ಬೈಬಲ್ ಒಂದು ವರ್ಷದಲ್ಲಿ ಜೂನ್ ೧೮ಅರಸುಗಳು ೨ ೨೫:೧-೩೦೧. ಚಿದ್ಕೀಯನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ವಿರುದ್ಧ ದಂಗೆ ಎದ್ದನು. ಇವನು ಚಿದ್ಕೀಯನ ಆಳ್ವಿಕೆಯ ಒಂಬತ್ತನೆಯ ವರ್ಷದ ಹತ್ತನೆಯ ತಿಂಗಳಿನ ಹತ್ತನೆಯ ದಿನ ಸರ್ವಸೈನ್ಯ ಸಮೇತ ಜೆರುಸಲೇಮಿಗೆ ಬಂದನು. ಅಲ್ಲಿ ಪಾಳೆಯ ಮಾಡಿಕೊಂಡು ಅದರ ಸುತ್ತಲು ಮಣ್ಣಿನ ದಿಬ್ಬವನ್ನು ಎಬ್ಬಿಸಿದನು.೨. ಚಿದ್ಕೀಯನ ಆಳ್ವಿಕೆಯ ಹನ್ನೊಂದನೆಯ ವರ್ಷದಲ್ಲಿ ಅದಕ್ಕೆ ಮುತ್ತಿಗೆ ಹಾಕಿದನು.೩. ಘೋರಕ್ಷಾಮದ ಕಾರಣ ನಗರದವರಿಗೆ ಆಹಾರ ಸಿಕ್ಕದೆ ಹೋಯಿತು. ನಗರಕ್ಕೆ ಮುತ್ತಿಗೆಹಾಕಿದ್ದ ಬಾಬಿಲೋನಿಯರು ಹನ್ನೊಂದನೆಯ ತಿಂಗಳಿನ ಒಂಬತ್ತನೆಯ ದಿವಸ ಪೌಳಿಗೋಡೆಯಲ್ಲಿ ಒಂದು ದ್ವಾರವನ್ನು ಮಾಡಿದರು.೪. ಒಳಗಿದ್ದ ಅರಸನೂ ಅವನ ಎಲ್ಲ ಸೈನಿಕರೂ ಅದೇ ರಾತ್ರಿ, ಅರಸನ ತೋಟದ ಬಳಿಯಿದ್ದ ಬಾಗಿಲಿನ ಮೂಲಕ, ನಗರದಿಂದ ಓಡಿಹೋದರು. ಆ ಬಾಗಿಲು ಎರಡು ಗೋಡೆಗಳ ಮಧ್ಯೆಯಿತ್ತು. ಅರಸನು ಅರಾಬಾ ಎಂಬ ಕಣಿವೆ ಪ್ರದೇಶದ ಮಾರ್ಗವಾಗಿ ಓಡಿಹೋದನು.೫. ಬಾಬಿಲೋನಿಯದ ಸೈನಿಕರು ಅವನನ್ನು ಹಿಂದಟ್ಟಿ ಜೆರಿಕೋವಿನ ಬಯಲಿನಲ್ಲಿ ಹಿಡಿದರು. ಅಷ್ಟರಲ್ಲಿ ಅವನ ಸೈನಿಕರೆಲ್ಲರು ಅವನನ್ನು ಬಿಟ್ಟು ಚದರಿಹೋಗಿದ್ದರು.೬. ಅನಂತರ ಬಾಬಿಲೋನಿಯರು ಅವನನ್ನು ರಿಬ್ಲದಲ್ಲಿದ್ದ ತಮ್ಮ ಅರಸನ ಬಳಿಗೆ ಎಳೆದು ತಂದು ಅವನಿಗೆ ಶಿಕ್ಷೆಯನ್ನು ವಿಧಿಸಿದರು.೭. ಇವನ ಇಬ್ಬರು ಮಕ್ಕಳನ್ನು ಅವನ ಕಣ್ಣೆದುರಿಗೇ ವಧಿಸಿ, ಅವನಿಗೆ ಬೇಡಿಹಾಕಿ ಎರಡು ಕಣ್ಣುಗಳನ್ನೂ ಕಿತ್ತು ಬಾಬಿಲೋನಿಗೆ ತೆಗೆದುಕೊಂಡು ಹೋದರು.೮. ಐದನೆಯ ತಿಂಗಳಿನ ಏಳನೆಯ ದಿನ, ಅಂದರೆ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನ ಆಳ್ವಿಕೆಯ ಹತ್ತೊಂಬತ್ತನೆಯ ವರ್ಷದಲ್ಲಿ, ಬಾಬಿಲೋನಿನ ಅರಸನ ಸೇವಕನೂ ರಕ್ಷಾದಳದ ಅಧಿಪತಿಯೂ ಆಗಿದ್ದ ನೆಬೂಜರದಾನ್ ಎಂಬವನು ಜೆರುಸಲೇಮಿಗೆ ಬಂದನು.೯. ಸರ್ವೇಶ್ವರನ ಆಲಯವನ್ನೂ ಅರಮನೆಯನ್ನೂ ಜೆರುಸಲೇಮಿನ ಎಲ್ಲ ದೊಡ್ಡ ಮನೆಗಳನ್ನೂ ಸುಟ್ಟುಬಿಟ್ಟನು.೧೦. ಅವನ ಜೊತೆಯಲ್ಲಿ ಬಂದಿದ್ದ ಬಾಬಿಲೋನಿಯದ ಸೈನ್ಯದವರು ಜೆರುಸಲೇಮಿನ ಸುತ್ತುಗೋಡೆಗಳನ್ನೆಲ್ಲ ಕೆಡವಿದರು.೧೧. ರಕ್ಷಾದಳದ ಅಧಿಪತಿಯಾದ ನೆಬೂಜರದಾನನು ನಗರದಲ್ಲಿ ಉಳಿದವರನ್ನು, ಮೊದಲೇ ಬಾಬಿಲೋನಿನ ಅರಸನಿಗೆ ಮರೆಹೊಕ್ಕವರನ್ನು ಹಾಗು ಬೇರೆ ಜನರೆಲ್ಲರನ್ನು ಸೆರೆಗೆ ಒಯ್ದನು.೧೨. ಹೊಲಗಳನ್ನು ಮತ್ತು ದ್ರಾಕ್ಷೀತೋಟಗಳನ್ನು ಮಾಡುವುದಕ್ಕಾಗಿ ನಾಡಿನ ಜನರಲ್ಲಿ ಕೇವಲ ದರಿದ್ರರನ್ನು ಮಾತ್ರ ಬಿಟ್ಟುಹೋದನು.೧೩. ಬಾಬಿಲೋನಿಯದವರು ಸರ್ವೇಶ್ವರನ ಆಲಯದಲ್ಲಿದ್ದ ಕಂಚಿನ ಕಂಬಗಳನ್ನೂ ಚಕ್ರದ ಬಂಡಿಗಳನ್ನೂ, ಕಡಲಿನ ಆಕಾರದ ಕಂಚಿನ ಪಾತ್ರೆಯನ್ನೂ ಒಡೆದು ಅವುಗಳ ಕಂಚನ್ನೆಲ್ಲ ಕೊಂಡೊಯ್ದರು.೧೪. ಅದು ಮಾತ್ರವಲ್ಲ, ದೇವಾಲಯದ ಸೇವೆಗಾಗಿ ಉಪಯೋಗಿಸುತ್ತಿದ್ದ ಬೋಗುಣಿ, ಸಲಿಕೆ, ಕತ್ತರಿ, ಸಾಂಬ್ರಾಣಿಕಳಸ ಮುಂತಾದ ಕಂಚಿನ ಸಾಮಾನುಗಳನ್ನೂ ಬಾಬಿಲೋನಿಗೆ ತೆಗೆದುಕೊಂಡು ಹೋದರು.೧೫. ರಕ್ಷಾದಳದ ನಾಯಕನು ಬೆಳ್ಳಿ ಬಂಗಾರದ ಅಗ್ಗಿಷ್ಟಿಕೆ, ಬಟ್ಟಲು, ಮೊದಲಾದುವುಗಳನ್ನು ದೋಚಿಕೊಂಡನು.೧೬. ಸೊಲೊಮೋನನು ಸರ್ವೇಶ್ವರನ ಆಲಯಕ್ಕಾಗಿ ಮಾಡಿಸಿದ್ದ ಎರಡು ಕಂಬಗಳು, ಕಡಲಿನ ಆಕಾರದ ಪಾತ್ರೆ, ಚಕ್ರದ ಬಂಡಿಗಳು ಇವುಗಳನ್ನು ಮಾಡುವುದಕ್ಕೆ ಎಷ್ಟೋ ಕಂಚು ಹಿಡಿದಿತ್ತು.೧೭. ಪ್ರತಿಯೊಂದು ಕಂಬ ಹದಿನೆಂಟು ಮೊಳ ಎತ್ತರವಿತ್ತು. ಪ್ರತಿಯೊಂದರ ಮೇಲೆ ಮೂರು ಮೊಳ ಎತ್ತರವಾದ ಒಂದು ಕಂಚಿನ ಕುಂಭವಿತ್ತು. ಆ ಕುಂಭಗಳ ಮೇಲೆ ಸುತ್ತಲೂ ಕಂಚಿನ ಜಾಲರಿ ಹಾಗು ದಾಳಿಂಬೆ ಹಣ್ಣುಗಳು ಇದ್ದವು.೧೮. ರಕ್ಷಾದಳದ ನಾಯಕ ನೆಬೂಜರದಾನನು ಹಿಡಿದುಕೊಂಡು ಹೋದ ಜನರಲ್ಲಿ ಪ್ರಧಾನ ಯಾಜಕ ಸೆರಾಯನು, ಮುಖ್ಯ ಯಾಜಕ ಚೆಫನ್ಯನು, ಮೂರು ಮಂದಿ ದ್ವಾರಪಾಲಕರು ಸೇರಿದ್ದರು.೧೯. ಸೈನ್ಯ ಸಂಬಂಧವಾದ ಎಲ್ಲ ವ್ಯವಸ್ಥೆಯನ್ನು, ನಗರದಲ್ಲಿ ಉಳಿದಿದ್ದ ಹಾಗು ಅರಸನಿಗೆ ಆಪ್ತರಾಗಿದ್ದ ಐದು ಮಂದಿ ಮಂತ್ರಿಗಳನ್ನು, ಯುದ್ಧಕ್ಕೆ ಹೋಗತಕ್ಕವರನ್ನು ಪಟ್ಟಿಮಾಡುವ ಸೇನಾಪತಿಯ ಲೇಖಕನನ್ನು ಹಾಗು ನಗರದಲ್ಲಿದ್ದ ಅರವತ್ತು ಮಂದಿ ರೈತರನ್ನು ಹಿಡಿದುಕೊಂಡು ಹೋದನು.೨೦. ನೆಬೂಜರದಾನನು ಇವರನ್ನೆಲ್ಲ ತೆಗೆದುಕೊಂಡು ಹೋಗಿ ಹಮಾತ್ ಪ್ರದೇಶದ ರಿಬ್ಲದಲ್ಲಿದ್ದ ಬಾಬಿಲೋನಿನ ಅರಸನಿಗೆ ಒಪ್ಪಿಸಿದನು.೨೧. ಅವನು ಅವರನ್ನು ಅಲ್ಲಿಯೇ ಕೊಲ್ಲಿಸಿದನು. ಹೀಗೆ ಯೆಹೂದ್ಯರು ಸೆರೆಯಾಳುಗಳಾಗಿ ತಮ್ಮ ನಾಡನ್ನೇ ಬಿಟ್ಟು ಹೋಗಬೇಕಾಯಿತು.೨೨. ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ತಾನು ಜುದೇಯ ದೇಶದಲ್ಲಿ ಉಳಿಸಿದ ಜನರ ಮೇಲೆ, ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯ ಎಂಬವನನ್ನು ರಾಜ್ಯಪಾಲನನ್ನಾಗಿ ನೇಮಿಸಿದನು.೨೩. ಅಳಿದು ಉಳಿದಿದ್ದ ಯೆಹೂದ ಸೇನಾಪತಿಗಳು, ಗೆದಲ್ಯನು ಬಾಬಿಲೋನಿನ ಅರಸನಿಂದ ರಾಜ್ಯಪಾಲನಾಗಿ ನೇಮಕವಾಗಿದ್ದಾನೆಂಬ ಸಮಾಚಾರವನ್ನು ಕೇಳಿ, ತಮ್ಮ ಜನರೊಡನೆ ಮಿಚ್ಪದಲ್ಲಿ ವಾಸವಾಗಿದ್ದ ಅವನ ಬಳಿಗೆ ಬಂದರು. ಅವರ ಹೆಸರುಗಳು ಇವು: ನೆತನ್ಯನ ಮಗ ಇಷ್ಮಾಯೇಲನು, ಕಾರೇಹನ ಮಗ ಯೋಹಾನಾನ್, ನೆಟೋಫದವನೂ ತನ್ಹುಮೆತನ ಮಗನೂ ಆದ ಸೆರಾಯನು, ಮಾಕಾ ಊರಿನವನಾದ ಯಾಜನ್ಯನು.೨೪. ಗೆದಲ್ಯನು ಇವರಿಗೂ ಇವರ ಜನರಿಗೂ, “ಬಾಬಿಲೋನಿಯಾದ ಸೈನ್ಯದವರಿಗೆ ಹೆದರಬೇಡಿ; ಬಾಬಿಲೋನಿನ ಅರಸನಿಗೆ ಅಧೀನರಾಗಿದ್ದು ಇಲ್ಲಿಯೇ ವಾಸಿಸಿರಿ; ಆಗ ನಿಮಗೆ ಶುಭವಾಗುವುದು,” ಎಂದು ಆಣೆಯಿಟ್ಟು ಹೇಳಿದನು.೨೫. ಆದರೆ ಏಳನೆಯ ತಿಂಗಳಿನಲ್ಲಿ ರಾಜವಂಶದವನೂ ಎಲೀಷಮನ ಮೊಮ್ಮಗನೂ ನೆತನ್ಯನ ಮಗನೂ ಆದ ಇಷ್ಮಾಯೇಲನು ಹತ್ತುಮಂದಿ ಆಳುಗಳೊಡನೆ ಬಂದು ಗೆದಲ್ಯನನ್ನು, ಅವನ ಸಂಗಡ ಮಿಚ್ಪದಲ್ಲಿದ್ದ ಯೆಹೂದ್ಯರನ್ನು ಹಾಗು ಬಾಬಿಲೋನಿಯಾದವರನ್ನು ಸಂಹರಿಸಿದನು.೨೬. ಆಗ ಚಿಕ್ಕವರು, ದೊಡ್ಡವರು, ಸೇನಾಪತಿಗಳು, ಎಲ್ಲರು ಬಾಬಿಲೋನಿಯಾದವರಿಗೆ ಹೆದರಿ ಈಜಿಪ್ಟಿಗೆ ಓಡಿಹೋದರು.೨೭. ಎವೀಲ್ಮೆರೋದಕನು ತಾನು ಪಟ್ಟಕ್ಕೆ ಬಂದ ಮೊದಲನೆಯ ವರ್ಷದಲ್ಲಿ ಅಂದರೆ, ಜುದೇಯದ ಅರಸ ಯೆಹೋಯಾಖೀನನು ಸೆರೆಗೆ ಸಿಕ್ಕಿದ ಮೂವತ್ತೇಳನೆಯ ವರ್ಷದ ಹನ್ನೆರಡನೆಯ ತಿಂಗಳಿನ ಇಪ್ಪತ್ತೇಳನೆಯ ದಿನದಲ್ಲಿ, ಯೆಹೋಯಾಖೀನನನ್ನು ಸೆರೆಯಿಂದ ಬಿಡಿಸಿ ಉದ್ಧಾರ ಮಾಡಿದನು.೨೮. ಅದು ಮಾತ್ರವಲ್ಲ, ಅವನೊಡನೆ ಪ್ರೀತಿಯಿಂದ ಮಾತಾಡಿ, ತನ್ನ ಸಂಗಡ ಬಾಬಿಲೋನಿನಲ್ಲಿದ್ದ ಎಲ್ಲ ಅರಸುಗಳಲ್ಲಿ ಅವನಿಗೇ ಉನ್ನತ ಸ್ಥಾನವನ್ನು ಕೊಟ್ಟನು.೨೯. ಯೆಹೋಯಾಖೀನನು ಸೆರೆಯ ಬಟ್ಟೆಗಳನ್ನು ತೆಗೆದುಹಾಕಿ, ಜೀವದಿಂದ ಇರುವವರೆಗೂ, ಅರಸನ ಪಂಕ್ತಿಯಲ್ಲೇ ಊಟಮಾಡುತ್ತಿದ್ದನು.೩೦. ಅವನ ಜೀವಿತಕಾಲವೆಲ್ಲ, ಅವನಿಗೆ ಬೇಕಾಗಿ ಇದ್ದ ಎಲ್ಲ ಪದಾರ್ಥಗಳು ಅರಸನಿಂದಲೇ ಪ್ರತಿನಿತ್ಯವೂ ದೊರಕುತ್ತಿದ್ದವು.ಕೀರ್ತನೆಗಳು ೭೫:೧-೧೦೧. ವಂದನೆ ಹೇ ದೇವಾ, ಕೃತಜ್ಞತಾ ವಂದನೆ I ನೀ ಸಾಧಿಸಿದ ಸತ್ಕಾರ್ಯಗಳ ವಿವರಣೆ I ತಂದಿದೆ ನಮಗೆ ನಿನ್ನ ನಾಮದ ಸ್ಮರಣೆ II೨. ಈ ಪರಿ ನುಡಿದಿರುವನಾ ದೇವನು: I “ಕ್ಲುಪ್ತಕಾಲದಲಿ ನಾ ನೀಡುವೆನು I ತೀರ್ಪನು, ನ್ಯಾಯವಾದ ತೀರ್ಪನು II೩. ಇಳೆಯು ಭೂನಿವಾಸಿಗಳ ಸಮೇತ ತಳಮಳಗೊಳ್ಳಲು I ಅದರ ತಳಹದಿಯ ಬಿಗಿಹಿಡಿದಿರುವವನು ನಾನಿಲ್ಲದಿನ್ನಾರು? II೪. ಗರ್ವಿಗಳೇ, ಸಾಕುಮಾಡಿ ನಿಮ್ಮ ಸೊಕ್ಕುಮಾತುಗಳನು I ದುರ್ಜನರೇ, ತೋರಬೇಡಿ ನಿಮ್ಮ ಕೋರೆಕೊಂಬುಗಳನು II೫. ಕಾಣಿಸಿಕೊಳ್ಳದಿರಲಿ ನಿಮ್ಮ ಕೋರೆಕೊಂಬುಗಳು I ಮಾತೆತ್ತದಿರಲಿ ನಿಮ್ಮಗಳ ಕೊಬ್ಬಿದಾ ಕಂಠಗಳು” II೬. ಪೂರ್ವಪಶ್ಚಿಮದಿಂದ ಬರುವುದಿಲ್ಲ ಉದ್ಧಾರ I ಅರಣ್ಯದಿಂದ ದೊರಕುವುದಿಲ್ಲ ಜೀವೋದ್ಧಾರ II೭. ನ್ಯಾಯತೀರ್ಪು ಬರುವುದು ದೇವನಿಂದಲೇ I ಉನ್ನತಿಯು ಅವನತಿಯು ಆತನಿಂದಲೇ II೮. ಪ್ರಭುವಿನ ಕರಗಳಲ್ಲಿದೆ ಕೋಪಕೊಡ ಒಂದು I ತುಂಬಿದೆ ಅಮಲುಮಿಶ್ರ ರೌದ್ರರಸದಿಂದದು II ಅದನವನು ಸುರಿಯಲು ಕುಡಿವರು ಜಗದ ದುರುಳರು I ಮಡ್ಡಿಯನು ಕೂಡ ಬಿಡದೆ ಕುಡಿವರೆಲ್ಲರು II೯. ನಾನಾದರೊ ಕೀರ್ತಿಸುವೆನು ಯಕೋಬ ದೇವರನು I ಮಾಡುವೆನು ಅನವರತ ಆತನ ಗುಣಗಾನವನು II೧೦. ಕತ್ತರಿಸುವನು ಕೆಡುಕರ ಕೋರೆಕೋಡುಗಳನು I ಎತ್ತರಿಸುವನು ಸಜ್ಜನರ ಕೋರೆಕೊಂಬುಗಳನು IIಜ್ಞಾನೋಕ್ತಿಗಳು ೧೯:೪-೫೪. ಧನವಂತನಿಗೆ ಸ್ನೇಹಿತರು ಬಹುಮಂದಿ; ಬಡವನಿಗಿದ್ದ ಗೆಳೆಯನೂ ಪರಾರಿ.೫. ಕಳ್ಳಸಾಕ್ಷಿ ದಂಡನೆಯನ್ನು ಪಡೆಯದಿರನು; ಸುಳ್ಳಾಡುವವನು ಅದನ್ನು ತಪ್ಪಿಸಿಕೊಳ್ಳಲಾರನು.ಪ್ರೇಷಿತರ ೩:೧-೨೬೧. ಒಂದು ದಿನ ಮಧ್ಯಾಹ್ನ ಮೂರು ಗಂಟೆಯ ಸಮಯ. ಅದು ಪ್ರಾರ್ಥನಾವೇಳೆ. ಪೇತ್ರ ಮತ್ತು ಯೊವಾನ್ನ ಮಹಾದೇವಾಲಯಕ್ಕೆ ಹೋದರು.೨. ‘ಸುಂದರದ್ವಾರ’ ಎಂದು ಕರೆಯಲಾದ ಬಾಗಿಲ ಬಳಿ ಹುಟ್ಟುಕುಂಟನೊಬ್ಬ ಇದ್ದನು. ಅವನನ್ನು ಪ್ರತಿದಿನ ಹೊತ್ತುತಂದು ಈ ದ್ವಾರದ ಬಳಿ ಬಿಡಲಾಗುತ್ತಿತ್ತು. ಅವನು ದೇವಾಲಯಕ್ಕೆ ಬರುತ್ತಿದ್ದ ಜನರಿಂದ ಭಿಕ್ಷೆಬೇಡುತ್ತಿದ್ದನು.೩. ಪೇತ್ರ ಮತ್ತು ಯೊವಾನ್ನ ದೇವಾಲಯದೊಳಗೆ ಹೋಗುತ್ತಿರುವುದನ್ನು ಅವನು ಕಂಡನು. ತನಗೆ ಏನಾದರೂ ಭಿಕ್ಷೆ ಕೊಡಬೇಕೆಂದು ಬೇಡಿದನು.೪. ಅವರು ಕುಂಟನನ್ನು ತದೇಕ ದೃಷ್ಟಿಯಿಂದ ಈಕ್ಷಿಸಿದರು. ಪೇತ್ರನು,. “ಎಲ್ಲಿ, ನಮ್ಮನ್ನು ನೋಡು,” ಎಂದನು.೫. ಕುಂಟನು ಅವರಿಂದ ಭಿಕ್ಷೆಯನ್ನು ಅಪೇಕ್ಷಿಸುತ್ತಾ ಅವರನ್ನೇ ನೋಡಿದನು.೬. ಆದರೆ ಪೇತ್ರನು, “ಹಣಕಾಸೇನೂ ನನ್ನಲ್ಲಿಲ್ಲ, ನನ್ನಲ್ಲಿ ಇರುವುದನ್ನು ನಿನಗೆ ಕೊಡುತ್ತೇನೆ; ನಜರೇತಿನ ಯೇಸುಕ್ರಿಸ್ತರ ಹೆಸರಿನಲ್ಲಿ ನಾನು ಆಜ್ಞಾಪಿಸುತ್ತೇನೆ, ಎದ್ದು ನಡೆ” ಎನ್ನುತ್ತಾ.೭. ಅವನ ಬಲಗೈಯನ್ನು ಹಿಡಿದು ನಿಲ್ಲಲು ಸಹಾಯಮಾಡಿದನು. ಆ ಕ್ಷಣವೇ ಕುಂಟನ ಅಂಗಾಲು ಮುಂಗಾಲುಗಳು ಬಲಗೊಂಡವು.೮. ಅವನು ಜಿಗಿದುನಿಂತು ಅತ್ತಿತ್ತ ನಡೆದಾಡಲು ಪ್ರಾರಂಭಿಸಿದನು. ಅನಂತರ ಅವನು ಕುಣಿಯುತ್ತಾ ನಡೆಯುತ್ತಾ ದೇವರನ್ನು ಕೊಂಡಾಡುತ್ತಾ ಅವರೊಡನೆಯೇ ದೇವಾಲಯದೊಳಗೆ ಹೋದನು.೯. ಅವನು ಹೀಗೆ ನಡೆಯುವುದನ್ನೂ ದೇವರನ್ನು ಕೊಂಡಾಡುವುದನ್ನೂ ಜನಸಮೂಹ ನೋಡಿತು.೧೦. ದೇವಾಲಯದ ಸುಂದರದ್ವಾರದ ಬಳಿ ಕುಳಿತು ಭಿಕ್ಷೆಬೇಡುತ್ತಿದ್ದವನು ಇವನೇ ಎಂದು ಜನರು ಗುರುತು ಹಚ್ಚಿದರು. ಅವನಿಗೆ ಸಂಭವಿಸಿದ್ದನ್ನು ಕಂಡು ಬೆಕ್ಕಸಬೆರಗಾದರು.೧೧. ‘ಸೊಲೊಮೋನನ ಮಂಟಪ’ದಲ್ಲಿ ಪೇತ್ರ ಮತ್ತು ಯೊವಾನ್ನರ ಜೊತೆ ಆ ಭಿಕ್ಷುಕನು ಇನ್ನೂ ನಿಂತಿದ್ದನು. ಆಶ್ಚರ್ಯಭರಿತರಾದ ಜನರು ಅಲ್ಲಿಗೆ ಓಡಿಬಂದರು.೧೨. ಇದನ್ನು ನೋಡಿ ಪೇತ್ರನು ಇಂತೆಂದನು: “ಇಸ್ರಯೇಲಿನ ಜನರೇ, ಈ ಘಟನೆಯಿಂದ ನೀವೇಕೆ ಆಶ್ಚರ್ಯಚಕಿತರಾಗಿದ್ದೀರಿ? ನಮ್ಮನ್ನೇಕೆ ಎವೆಯಿಕ್ಕದೆ ನೋಡುತ್ತಿದ್ದೀರಿ? ನಮ್ಮ ಸ್ವಂತ ಶಕ್ತಿಯಿಂದಾಗಲೀ ಭಕ್ತಿಯಿಂದಾಗಲೀ, ಈ ಮನುಷ್ಯನು ನಡೆಯುವಂತೆ ನಾವು ಮಾಡಿದೆವೆಂದು ಭಾವಿಸುತ್ತೀರೋ?೧೩. ಪಿತಾಮಹ ಅಬ್ರಹಾಮ, ಇಸಾಕ ಮತ್ತು ಯಕೋಬರ ದೇವರು, ಅಂದರೆ ನಮ್ಮ ಪೂರ್ವಜರ ದೇವರು, ತಮ್ಮ ದಾಸ ಯೇಸುವಿನ ಮಹಿಮೆಯನ್ನು ಬೆಳಗಿಸಿದ್ದಾರೆ. ನೀವಾದರೋ ಅವರನ್ನು ಅಧಿಕಾರಿಗಳ ಕೈಗೊಪ್ಪಿಸಿದಿರಿ. ರಾಜ್ಯಪಾಲ ಪಿಲಾತನು ಅವರನ್ನು ಬಿಡುಗಡೆಮಾಡಲು ನಿರ್ಧರಿಸಿದಾಗ ಕೂಡ ಅವನ ಸಮ್ಮುಖದಲ್ಲೇ ಅವರನ್ನು ಧಿಕ್ಕರಿಸಿದಿರಿ.೧೪. ಯೇಸು ಪುನೀತರು ಹಾಗೂ ಸತ್ಯಸ್ವರೂಪರು. ಆದರೂ ನೀವು ಅವರನ್ನು ನಿರಾಕರಿಸಿ, ಒಬ್ಬ ಕೊಲೆಗಡುಕನನ್ನೇ ನಿಮಗೆ ಬಿಟ್ಟುಕೊಡುವಂತೆ ಪಿಲಾತನನ್ನು ಬೇಡಿಕೊಂಡಿರಿ.೧೫. ಜೀವದೊಡೆಯನನ್ನು ನೀವು ಕೊಂದುಹಾಕಿದಿರಿ; ದೇವರು ಅವರನ್ನು ಪುನರುತ್ಥಾನಗೊಳಿಸಿದರು. ಇದಕ್ಕೆ ನಾವೇ ಸಾಕ್ಷಿಗಳು.೧೬. ನಿಮ್ಮ ಕಣ್ಣೆದುರಿಗಿರುವ ಈ ಮನುಷ್ಯನು ಯಾರೆಂದು ನಿಮಗೆ ಗೊತ್ತಿದೆ. ಯೇಸುವಿನ ನಾಮದಿಂದಲೇ, ಆ ನಾಮದ ಮೇಲಿಟ್ಟ ವಿಶ್ವಾಸದಿಂದಲೇ, ಈತನು ಶಕ್ತಿಪಡೆದಿದ್ದಾನೆ. ಯೇಸುವಿನಲ್ಲಿಟ್ಟ ಆ ವಿಶ್ವಾಸವೇ ಈತನಿಗೆ, ನೀವೇ ನೋಡುವಂತೆ, ಸಂಪೂರ್ಣ ಆರೋಗ್ಯವನ್ನು ದಯಪಾಲಿಸಿದೆ.೧೭. “ಸಹೋದರರೇ, ನೀವೂ ನಿಮ್ಮ ಅಧಿಕಾರಿಗಳೂ ತಿಳಿಯದೆ ಯೇಸುವಿಗೆ ಹೀಗೆ ಮಾಡಿದಿರೆಂದು ನಾನು ಬಲ್ಲೆ.೧೮. ಕ್ರಿಸ್ತಯೇಸು ಯಾತನೆಯನ್ನು ಅನುಭವಿಸಬೇಕೆಂದು ದೇವರು ಪ್ರವಾದಿಗಳೆಲ್ಲರ ಮುಖಾಂತರ ಆಗಲೇ ಮುಂತಿಳಿಸಿದ್ದರು. ಆ ಪ್ರವಾದನೆಗಳನ್ನು ಈಗ ನೆರವೇರಿಸಿದ್ದಾರೆ.೧೯. ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖರಾಗಿರಿ. ಅವರು ನಿಮ್ಮ ಪಾಪಗಳನ್ನು ಪರಿಹರಿಸುವರು.೨೦. ಸರ್ವೇಶ್ವರನ ಸಾನ್ನಿಧ್ಯ ಸೌಭಾಗ್ಯವು ನಿಮ್ಮದಾಗುವುದು; ನಿಮಗೋಸ್ಕರ ನೇಮಿತರಾದ ಉದ್ಧಾರಕ ಯೇಸುವನ್ನು ಕಳುಹಿಸುವರು.೨೧. ಸಮಸ್ತವನ್ನೂ ಪುನರ್ಸ್ಥಾಪನೆಗೊಳಿಸುವವರೆಗೆ ಕ್ರಿಸ್ತಯೇಸು ಸ್ವರ್ಗದಲ್ಲಿಯೇ ಇರಬೇಕಾಗಿದೆ. ಇದನ್ನು ದೇವರು ಪವಿತ್ರ ಪ್ರವಾದಿಗಳ ಮುಖಾಂತರ ಬಹುಕಾಲಕ್ಕೆ ಹಿಂದೆಯೇ ಪ್ರಕಟಿಸಿದ್ದಾರೆ.೨೨. ‘ಸರ್ವೇಶ್ವರನಾದ ದೇವರು ನನ್ನನ್ನು ಕಳುಹಿಸಿದಂತೆಯೇ ನಿಮಗೊಬ್ಬ ಪ್ರವಾದಿಯನ್ನು ಕಳುಹಿಸುವರು. ಆತನು ನಿಮ್ಮ ಸ್ವಂತ ಜನಾಂಗದವನಾಗಿರುವನು. ಆತನು ಹೇಳುವುದನ್ನೆಲ್ಲಾ ನೀವು ಕೇಳಬೇಕು.೨೩. ಆ ಪ್ರವಾದಿಗೆ ಕಿವಿಗೊಡದವನು ದೇವಜನರಿಂದ ದೂರವಾಗಿ ನಾಶವಾಗುತ್ತಾನೆ,’ ಎಂದು ಮೋಶೆ ಹೇಳಿದ್ದಾನೆ.೨೪. ಸಮುವೇಲನೂ ಅವನ ನಂತರ ಬಂದ ಎಲ್ಲ ಪ್ರವಾದಿಗಳೂ ಈ ದಿನಗಳಲ್ಲಿ ನಡೆಯುತ್ತಿರುವುದನ್ನು ದೈವದತ್ತವಾಗಿ ಸಾರಿದ್ದಾರೆ.೨೫. ದೇವರು ಪ್ರವಾದಿಗಳ ಮುಖಾಂತರ ಮಾಡಿದ ವಾಗ್ದಾನಗಳಿಗೂ ನಿಮ್ಮ ಪೂರ್ವಜರೊಂದಿಗೆ ಮಾಡಿದ ಒಡಂಬಡಿಕೆಗೂ ನೀವು ಉತ್ತರಾಧಿಕಾರಿಗಳು; ಪೂರ್ವಜ ಅಬ್ರಹಾಮನಿಗೆ, ‘ನಿನ್ನ ಸಂತತಿಯ ಮುಖಾಂತರ ವಿಶ್ವದ ಎಲ್ಲಾ ಜನಾಂಗಗಳು ಧನ್ಯರಾಗುವರು’ ಎಂದಿದ್ದಾರೆ ದೇವರು.೨೬. ಅಂತೆಯೇ, ಅವರು ತಮ್ಮ ದಾಸನನ್ನು ಎಬ್ಬಿಸಿದ್ದಾರೆ. ನಿಮ್ಮೆಲ್ಲರನ್ನು ದುರ್ಮಾರ್ಗದಿಂದ ದೂರಮಾಡಿ ಧನ್ಯರಾಗಿಸಲು ಅವರನ್ನು ಮೊತ್ತಮೊದಲು ನಿಮ್ಮಲ್ಲಿಗೆ ಕಳುಹಿಸಿದ್ದಾರೆ.” Kannada Bible (KNCL) 2016 Kannada C.L. Bible - ಸತ್ಯವೇದವು C.L. Copyright © 2016 by The Bible Society of India Used by permission. worldwide