ಬೈಬಲ್ ಒಂದು ವರ್ಷದಲ್ಲಿ ಮೇ ೨೪ಸಮುವೇಲನು ೨ ೧೯:೧-೪೩೧. ಅರಸನು ಅಬ್ಷಾಲೋಮನಿಗಾಗಿ ಅಳುತ್ತಾ ಗೋಳಾಡುತ್ತಾ ಇದ್ದಾನೆಂಬ ಸಮಾಚಾರ ಯೋವಾಬನಿಗೆ ಮುಟ್ಟಿತು.೨. ಅರಸನು ಮಗನಿಗಾಗಿ ಪ್ರಲಾಪಿಸುತ್ತಿದ್ದಾನೆಂಬುದು ಎಲ್ಲ ಜನರಿಗೂ ಗೊತ್ತಾಗಿ ಅವರ ಜಯಘೋಷ ಗೋಳಾಟವಾಗಿ ಮಾರ್ಪಟ್ಟಿತು.೩. ಜನರು ಆ ದಿನದ ಯುದ್ಧದಲ್ಲಿ ಸೋತು ಓಡಿಬಂದಿರುವವರೋ ಎಂಬಂತೆ, ನಾಚಿಕೆಯಿಂದ ಕಳ್ಳತನವಾಗಿ ಊರನ್ನು ಹೊಕ್ಕರು.೪. ಅರಸನು ತನ್ನ ಮುಖ ಮುಚ್ಚಿಕೊಂಡು, “ಮಗ ಅಬ್ಷಾಲೋಮನೇ, ಅಬ್ಷಾಲೋಮನೇ, ನನ್ನ ಮಗನೇ, ಮಗನೇ,” ಎಂದು ಬಹಳವಾಗಿ ಗೋಳಾಡಿದನು.೫. ಯೋವಾಬನು ಅರಸನ ಬಳಿಗೆ ಹೋಗಿ, “ನಿಮ್ಮನ್ನೂ ನಿಮ್ಮ ಗಂಡುಹೆಣ್ಣು ಮಕ್ಕಳನ್ನೂ ಹೆಂಡತಿಯರನ್ನೂ ಉಪಪತ್ನಿಯರನ್ನೂ ರಕ್ಷಿಸಿದಂಥ ನಿಮ್ಮ ಸೇವಕರನ್ನು ಈ ದಿನ ಅಪಮಾನಪಡಿಸಿದಿರಿ.೬. ನೀವು ಶತ್ರುಗಳನ್ನು ಪ್ರೀತಿಸುವವರೂ ಮಿತ್ರರನ್ನು ದ್ವೇಷಿಸುವವರೂ ಆಗಿದ್ದೀರಿ; ನೀವು ನಿಮ್ಮ ಸೇನಾಧಿಪತಿಗಳನ್ನೂ ಸೈನಿಕರನ್ನೂ ಲಕ್ಷಿಸುವವರಲ್ಲವೆಂದು ಈಗ ತೋರಿಸಿಕೊಟ್ಟಿರಿ. ಈ ದಿನ ನಾವೆಲ್ಲರೂ ಸತ್ತು ಅಬ್ಷಾಲೋಮನೊಬ್ಬನೇ ಉಳಿದಿದ್ದರೆ ನಿಮಗೆ ಸಂತೋಷವಾಗುತ್ತಿತ್ತೆಂದು ಇದರಿಂದ ತಿಳಿಯಬೇಕಷ್ಟೆ!೭. ಈಗ ಎದ್ದು ಹೋಗಿ ನಿಮ್ಮ ಸೇವಕರನ್ನು ದಯಾಭಾವದಿಂದ ಮಾತಾಡಿಸಿ, ನೀವು ಹೀಗೆ ಮಾಡದಿದ್ದರೆ ಸರ್ವೇಶ್ವರನಾಣೆ, ಸಾಯಂಕಾಲವಾಗುವಷ್ಟರಲ್ಲಿ ಎಲ್ಲರೂ ನಿಮ್ಮನ್ನು ಬಿಟ್ಟುಹೋಗುವರು. ಯೌವನಕಾಲದಿಂದ ಈವರೆಗೆ ನಿಮಗೆ ಬಂದೊದಗಿದ ಕೇಡುಗಳಲ್ಲಿ ಇದು ದೊಡ್ಡದಾಗುವುದು,” ಎಂದು ಹೇಳಿದನು.೮. ಆಗ ಅರಸನು ಎದ್ದು ಬಂದು ಊರುಬಾಗಿಲಲ್ಲಿ ಕುಳಿತುಕೊಂಡನು. “ಇಗೋ, ಅರಸರು ಊರುಬಾಗಿಲಲ್ಲಿ ಕುಳಿತುಕೊಂಡಿದ್ದಾರೆ,” ಎಂಬ ಸುದ್ದಿ ಪ್ರಜೆಗಳಿಗೆ ಮುಟ್ಟಿದಾಗ ಅವರೆಲ್ಲರೂ ಬಂದು ಅವನ ಸುತ್ತಲೂ ನೆರೆದರು.೯. ಇಸ್ರಯೇಲರೆಲ್ಲರು ತಮ್ಮ ತಮ್ಮ ನಿವಾಸಗಳಿಗೆ ಓಡಿಹೋಗಿದ್ದರು. ಇಸ್ರಯೇಲ್ ಕುಲಗಳ ಜನರೆಲ್ಲರು, “ಅರಸ ದಾವೀದನು ನಮ್ಮನ್ನು ಫಿಲಿಷ್ಟಿಯರ ಕೈಯಿಂದಲೂ ಬೇರೆ ಎಲ್ಲಾ ವೈರಿಗಳ ಕೈಯಿಂದಲೂ ತಪ್ಪಿಸಿ ಕಾಪಾಡಿದ. ಆದರೆ ಅಬ್ಷಾಲೋಮನ ಕಾರಣ ನಾಡನ್ನೇ ಬಿಟ್ಟು ಓಡಿಹೋಗುವಂತೆ ಮಾಡಿದ.೧೦. ಆದರೆ ನಾವು ಅಭಿಷೇಕಿಸಿದ ಅಬ್ಷಾಲೋಮನು ಯುದ್ಧದಲ್ಲಿ ಸತ್ತ. ಹೀಗಿರುವಲ್ಲಿ ಅರಸ ದಾವೀದನನ್ನು ಮರಳಿ ಕರೆದುಕೊಂಡು ಬರಬಾರದೇಕೆ? ಸುಮ್ಮನೆ ಕುಳಿತಿರುವುದೇಕೆ?” ಎಂದು ಮಾತಾಡಿಕೊಂಡರು.೧೧. ಇಸ್ರಯೇಲರು ಹೀಗೆ ಮಾತಾಡಿಕೊಂಡ ಸಮಾಚಾರ ದಾವೀದನಿಗೆ ಮುಟ್ಟಿತು. ಅವನು ಯಾಜಕರಾದ ಚಾದೋಕ್ ಹಾಗು ಎಬ್ಯಾತಾರರಿಗೆ, “ನೀವು ನನ್ನ ಹೆಸರಿನಲ್ಲಿ ಯೆಹೂದಕುಲದ ಹಿರಿಯರಿಗೆ, ‘ಅರಸನಾದ ನನ್ನನ್ನು ಮತ್ತೆ ಅರಮನೆಗೆ ಕರೆದುಕೊಂಡು ಹೋಗುವುದರಲ್ಲಿ ನೀವೇಕೆ ಹಿಂದುಳಿದಿರುವಿರಿ?೧೨. ನೀವು ನನ್ನ ರಕ್ತಸಂಬಂಧಿಗಳಾದ ಸಹೋದರರು; ಆದುದರಿಂದ ನನ್ನನ್ನು ಕರೆದುಕೊಂಡು ಹೋಗುವುದರಲ್ಲಿ ನೀವು ಹಿಂದುಳಿದಿರುವುದು ಸರಿಯಲ್ಲ’೧೩. ಎಂಬುದಾಗಿ ತಿಳಿಸಿರಿ. ಅದಲ್ಲದೆ ಅಮಾಸನಿಗೆ, ‘ನೀನೂ ನನ್ನ ರಕ್ತಸಂಬಂಧಿಯಾಗಿದ್ದಿ; ನಾನು ಯೋವಾಬನ ಬದಲಿಗೆ ನಿನ್ನನ್ನೇ ನಿತ್ಯಸೇನಾಪತಿಯನ್ನಾಗಿ ಮಾಡುತ್ತೇನೆ. ಹಾಗೆ ಮಾಡದಿದ್ದರೆ ಸರ್ವೇಶ್ವರ ನನಗೆ ಮಾಡಬೇಕಾದದ್ದನ್ನು ಮಾಡಲಿ,’ ಎಂಬುದಾಗಿಯೂ ತಿಳಿಸಿರಿ,” ಎಂದು ಹೇಳಿ ಕಳುಹಿಸಿದನು.೧೪. ಆಗ ಯೆಹೂದ್ಯರೆಲ್ಲರೂ ಏಕ ಮನಸ್ಸಿನಿಂದ ಅರಸನ ಕಡೆಗೆ ತಿರುಗಿಕೊಂಡು ಅವನಿಗೆ, ” ನೀವು ನಿಮ್ಮ ಎಲ್ಲಾ ಸೇವಕರೊಡನೆ ಮರಳಿ ಬನ್ನಿ,” ಎಂದು ಹೇಳಿಕಳುಹಿಸಿದರು.೧೫. ಅರಸನು ಸ್ವದೇಶಕ್ಕೆ ಹೋಗಬೇಕೆಂದು ಹೊರಟು ಜೋರ್ಡನಿಗೆ ಬಂದಾಗ ಯೆಹೂದಕುಲದವರು ಅವನನ್ನು ಸ್ವಾಗತಿಸುವುದಕ್ಕೂ ಜೋರ್ಡನ್ ನದಿಯನ್ನು ದಾಟಿಸುವುದಕ್ಕೂ ಗಿಲ್ಗಾಲಿಗೆ ಬಂದರು.೧೬. ಬೆನ್ಯಾಮೀನ್ ಕುಲದ ಗೇರನ ಮಗನೂ ಬಹುರೀಮಿನವನೂ ಆದ ಶಿಮ್ಮಿಯು ತವಕದಿಂದ ಬಂದು ಅರಸನಾದ ದಾವೀದನನ್ನು ಸ್ವಾಗತಿಸುವುದಕ್ಕೆ ಯೆಹೂದ ಕುಲದವರನ್ನು ಕೂಡಿಕೊಂಡನು.೧೭. ಅವನ ಜೊತೆಯಲ್ಲಿ ಸಾವಿರ ಮಂದಿ ಬೆನ್ಯಾಮೀನ್ಯರಿದ್ದರು. ಇದಲ್ಲದೆ ಸೌಲನ ಮನೆಯ ಸೇವಕನಾದ ಚೀಬನು ತನ್ನ ಹದಿನೈದು ಮಂದಿ ಮಕ್ಕಳನ್ನೂ ಇಪ್ಪತ್ತು ಮಂದಿ ಸೇವಕರನ್ನೂ ಕರೆದುಕೊಂಡು ಬಂದನು;೧೮. ಅರಸನ ಮುಂದೆಯೇ ಪೂರ್ಣಾಸಕ್ತಿಯಿಂದ ಜೋರ್ಡನ್ ನದಿಯಲ್ಲಿಳಿದು ಅರಸನ ಮನೆಯವರನ್ನು ದಾಟಿಸುವುದಕ್ಕೂ ಅವರಿಗೆ ಬೇಕಾದ ಸಹಾಯಮಾಡುವುದಕ್ಕೂ ದಡದಿಂದ ದಡಕ್ಕೆ ಹೋಗುತ್ತಾ ಬರುತ್ತಾ ಇದ್ದನು. ಅರಸನು ಜೋರ್ಡನ್ ನದಿಯನ್ನು ದಾಟಿಬಂದ ಕೂಡಲೆ ಗೇರನ ಮಗನಾದ ಶಿಮ್ಮಿಯು ಸಾಷ್ಟಾಂಗ ನಮಸ್ಕಾರ ಮಾಡಿದನು.೧೯. :ಒಡೆಯರು ನನ್ನನ್ನು ಅಪರಾಧಿಯೆಂದೆಣಿಸದಿರಲಿ; ನನ್ನ ಒಡೆಯರು ಜೆರುಸಲೇಮನ್ನು ಬಿಟ್ಟುಹೋಗುವಾಗ ನಾನು ಮೂರ್ಖತನದಿಂದ ಮಾಡಿದ್ದನ್ನೆಲ್ಲಾ ಅವರು ನೆನಸದಿರಲಿ, ಲಕ್ಷಿಸದಿರಲಿ.೨೦. ಒಡೆಯರೇ, ತಮ್ಮ ಸೇವಕನಾದ ನಾನು ಪಾಪಮಾಡಿದೆನೆಂದು ಒಪ್ಪಿಕೊಳ್ಳುತ್ತೇನೆ. ಆದುದರಿಂದಲೇ ನಾನು ಈ ದಿನ ಅರಸನನ್ನು ಸ್ವಾಗತಿಸುವುದಕ್ಕೆ ಎಲ್ಲಾ ಜೋಸೇಫ್ಯರಲ್ಲಿ ಮೊದಲಿಗನಾಗಿ ಬಂದಿದ್ದೇನೆ,” ಎಂದು ಹೇಳಿದನು.೨೧. ಚೆರೂಯಳ ಮಗ ಅಬೀಷೈಯು, “ಸರ್ವೇಶ್ವರನ ಅಭಿಷಿಕ್ತನನ್ನು ಶಪಿಸಿದ್ದಕ್ಕಾಗಿ ಶಿಮ್ಮಿಗೆ ಮರಣದಂಡನೆಯಾಗಬೇಕಲ್ಲವೇ?’ ಎಂದನು.೨೨. ಅದಕ್ಕೆ ದಾವೀದನು, “ಚೆರೂಯಳ ಮಕ್ಕಳೇ, ನನಗೆ ನಿಮ್ಮ ಗೊಡವೆಯೇ ಬೇಡ; ನೀವು ಈ ದಿನ ನನ್ನನ್ನು ಆ ಕೃತ್ಯಕ್ಕೆ ಪ್ರೇರಿಸುವವರಾಗಿದ್ದೀರಿ. ಇಂಥ ದಿನದಲ್ಲಿ ಇಸ್ರಯೇಲರಲ್ಲಿ ಒಬ್ಬನಿಗೆ ಮರಣದಂಡನೆ ಆಗುವುದು ಸರಿಯೇ? ನಾನು ಇಸ್ರಯೇಲರ ಅರಸನೆಂಬುವುದು ಈ ದಿನ ಸ್ಪಷ್ಟವಾಗಿ ಗೊತ್ತಾಯಿತು,” ಎಂದು ನುಡಿದನು.೨೩. ಅನಂತರ ಅರಸನು ಶಿಮ್ಮಿಗೆ, “ನಿನಗೆ ಮರಣಶಿಕ್ಷೆಯಾಗುವುದಿಲ್ಲ,” ಎಂದು ಪ್ರಮಾಣಮಾಡಿ ಹೇಳಿದನು.೨೪. ತರುವಾಯ ಸೌಲನ ಮೊಮ್ಮಗನಾದ ಮೆಫೀಬೋಶೆತನು ಅರಸನ ದರ್ಶನಕ್ಕೆ ಬಂದನು. ಅರಸನು ಜೆರುಸಲೇಮನ್ನು ಬಿಟ್ಟಂದಿನಿಂದ ಸುರಕ್ಷಿತನಾಗಿ ಹಿಂದಿರುಗುವವರೆಗೂ ಇವನು ತನ್ನ ಪಾದಗಳನ್ನು ತೊಳೆದುಕೊಂಡಿರಲಿಲ್ಲ; ಮೀಸೆಯನ್ನು ಕತ್ತರಿಸಿರಲಿಲ್ಲ; ಬಟ್ಟೆಗಳನ್ನು ಒಗೆಸಿಕೊಂಡಿರಲಿಲ್ಲ.೨೫. ಇವನು ಜೆರುಸಲೇಮಿನಿಂದ ಅರಸನ ದರ್ಶನಕ್ಕೆ ಬಂದಾಗ ಅರಸನು, “ಮೆಫೀಬೋಶೆತನೇ, ನೀನು ನನ್ನ ಸಂಗಡ ಏಕೆ ಬರಲಿಲ್ಲ?” ಎಂದು ಕೇಳಿದನು.೨೬. ಅವನು, “ಒಡೆಯರೇ, ಅರಸರೇ, ನನ್ನ ಸೇವಕ ನನ್ನನ್ನು ವಂಚಿಸಿದ. ಕುಂಟನಾದ ನಾನು ಅವನಿಗೆ, ‘ಕತ್ತೆಗೆ ತಡಿಹಾಕು, ನಾನು ಕುಳಿತುಕೊಂಡು ಅರಸರ ಜೊತೆಯಲ್ಲೇ ಹೋಗಬೇಕು’ ಎಂದು ಆಜ್ಞಾಪಿಸಿದೆ.೨೭. ಅವನು ಹಾಗೆ ಮಾಡದೆ ನನ್ನ ಒಡೆಯರಾದ ಅರಸರ ಬಳಿಗೆ ಬಂದು ನನ್ನ ವಿಷಯದಲ್ಲಿ ಚಾಡಿಹೇಳಿದ. ಅರಸರು ದೇವದೂತನ ಹಾಗಿರುತ್ತೀರಿ. ತಮಗೆ ಸರಿಕಂಡದ್ದನ್ನು ಮಾಡಿ.೨೮. ನನ್ನ ತಂದೆಯ ಮನೆಯವರೆಲ್ಲರೂ ಅರಸರಾದ ನನ್ನ ಒಡೆಯರ ದೃಷ್ಟಿಯಲ್ಲಿ ಮರಣಕ್ಕೆ ಪಾತ್ರರಾಗಿದ್ದರು. ಆದರೂ ತಮ್ಮ ಸೇವಕನಾದ ನನ್ನನ್ನು ಭೋಜನಕ್ಕೆ ತಮ್ಮ ಪಂಕ್ತಿಯಲ್ಲಿ ಕುಳ್ಳಿರಿಸಿಕೊಂಡಿರಿ. ಅರಸರಿಗೆ ಹೆಚ್ಚಾಗಿ ಮೊರೆ ಇಡುವುದಕ್ಕೆ ನಾನು ಯೋಗ್ಯನಲ್ಲ,” ಎಂದು ಉತ್ತರಕೊಟ್ಟನು.೨೯. ಆಗ ಅರಸನು, “ಹೆಚ್ಚು ಮಾತು ಏಕೆ? ಹೊಲವನ್ನು ನೀನು ಹಾಗು ಚೀಬ ಭಾಗಮಾಡಿಕೊಳ್ಳಬೇಕು. ಇದೇ ನನ್ನ ತೀರ್ಪು,” ಎಂದು ಹೇಳಿದನು.೩೦. ಅದಕ್ಕೆ ಮೆಫೀಬೋಶೆತನು, “ಚೀಬನು ಎಲ್ಲವನ್ನು ತಾನೇ ತೆಗೆದುಕೊಂಡರೂ ತೆಗೆದುಕೊಳ್ಳಲಿ; ನನ್ನ ಒಡೆಯರಾದ ಅರಸರು ತಮ್ಮ ಮನೆಗೆ ಸುರಕ್ಷಿತವಾಗಿ ಬಂದದ್ದೇ ಸಾಕು,” ಎಂದನು.೩೧. ಗಿಲ್ಯಾದ್ಯನಾದ ಬರ್ಜಿಲ್ಲೈ ಎಂಬುವನು ಅರಸನನ್ನು ಬೀಳ್ಕೊಡುವುದಕ್ಕಾಗಿ ರೋಗೆಲೀಮಿನಿಂದ ಜೋರ್ಡನಿಗೆ ಬಂದಿದ್ದನು.೩೨. ಇವನು ಎಂಬತ್ತು ವರ್ಷದ ಮುದುಕ. ಇವನು ಬಹು ಶ್ರೀಮಂತನಾಗಿದ್ದುದರಿಂದ ದಾವೀದನು ಮಹನಯಿಮಿನಲ್ಲಿದ್ದ ಅವಧಿಯಲ್ಲಿ ಅವನ ಜೀವನಕ್ಕೆ ಬೇಕಾದುದನ್ನು ಇವನೇ ಒದಗಿಸಿಕೊಡುತ್ತಿದ್ದನು.೩೩. ಅರಸನು ಆ ಬರ್ಜಿಲ್ಲೈಗೆ, “ನನ್ನ ಜೊತೆಯಲ್ಲಿ ನದಿಯ ಆಚೆಗೆ ಬಾ; ನಾನು ಜೆರುಸಲೇಮಿನಲ್ಲಿ ನಿನ್ನನ್ನು ಹತ್ತಿರವೇ ಇಟ್ಟುಕೊಂಡು ಸಾಕುತ್ತೇನೆ,” ಎಂದನು.೩೪. ಅದಕ್ಕೆ ಬರ್ಜಿಲ್ಲೈಯು, “ಇಷ್ಟು ವಯಸ್ಸು ಕಳೆದವನಾದ ನಾನು ಅರಸರ ಸಂಗಡ ಜೆರುಸಲೇಮಿಗೆ ಬರುವುದು ಹೇಗೆ?೩೫. ಈಗ ನಾನು ಎಂಬತ್ತು ವರ್ಷದವನು. ಒಳ್ಳೆಯದು ಕೆಟ್ಟದು ಇವುಗಳ ಭೇದ ನನಗಿನ್ನು ತಿಳಿಯುವುದೇ? ನಿಮ್ಮ ಸೇವಕನಾದ ನನಗೆ ಇನ್ನು ಅನ್ನಪಾನಗಳ ರುಚಿ ಗೊತ್ತಾಗುವುದೇ? ಗಾಯನ ಮಾಡುವ ಸ್ತ್ರೀಪುರುಷರ ಸ್ವರಗಳು ನನಗೆ ಕೇಳಿಸುತ್ತವೆಯೇ? ನಾನು ನನ್ನ ಒಡೆಯರಾದ ಅರಸರಿಗೆ ಸುಮ್ಮನೆ ಏಕೆ ಹೊರೆಯಾಗಿರಬೇಕು?೩೬. ನದಿ ದಾಟಿ ಸ್ವಲ್ಪ ದೂರಕ್ಕೆ ನಿಮ್ಮ ಸಂಗಡ ಬರುತ್ತೇನೆ. ಅರಸರಾದ ನೀವು ನನಗೇಕೆ ಇಂಥ ಉಪಕಾರ ಮಾಡಬೇಕು?೩೭. ದಯವಿಟ್ಟು ನಿಮ್ಮ ಸೇವಕನಾದ ನನಗೆ ಹಿಂದಿರುಗಿ ಹೋಗುವುದಕ್ಕೆ ಅಪ್ಪಣೆಯಾಗಲಿ; ನಾನು ನನ್ನ ತಂದೆತಾಯಿಗಳ ಸಮಾಧಿಯಿರುವ ಸ್ವಂತ ಊರಿಗೆ ಹೋಗಿ ಅಲ್ಲೇ ಸಾಯುವೆನು. ಇಗೋ, ಇಲ್ಲಿ ನಿಮ್ಮ ಸೇವಕನಾದ ಕಿಮ್ಹಾಮನಿರುತ್ತಾನೆ. ನನ್ನ ಒಡೆಯರಾದ ಅರಸರು ಇವನನ್ನು ಕರೆದುಕೊಂಡು ಹೋಗಿ ತಮ್ಮ ಇಷ್ಟವಿದ್ದಂತೆ ಇವನಿಗೆ ದಯೆತೋರಿಸಿ,” ಎಂದನು.೩೮. ಅದಕ್ಕೆ ಅರಸನು, “ಕಿಮ್ಹಾಮನು ನನ್ನ ಸಂಗಡ ಬರಲಿ; ಅವನಿಗೆ ನಿನ್ನ ಇಷ್ಟದಂತೆ ದಯೆತೋರುತ್ತೇನೆ. ಇನ್ನೂ ಏನೇನು ಮಾಡಬೇಕೆನ್ನುತ್ತೀಯೋ ಅದೆಲ್ಲವನ್ನು ಮಾಡುತ್ತೇನೆ,” ಎಂದು ಹೇಳಿದನು.೩೯. ಜನರೆಲ್ಲರು ನದಿ ದಾಟಿದರು. ಅರಸನು ದಾಟಿದ ಮೇಲೆ ಬರ್ಜಿಲ್ಲೈಯನ್ನು ಮುದ್ದಿಟ್ಟು ಆಶೀರ್ವದಿಸಿದನು. ಅನಂತರ ಬರ್ಜಿಲ್ಲೈಯು ತನ್ನ ಊರಿಗೆ ಮರಳಿದನು.೪೦. ಅರಸನು ಕಿಮ್ಹಾಮನೊಡನೆ ಗಿಲ್ಗಾಲಿಗೆ ತೆರಳಿದನು. ಎಲ್ಲ ಯೆಹೂದ್ಯರು ಹಾಗು ಇಸ್ರಯೇಲರಲ್ಲಿ ಅರ್ಧಜನರು ಅರಸನನ್ನು ಕರೆದುಕೊಂಡು ಹೋದರು.೪೧. ಆಗ ಇಸ್ರಯೇಲರೆಲ್ಲರು ಅರಸನ ಮುಂದೆ ಬಂದು, “ನಮ್ಮ ಸಹೋದರರಾದ ಯೆಹೂದ್ಯರು ನಮಗೆ ತಿಳಿಸದೆ ತಾವೇ ಹೋಗಿ ಅರಸರನ್ನೂ ಅವರ ಮನೆಯವರನ್ನೂ ಅವರೊಡನೆ ಇದ್ದ ಜನರನ್ನೂ ಜೋರ್ಡನ್ ನದಿದಾಟಿಸಿ ಕರೆದುಕೊಂಡು ಬಂದದ್ದೇಕೆ?” ಎಂದು ಕೇಳಿದರು.೪೨. ಅದಕ್ಕೆ ಯೆಹೂದ್ಯರೆಲ್ಲರು, “ಅರಸರು ನಮಗೆ ಸಮೀಪಬಂಧು; ನೀವು ಅದಕ್ಕಾಗಿ ಸಿಟ್ಟುಗೊಳ್ಳುವುದೇಕೆ? ನಾವೇನು ಅರಸರ ಖರ್ಚಿನಿಂದ ಊಟಮಾಡಿದೆವೋ? ಅವರು ನಮಗೆ ಏನಾದರೂ ಕೊಟ್ಟಿರುವರೋ?’ ಎಂದು ಉತ್ತರಕೊಟ್ಟರು.೪೩. ಆಗ ಇಸ್ರಯೇಲರು ಯೆಹೂದ್ಯರಿಗೆ, “ಅರಸರಲ್ಲಿ ನಮಗೆ ಹತ್ತುಪಾಲು ಉಂಟಲ್ಲವೆ? ದಾವೀದನ ವಿಷಯದಲ್ಲೂ ನಮಗೆ ಹೆಚ್ಚು ಉಂಟು. ಹೀಗಿರುವುದರಿಂದ ನೀವು ನಮ್ಮನ್ನು ತಿರಸ್ಕರಿಸಿದ್ದೇಕೆ? ನಮ್ಮ ಅರಸರನ್ನು ಕರೆದುಕೊಂಡು ಬರುವ ವಿಷಯದಲ್ಲಿ ಮೊದಲು ಮಾತಾಡಿದವರು ನಾವಲ್ಲವೇ?’ ಎಂದರು. ಇಸ್ರಯೇಲರ ವಾದಕ್ಕಿಂತ ಯೆಹೂದ್ಯರ ವಾದ ಉಗ್ರವಾಗಿತ್ತು.ಸಮುವೇಲನು ೨ ೨೦:೧-೨೬೧. ಬೆನ್ಯಾಮೀನ್ ಕುಲದವನೂ ಬಿಕ್ರೀಯ ಮಗನೂ ಆದ ಶೆಬನೆಂಬ ಒಬ್ಬ ನೀಚ ವ್ಯಕ್ತಿ ಅಲ್ಲಿಗೆ ಹೇಗೋ ಬಂದಿದ್ದನು. ಅವನು ಕಹಳೆಯನ್ನು ಊದಿ, “ಇಸ್ರಯೇಲರೇ, ದಾವೀದನಿಗೂ ನಮಗೂ ಏನೂ ಸಂಬಂಧವಿಲ್ಲ. ಜೆಸ್ಸೆಯನ ಮಗನಲ್ಲಿ ನಮಗೆ ಹಕ್ಕುಭಾದ್ಯತೆಯಿಲ್ಲ. ಪ್ರತಿ ಒಬ್ಬನೂ ನಮ್ಮ ನಮ್ಮ ನಿವಾಸಗಳಿಗೆ ತೆರಳೋಣ,” ಎಂದನು.೨. ಆಗ ಇಸ್ರಯೇಲರೆಲ್ಲರೂ ದಾವೀದನನ್ನು ಬಿಟ್ಟು ಬಿಕ್ರೀಯ ಮಗನಾದ ಶೆಬನನ್ನು ಹಿಂಬಾಲಿಸಿದರು. ಆದರೆ ಯೆಹೂದ್ಯರು ತಮ್ಮ ಅರಸನನ್ನು ಅಂಟಿಕೊಂಡು ಜೋರ್ಡನ್ ತಗ್ಗಿನಿಂದ ಜೆರುಸಲೇಮಿನವರೆಗೂ ಅವನ ಜೊತೆಯಲ್ಲೇ ಹೋದರು.೩. ಅರಸನಾದ ದಾವೀದನು ಜೆರುಸಲೇಮಿಗೆ ಬಂದ ಮೇಲೆ ತಾನು ಮನೆಕಾಯುವುದಕ್ಕಾಗಿ ಇಟ್ಟಿದ್ದ ತನ್ನ ಹತ್ತು ಮಂದಿ ಉಪಪತ್ನಿಯರನ್ನು ಪ್ರತ್ಯೇಕವಾದ ಒಂದು ಮನೆಯಲ್ಲಿಟ್ಟು ಅವರಿಗೆ ಅನ್ನವಸ್ತ್ರ ಕೊಡುತ್ತಿದ್ದನು. ಆದರೆ ಅವರನ್ನು ತಿರುಗಿ ಕೂಡಲಿಲ್ಲ. ಅವರು ಜೀವದಿಂದ ಇರುವವರೆಗೂ ವಿಧವೆಯರಂತೆ ಇದ್ದು ಕಾವಲಲ್ಲಿರಬೇಕಾಯಿತು.೪. ಅನಂತರ ಅರಸನು ಅಮಾಸನಿಗೆ, “ನೀನು ಮೂರು ದಿನಗಳೊಳಗಾಗಿ ಯೆಹೂದ್ಯರನ್ನು ಕೂಡಿಸಿಕೊಂಡು ಇಲ್ಲಿ ಸಿದ್ಧವಾಗಿರು,” ಎಂದು ಆಜ್ಞಾಪಿಸಿದನು.೫. ಅವನು ಹೋಗಿ ಯೆಹೂದ್ಯರನ್ನು ಕೂಡಿಸಿದನು. ಆದರೆ ಅವನು ನೇಮಕವಾದ ಸಮಯಕ್ಕೆ ಬರದೆ ತಡಮಾಡಿದನು.೬. ಆದ್ದರಿಂದ ಅರಸನು ಅಬೀಷೈಗೆ, “ಅಬ್ಷಾಲೋಮನಿಗಿಂತ ಬಿಕ್ರೀಯ ಮಗನಾದ ಶೆಬನು ನಮಗೆ ಹೆಚ್ಚಿನ ಕೇಡು ಮಾಡುವಂತಿದೆ. ಆದುದರಿಂದ ನೀನು ನನ್ನ ಸ್ವಂತ ಆಳುಗಳನ್ನು ತೆಗೆದುಕೊಂಡು ಹೋಗಿ ಅವನನ್ನು ಬೆನ್ನಟ್ಟಿ ಬಂಧಿಸು. ಇಲ್ಲವಾದರೆ ಅವನು ನಮ್ಮ ಕಣ್ಣಿಗೆ ಮರೆಯಾಗಿ ಹೋಗಿ ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನು ಸೇರಿಕೊಳ್ಳಬಹುದು,” ಎಂದನು.೭. ಆಗ ಅವನು ಯೋವಾಬನ ಸೈನಿಕರನ್ನೂ, ‘ಕೆರೇತ್ಯ’ ಹಾಗು ‘ಪೆಲೇತ್ಯ’ ಎಂಬ ಕಾವಲುದಂಡುಗಳನ್ನೂ ಎಲ್ಲಾ ಶೂರರನ್ನೂ ಕರೆದುಕೊಂಡು ಬಿಕ್ರೀಯ ಮಗನಾದ ಶೆಬನನ್ನು ಬೆನ್ನಟ್ಟುವುದಕ್ಕಾಗಿ ಜೆರುಸಲೇಮಿನಿಂದ ಹೊರಟನು.೮. ಅವರು ಗಿಬ್ಯೋನಿನಲ್ಲಿದ್ದ ದೊಡ್ಡ ಕಲ್ಲನ್ನು ಸಮೀಪಿಸಿದಾಗ ಅಮಾಸನು ಅವರೆದುರಿಗೆ ಬಂದನು. ಯುದ್ಧವಸ್ತ್ರಗಳನ್ನು ಧರಿಸಿಕೊಂಡಿದ್ದ ಯೋವಾಬನು ಅವನನ್ನು ವಂದಿಸುವುದಕ್ಕೆ ಹೋಗುತ್ತಿರುವಾಗ ಅವನ ಸೊಂಟಕ್ಕೆ ಕಟ್ಟಿದ್ದ ಕತ್ತಿ ಒರೆಯಿಂದ ಕೆಳಗೆ ಬಿದ್ದಿತು.೯. ಅವನು ಅಮಾಸನನ್ನು, “ಸಹೋದರಾ, ಕ್ಷೇಮವೇ?” ಎಂದು ಕೇಳಿ ಮುದ್ದಿಡುವುದಕ್ಕೋ ಎಂಬಂತೆ ಬಲಗೈಯಿಂದ ಅವನ ಗಡ್ಡವನ್ನು ಹಿಡಿದು, ಕೈಯಲ್ಲಿದ್ದ ಕತ್ತಿಯನ್ನು ಗಮನಿಸದಿದ್ದ ಅಮಾಸನ ಹೊಟ್ಟೆಯನ್ನು ಇರಿದನು.೧೦. ಅವನ ಕರುಳೆಲ್ಲಾ ಹೊರಗೆ ಬಂದುವು. ಎರಡನೆಯ ಸಾರಿ ಇರಿಯಬೇಕಾಗಿರಲಿಲ್ಲ; ಅಷ್ಟಕ್ಕೆ ಅವನು ಸತ್ತನು.೧೧. “ಯೋವಾಬನೂ ಅವನ ತಮ್ಮನಾದ ಅಬೀಷೈಯೂ ಬಿಕ್ರೀಯ ಮಗನಾದ ಶೆಬನನ್ನು ಹಿಂದಟ್ಟುವುದಕ್ಕಾಗಿ ಮುಂದೆ ನಡೆದಾಗ ಯೋವಾಬನ ಆಳುಗಳಲ್ಲೊಬ್ಬನು ಅಮಾಸನ ಹತ್ತಿರ ನಿಂತು, “ದಾವೀದ ಹಾಗು ಯೋವಾಬರ ಕಡೆಯವರು ಯೋವಾಬನನ್ನು ಹಿಂಬಾಲಿಸಲಿ,” ಎಂದು ಕೂಗಿದನು.೧೨. ಮಾರ್ಗದ ಮಧ್ಯದಲ್ಲಿ ರಕ್ತದೊಳಗೆ ಹೊರಳಾಡುತ್ತಿದ್ದ ಅಮಾಸನನ್ನು ನೋಡುತ್ತಾ ಎಲ್ಲಾ ಜನರು ನಿಂತರು. ಬಂದವರೆಲ್ಲರೂ ಅಲ್ಲೇ ನಿಲ್ಲುವುದನ್ನು ಆ ಆಳು ಕಂಡು ಅಮಾಸನ ಶವವನ್ನು ದಾರಿಯಿಂದ ಎಳೆದು, ಹೊಲದಲ್ಲಿ ಹಾಕಿ, ಅದನ್ನು ಬಟ್ಟೆಯಿಂದ ಮುಚ್ಚಿದನು.೧೩. ಶವವನ್ನು ಆಚೆ ಹಾಕಿದ ನಂತರ ಜನರೆಲ್ಲರು ಬಿಕ್ರೀಯ ಮಗನಾದ ಶೆಬನನ್ನು ಬೆನ್ನಟ್ಟುವುದಕ್ಕಾಗಿ ಯೋವಾಬನನ್ನು ಹಿಂಬಾಲಿಸಿದರು.೧೪. ಶೆಬನು ಇಸ್ರಯೇಲ್ ಪ್ರಾಂತ್ಯಗಳಲ್ಲಿ ಸಂಚರಿಸುತ್ತಾ ಅಬೇಲ್ಬೇತ್ಮಾಕಾ ಎಂಬಲ್ಲಿಗೆ ಬಂದನು. ಬೇರೆಯವರೆಲ್ಲರೂ ಕೂಡಿಕೊಂಡು ಅವನೊಡನೆ ಆ ಊರನ್ನು ಸೇರಿದರು.೧೫. ಯೋವಾಬನ ಕಡೆಯವರು ಅಬೇಲ್ಬೇತ್ಮಾಕಾ ಊರಿಗೆ ಮುತ್ತಿಗೆಹಾಕಿದರು. ಅದರ ಹೊರಗೋಡೆಯ ಹತ್ತಿರ ಒಂದು ಮಣ್ಣಿನ ದಿಬ್ಬವನ್ನು ಮಾಡಿ ಗೋಡೆಯ ಕೆಳಗೆ ಅಗೆಯುತ್ತಾ ಅದನ್ನು ಕೆಡವಿಬಿಡುವುದಕ್ಕೆ ಪ್ರಯತ್ನಿಸಿದರು.೧೬. ಆಗ ಆ ಊರಿನ ಬುದ್ಧಿವಂತೆಯಾದ ಒಬ್ಬ ಮಹಿಳೆ ಅವರಿಗೆ, “ಕೇಳಿ, ದಯವಿಟ್ಟು ಕೇಳಿ; ಯೋವಾಬನು ಮಾತಾಡುವುದಕ್ಕಾಗಿ ನನ್ನ ಬಳಿಗೆ ಬರಬೇಕೆಂದು ಹೇಳಿ,” ಎಂದು ಕೂಗಿದಳು. ಯೋವಾಬನು ಬಂದನು. ಆ ಸ್ತ್ರೀ,೧೭. “ನೀವು ಯೋವಾಬೋ?’ ಎಂದು ಅವನನ್ನು ಕೇಳಿದಳು. ಅವನು, “ಹೌದು, ನಾನೇ,” ಎಂದು ಉತ್ತರಕೊಟ್ಟನು. ಆಕೆ, “ನಿಮ್ಮ ದಾಸಿಯ ಮಾತನ್ನು ಕೇಳಿ,” ಎನ್ನಲು ಅವನು, “ಕೇಳುತ್ತೇನೆ,” ಎಂದನು.೧೮. ಆಗ ಆಕೆ, “ಪೂರ್ವಕಾಲದಲ್ಲಿ ಜನರು ಆಬೇಲಿನವರ ಆಲೋಚನೆಯನ್ನು ಕೇಳಿ, ಅದರ ಮೇರೆಗೆ ತೀರ್ಮಾನ ಮಾಡಿಕೊಳ್ಳುತ್ತಿದ್ದರು.೧೯. ನಮ್ಮ ಪಟ್ಟಣ, ಇಸ್ರಯೇಲರಲ್ಲಿ ಸಮಾಧಾನವುಳ್ಳದ್ದೂ ರಾಜನಿಷ್ಠೆಯುಳ್ಳದ್ದೂ ಆಗಿದೆ. ಇಸ್ರಯೇಲರ ಪಟ್ಟಣಗಳಲ್ಲಿ ತಾಯಿಯೆಂದು ಹೆಸರುಗೊಂಡ ಈ ಪಟ್ಟಣವನ್ನು ನೀವು ಹಾಳುಮಾಡಬೇಕೆಂದಿದ್ದೀರಿ. ನೀವು ಸರ್ವೇಶ್ವರನ ಸೊತ್ತನ್ನು ಕಬಳಿಸಬೇಡಿ,” ಎಂದಳು.೨೦. ಅದಕ್ಕೆ ಯೋವಾಬನು, “ಕಬಳಿಸುವುದಾಗಲಿ, ಹಾಳುಮಾಡುವುದಾಗಲಿ ನನ್ನಿಂದ ದೂರವಿರಲಿ; ಅಂಥದು ಬೇಡವೇ ಬೇಡ.೨೧. ನಾವು ಬಂದಿರುವ ಸಂಗತಿಯೇ ಬೇರೆ; ಎಫ್ರಯಿಮ್ ಪರ್ವತ ಪ್ರದೇಶದ ಬಿಕ್ರೀಯ ಮಗನಾದ ಶೆಬನೆಂಬವನು ಅರಸ ದಾವೀದನಿಗೆ ವಿರೋಧವಾಗಿ ಕೈಯೆತ್ತಿದ್ದಾನೆ. ಅವನನ್ನು ಒಪ್ಪಿಸಿಬಿಡಿ; ನಾನು ಊರನ್ನು ಬಿಟ್ಟು ಹೋಗುತ್ತೇನೆ,” ಎಂದು ಹೇಳಿದನು. ಅದಕ್ಕೆ ಆ ಸ್ತ್ರೀ, “ನೋಡಿ, ಈಗಲೇ ಅವನ ತಲೆಯನ್ನು ಗೋಡೆಯ ಕಿಂಡಿಯಿಂದ ನಿಮ್ಮ ಕಡೆಗೆ ಎಸೆಯಲಾಗುವುದು,” ಎಂದು ಉತ್ತರಕೊಟ್ಟು ತನ್ನ ಜನರ ಬಳಿಗೆ ಹೋಗಿ ಅವರಿಗೆ ವಿವೇಕದಿಂದ ಈ ಸಂಗತಿಯನ್ನು ತಿಳಿಸಿದಳು.೨೨. ಅವರು ಬಿಕ್ರೀಯ ಮಗ ಶೆಬನ ತಲೆಯನ್ನು ಕಡಿದು ಯೋವಾಬನಿದ್ದಲ್ಲಿಗೆ ಬಿಸಾಡಿದರು. ಕೂಡಲೆ ಅವನು ಕಹಳೆಯನ್ನು ಊದಿಸಿದನು. ಅವನ ಜನರು ಆ ಪಟ್ಟಣವನ್ನು ಬಿಟ್ಟು ತಮ್ಮ ತಮ್ಮ ನಿವಾಸಗಳಿಗೆ ಹೋದರು. ಯೋವಾಬನು ಹಿಂದಿರುಗಿ ಜೆರುಸಲೇಮಿನಲ್ಲಿದ್ದ ಅರಸನ ಬಳಿಗೆ ಬಂದನು.೨೩. ಯೋವಾಬನು ಇಸ್ರಯೇಲರ ಮುಖ್ಯಸೇನಾಪತಿ. ಯೆಹೋಯಾದಾವನ ಮಗ ಬೆನಾಯಾಯನು ‘ಕೆರೇತ್ಯ’ ಹಾಗು ‘ಪೆಲೇತ್ಯ’ ಎಂಬ ಕಾವಲುದಂಡುಗಳ ಅಧಿಪತಿ.೨೪. ಅದೋರಾಮನು ಬಿಟ್ಟೀಕೆಲಸ ಮಾಡಿಸುವವನು, ಅಹೀಲೂದನ ಮಗ ಯೆಹೋಷಾಪಾಟನು ಮುಖ್ಯ ಲೇಖಕ.೨೫. ಶೆವನು ಕಾರ್ಯದರ್ಶಿ, ಚಾದೋಕ್ ಹಾಗು ಎಬ್ಯಾತಾರರು ಯಾಜಕರು;೨೬. ಯಾಯೀರಿನವನಾದ ಈರನೂ ದಾವೀದನ ಯಾಜಕನು.ಕೀರ್ತನೆಗಳು ೬೭:೧-೭೧. ಹರಸು ದೇವಾ, ನಮ್ಮನಾಶೀರ್ವದಿಸು I ನಿನ್ನ ಮುಖಕಾಂತಿಯಿಂದೆಮ್ಮನು ಬೆಳಗಿಸು II೨. ಪ್ರಸಿದ್ಧವಾಗಲಿ ನಿನ್ನ ಸನ್ಮಾರ್ಗ ಜಗದೊಳೆಲ್ಲಾ I ಜೀವೋದ್ಧಾರಗೊಳಿಸುವ ನಿನ್ನ ಶಕ್ತಿ ಜನತಿಗೆಲ್ಲ II೩. ನಿನ್ನ ಕೀರ್ತಿಸಲಿ ದೇವಾ, ಜನರು I ಸಂಕೀರ್ತಿಸಲಿ ಅವರೆಲ್ಲರೂ II೪. ನ್ಯಾಯದ ಪ್ರಕಾರ ತೀರ್ಪಿಡುತಿ ಜನತೆಗೆ I ಆದರ್ಶನೀಡುತಿ ಜಗದ ರಾಷ್ಟ್ರಗಳಿಗೆ I ಹರ್ಷಾನಂದವಾಗಲಿ ಜನಾಂಗಗಳಿಗೆ II೫. ನಿನ್ನ ಕೀರ್ತಿಸಲಿ ದೇವಾ, ಜನರು I ಸಂಕೀರ್ತಿಸಲಿ ಅವರೆಲ್ಲರೂ II೬. ಇತ್ತನೆಮ್ಮ ದೇವನು ಆಶೀರ್ವಾದವನು I ಕೊಟ್ಟಿತೆಮ್ಮ ಭೂಮಿಯು ಸಂತುಷ್ಟ ಬೆಳೆಯನು II೭. ನಮ್ಮೆಲ್ಲರನು ದೇವನು ಹರಸಲಿ I ಎಲ್ಲೆಡೆ ಆತನ ಭಯಭಕ್ತಿಯಿರಲಿ IIಜ್ಞಾನೋಕ್ತಿಗಳು ೧೬:೩೩-೩೩೩೩. ಅದೃಷ್ಟದ ಚೀಟನ್ನು ಕುಲುಕಿ ಮಡಲಿಗೆ ಹಾಕಬಹುದು; ಆದರೆ ತೀರ್ಪು ಸರ್ವೇಶ್ವರನ ಕೈಯಲ್ಲಿರುವುದು.ಜ್ಞಾನೋಕ್ತಿಗಳು ೧೭:೧-೧೧. ಜಗಳ ತುಂಬಿದ ಮನೆಯಲ್ಲಿ ಹಬ್ಬದೂಟ ಮಾಡುವುದಕ್ಕಿಂತಲು ಶಾಂತಿ ಸಮಾಧಾನದಿಂದ ಕೂಡಿದ ಒಣ ತುತ್ತೇ ಲೇಸು.ಯೊವಾನ್ನನು ೮:೧-೨೭೧. (ಯೇಸು ಸ್ವಾಮಿ ಓಲಿವ್ ಗುಡ್ಡಕ್ಕೆ ಹೋದರು.೨. ಮರುದಿನ ಮುಂಜಾನೆ ಅವರು ಮತ್ತೆ ಮಹಾದೇವಾಲಯಕ್ಕೆ ಬಂದರು. ಜನರು ಸುತ್ತಲೂ ಬಂದು ನೆರೆಯಲು ಯೇಸು ಕುಳಿತುಕೊಂಡು ಬೋಧಿಸತೊಡಗಿದರು.೩. ಆಗ ಧರ್ಮಶಾಸ್ತ್ರಿಗಳೂ ಫರಿಸಾಯರೂ ಒಬ್ಬ ಹೆಂಗಸನ್ನು ಅಲ್ಲಿಗೆ ಕರೆತಂದರು; ಅವಳು ವ್ಯಭಿಚಾರಮಾಡುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದಳು.೪. ಅವಳನ್ನು ಎಲ್ಲರ ಮುಂದೆ ನಿಲ್ಲಿಸಿ, “ಬೋಧಕರೇ, ಈ ಹೆಂಗಸು ವ್ಯಭಿಚಾರಮಾಡುತ್ತಿದ್ದಾಗಲೇ ಸಿಕ್ಕಿಬಿದ್ದಳು.೫. ಇಂಥವರನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಶೆಯೇ ಧರ್ಮಶಾಸ್ತ್ರದಲ್ಲಿ ವಿಧಿಸಿದ್ದಾನೆ. ಈ ಕುರಿತು ನಿಮ್ಮ ಅಭಿಪ್ರಾಯವೇನು?” ಎಂದು ಪ್ರಶ್ನಿಸಿದರು.೬. ಯೇಸುವನ್ನು ಮಾತಿನಲ್ಲಿ ಸಿಕ್ಕಿಸಿ ಅವರ ಮೇಲೆ ತಪ್ಪುಹೊರಿಸಬೇಕೆಂಬುದೇ ಅವರ ಉದ್ದೇಶವಾಗಿತ್ತು. ಯೇಸುವಾದರೋ ಬಗ್ಗಿಕೊಂಡು ಬೆರಳಿನಿಂದ ಮರಳ ಮೇಲೆ ಏನನ್ನೋ ಬರೆಯುತ್ತಾ ಕುಳಿತರು. ಬಂದವರಾದರೋ ಮೇಲಿಂದ ಮೇಲೆ ಪ್ರಶ್ನೆಹಾಕುತ್ತಲೇ ಇದ್ದರು.೭. ಆಗ ಯೇಸು ನೆಟ್ಟಗೆ ಕುಳಿತು, “ನಿಮ್ಮಲ್ಲಿ ಪಾಪಮಾಡದವನು ಯಾವನೋ ಅಂಥವನು ಇವಳ ಮೇಲೆ ಮೊದಲನೆಯ ಕಲ್ಲು ಬೀರಲಿ,” ಎಂದು ಹೇಳಿ,೮. ಪುನಃ ಬಗ್ಗಿಕೊಂಡು ನೆಲದ ಮೇಲೆ ಬರೆಯತೊಡಗಿದರು.೯. ಇದನ್ನು ಕೇಳಿದ್ದೇ ಹಿರಿಯರಿಂದ ಹಿಡಿದು ಅವರೆಲ್ಲರೂ ಒಬ್ಬೊಬ್ಬರಾಗಿ ಅಲ್ಲಿಂದ ಕಾಲುಕಿತ್ತರು. ಕೊನೆಗೆ ಅಲ್ಲಿ ಉಳಿದವರೆಂದರೆ, ಯೇಸು ಮತ್ತು ನಿಂತುಕೊಂಡಿದ್ದ ಆ ಹೆಂಗಸು.೧೦. ಆಗ ಯೇಸು ತಲೆಯೆತ್ತಿ, “ತಾಯೀ, ಅವರೆಲ್ಲಾ ಎಲ್ಲಿ? ನಿನಗೆ ಯಾರೂ ಶಿಕ್ಷೆ ವಿಧಿಸಲಿಲ್ಲವೆ?” ಎಂದು ಕೇಳಿದರು.೧೧. ಅವಳು, “ಇಲ್ಲ, ಸ್ವಾಮೀ,” ಎಂದಳು. ಯೇಸು ಅವಳಿಗೆ, “ನಾನೂ ನಿನಗೆ ಶಿಕ್ಷೆ ವಿಧಿಸುವುದಿಲ್ಲ, ಹೋಗು; ಇನ್ನು ಮೇಲೆ ಪಾಪಮಾಡಬೇಡ,” ಎಂದರು).೧೨. ಬಳಿಕ ಯೇಸು ಸ್ವಾಮಿ ಜನರನ್ನು ಮತ್ತೊಮ್ಮೆ ಕಂಡು ಹೀಗೆಂದರು: “ನಾನೇ ಜಗಜ್ಯೋತಿ, ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ. ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ.”೧೩. ಅದಕ್ಕೆ ಫರಿಸಾಯರು, “ಈಗ ನೀನು ನಿನ್ನ ಪರವಾಗಿಯೇ ಸಾಕ್ಷಿ ನೀಡುತ್ತಿರುವೆ. ಅಂಥ ಸಾಕ್ಷಿಗೆ ಬೆಲೆಯಿಲ್ಲ,” ಎಂದರು.೧೪. ಅದಕ್ಕೆ ಯೇಸು, ‘ನಾನೇ ನನ್ನ ಪರವಾಗಿ ಸಾಕ್ಷಿ ನೀಡಿದರೂ ನನ್ನ ಸಾಕ್ಷಿಗೆ ಬೆಲೆಯುಂಟು. ಏಕೆಂದರೆ, ನಾನು ಎಲ್ಲಿಂದ ಬಂದೆ, ಎಲ್ಲಿಗೆ ಹೋಗುತ್ತಿರುವೆ, ಎಂದು ನನಗೆ ತಿಳಿದಿದೆ. ನಿಮಗಾದರೋ ನಾನು ‘ಬಂದುದು ಎಲ್ಲಿಂದ, ಹೋಗುವುದು ಎಲ್ಲಿಗೆ’ ಎಂದು ತಿಳಿಯದು.೧೫. ನೀವು ತೀರ್ಪುಕೊಡುವುದು ಲೋಕದ ದೃಷ್ಟಿಯಿಂದ, ನಾನಾದರೋ ಯಾರ ಬಗ್ಗೆಯೂ ತೀರ್ಪುಕೊಡಲು ಹೋಗುವುದಿಲ್ಲ.೧೬. ನಾನು ತೀರ್ಪುಕೊಟ್ಟರೂ ಅದು ಯಥಾರ್ಥವಾದುದು. ಕಾರಣ, ತೀರ್ಪುಕೊಡುವವನು ನಾನೊಬ್ಬನೇ ಅಲ್ಲ; ನನ್ನನ್ನು ಕಳುಹಿಸಿದ ಪಿತ ಸಹ ನನ್ನೊಡನೆ ಇದ್ದಾರೆ.೧೭. ಇಬ್ಬರ ಸಾಕ್ಷ್ಯ ಒಂದೇ ಆಗಿದ್ದರೆ ಅದು ಸತ್ಯವೆಂದು ನಿಮ್ಮ ಧರ್ಮಶಾಸ್ತ್ರದಲ್ಲಿಯೇ ಬರೆದಿದೆ.೧೮. ನಾನು ನನ್ನ ಪರವಾಗಿ ಸಾಕ್ಷಿ ಹೇಳುತ್ತೇನೆ; ನನ್ನನ್ನು ಕಳುಹಿಸಿದ ಪಿತ ಸಹ ನನ್ನ ಪರವಾಗಿ ಸಾಕ್ಷಿ ಹೇಳುತ್ತಾರೆ,” ಎಂದು ನುಡಿದರು.೧೯. ಅದಕ್ಕೆ ಅವರು, “ನಿನ್ನ ಪಿತನೆಲ್ಲಿ?” ಎಂದು ಕೇಳಿದರು. ಯೇಸು, “ನೀವು ನನ್ನನ್ನು ಅರಿತಿಲ್ಲ, ನನ್ನ ಪಿತನನ್ನೂ ಅರಿತಿಲ್ಲ. ನೀವು ನನ್ನನ್ನು ಅರಿತಿದ್ದರೆ, ನನ್ನ ಪಿತನನ್ನೂ ಅರಿಯುತ್ತಿದ್ದಿರಿ,” ಎಂದರು.೨೦. ಮಹಾದೇವಾಲಯದೊಳಗೆ ಕಾಣಿಕೆ ಪೆಟ್ಟಿಗೆಗಳನ್ನಿಟ್ಟ ಕೋಣೆಯಲ್ಲಿ ಯೇಸು ಮಾತನಾಡುತ್ತಾ ಹೇಳಿದ ಮಾತುಗಳಿವು. ಅವರ ಗಳಿಗೆ ಇನ್ನೂ ಬಾರದಿದ್ದ ಕಾರಣ ಯಾರೂ ಅವರನ್ನು ಬಂಧಿಸಲಿಲ್ಲ.೨೧. ಯೇಸು ಸ್ವಾಮಿ ಪುನಃ ಅವರಿಗೆ, “ನಾನು ಹೊರಟುಹೋಗುತ್ತೇನೆ, ನೀವು ನನ್ನನ್ನು ಹುಡುಕುವಿರಿ. ಆದರೆ ನಿಮ್ಮ ಪಾಪದಲ್ಲೇ ನೀವು ಸಾಯುವಿರಿ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ,” ಎಂದರು.೨೨. ಅದಕ್ಕೆ ಯೆಹೂದ್ಯರು, ‘ತಾನು ಹೋಗುವಲ್ಲಿಗೆ ನಮ್ಮಿಂದ ಬರಲಾಗದಂತೆ! ಹಾಗೆಂದರೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬುದು ಇವನ ಇಂಗಿತವೆ?’ ಎಂದು ಮಾತನಾಡಿಕೊಂಡರು.೨೩. “ನೀವು ನರಲೋಕದವರು, ನಾನು ಪರಲೋಕದವನು. ನಿಮ್ಮಂತೆ ನಾನು ಇಹಲೋಕದವನಲ್ಲ.೨೪. ನಿಮ್ಮ ಪಾಪಗಳಲ್ಲೇ ನೀವು ಸಾಯುವಿರೆಂದು ನಾನು ಹೇಳಿದುದು ಇದಕ್ಕಾಗಿಯೇ. ‘ಇರುವಾತನೇ ನಾನು’ ಎಂಬುದನ್ನು ನೀವು ವಿಶ್ವಾಸಿಸದೆಹೋದರೆ ನಿಮ್ಮ ಪಾಪಗಳಲ್ಲೇ ಸಾಯುವಿರಿ,” ಎಂದು ಯೇಸು ಅವರಿಗೆ ಹೇಳಿದರು.೨೫. ಅವರು, “ನೀನು ಯಾರು?” ಎಂದು ಪ್ರಶ್ನಿಸಿದರು.೨೬. ಯೇಸು, “ನಾನು ಯಾರೆಂದು ನಿಮಗೆ ಮೊದಲಿನಿಂದಲೂ ತಿಳಿಸುತ್ತಾ ಬಂದಿದ್ದೇನೆ. ನಿಮ್ಮನ್ನು ಕುರಿತು ನಾನು ಎಷ್ಟೋ ಹೇಳಿಯೇನು; ಎಷ್ಟೋ ಖಂಡಿಸಿಯೇನು. ಆದರೆ ನನ್ನನ್ನು ಕಳುಹಿಸಿದಾತನು ಹೇಳಿದ್ದನ್ನೇ ಲೋಕಕ್ಕೆ ಸಾರುತ್ತೇನೆ. ಆತನು ಸತ್ಯಸ್ವರೂಪಿ,” ಎಂದು ಹೇಳಿದರು.೨೭. ಯೇಸು ಸ್ವಾಮಿ ತಮ್ಮ ಪಿತನನ್ನು ಕುರಿತು ಹೀಗೆನ್ನುತ್ತಿದ್ದಾರೆಂದು ಅವರು ಅರಿತುಕೊಳ್ಳಲಿಲ್ಲ. Kannada Bible (KNCL) 2016 Kannada C.L. Bible - ಸತ್ಯವೇದವು C.L. Copyright © 2016 by The Bible Society of India Used by permission. All rights reserved worldwide