರಡಿಸಿಬಿಡುತ್ತಾರೆ.೬. ನಿಮ್ಮ ದೇವರಾದ ಸರ್ವೇಶ್ವರ ಆ ಉತ್ತಮ ನಾಡನ್ನು ನಿಮಗೆ ಸ್ವದೇಶವಾಗಿ ಕೊಡುವುದು ನಿಮ್ಮ ಪುಣ್ಯಫಲವಲ್ಲವೆಂದು ಚೆನ್ನಾಗಿ ತಿಳಿದುಕೊಳ್ಳಿ. ನೀವು ಅವರ ಆಜ್ಞೆಗೆ ಮಣಿಯದ ಜನರೇ ಆಗಿದ್ದೀರಿ.೭. “ನೀವು ಮರುಭೂಮಿಯಲ್ಲಿ ನಿಮ್ಮ ದೇವರಾದ ಸರ್ವೇಶ್ವರನಿಗೆ ಕೋಪ ಹುಟ್ಟಿಸಿದ್ದನ್ನು ನೆನಪುಮಾಡಿಕೊಳ್ಳಿ. ಅದನ್ನು ಮರೆಯಬೇಡಿ. ನೀವು ಈಜಿಪ್ಟ್ ದೇಶವನ್ನು ಬಿಟ್ಟಂದಿನಿಂದ ಈ ಸ್ಥಳಕ್ಕೆ ಬಂದ ದಿನದವರೆಗೂ ಸರ್ವೇಶ್ವರನ ಆಜ್ಞೆಗಳನ್ನು ಧಿಕ್ಕರಿಸುತ್ತಾ ಬಂದಿದ್ದೀರಿ.೮. ಉದಾಹರಣೆಗೆ, ಹೋರೇಬಿನಲ್ಲಿ ನೀವು ಸರ್ವೇಶ್ವರನಿಗೆ ಕೋಪವನ್ನು ಹುಟ್ಟಿಸಿದಿರಿ. ಆಗ ಅವರು ಬಲು ಸಿಟ್ಟುಗೊಂಡು ನಿಮ್ಮನ್ನು ಧ್ವಂಸಮಾಡಬೇಕೆಂದಿದ್ದರು.೯. ಸರ್ವೇಶ್ವರ ನಿಮ್ಮ ಸಂಗಡ ಮಾಡಿದ ಒಡಂಬಡಿಕೆಯನ್ನು ಬರೆದ ಆ ಕಲ್ಲಿನ ಹಲಗೆಗಳನ್ನು ತೆಗೆದುಕೊಳ್ಳುವುದಕ್ಕೆ ನಾನು ಬೆಟ್ಟವನ್ನು ಹತ್ತಿದಾಗ ಅನ್ನಪಾನಗಳನ್ನು ಬಿಟ್ಟು ಹಗಲಿರುಳು ನಲವತ್ತು ದಿನ ಆ ಬೆಟ್ಟದಲ್ಲಿದ್ದೆ.೧೦. ಆಗ ಸರ್ವೇಶ್ವರ ತಮ್ಮ ಕೈಯಿಂದಲೇ ಬರೆದ ಆ ಎರಡು ಕಲ್ಲಿನ ಹಲಗೆಗಳನ್ನು ನನ್ನ ವಶಕ್ಕೆ ಕೊಟ್ಟರು. ನೀವು ಸಭೆಕೂಡಿದ ದಿನದಲ್ಲಿ ಸರ್ವೇಶ್ವರ ಆ ಬೆಟ್ಟದ ಮೇಲೆ ಅಗ್ನಿಜ್ವಾಲೆಯೊಳಗಿಂದ ನಿಮ್ಮ ಸಂಗಡ ಹೇಳಿದ ಮಾತುಗಳು ಆ ಹಲಗೆಗಳಲ್ಲಿದ್ದವು.೧೧. ಆ ನಲವತ್ತು ದಿನಗಳು ಕಳೆದ ಮೇಲೆ ಸರ್ವೇಶ್ವರ ತಮ್ಮ ನಿಬಂಧನೆಯಿದ್ದ ಆ ಎರಡು ಕಲ್ಲಿನ ಹಲಗೆಗಳನ್ನು ನನಗೆ ಕೊಟ್ಟು, ‘ನೀನು ಬೇಗ ಇಲ್ಲಿಂದ ಇಳಿದುಹೋಗು;೧೨. ನೀನು ಈಜಿಪ್ಟ್ ದೇಶದಿಂದ ಕರೆದುಕೊಂಡು ಬಂದ ನಿನ್ನ ಜನರು ಕೆಟ್ಟುಹೋದರು; ನಾನು ಅವರಿಗೆ ಆಜ್ಞಾಪಿಸಿದ ಮಾರ್ಗವನ್ನು ಅವರು ಬೇಗನೆ ಬಿಟ್ಟುಹೋಗಿ, ತಮಗೆ ಲೋಹವಿಗ್ರಹವನ್ನು ಮಾಡಿಸಿಕೊಂಡಿದ್ದಾರೆ’ ಎಂದು ಹೇಳಿದರು.೧೩. “ಅದಲ್ಲದೆ ಅವರು ನನಗೆ, ‘ಈ ಜನರ ಸ್ವಭಾವವನ್ನು ನಾನು ನೋಡುತ್ತಾ ಬಂದಿದ್ದೇನೆ;೧೪. ಇವರು ನನ್ನ ಆಜ್ಞೆಗೆ ಬಗ್ಗದವರು. ಬಿಡು, ನಾನು ಅವರನ್ನು ನಾಶಮಾಡಿ ಅವರ ಹೆಸರನ್ನು ಭೂಮಿಯ ಮೇಲೆ ಉಳಿಯದಂತೆ ಮಾಡುವೆನು. ತರುವಾಯ ಅವರಿಗಿಂತಲೂ ಮಹಾಬಲಿಷ್ಠ ಜನಾಂಗವೊಂದು ನಿನ್ನಿಂದುಂಟಾಗುವಂತೆ ಮಾಡುವೆನು,’ ಎಂದು ಹೇಳಿದರು.೧೫. ಆಗ ನಾನು ಆ ಎರಡು ಆಜ್ಞಾಶಾಸನಗಳನ್ನು ನನ್ನ ಎರಡು ಕೈಗಳಲ್ಲಿ ಹಿಡಿದುಕೊಂಡು ಬೆಂಕಿಯಿಂದ ಉರಿಯುತ್ತಿದ್ದ ಆ ಬೆಟ್ಟದಿಂದ ಇಳಿದುಬಂದು ನೋಡಿದೆ.೧೬. ನೀವು ನಿಮ್ಮ ದೇವರಾದ ಸರ್ವೇಶ್ವರನಿಗೆ ದ್ರೋಹಿಗಳಾಗಿ ಲೋಹದ ಹೋರಿಕರುವನ್ನು ಮಾಡಿಸಿಕೊಂಡು ಸರ್ವೇಶ್ವರ ನಿಮಗೆ ಆಜ್ಞಾಪಿಸಿದ್ದ ಮಾರ್ಗವನ್ನು ಬೇಗನೆ ಬಿಟ್ಟುಹೋದದ್ದು ನನಗೆ ಕಂಡುಬಂದಿತು.೧೭. ಅದನ್ನು ನೋಡಿ ನಾನು ಕೈಯಲ್ಲಿದ್ದ ಆ ಎರಡು ಶಿಲಾಶಾಸನಗಳನ್ನು ನಿಮ್ಮ ಎದುರಿನಲ್ಲಿಯೇ ನೆಲಕ್ಕೆ ಹಾಕಿ ಒಡೆದುಬಿಟ್ಟೆ.೧೮. “ನೀವು ಹೀಗೆ ಅಪರಾಧಮಾಡಿ, ಸರ್ವೇಶ್ವರನ ದೃಷ್ಟಿಯಲ್ಲಿ ಕೆಟ್ಟದ್ದನ್ನು ನಡೆಸಿ, ಅವರನ್ನು ಕೋಪಗೊಳಿಸಿದ ಕಾರಣ ನಾನು ಮೊದಲಿನಂತೆ ಅನ್ನಪಾನಗಳನ್ನು ಬಿಟ್ಟು ನಲವತ್ತು ದಿನಗಳು ಹಗಲಿರುಳು ಸರ್ವೇಶ್ವರನ ಸನ್ನಿಧಿಯಲ್ಲೇ ಬಿದ್ದಿದ್ದೆ.೧೯. ಸರ್ವೇಶ್ವರ ನಿಮ್ಮ ಮೇಲೆ ಬಹು ಕೋಪಗೊಂಡು ನಿಮ್ಮನ್ನು ನಾಶಮಾಡಬೇಕೆಂದು ಆಲೋಚಿಸಿದ್ದರಿಂದ ನಾನು ಹೆದರಿದೆ. ಆದರೆ ಆ ಕಾಲದಲ್ಲೂ ಅವರು ನನ್ನ ಮನವಿಯನ್ನು ಕೇಳಿದರು.೨೦. ಅದಲ್ಲದೆ, ಸರ್ವೇಶ್ವರ ಆರೋನನ ಮೇಲೆ ಬಹಳ ಸಿಟ್ಟುಗೊಂಡು, ಅವನನ್ನೂ ನಾಶಮಾಡಬೇಕೆಂದಿದ್ದರು. ಆದುದರಿಂದ ನಾನು ಅವನ ಪರವಾಗಿಯೂ ಆ ಕಾಲದಲ್ಲಿ ಪ್ರಾರ್ಥಿಸಿದೆ.೨೧. ಮತ್ತು ನಿಮ್ಮ ಪಾಪಕ್ಕೆ ಕಾರಣವಾದ ಆ ಹೋರಿಕರುವನ್ನು ನಾನು ತೆಗೆದುಕೊಂಡು, ಬೆಂಕಿಯಿಂದ ಸುಟ್ಟು, ಒಡೆದು, ಅರೆದು, ಧೂಳುಮಾಡಿ ಬೆಟ್ಟದಿಂದ ಹರಿಯುವ ಹಳ್ಳದಲ್ಲಿ ಬಿಸಾಡಿಬಿಟ್ಟೆ.೨೨. “ತಬೇರಾ, ಮಸ್ಸಾ, ಕಿಬ್ರೋತ್ ಹತಾವಾ ಎಂಬ ಸ್ಥಳಗಳಲ್ಲೂ ನೀವು ಸರ್ವೇಶ್ವರನಿಗೆ ಕೋಪವನ್ನು ಹುಟ್ಟಿಸಿದಿರಿ.೨೩. ಅದೂ ಅಲ್ಲದೆ, ಕಾದೇಶ್ ಬರ್ನೇಯದಲ್ಲಿ ಸರ್ವೇಶ್ವರ ನಿಮಗೆ, ‘ಬೆಟ್ಟದ ಸೀಮೆಯನ್ನು ಹತ್ತಿ ನಾನು ನಿಮಗೆ ಕೊಟ್ಟಿರುವ ನಾಡನ್ನು ಸ್ವಾಧೀನಮಾಡಿಕೊಳ್ಳಿ,’ ಎಂದು ಅಪ್ಪಣೆ ಕೊಟ್ಟಾಗಲೂ ನೀವು ನಿಮ್ಮ ದೇವರಾದ ಸರ್ವೇಶ್ವರನ ಆ ಆಜ್ಞೆಯನ್ನು ಧಿಕ್ಕರಿಸಿ ಅವರನ್ನು ನಂಬದೆ ಅವರ ಮಾತನ್ನು ಅಲಕ್ಷ್ಯಮಾಡಿದಿರಿ.೨೪. ನನಗೆ ನಿಮ್ಮ ಪರಿಚಯವಾದಂದಿನಿಂದಲೂ ನೀವು ಸರ್ವೇಶ್ವರನ ಆಜ್ಞೆಯನ್ನು ಉಲ್ಲಂಘಿಸುತ್ತಾ ಬಂದಿದ್ದೀರಿ.೨೫. “ಸರ್ವೇಶ್ವರ ನಿಮ್ಮನ್ನು ನಾಶಮಾಡಬೇಕೆಂದಿದ್ದುದರಿಂದ ನಾನು ಆ ನಲವತ್ತು ದಿನವೂ ಹಗಲಿರುಳು ಅವರ ಸನ್ನಿಧಿಯಲ್ಲೇ ಬಿದ್ದಿದ್ದೆ.೨೬. ನಾನು ಅವರನ್ನು ಬೇಡಿಕೊಳ್ಳುತ್ತಾ, ‘ಸರ್ವೇಶ್ವರಾ, ದೇವರೇ, ನೀವು ನಿಮ್ಮ ಮಹಿಮೆಯಿಂದ ರಕ್ಷಿಸಿ, ನಿಮ್ಮ ಭುಜಬಲ ಪ್ರಯೋಗಿಸಿ ಈಜಿಪ್ಟಿನಿಂದ ಬಿಡುಗಡೆಮಾಡಿದ ನಿಮ್ಮ ಸ್ವಕೀಯ ಜನರನ್ನು ನಾಶಮಾಡಬೇಡಿ.೨೭. ಇವರ ಮೊಂಡುತನ, ದುಷ್ಟತನ, ಪಾಪ ಇವುಗಳನ್ನು ಮನಸ್ಸಿಗೆ ತೆಗೆದುಕೊಳ್ಳದೆ ನಿಮ್ಮ ದಾಸರಾದ ಅಬ್ರಹಾಮ್, ಇಸಾಕ್, ಯಕೋಬರನ್ನು ನೆನಪಿಗೆ ತಂದುಕೊಳ್ಳಿ.೨೮. ನೀವು ಯಾವ ದೇಶದಿಂದ ನಮ್ಮನ್ನು ಬರಮಾಡಿದಿರೋ ಆ ದೇಶದವರು, ‘ಸರ್ವೇಶ್ವರ ಇಸ್ರಯೇಲರಿಗೆ ವಾಗ್ದಾನಮಾಡಿದ ನಾಡಿಗೆ ಅವರನ್ನು ಸೇರಿಸಲಾರದೆ ಹಗೆಮಾಡಿ, ಮರುಭೂಮಿಯಲ್ಲಿ ಕೊಲ್ಲುವುದಕ್ಕೇ ಕರೆದುಕೊಂಡು ಹೋದರು’ ಎಂದು ಹೇಳುವುದಕ್ಕೆ ಆಸ್ಪದವಾದೀತು.೨೯. ಮಹಾಶಕ್ತಿಯಿಂದಲೂ ಭುಜಬಲದಿಂದಲೂ ನೀವು ಬಿಡಿಸಿದ ನಿಮ್ಮ ಸ್ವಕೀಯ ಜನ ಹಾಗು ಸೊತ್ತು ಇವರಲ್ಲವೇ? ಎಂದು ಬಿನ್ನೈಸಿದೆ.ಧರ್ಮೋಪದೇಷಕಾಂಡ ೧೦:೧-೨೨೧. “ಆ ಕಾಲದಲ್ಲಿ ಸರ್ವೇಶ್ವರ ನನಗೆ, ‘ನೀನು ಮೊದಲಿನ ಕಲ್ಲಿನ ಹಲಗೆಗಳಂತೆ ಬೇರೆ ಎರಡು ಹಲಗೆಗಳನ್ನು ಸಿದ್ಧಪಡಿಸಿಕೊಂಡು ಬೆಟ್ಟವನ್ನು ಹತ್ತಿ ನನ್ನ ಬಳಿಗೆ ಬಾ ಮತ್ತು ಒಂದು ಮರದ ಮಂಜೂಷವನ್ನು ಮಾಡಿಸಿಕೊಳ್ಳಬೇಕು.೨. ನೀನು ಒಡೆದುಬಿಟ್ಟ ಆ ಮೊದಲಿನ ಹಲಗೆಗಳಲ್ಲಿ ಬರೆದಿದ್ದ ಮಾತುಗಳನ್ನು ನಾನು ಈ ಹಲಗೆಗಳ ಮೇಲೆ ಬರೆಯುವೆನು. ತರುವಾಯ ನೀನು ಅವುಗಳನ್ನು ಆ ಮಂಜೂಷದಲ್ಲಿಡಬೇಕು’ ಎಂದು ಆಜ್ಞಾಪಿಸಿದರು.೩. ಆದಕಾರಣ, ನಾನು ಜಾಲೀಮರದಿಂದ ಮಂಜೂಷವನ್ನು ಮಾಡಿಸಿ, ಮೊದಲಿನ ಕಲ್ಲಿನ ಹಲಗೆಗಳಂತೆ ಬೇರೆ ಎರಡು ಹಲಗೆಗಳನ್ನು ಸಿದ್ಧಪಡಿಸಿ, ಆ ಎರಡು ಹಲಗೆಗಳನ್ನು ಕೈಯಲ್ಲಿ ಹಿಡಿದುಕೊಂಡು, ಬೆಟ್ಟವನ್ನು ಹತ್ತಿದೆ.೪. ಸರ್ವೇಶ್ವರ ಬೆಟ್ಟದ ಮೇಲೆ ಅಗ್ನಿಜ್ವಾಲೆಯೊಳಗಿಂದ, ನೀವು ಸಭೆಕೂಡಿದ ದಿನದಲ್ಲಿ, ನಿಮಗೆ ಹೇಳಿದ ಮಾತುಗಳನ್ನು ಅಂದರೆ, ಆ ಹತ್ತು ಆಜ್ಞೆಗಳನ್ನು ಅವರು ಮೊದಲಿನಂತೆಯೇ ಆ ಹಲಗೆಗಳ ಮೇಲೆ ಬರೆದರು.೫. ಸರ್ವೇಶ್ವರ ಹಲಗೆಗಳನ್ನು ನನ್ನ ವಶಕ್ಕೆ ಕೊಟ್ಟನಂತರ ನಾನು ಬೆಟ್ಟದಿಂದ ಇಳಿದುಬಂದೆ; ನನ್ನಿಂದ ಸಿದ್ಧ ಆಗಿದ್ದ ಮಂಜೂಷದಲ್ಲಿ ಅವರ ಅಪ್ಪಣೆಯ ಮೇರೆಗೆ ಅವುಗಳನ್ನು ಇಟ್ಟೆ; ಅವು ಇಂದಿನವರೆಗೂ ಅದರಲ್ಲೇ ಇವೆ.೬. (ಇಸ್ರಯೇಲರು ಯಾಕಾನ್ಯರ ಬಾವಿಗಳ ಬಳಿಯಿಂದ ಪ್ರಯಾಣಮಾಡಿ ಮೋಸೇರಕ್ಕೆ ಬಂದರು. ಅಲ್ಲಿ ಆರೋನನು ಸಾಯಲಾಗಿ ಅವನನ್ನು ಸಮಾಧಿಮಾಡಿದರು. ಅವನ ಮಗ ಎಲ್ಲಾಜಾರನು ಅವನಿಗೆ ಬದಲಾಗಿ ಮಹಾಯಾಜಕನಾದನು.೭. ಅಲ್ಲಿಂದ ಅವರು ಗುದ್ಗೋದಕ್ಕೂ ಗುದ್ಗೋದದಿಂದ ನೀರಿನ ಹಳ್ಳಗಳುಳ್ಳ ಯೊಟ್ಬಾತಕ್ಕೂ ಪ್ರಯಾಣಮಾಡಿದರು.)೮. “ಆ ಕಾಲದಲ್ಲಿ ಸರ್ವೇಶ್ವರ ಲೇವಿಕುಲದವರನ್ನು ಪ್ರತ್ಯೇಕಿಸಿ ತಮ್ಮ ಒಡಂಬಡಿಕೆಯ ಮಂಜೂಷವನ್ನು ಹೊರುವುದಕ್ಕು, ತಮ್ಮ ಸನ್ನಿಧಿಯಲ್ಲಿ ಸೇವೆಮಾಡುವುದಕ್ಕು ಹಾಗು ತಮ್ಮ ಹೆಸರಿನಲ್ಲಿ ಜನರನ್ನು ಆಶೀರ್ವದಿಸುವುದಕ್ಕು ಅವರನ್ನು ನೇಮಿಸಿದರು. ಅವರು ಇಂದಿನವರೆಗೂ ಆ ಕೆಲಸವನ್ನು ನಡೆಸುತ್ತಾರೆ.೯. ಆದುದರಿಂದ ಮಿಕ್ಕ ಇಸ್ರಯೇಲರಿಗೆ ದೊರಕಿದಂತೆ ಲೇವಿಯರಿಗೆ ಸ್ವಂತವಾದ ಭೂಸ್ವಾಸ್ತ್ಯ ದೊರಕಲಿಲ್ಲ. ನಿಮ್ಮ ದೇವರಾದ ಸರ್ವೇಶ್ವರ ಅವರಿಗೆ ಹೇಳಿದಂತೆ ಸರ್ವೇಶ್ವರಸ್ವಾಮಿಯೇ ಅವರ ಸೊತ್ತು.೧೦. “ನಾನು ಮುಂಚಿನಂತೆ ಹಗಲಿರುಳು ನಲವತ್ತು ದಿನವೂ ಬೆಟ್ಟದ ಮೇಲೆ ಇದ್ದೆ. ಸರ್ವೇಶ್ವರ ಆ ಕಾಲದಲ್ಲೂ ನನ್ನ ಪ್ರಾರ್ಥನೆಯನ್ನು ಕೇಳಿ, ನಿಮ್ಮನ್ನು ನಾಶಮಾಡಬೇಕೆಂಬ ಆಲೋಚನೆಯನ್ನು ಬಿಟ್ಟುಬಿಟ್ಟರು.೧೧. ತರುವಾಯ ಸರ್ವೇಶ್ವರ ನನಗೆ, ‘ನೀನು ಈ ಜನರ ಮುಂದುಗಡೆ ಹೊರಡು; ನಾನು ಇವರ ಪಿತೃಗಳಿಗೆ ಪ್ರಮಾಣ ಮಾಡಿಕೊಟ್ಟ ನಾಡನ್ನು ಇವರು ಸೇರಿ ಸ್ವಾಧೀನಮಾಡಿಕೊಳ್ಳಲಿ,’ ಎಂದು ಆಜ್ಞಾಪಿಸಿದರು.೧೨. “ಆದುದರಿಂದ ಇಸ್ರಯೇಲರೇ, ನೀವು ನಿಮ್ಮ ದೇವರಾದ ಸರ್ವೇಶ್ವರನಲ್ಲಿ ಭಯಭಕ್ತಿ ಉಳ್ಳವರಾಗಿರಬೇಕು; ಎಲ್ಲ ವಿಷಯಗಳಲ್ಲೂ ಅವರು ಹೇಳುವ ಮಾರ್ಗದಲ್ಲೇ ನಡೆಯಬೇಕು; ಅವರನ್ನು ಪ್ರೀತಿಸುತ್ತಾ ಸಂಪೂರ್ಣವಾದ ಹೃದಯದಿಂದಲೂ ಮನಸ್ಸಿನಿಂದಲೂ ಸೇವೆಮಾಡಬೇಕು;೧೩. ನಾನು ನಿಮ್ಮ ಒಳಿತಿಗಾಗಿ ಈಗ ಬೋಧಿಸುವ ಅವರ ಆಜ್ಞಾವಿಧಿಗಳನ್ನು ಅನುಸರಿಸುತ್ತಾ ಬರಬೇಕು. ಇಷ್ಟನ್ನೇ ಹೊರತು, ನಿಮ್ಮ ದೇವರಾದ ಸರ್ವೇಶ್ವರ ನಿಮ್ಮಿಂದ ಬೇರೇನನ್ನು ಕೇಳಿಕೊಳ್ಳುವುದಿಲ್ಲ.೧೪. ಇಗೋ ಕೇಳಿ: ಉನ್ನತೋನ್ನತವಾದ ಆಕಾಶಮಂಡಲವು, ಭೂಮಿಯು ಹಾಗು ಅದರಲ್ಲಿರುವ ಎಲ್ಲವು ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯವೇ.೧೫. ಆದರೂ ಅವರು ನಿಮ್ಮ ಪಿತೃಗಳಲ್ಲಿ ಇಷ್ಟವುಳ್ಳವರಾಗಿ ಅವರನ್ನು ಪ್ರೀತಿಸಿದರು. ಈಗ ನಿಮ್ಮ ಅನುಭವಕ್ಕೆ ಬಂದಿರುವಂತೆ, ಅವರ ತರುವಾಯ ಅವರ ಸಂತತಿಯವರಾದ ನಿಮ್ಮನ್ನೇ ಎಲ್ಲ ಜನಾಂಗಗಳಿಂದ ಆರಿಸಿಕೊಂಡರು.೧೬. ಆದುದರಿಂದ ಅವರ ಆಜ್ಞೆಗೆ ಮಣಿಯದ ನಿಮ್ಮ ದುಷ್ಟಸ್ವಭಾವವನ್ನು ಬಿಟ್ಟು ಬಿಟ್ಟು ನಿಮ್ಮ ಹೃದಯದಲ್ಲೇ ಸುನ್ನತಿಮಾಡಿಕೊಳ್ಳಿ.೧೭. ನಿಮ್ಮ ದೇವರಾದ ಸರ್ವೇಶ್ವರ ದೇವಾದಿದೇವರು, ಸರ್ವೇಶ್ವರಾಧಿ ಸರ್ವೇಶ್ವರ. ಅವರು ಪರಮ ದೇವರೂ ಪರಾಕ್ರಮಿಯೂ ಭಯಂಕರರೂ ಆಗಿದ್ದಾರೆ. ಅವರು ಮುಖದಾಕ್ಷಿಣ್ಯ ನೋಡುವವರಲ್ಲ, ಲಂಚ ತೆಗೆದುಕೊಳ್ಳುವವರಲ್ಲ.೧೮. ಅನಾಥರಿಗೆ ಮತ್ತು ವಿಧವೆಯರಿಗೆ ನ್ಯಾಯ ದೊರಕಿಸುತ್ತಾರೆ; ಪರದೇಷಿಗಳಾದವರಿಗೆ ಪ್ರೀತಿಯಿಂದ ಅನ್ನ ವಸ್ತ್ರಗಳನ್ನು ನೀಡುತ್ತಾರೆ.೧೯. ಈಜಿಪ್ಟ್ ದೇಶದಲ್ಲಿ ನೀವೇ ಪರದೇಶಿಗಳಾಗಿ ಇದ್ದುದನ್ನು ಜ್ಞಾಪಿಸಿಕೊಂಡು ಪರದೇಶದವರಲ್ಲಿ ಪ್ರೀತಿಯಿಡಿ.೨೦. ನಿಮ್ಮ ದೇವರಾದ ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಾಗಿ ಅವರಿಗೇ ಸೇವೆಸಲ್ಲಿಸಿ. ಅವರನ್ನು ಹೊಂದಿಕೊಂಡು ಅವರ ಹೆಸರಿನ ಮೇಲೆಯೇ ಪ್ರಮಾಣಮಾಡಬೇಕು.೨೧. ಅವರೊಬ್ಬರೇ ನಿಮ್ಮ ಸ್ತುತಿಸ್ತೋತ್ರಕ್ಕೆ ಪಾತ್ರರು; ಅವರು ನಿಮ್ಮ ದೇವರು; ನೀವು ನೋಡಿದ ಆ ಮಹಾಭಯಂಕರವಾದ ಮಹತ್ಕಾರ್ಯಗಳನ್ನು ನಿಮ್ಮ ಪರವಾಗಿ ನಡೆಸಿದವರು ಅವರೇ.೨೨. ನಿಮ್ಮ ಪಿತೃಗಳು, ಎಪ್ಪತ್ತುಮಂದಿ ಮಾತ್ರ. ಈಜಿಪ್ಟ್ ದೇಶಕ್ಕೆ ಹೋದರು; ಈಗಲಾದರೋ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಆಕಾಶದ ನಕ್ಷತ್ರಗಳಷ್ಟು ಅಸಂಖ್ಯರಾಗುವಂತೆ ಮಾಡಿದ್ದಾರೆ.ಕೀರ್ತನೆಗಳು ೩೭:೧೨-೧೭೧೨. ದುರ್ಜನನು ಹೂಡಿಹನು ಒಳಸಂಚು ಸಜ್ಜನನ ವಿರುದ್ಧ I ಕಟಕಟನೆ ಹಲ್ಲು ಕಡಿಯುತಿಹನಿದೋ ಆತನ ವಿರೋಧ II೧೩. ಅಂಥವನ ಕಂಡು ಪ್ರಭು ನಸುನಗುತಿಹನು I ಅವನಿಗೊದಗಲಿಹ ಗತಿಯನು ಕಾಣುತಿಹನು II೧೪. ಹಿಡಿದಿಹರು ದುರುಳರು ಕತ್ತಿಯನು, ಎತ್ತಿಹರು ಬಿಲ್ಲನು I ಕೆಡಹಲು ದೀನದಲಿತರನು, ಕೊಲ್ಲಲು ಸಜ್ಜನರನು II೧೫. ಹಿಡಿದ ಕತ್ತಿ ಹಿಡಿದವರೆದೆಯನೆ ಇರಿವುದು I ಎತ್ತಿದ ಬಿಲ್ಲುಬಾಣ ಸಿಡಿದು ಮುರಿವುದು II೧೬. ದುರುಳರ ವಿಪುಲ ಆಸ್ತಿಪಾಸ್ತಿಗಿಂತಲು I ಸತ್ಯವಂತರ ಬಡತನವೆನಿತೊ ಮಿಗಿಲು II೧೭. ಬತ್ತಿಹೋಗುವುದು ದುರ್ಜನರ ಭುಜಬಲ I ಸತ್ಯವಂತರಿಗೆ ಪ್ರಭುವೇ ಉನ್ನತಬಲ IIಜ್ಞಾನೋಕ್ತಿಗಳು ೧೨:೧೧-೧೧೧೧. ಉತ್ತು ವ್ಯವಸಾಯ ಮಾಡುವವನು ಹೊಟ್ಟೆತುಂಬ ಉಣ್ಣುವನು; ವ್ಯರ್ಥಕಾರ್ಯಗಳಲ್ಲಿ ಆಸಕ್ತಿಯುಳ್ಳವನು ಮತಿಹೀನನು.ಲೂಕನು ೧:೫೭-೮೦೫೭. ದಿನ ತುಂಬಿದಾಗ ಎಲಿಜಬೇತಳು ಗಂಡುಮಗುವಿಗೆ ಜನ್ಮವಿತ್ತಳು.೫೮. ಸರ್ವೇಶ್ವರ ಆಕೆಗೆ ವಿಶೇಷ ಕೃಪೆ ತೋರಿದ್ದಾರೆಂದು ಅರಿತುಕೊಂಡ ನೆರೆಹೊರೆಯವರೂ ಬಂಧುಬಳಗದವರೂ ಬಂದು ಆಕೆಯೊಡನೆ ಸೇರಿ ಸಂತೋಷಪಟ್ಟರು.೫೯. ಎಂಟನೆಯ ದಿನ ಮಗುವಿನ ಸುನ್ನತಿಗಾಗಿ ಅವರು ಬಂದು ಅದಕ್ಕೆ, ತಂದೆಯ ಹೆಸರನ್ನು ಅನುಸರಿಸಿ, ಜಕರೀಯನೆಂದು ನಾಮಕರಣ ಮಾಡುವುದರಲ್ಲಿ ಇದ್ದರು.೬೦. ಆದರೆ ಮಗುವಿನ ತಾಯಿ, “ಇಲ್ಲ, ಅದು ಕೂಡದು, ಅವನಿಗೆ ‘ಯೊವಾನ್ನ’ ಎಂಬ ಹೆಸರಿಡಬೇಕು,” ಎಂದಳು.೬೧. ಅದಕ್ಕೆ ಅವರು, “ನಿನ್ನ ಬಂಧುಬಳಗದವರಲ್ಲಿ ಯಾರಿಗೂ ಈ ಹೆಸರು ಇಲ್ಲವಲ್ಲಾ,” ಎಂದು ಹೇಳಿ,೬೨. “ಮಗುವಿಗೆ ಏನು ಹೆಸರಿಡಬೇಕೆನ್ನುತ್ತೀರಿ?” ಎಂದು ಮಗುವಿನ ತಂದೆಗೆ ಸನ್ನೆಮಾಡಿ ಕೇಳಿದರು.೬೩. ಆಗ ಜಕರೀಯನು ಬರೆಯುವ ಒಂದು ಹಲಗೆಯನ್ನು ತರಿಸಿಕೊಂಡು, ‘ಇವನ ಹೆಸರು ಯೊವಾನ್ನ’ ಎಂದು ಬರೆದನು. ಎಲ್ಲರೂ ಬೆರಗಾದರು.೬೪. ತಕ್ಷಣವೇ ಅವನಿಗೆ ಬಾಯಿ ಬಂದಿತು; ನಾಲಿಗೆ ಸಡಿಲವಾಯಿತು; ಅವನು ಮಾತನಾಡಲು ಆರಂಭಿಸಿ ದೇವರನ್ನು ಸ್ತುತಿಸಿದನು.೬೫. ನೆರೆಹೊರೆಯವರೆಲ್ಲರೂ ತಲ್ಲಣಗೊಂಡರು. ಈ ಸಮಾಚಾರ ಜುದೇಯದ ಗುಡ್ಡಗಾಡು ಪ್ರಾಂತ್ಯದಲ್ಲೆಲ್ಲಾ ಹರಡಿತು.೬೬. ಕೇಳಿದವರೆಲ್ಲರೂ ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ‘ಈ ಮಗು ಮುಂದೆ ಎಂಥವನಾಗುವನೋ!’ ಎಂದುಕೊಂಡರು. ನಿಶ್ಚಯವಾಗಿಯೂ ಸರ್ವೇಶ್ವರನ ಅಭಯ ಹಸ್ತವು ಈ ಮಗುವಿನ ಮೇಲಿತ್ತು.೬೭. ಆಗ ಮಗುವಿನ ತಂದೆಯಾದ ಜಕರೀಯನು ಪವಿತ್ರಾತ್ಮಭರಿತನಾಗಿ ಹೀಗೆಂದು ಪ್ರವಾದಿಸಿದನು:೬೮. ಸ್ತುತಿಸ್ತೋತ್ರ ಇಸ್ರಯೇಲಿನ ದೇವರಾದ ಸರ್ವೇಶ್ವರನಿಗೆ I ತಾನಾಗಿ ಬಂದು ತನ್ನ ಪ್ರಜೆಯನ್ನು ಬಿಡುಗಡೆ ಮಾಡಿದಾತನಿಗೆ II೬೯. ಉದಯಗೊಳಿಸಿರುವನಾತ ತನ್ನ ದಾಸ ದಾವೀದನ ವಂಶದೊಳು I ನಮಗೊಬ್ಬ ಶಕ್ತಿಯುತ ಮುಕ್ತಿದಾತನನು II೭೦. ಪುರಾತನ ಕಾಲದಿಂದಲೆ, ಪೂಜ್ಯ ಪ್ರವಾದಿಗಳ ಬಾಯಿಂದಲೆ I ಅರುಹಿಸಿರುವನು ಇಂತೆಂದು ನಮಗೆ: II೭೧. ‘ಹಗೆಗಳಿಂದ, ದ್ವೇಷಿಗಳೆಲ್ಲರ ಹಿಡಿತದಿಂದ ನಿಮಗೆ ಅನುಗ್ರಹಿಸುವೆನು ಸಂರಕ್ಷಣೆ’ II೭೨. ವ್ಯಕ್ತಪಡಿಸಿರುವನು ಪೂರ್ವಜರಿಗೆ ಪ್ರಮಾಣಿಸಿದ ಪ್ರೀತಿಯನು I ಸ್ಮರಿಸಿಕೊಂಡಿರುವನು ತನ್ನ ಪವಿತ್ರ ಒಡಂಬಡಿಕೆಯನು II೭೩. ಪಿತಾಮಹ ಅಬ್ರಹಾಮನಿಗಿತ್ತ ಮಾತಿಗನುಸಾರ I೭೪. ನಮಗಿತ್ತಿರುವರು ಶತ್ರುಗಳಿಂದ ರಕ್ಷಿಸುವನೆಂಬ ಅಭಯ II೭೫. ಹೀಗೆ ಜೀವಮಾನವೆಲ್ಲ ನಾವು ಆತನ ಸೇವೆ ಮಾಡುವಂತಾಯಿತು ನಿರ್ಭೀತರಾಗಿ I ಆತನ ಸನ್ನಿಧಿಯಲ್ಲಿ ಬಾಳುವಂತಾಯಿತು ಪುನೀತರಾಗಿ, ಸದ್ಭಕ್ತರಾಗಿ II೭೬. ಸುಕುಮಾರಾ, ನೀನೆನಿಸಿಕೊಳ್ಳುವೆ ‘ಪರಾತ್ಪರನ ಪ್ರವಾದಿ’ I೭೭. ಸರ್ವೇಶ್ವರನ ಮಾರ್ಗವನು ಸಜ್ಜುಗೊಳಿಸುವೆ, ಮುಂದಾಗಿ ತೆರಳಿ II ಪಾಪಕ್ಷಮೆಯನು ಸಾರುವೆ ಆತನ ಪ್ರಜೆಗೆ I ಈ ಮೂಲಕ ಜೀವೋದ್ಧಾರದ ಜ್ಞಾನವನ್ನೀಯುವೆ ಆ ಜನರಿಗೆ II೭೮. ಕೃಪಾಸಾಗರ, ದಯಾಮಯ ನಮ್ಮ ದೇವನು I ಆತನ ಕರುಣೆಯಿಂದ ನಮಗಾಯಿತು ಮೇಲಿಂದ ಅರುಣೋದಯವು II೭೯. ಬೆಳಗಿಸಲು ಇರುಳಿನಲು, ಮರಣದ ಮುಸುಕಿನಲು ಬಾಳುವವರನು I ನಮ್ಮ ಕಾಲುಗಳನ್ನೂರಿಸಿ ನಡೆಯಲು ಶಾಂತಿಪಥದೊಳು II೮೦. ಬಾಲಕನು ಬೆಳೆದಂತೆ ಆತ್ಮಶಕ್ತಿಯುತನಾದನು. ಇಸ್ರಯೇಲ್ ಜನರಿಗೆ ಬಹಿರಂಗವಾಗಿ ಕಾಣಿಸಿಕೊಳ್ಳುವವರೆಗೂ ಅವನು ಬೆಂಗಾಡಿನಲ್ಲೇ ವಾಸಿಸುತ್ತಿದ್ದನು. Kannada Bible (KNCL) 2016 No Data