ಬೈಬಲ್ ಒಂದು ವರ್ಷದಲ್ಲಿ ಜೂನ್ ೨೪ಕ್ರಾನಿಕಲ್ಸ್ ೧ ೧೧:೧-೪೬೧. ಇಸ್ರಯೇಲಿನ ಜನರೆಲ್ಲರೂ ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದರು. “ನೀವು ನಮ್ಮ ರಕ್ತಸಂಬಂಧಿ.೨. ಅರಸ ಸೌಲ ನಮ್ಮನ್ನು ಆಳುತ್ತಿದ್ದಾಗ ನೀವು ಇಸ್ರಯೇಲರ ದಳಪತಿಯಾಗಿ ಯುದ್ಧ ನಡೆಸಿದಿರಿ. ನಮ್ಮ ದೇವರಾದ ಸರ್ವೇಶ್ವರ, ‘ನೀನು ನನ್ನ ಪ್ರಜೆಗಳಾದ ಇಸ್ರಯೇಲರ ನಾಯಕನೂ ಪಾಲಕನೂ ಆಗುವೆ,’ ಎಂದು ವಾಗ್ದಾನ ಮಾಡಿದ್ದು ನಿಮ್ಮನ್ನು ಕುರಿತೇ” ಎಂದು ಹೇಳಿ ವಂದಿಸಿದರು.೩. ಹೀಗೆ ಇಸ್ರಯೇಲಿನ ನಾಯಕರೆಲ್ಲರೂ ಹೆಬ್ರೋನಿನಲ್ಲಿ ಅರಸ ದಾವೀದನ ಬಳಿಗೆ ಬಂದು ಬಿನ್ನವಿಸಿದರು. ದಾವೀದನು ಅವರೊಂದಿಗೆ ಸರ್ವೇಶ್ವರನ ಸನ್ನಿಧಿಯಲ್ಲಿ ಒಂದು ಒಪ್ಪಂದ ಮಾಡಿಕೊಂಡನು. ಅವರು ಅವನನ್ನು ಅಭಿಷೇಕಿಸಿದರು. ಹೀಗೆ ಸರ್ವೇಶ್ವರ ಸಮುವೇಲನ ಮುಖಾಂತರ ಮಾಡಿದ ವಾಗ್ದಾನ ನೆರವೇರಿತು; ದಾವೀದನು ಇಸ್ರಯೇಲರ ಅರಸನಾದನು.೪. ಆ ಕಾಲದಲ್ಲಿ ಜೆರುಸಲೇಮ್ ಪಟ್ಟಣವನ್ನು ‘ಯೆಬೂಸ’ ಎಂದು ಕರೆಯಲಾಗುತ್ತಿತ್ತು. ಅಲ್ಲಿಯ ಮೂಲನಿವಾಸಿಗಳಾದ ಯೆಬೂಸಿಯರು ಆ ಪ್ರದೇಶದಲ್ಲಿ ಇನ್ನೂ ವಾಸಿಸುತ್ತಿದ್ದರು. ಅರಸ ದಾವೀದನೂ ಎಲ್ಲಾ ಇಸ್ರಯೇಲರೂ ಜೆರುಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿದರು.೫. ದಾವೀದನು ಪಟ್ಟಣದೊಳಗೆ ಪ್ರವೇಶಿಸಲು ಎಂದಿಗೂ ಸಾಧ್ಯವಿಲ್ಲವೆಂದು ಯೆಬೂಸಿಯರು ಹೇಳಿದ್ದರು. ಆದರೂ ದಾವೀದನು ಪಟ್ಟಣವನ್ನು ಪ್ರವೇಶಿಸಿ ಸಿಯೋನ್ ಕೋಟೆಯನ್ನು ವಶಪಡಿಸಿಕೊಂಡನು. ಅದು ‘ದಾವೀದ್ ನಗರ’ ಎಂದು ಹೆಸರು ಪಡೆಯಿತು.೬. ‘ಯೆಬೂಸಿಯರಲ್ಲಿ ಒಬ್ಬನನ್ನು ಯಾರು ಮೊದಲು ಕೊಲ್ಲುವನೋ ಅವನು ನನ್ನ ದಳಪತಿಯಾಗುವನು’ ಎಂದು ದಾವೀದ ಪ್ರಕಟಿಸಿದ್ದನು. ಜೆರೂಯಳ ಮಗ ಯೋವಾಬನು ಯುದ್ಧದಲ್ಲಿ ಮುಂದೆ ಹೋಗಿ ಸೇನಾಪತಿಯಾದನು.೭. ಆ ಕೋಟೆಯನ್ನು ದಾವೀದನು ತನ್ನ ವಾಸಸ್ಥಾನವನ್ನಾಗಿ ಮಾಡಿಕೊಂಡದ್ದರಿಂದ ಅದಕ್ಕೆ ‘ದಾವೀದ ನಗರ’ ಎಂದು ಹೆಸರಾಯಿತು.೮. ಗುಡ್ಡದ ಪೂರ್ವದಿಕ್ಕಿನ ಸ್ಥಳವನ್ನು ಮಟ್ಟಮಾಡಿ ಪಟ್ಟಣವನ್ನು ಪುನಃ ಕಟ್ಟಿದನು. ಯೋವಾಬನು ಪಟ್ಟಣದ ಉಳಿದ ಭಾಗವನ್ನು ಜೀರ್ಣೋದ್ಧಾರ ಮಾಡಿದನು.೯. ಸರ್ವಶಕ್ತ ಸರ್ವೇಶ್ವರಸ್ವಾಮಿ ದಾವೀದನೊಂದಿಗೆ ಇದ್ದುದರಿಂದ ಅವನು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದಿದನು.೧೦. ದಾವೀದನ ಸುಪ್ರಸಿದ್ಧ ರಣವೀರರ ಪಟ್ಟಿ ಇದು: ಸರ್ವೇಶ್ವರ ಮಾಡಿದ ವಾಗ್ದಾನಕ್ಕೆ ಅನುಗುಣವಾಗಿ ದಾವೀದನು ಅರಸನಾಗಲು ಇತರ ಇಸ್ರಯೇಲರೊಂದಿಗೆ ಸಹಾಯ ಮಾಡಿದವರು ಹಾಗೂ ಅವನ ರಾಜ್ಯ ಶಕ್ತಿಯುತವಾಗಿರುವಂತೆ ಮಾಡಿದವರು ಇವರು:೧೧. ಹಕ್ಮೋನ ಗೋತ್ರದ ಯಾಷೊಬ್ಬಾಮ ಮೊದಲನೆಯವನು. ಇವನು ‘ಮೂವರು ಪ್ರಮುಖ ವೀರರು’ ಎಂಬ ಪಡೆಯ ನಾಯಕ. ಇವನು ತನ್ನ ಈಟಿಯಿಂದ ಮುನ್ನೂರು ಜನರ ಮೇಲೆ ಹೋರಾಡಿ ಅವರೆಲ್ಲರನ್ನೂ ಒಂದೇ ಕಾಳಗದಲ್ಲಿ ಕೊಂದುಹಾಕಿದನು.೧೨. ಪ್ರಸಿದ್ಧರಾದ ‘ಮೂವರು ಪ್ರಮುಖರು’ ಎಂಬ ಪಡೆಯಲ್ಲಿ ಎರಡನೆಯವನು ಅಹೋಹ್ಯ ಗೋತ್ರದ ದೋದೋ ಎಂಬವನ ಮಗ ಎಲ್ಲಾಜಾರನು.೧೩. ಈತ ಪಸ್ದಮ್ಮೀಮಿ ಎಂಬಲ್ಲಿ ಫಿಲಿಷ್ಟಿಯರಿಗೆ ವಿರುದ್ಧ ಹೂಡಿದ ಕಾಳಗದಲ್ಲಿ ದಾವೀದನ ಪರವಾಗಿ ಹೋರಾಡಿದನು. ಇಸ್ರಯೇಲರು ಹಿಂಜರಿದು ಓಡಿಹೋಗುತ್ತಿದ್ದಾಗ ಇವನು ಜವೆಗೋದಿಯ ಹೊಲದಲ್ಲಿ ಇದ್ದನು.೧೪. ಆಗ ಅವನೂ ಅವನ ಸಂಗಡಿಗರೂ ಹೊಲದ ಮಧ್ಯದಲ್ಲಿ ನಿಂತುಕೊಂಡು ಫಿಲಿಷ್ಟಿಯರಿಗೆ ವಿರೋಧವಾಗಿ ಕಾದಾಡಿದರು. ಸರ್ವೇಶ್ವರ ಅವನಿಗೆ ಮಹಾಜಯವನ್ನು ದಯಪಾಲಿಸಿದರು.೧೫. ಅದುಲ್ಲಾಮ್ ಗವಿಯ ಹತ್ತಿರ ದಾವೀದನು ವಾಸಿಸುತ್ತಿದ್ದಾಗ, ಮೂವತ್ತು ಪ್ರಮುಖ ರಣವೀರರಲ್ಲಿ ಮೂವರು ಒಂದು ದಿನ ಒಂದು ಬಂಡೆಯ ಬಳಿಗೆ ಹೋದರು. ಅಲ್ಲಿ ಫಿಲಿಷ್ಟಿಯರ ಸೈನ್ಯವು ರೆಫಾಯಿಮ್ ಕೊಳ್ಳದಲ್ಲಿ ಬೀಡುಬಿಟ್ಟದ್ದನ್ನು ಕಂಡರು.೧೬. ಆ ಸಮಯದಲ್ಲಿ ದಾವೀದನು ಭದ್ರವಾದ ದಿಣ್ಣೆಯ ಮೇಲಿದ್ದನು. ಫಿಲಿಷ್ಟಿಯರು ಬೆತ್ಲೆಹೇಮನ್ನು ವಶಪಡಿಸಿಕೊಂಡಿದ್ದರು.೧೭. ದಾವೀದನು ತನ್ನೂರನ್ನು ಜ್ಞಾಪಿಸಿಕೊಂಡು ಅಸ್ವಸ್ಥನಾಗಿ ‘ಬೆತ್ಲೆಹೇಮಿನ ದ್ವಾರದ ಬಳಿಯಿರುವ ಬಾವಿಯಿಂದ ನನಗೆ ಕುಡಿಯಲು ಯಾರಾದರೂ ನೀರನ್ನು ತಂದುಕೊಡಬಲ್ಲಿರೋ!’ ಎಂದು ತನ್ನ ಅಪೇಕ್ಷೆಯನ್ನು ವ್ಯಕ್ತಪಡಿಸಿದನು.೧೮. ಪ್ರಸಿದ್ಧರಾದ ಮೂವರು ರಣವೀರರು ಫಿಲಿಷ್ಟಿಯರ ಪಾಳೆಯವನ್ನು ಹಾದುಹೋಗಿ ಬಾವಿಯಿಂದ ನೀರನ್ನು ಸೇದಿಕೊಂಡು ದಾವೀದನಿಗೆ ತಂದುಕೊಟ್ಟರು. “ನಾನು ಈ ನೀರನ್ನು ಎಂದೆಂದಿಗೂ ಕುಡಿಯಬಾರದು. ಇದನ್ನು ಕುಡಿದರೆ, ತಮ್ಮ ಪ್ರಾಣಗಳನ್ನೇ ಪಣವಾಗಿಟ್ಟ ಈ ಮೂವರ ರಕ್ತವನ್ನು ಕುಡಿದಂತಾಗುವುದು,” ಎಂದು ಹೇಳಿ,೧೯. ದಾವೀದನು ಆ ನೀರನ್ನು ಕುಡಿಯದೇ ಸರ್ವೇಶ್ವರನಿಗೆ ಸಮರ್ಪಿಸುವಂತೆ ನೆಲದ ಮೇಲೆ ಸುರಿದನು. ಈ ಮೂರು ಮಂದಿ ರಣವೀರರು ಸಾಧಿಸಿದ ಪರಾಕ್ರಮವಿದು.೨೦. ಯೋವಾಬನ ಸಹೋದರ ಅಬ್ಷೈ ‘ಮೂವತ್ತು ಪ್ರಮುಖ ವೀರರು,’ ಎಂಬ ಪಡೆಯ ನಾಯಕನಾಗಿದ್ದನು. ಅವನು ತನ್ನ ಈಟಿಯಿಂದ ಮುನ್ನೂರು ಜನರಿಗೆ ವಿರೋಧವಾಗಿ ಹೋರಾಡಿ ಅವರನ್ನು ಕೊಂದುಹಾಕಿ ‘ಮೂವತ್ತು ಪ್ರಮುಖ ವೀರರು ‘ ಎಂಬ ಪಡೆಯಲ್ಲಿ ಪ್ರಖ್ಯಾತ ನಾದನು.೨೧. ಅವನು ಈ ‘ಮೂವತ್ತು ಪ್ರಮುಖ ವೀರರ’ ಪಡೆಯಲ್ಲಿ ಪ್ರಸಿದ್ಧನಾದುದಲ್ಲದೇ ಅದರ ನಾಯಕನೂ ಆದನು. ಆದರೆ ‘ಮೂವರು ಪ್ರಮುಖ ವೀರರು’ ಎಂಬ ಪಡೆಯವರಷ್ಟು ಪ್ರಸಿದ್ಧನಾಗಲಿಲ್ಲ.೨೨. ಕಬ್ಜಯೇಲಿನ ಯೆಹೋಯಾದನ ಮಗ ಬೇನಾಯನು ಪ್ರಖ್ಯಾತಿ ಪಡೆದ ಸೈನಿಕನಾಗಿದ್ದನು. ಅವನು ಅನೇಕ ಶೂರಕೃತ್ಯಗಳನ್ನೆಸಗಿದನು: ಮೋವಾಬ್ಯರ ಇಬ್ಬರು ಬಲಶಾಲಿ ಯುದ್ಧವೀರರನ್ನು ಕೊಂದದ್ದೂ ಈ ಕೃತ್ಯಗಳಲ್ಲಿ ಒಂದಾಗಿದೆ. ಒಮ್ಮೆ ಚಳಿಗಾಲದಲ್ಲಿ ತಗ್ಗುಪ್ರದೇಶದಲ್ಲಿ ಹೋಗಿ ಒಂದು ಸಿಂಹವನ್ನು ಕೊಂದನು.೨೩. ಇನ್ನೊಮ್ಮೆ ಏಳುವರೆ ಅಡಿ ಎತ್ತರದ, ಅತೀ ಬಲವಾದ ಈಟಿಯನ್ನು ಹೊಂದಿದ್ದ, ಬಲಾಢ್ಯನಾದ ಈಜಿಪ್ಟನೊಬ್ಬನನ್ನು ಸೋಲಿಸಿದನು. ಆ ಈಜಿಪ್ಟಿನವನ ಕೈಯಲ್ಲಿ ಬಲವಾದ ಈಟಿ ಇತ್ತು. ಇವನಾದರೋ ಒಂದು ಕೋಲನ್ನು ಮಾತ್ರ ಹಿಡಿದುಕೊಂಡು ಹೋಗಿ, ಅವನ ಕೈಯಲ್ಲಿದ್ದ ಈಟಿಯನ್ನು ಕಿತ್ತುಕೊಂಡು ಅದರಿಂದಲೇ ಅವನನ್ನು ಸಂಹರಿಸಿದನು.೨೪. ‘ಮೂವತ್ತು ಪ್ರಮುಖ ವೀರರು’ ಪಡೆಯ ಒಬ್ಬನಾದ ಬೆನಾಯ ಮಾಡಿದ ಶೂರಕೃತ್ಯ ಇದು.೨೫. ಇವನು ‘ಮೂವತ್ತು ಪ್ರಮುಖ ವೀರರ’ ಪಡೆಯಲ್ಲಿ ಪ್ರಸಿದ್ಧನಾಗಿದ್ದನೇ ಹೊರತು, ‘ಮೂವರು ಪ್ರಮುಖ ವೀರರ’ ಪಡೆಯವರಷ್ಟು ಪ್ರಖ್ಯಾತನಾಗಲಿಲ್ಲ. ಅವನನ್ನು ದಾವೀದನು ತನ್ನ ಕಾವಲುಗಾರರಲ್ಲಿ ಮುಖ್ಯಸ್ಥನನ್ನಾಗಿ ಇಟ್ಟುಕೊಂಡಿದ್ದನು.೨೬. ಪ್ರಖ್ಯಾತರಾದ ಇನ್ನಿತರ ಸೈನಿಕರು: ಯೋವಾಬನ ತಮ್ಮ ಅಸಾಹೇಲ, ಬೆತ್ಲೆಹೇಮಿನ ದೋದೋವಿನ ಮಗ ಎಲ್ಖಾನಾನ್,೨೭. ಹರೋರಿನ ಶಮ್ಮೋತ್, ಪೆಲೋನ್ಯನಾದ ಹೆಲೆಚ್,೨೮. ತೆಕೋವದ ಇಕ್ಕೇಷನ ಮಗ ಈರ, ಅನತೋತಿನ ಅಬೀಯೆಜೆರ್,೨೯. ಹುಷ ಊರಿನ ಸಿಬ್ಕೈ, ಅಹೋಹಿನ ಈಲೈ,೩೦. ನೆಟೋಫದ ಮಹರೈ, ನೆಟೋಫದ ಬಾಣನ ಮಗ ಹೇಲೆದ್,೩೧. ಬೆನ್ಯಾಮೀನ್ ದೇಶದ ಗಿಬೆಯ ಊರಿನ ರೀಬೈನ ಮಗ ಈತೈ, ಪಿರಾತೋನ್ಯದ ಬೆನಾಯ,೩೨. ನಹಲೇಗಾಷಿನ ಹೂರೈ, ಅರಾಮಾ ತಗ್ಗಿನ ಅಬೀಯೇಲ್,೩೩. ಬಹರೂಮ್ಯದ ಅಜ್ಮಾವೆತ್, ಶಾಲ್ಬೋನ್ಯದ ಎಲೆಯಖ್ಬ,೩೪. ಗೀಜೋನಿನ ಹಾಷೇಮನ ಮಕ್ಕಳು, ಹರಾರ್ಯದ ಶಾಗೇಯನ ಮಗ ಯೋನಾತಾನ,೩೫. ಹರಾರ್ಯದ ಶಾಕಾರನ ಮಗ ಅಹೀಯಾಮ್, ಊರನ ಮಗ ಎಲೀಫಲ್,೩೬. ಮೆಕೆರಾತ್ಯದ ಹೇಫೆರ್, ಪೆಲೋನ್ಯದ ಅಹೀಯ,೩೭. ಕರ್ಮೇಲ್ಯದ ಹೆಚ್ರೋ, ಎಜ್ಬೈಯ ಮಗ ನಾರೈ,೩೮. ನಾತಾನನ ತಮ್ಮ ಯೋವೇಲ್, ಹಗ್ರೀಯನ ಮಗ ಮಿಬ್ದಾರ್,೩೯. ಅಮ್ಮೋನಿನ ಚೆಲೆಕ್, ಬೇರೋತ್ಯನೂ ಚೆರೂಯಳ ಮಗ ಯೋವಾಬನ ಆಯುಧವಾಹಕನೂ ಆಗಿದ್ದ ನಹರೈ,೪೦. ಇತ್ರೀಯರಾದ ಈರ ಮತ್ತು ಗಾರೇಬ,೪೧. ಹಿತ್ತೀಯನಾದ ಊರೀಯ, ಅಹ್ಲೈಯ ಮಗ ಜಾಬಾದ್,೪೨. ಶೀಜನ ಮಗ ಅದೀನ, (ಈತ ರೂಬೇನ್ ಗೋತ್ರದ ಪ್ರಮುಖ ಸದಸ್ಯ, ಮೂವತ್ತು ಸೈನಿಕರ ಒಂದು ಗುಂಪೂ ಅವನಿಗಿತ್ತು).೪೩. ಮಾಕನ ಮಗ ಹಾನಾನ್, ಮೆತೆನ ಊರಿನ ಯೋಷಾಫಾಟ್,೪೪. ಅಷ್ಟೆರಾತ್ಯದ ಉಜ್ಜೀಯ, ಅರೋಯೇರಿನ ಹೋತಾಮನ ಮಕ್ಕಳಾದ ಶಾಮಾ, ಯೆಗೀಯೇಲರು,೪೫. ಶಮ್ರಿಯ ಮಗ ಎದೀಗಯೇಲ್, ಎದೀಗಯೇಲನ ತಮ್ಮನೂ ತೀಚೀಯನೂ ಆದ ಯೋಹ,೪೬. ಮಹವೀಯದ ಎಲೀಯೇಲ್, ಎಲ್ನಾಮನ ಮಕ್ಕಳಾದ ಯೆರೀಬೈ ಮತ್ತು ಯೋಷವ್ಯ, ಮೋವಾಬ್ಯನಾದ ಇತ್ಮ, ಎಲೀಯೇಲ್, ಓಬೆದ್,ಕ್ರಾನಿಕಲ್ಸ್ ೧ ೧೨:೧-೪೦೧. ದಾವೀದನು ಅರಸ ಸೌಲನಿಂದ ತಪ್ಪಿಸಿಕೊಂಡು ಚಿಕ್ಲಗ್ ಎಂಬಲ್ಲಿಗೆ ಹೋಗಿ ವಾಸಿಸಿದ್ದನು. ಅಲ್ಲಿ ಬೆನ್ಯಾಮೀನ್ ಗೋತ್ರದ ಅನೇಕ ಅನುಭವಶಾಲಿಗಳೂ ನಂಬಿಗಸ್ಥರೂ ಆದ ಸೈನಿಕರು ಬಂದು ಅವನನ್ನು ಸೇರಿಕೊಂಡರು.೨. ಸೌಲನೂ ಬೆನ್ಯಾಮೀನ್ ಗೋತ್ರಕ್ಕೆ ಸೇರಿದವನೇ. ದಾವೀದನನ್ನು ಹಿಂಬಾಲಿಸಿದವರು ಎಡಗೈಯಿಂದಾಗಲೀ ಬಲಗೈಯಿಂದಾಗಲೀ ಬಾಣಗಳನ್ನೆಸೆಯುವವರೂ ಕವಣೆಗಳಲ್ಲಿ ಕಲ್ಲುಗಳನ್ನಿಟ್ಟು ಎಸೆಯಲು ಶಕ್ತರೂ ಆಗಿದ್ದರು.೩. ಅವರು ಗಿಬೇಯದ ಶೇಮಾನ ಮಕ್ಕಳಾದ ಅಹೀಯೆಜೆರ್ ಮತ್ತು ಯೋವಾಷ ಎಂಬವರ ನೇತೃತ್ವದಲ್ಲಿ ಇದ್ದರು. ಆ ಸೈನಿಕರ ಹೆಸರುಗಳು:- ಯೇಜೀಯೇಲ್ ಮತ್ತು ಪೆಲೆಟ - ಅಜ್ಮಾವೆತನ ಮಕ್ಕಳು. ಯೇಹು ಮತ್ತು ಬೆರಾಕ - ಅನತೋತ ಊರಿನವರು. ಇಷ್ಮಾಯ - ಗಿಬ್ಯೋನಿನವನು; ಪ್ರಸಿದ್ಧನಾದ ಸೈನಿಕ, ‘ಮೂವತ್ತು ಪ್ರಮುಖರ’ ಪಟಾಲಮಿನಲ್ಲಿ ಒಬ್ಬ. ಯೆರೆಮೀಯ, ಯಹಜೀಯೇಲ್, ಯೋಹಾನಾನ್, ಯೋಜಾಬಾದ್ - ಗೆದೇರಾ ಊರಿನವರು. ಎಲ್ಲೂಜೈ, ಯೆರೀಮೋತ್, ಬೆಯಲ್ಯ, ಶೆಮರ್ಯ, ಶೆಫಟ್ಯ - ಇವರು ಹರೀಫ್ಯದವರು. ಎಲ್ಕಾನ, ಇಷೀಯ, ಅಜರೇಲ್, ಯೋವೆಜೆರ್ ಮತ್ತು ಯಾಷೊಬ್ಬಮ - ಇವರು ಕೋರಹನ ಗೋತ್ರದವರು. ಯೋವೇಲ ಮತ್ತು ಜೆಬದ್ಯ - ಗೆದೋರಿನ ಯೆರೋಹಾಮನ ಮಕ್ಕಳು.೪. ೫. ೬. ೭. ೮. ದಾವೀದನು ಮರುಭೂಮಿಯ ಕೋಟೆಯಲ್ಲಿದ್ದಾಗ ಅವನ ಪಡೆಗಳಲ್ಲಿ ಬಂದು ಸೇರಿದ ಗಾದ್ ಗೋತ್ರದ ಪ್ರಸಿದ್ಧರೂ ಅನುಭವಶಾಲಿಗಳೂ ಆದ ಯುದ್ಧವೀರರ ಹೆಸರುಗಳು: ಇವರು ನೋಡಲು ಸಿಂಹಗಳಂತೆ ಭೀಕರರೂ ಪರ್ವತದ ಜಿಂಕೆಗಳಂತೆ ಚುರುಕಾದವರೂ ಗುರಾಣಿ, ಈಟಿಗಳನ್ನು ಉಪಯೋಗಿಸುವುದರಲ್ಲಿ ನಿಪುಣರೂ ಆಗಿದ್ದರು.೯. ಸೈನಿಕ ಪಂಕ್ತಿಯಲ್ಲಿದ್ದ ಕ್ರಮಕ್ಕೆ ಅನುಸಾರವಾಗಿ ಅವರ ಹೆಸರುಗಳು ಇಂತಿವೆ: ಏಜೆರ್, ಓಬದ್ಯ, ಎಲೀಯಾಬ್, ಮಷ್ಮನ್ನ, ಯೆರೆಮೀಯ, ಅತ್ತೈ, ಎಲೀಯೇಲ್, ಯೋಹಾನಾನ್, ಎಲ್ಜಾಬಾದ್, ಯೆರೆಮೀಯ, ಮಕ್ಬನ್ನೈ ಎಂಬವರು.೧೦. ೧೧. ೧೨. ೧೩. ೧೪. ಗಾದ್ ಗೋತ್ರದ ಈ ಕೆಲವು ಪುರುಷರು ಹಿರಿಯ ಸಹಸ್ರಾಧಿಪತಿಗಳೂ ಕಿರಿಯ ಶತಾಧಿಪತಿಗಳೂ ಆಗಿದ್ದರು.೧೫. ಜೋರ್ಡನ್ ನದಿಯು ಪ್ರಥಮ ಮಾಸದಲ್ಲಿ ದಡತುಂಬಿ ಹರಿಯುತ್ತ ಇದ್ದಾಗ ಅದನ್ನು ದಾಟಿ ನದಿಯ ತಗ್ಗಿನ ಪೂರ್ವಪಶ್ಚಿಮ ಪ್ರದೇಶದಲ್ಲಿದ್ದವರೆಲ್ಲರನ್ನು ಓಡಿಸಿಬಿಟ್ಟವರು ಇವರೇ.೧೬. ಒಮ್ಮೆ ಬೆನ್ಯಾಮೀನ್ ಹಾಗು ಯೂದ ಗೋತ್ರದ ಜನರ ಒಂದು ಗುಂಪು ದಾವೀದನು ವಾಸವಾಗಿದ್ದ ಕೋಟೆಯಬಳಿಗೆ ಹೋಯಿತು.೧೭. ದಾವೀದನು ಅವರನ್ನು ಎದುರುಗೊಂಡು “ಸ್ನೇಹಿತರಂತೆ ನನಗೆ ಸಹಾಯ ಮಾಡಲು ಬಂದಿದ್ದರೆ ನಿಮಗೆ ಇಲ್ಲಿ ಸ್ವಾಗತ. ನಮ್ಮೊಂದಿಗೆ ಸೇರಿಕೊಳ್ಳಿ, ನಾನು ನಿಮಗೆ ಯಾವ ತೊಂದರೆಯನ್ನು ಕೊಟ್ಟಿಲ್ಲ. ಆದರೆ ನೀವು ನನ್ನನ್ನು ನನ್ನ ವೈರಿಗಳಿಗೆ ಹಿಡಿದುಕೊಡಲು ಬಂದಿದ್ದರೆ ನಮ್ಮ ಪಿತೃಗಳ ದೇವರು ಅದನ್ನು ಬಲ್ಲವರಾಗಿದ್ದು ನಿಮ್ಮನ್ನು ದಂಡಿಸುವರು,” ಎಂದು ಹೇಳಿದನು.೧೮. ಆಗ ‘ಮೂವತ್ತು ಪ್ರಮುಖ’ರ ಪಡೆಯಲ್ಲಿ ಮುಖ್ಯಸ್ಥನಾದ ಅಮಾಸೈ ಆತ್ಮಾವೇಶವುಳ್ಳವನಾಗಿ ಹೀಗೆ ಕೂಗಿ ಹೇಳಿದನು: “ಜೆಸ್ಸೆಯ ಮಗ ದಾವೀದನಿಗೆ ಶುಭವಾಗಲಿ! ನಾವೆಲ್ಲರು ನಿಮ್ಮವರು; ನಿಮಗೂ ನಿಮ್ಮ ಸಹಾಯಕರಿಗೂ ಶುಭವಾಗಲಿ! ದೇವರು ನಿಮಗೆ ಜಯಪ್ರದರಾಗಿದ್ದಾರೆ.” ದಾವೀದ ಅವರನ್ನು ಸ್ವಾಗತಿಸಿ ತನ್ನ ಸೈನ್ಯದಲ್ಲಿ ಮುಖ್ಯಾಧಿಕಾರಿಗಳನ್ನಾಗಿ ನೇಮಿಸಿದನು.೧೯. ಅರಸ ಸೌಲನಿಗೆ ವಿರುದ್ಧ ಯುದ್ಧಮಾಡಲು ಫಿಲಿಷ್ಟಿಯರೊಂದಿಗೆ ಹೋಗುತ್ತಿದ್ದಾಗ ಮನಸ್ಸೆ ಗೋತ್ರದ ಕೆಲವು ಜನ ಸೈನಿಕರು ಬಂದು ದಾವೀದನ ಪಕ್ಷದಲ್ಲಿ ಸೇರಿಕೊಂಡರು. ದಾವೀದನು ನಿಜವಾಗಿಯೂ ಫಿಲಿಷ್ಟಿಯರಿಗೆ ಸಹಾಯಮಾಡಲಿಲ್ಲ. ತನ್ನ ಮೊದಲಿನ ಯಜಮಾನ ಸೌಲನಿಗೆ ತಮ್ಮನ್ನು ಹಿಡಿದುಕೊಡಬಹುದೆಂಬ ಭಯ ಫಿಲಿಷ್ಟಿಯ ರಾಜರುಗಳಿಗೆ ಇದ್ದುದರಿಂದ ಅವರು ಅವನನ್ನು ಚಿಕ್ಲಗಿಗೆ ಹಿಂದಕ್ಕೆ ಕಳುಹಿಸಿದರು.೨೦. ಹೀಗೆ ಅವನು ಹಿಂದಿರುಗುತ್ತಿದ್ದಾಗ ಅವನನ್ನು ಸೇರಿಕೊಂಡ ಮನಸ್ಸೆಗೋತ್ರದ ಸೈನಿಕರ ಹೆಸರುಗಳು ಇಂತಿವೆ: ಅದ್ನ, ಯೋಜಾಬಾದ್, ಎದೀಗಯೇಲ್, ಮೀಕಾಯೇಲ್, ಯೋಜಾಬಾದ್, ಎಲೀಹೂ ಹಾಗೂ ಚಿಲ್ಲೆತೈ. ಇವರೆಲ್ಲರೂ ಮನಸ್ಸೆ ಗೋತ್ರದಲ್ಲಿ ಸಹಸ್ರಾಧಿಪತಿಗಳಾಗಿದ್ದರು.೨೧. ಇವರು ಪ್ರಖ್ಯಾತ ಯುದ್ಧವೀರರಾಗಿದ್ದು ದಾವೀದನ ಸೇನಾಪಡೆಗಳ ಮುಖ್ಯಸ್ಥರಾಗಿ ಸೇವೆಸಲ್ಲಿಸಿದರು. ಅನಂತರ ಇಸ್ರಯೇಲಿನ ಸೇನೆಯಲ್ಲಿಯೂ ಮುಖ್ಯಸ್ಥರಾಗಿದ್ದರು.೨೨. ದಾವೀದನ ಸೈನ್ಯಕ್ಕೆ ಪ್ರತಿದಿನವೂ ಹೊಸಬರು ಬಂದು ಸೇರುತ್ತಾ ಇದ್ದುದರಿಂದ ಅವನ ಸೈನ್ಯವು ಸಂಖ್ಯೆಯಲ್ಲಿ ಅಧಿಕಾಧಿಕವಾಗಿ ಬೆಳೆಯಿತು.೨೩. ಸರ್ವೇಶ್ವರಸ್ವಾಮಿ ವಾಗ್ದಾನ ಮಾಡಿದಂತೆ ಸೌಲನಿಗೆ ಬದಲಾಗಿ ದಾವೀದನನ್ನು ಅರಸನನ್ನಾಗಿ ಮಾಡಲು, ಅನೇಕ ಸಿದ್ಧಸೈನಿಕರು ಹೆಬ್ರೋನಿಗೆ ಬಂದು ದಾವೀದನ ಸೈನ್ಯದಲ್ಲಿ ಸೇರಿದರು. ಅವರ ಸಂಖ್ಯೆಗಳು ಈ ಕೆಳಕಂಡಂತಿವೆ:೨೪. ಯೆಹೂದ: ಗುರಾಣಿ ಹಾಗೂ ಈಟಿಗಳನ್ನು ಹೊಂದಿದ ೬,೮೦೦ ಶಸ್ತ್ರಧಾರಿಗಳು;೨೫. ಸಿಮೆಯೋನ: ಚೆನ್ನಾಗಿ ತರಬೇತಿ ಹೊಂದಿದ ೭,೧೦೦ ರಣವೀರರು;೨೬. ಲೇವಿ: ೪,೬೦೦ ಸೈನಿಕರು;೨೭. ಯೆಹೋಯಾದಾವನೂ ಅವನ ಹಿಂಬಾಲಕರೂ ಆದ ಆರೋನನ ವಂಶಜರು -೩,೭೦೦ ಸೈನಿಕರು;೨೮. ಪರಾಕ್ರಮಶಾಲಿಯಾದ ಯುವಕ ಚಾದೋಕ ಮತ್ತು ಅವನ ಬಂಧುಗಳಾದ ೨೨ ಮಂದಿ ಅಧಿಪತಿಗಳು;೨೯. ಸೌಲನ ಸಂಬಂಧಿಕರಾದ ಬೆನ್ಯಾಮೀನ್ ಗೋತ್ರದಿಂದ: ೩,೦೦೦ ಸೈನಿಕರು;೩೦. ಎಫ್ರಯಿಮ್ ಗೋತ್ರದಿಂದ: ೨೦,೮೦೦ ಮಹಾರಣವೀರರು;೩೧. ಪಶ್ಚಿಮದಲ್ಲಿ ಮನಸ್ಸೆ ಕುಲದಿಂದ ೧೮,೦೦೦ ಮಂದಿ ದಾವೀದನ ಪಟ್ಟಾಭಿಷೇಕದಲ್ಲಿ ಭಾಗಿಗಳಾಗಲು ಆಯ್ಕೆಯಾದವರು;೩೨. ಇಸ್ಸಾಕಾರ ಗೋತ್ರದಿಂದ: ೨೦೦ ಜನ ನಾಯಕರು ಹಾಗೂ ಅವರೊಂದಿಗಿದ್ದ ಸೈನಿಕರು; (ಇಸ್ರಯೇಲರು ಏನು ಮಾಡಬೇಕು, ಅದನ್ನು ಮಾಡಲು ಯಾವುದು ಉತ್ತಮ ಸಮಯ ಎಂಬುದನ್ನು ಈ ನಾಯಕರು ತಿಳಿದಿದ್ದರು);೩೩. ಜೆಬೂಲೂನ್ಯರಿಂದ: ನಿಷ್ಠೆಯುಳ್ಳ, ನಂಬಿಗಸ್ಥ, ಯುದ್ಧಮಾಡಲು ಸಿದ್ಧರಾದ, ಎಲ್ಲಾ ರೀತಿಯ ಆಯುಧಗಳನ್ನು ಉಪಯೋಗಿಸಲು ತರಬೇತಿ ಹೊಂದಿದ ೫೦,೦೦೦ ವೀರರು;೩೪. ನಫ್ತಾಲಿಯವರಿಂದ: ೧,೦೦೦ ಮಂದಿ ನಾಯಕರು ಮತ್ತು ಅವರೊಂದಿಗೆ ಗುರಾಣಿ, ಈಟಿಗಳೊಂದಿಗೆ ಸಶಸ್ತ್ರರಾದ ೩೭,೦೦೦ ಸೈನಿಕರು.೩೫. ದಾನ್ಯರಿಂದ: ೨೮,೬೦೦ ಯುದ್ಧ ನಿಪುಣರು;೩೬. ಅಶೇರ್ಯರಿಂದ: ೪೦,೦೦೦ ಯುದ್ಧಸನ್ನದ್ಧರಾದ ವೀರರು;೩೭. ಜೋರ್ಡನ್ ಪೂರ್ವದಲ್ಲಿದ್ದ ಗೋತ್ರಗಳು - ರೂಬೇನ್, ಗಾದ್ ಮತ್ತು ಪೂರ್ವ ಮನಸ್ಸೆ: ಎಲ್ಲಾ ರೀತಿಯ ಆಯುಧಗಳನ್ನು ಪ್ರಯೋಗಿಸಲು ತರಬೇತಿ ಹೊಂದಿದ ೧೨೦,೦೦೦ ಪುರುಷರು.೩೮. ಯುದ್ಧಸನ್ನದ್ಧರಾದ ಈ ಎಲ್ಲಾ ಸೈನಿಕರು ಸಮಸ್ತ ಇಸ್ರಯೇಲರ ಮೇಲೆ ದಾವೀದನನ್ನು ಅರಸನನ್ನಾಗಿ ಮಾಡಲು ದೃಢನಿರ್ಧಾರ ಮಾಡಿಕೊಂಡು ಹೆಬ್ರೋನಿಗೆ ಹೋದರು. ಇಸ್ರಯೇಲರಲ್ಲಿ ಉಳಿದವರೆಲ್ಲರೂ ಇದೇ ಉದ್ದೇಶದಿಂದ ಒಂದಾಗಿದ್ದರು.೩೯. ಅವರುದಾವೀದನೊಂದಿಗೆ, ತಮ್ಮ ಸಹಬಾಂಧವರು ಸಿದ್ಧಪಡಿಸಿದ ಆಹಾರ ಪಾನೀಯಗಳನ್ನು ಸೇವಿಸುತ್ತಾ, ಮೂರು ದಿನಗಳನ್ನು ಕಳೆದರು.೪೦. ದೂರದ ಉತ್ತರದಲ್ಲಿದ್ದ ಇಸ್ಸಾಕಾರ್, ಜೆಬುಲೂನ್, ನಫ್ತಾಲಿ ಗೋತ್ರಗಳ ಜನರು ತಮ್ಮ ಎತ್ತು, ಕತ್ತೆ, ಹೇಸರಗತ್ತೆ, ಒಂಟೆ ಇವುಗಳ ಮೇಲೆ ರೊಟ್ಟಿ, ಅಂಜೂರ, ಒಣದ್ರಾಕ್ಷಿ, ದ್ರಾಕ್ಷಾರಸ, ಎಣ್ಣೆಗಳನ್ನು ಹೊತ್ತುತಂದರು. ಭೋಜನಕ್ಕೆ ಕುರಿದನಗಳನ್ನು ಸಹ ತೆಗೆದುಕೊಂಡು ಬಂದರು. ನಾಡಿನಲ್ಲೆಲ್ಲಾ ಸಂತೋಷ ಸಂಭ್ರಮವಿತ್ತು.ಕೀರ್ತನೆಗಳು ೭೭:೧೬-೨೦೧೬. ಜಲರಾಶಿಗಳು ದೇವಾ, ನಿನ್ನ ಕಂಡವು I ಕಾಣುತ್ತಲೇ ನಡುಗಿ ತಳಮಳಗೊಂಡವು I ತಳದವರೆಗೂ ಅಲ್ಲಕಲ್ಲೋಲವಾದವು II೧೭. ಮಳೆಗರಿಯಿತಾ ಮೇಘಮಂಡಲವು I ಭೋರ್ಗರೆಯಿತಾಗ ಅಂತರಿಕ್ಷವು I ಮಿಂಚಿದವು ಎಲ್ಲೆಡೆ ನಿನ್ನಂಬುಗಳು II೧೮. ಮೊಳಗಿತು ನಿನ್ನ ಗುಡುಗು ಬಿರುಗಾಳಿಯಲಿ I ಹೊಳೆಯಿತು ನಿನ್ನ ಮಿಂಚು ಇಡೀ ಲೋಕದಲಿ I ಕಂಪಿಸಿತೀ ಭೂಮಂಡಲ ನಡುನಡುಗಿ II೧೯. ಸಾಗರವನೆ ನೀ ತುಳಿದು ನಡೆದೆ I ಮಹಾಸಾಗರವನೆ ನೀ ದಾಟಿದೆ I ಹೆಜ್ಜೆಯ ಗುರುತನೂ ಕಾಣಬಿಡದೆ II೨೦. ಕುರುಬನು ತನ್ನ ಕುರಿಮಂದೆಯನು ಕರೆದೊಯ್ಯುವಂತೆ I ಮೋಶೆ, ಆರೋನರಿಂದ ನಿನ್ನ ಪ್ರಜೆಗಳನು ನಡೆಸಿದೆ IIಜ್ಞಾನೋಕ್ತಿಗಳು ೧೯:೧೭-೧೯೧೭. ಬಡವರಿಗೆ ತೋರುವ ದಯೆ ಸರ್ವೇಶ್ವರನಿಗೆ ಕೊಟ್ಟ ಸಾಲ; ಆ ಉಪಕಾರಕ್ಕೆ ಸರ್ವೇಶ್ವರನಿಂದಲೆ ಪ್ರತ್ಯುಪಕಾರ.೧೮. ತಿದ್ದಿಕೊಳ್ಳುವನೆಂಬ ನಂಬಿಕೆಯಿರುವಾಗಲೆ ಮಗನನ್ನು ಶಿಕ್ಷಿಸು; ಇಲ್ಲವಾದರೆ ಅವನ ಅಳಿವಿಗೆ ನೀನೇ ಕಾರಣವಾಗುವೆ.೧೯. ಕಡುಕೋಪಿ ದಂಡನೆಯನ್ನು ಅನುಭವಿಸಲಿ ಬಿಡು; ಒಮ್ಮೆ ಬಿಡಿಸಿದರೆ, ಬಾರಿಬಾರಿಗೂ ಬಿಡಿಸಬೇಕಾಗುವುದು.ಪ್ರೇಷಿತರ ೭:೧-೨೧೧. ಪ್ರಧಾನಯಾಜಕನು, “ಇವರು ನಿನ್ನ ವಿರುದ್ಧ ಹೇಳುತ್ತಿರುವುದು ಸತ್ಯವೋ?” ಎಂದು ಸ್ತೇಫನನನ್ನು ಕೇಳಿದನು.೨. ಪ್ರತ್ಯುತ್ತರವಾಗಿ ಅವನು ಹೀಗೆಂದನು: “ಭ್ರಾತೃಗಳೇ, ಪಿತೃಗಳೇ, ಕಿವಿಗೊಡಿ. ನಮ್ಮ ಪಿತಾಮಹ ಅಬ್ರಹಾಮನು ಹಾರಾನಿನಲ್ಲಿ ವಾಸಮಾಡುವ ಮೊದಲು ಮೆಸಪಟೋಮಿಯದಲ್ಲಿ ಇದ್ದನು. ಆಗ ಮಹಿಮಾ ಸ್ವರೂಪರಾದ ದೇವರು ಅವನಿಗೆ ದರ್ಶನವಿತ್ತರು.೩. ‘ನೀನು ನಿನ್ನ ಬಂಧುಬಳಗವನ್ನೂ ತಾಯ್ನಾಡನ್ನೂ ಬಿಟ್ಟು ನಾನು ತೋರಿಸುವ ನಾಡಿಗೆ ಹೋಗು,’ ಎಂದರು.೪. ಅಂತೆಯೇ ಅವನು ಕಸ್ದೀಯರ ನಾಡನ್ನು ಬಿಟ್ಟು ಹಾರಾನಿನಲ್ಲಿ ವಾಸಮಾಡಿದನು; ಅವನ ತಂದೆಯ ಮರಣಾನಂತರ ದೇವರು ಅವನನ್ನು ನೀವು ವಾಸಮಾಡುತ್ತಿರುವ ಈ ನಾಡಿಗೆ ಕರೆತಂದರು.೫. ಆಗ ಇಲ್ಲಿ ಕಾಲಿಡುವಷ್ಟು ನೆಲವನ್ನು ಕೂಡ ದೇವರು ಅವನಿಗೆ ಸ್ವಾಸ್ತ್ಯವಾಗಿ ಕೊಡಲಿಲ್ಲ. ಸ್ವಂತ ಸೊತ್ತಾಗಿ ಅವನಿಗೂ ಅವನ ಬಳಿಕ ಅವನ ಸಂತತಿಗೂ ಕೊಡುವುದಾಗಿ ವಾಗ್ದಾನಮಾಡಿದರಷ್ಟೆ. ಆಗ ಅಬ್ರಹಾಮನಿಗೆ ಮಕ್ಕಳೇ ಇರಲಿಲ್ಲ.೬. ಇದಲ್ಲದೆ ದೇವರು ಅಬ್ರಹಾಮನಿಗೆ, ‘ನಿನ್ನ ಸಂತತಿಯವರು ಅನ್ಯದೇಶದಲ್ಲಿ ಗುಲಾಮರಾಗುವರು; ನಾನೂರು ವರ್ಷಗಳವರೆಗೆ ದಬ್ಬಾಳಿಕೆಗೆ ಒಳಗಾಗುವರು.೭. ಅವರಿಂದ ಗುಲಾಮಗಿರಿಯನ್ನು ಪಡೆಯುವ ಜನಾಂಗಕ್ಕೆ ನಾನು ದಂಡನೆ ವಿಧಿಸುವೆನು. ಅನಂತರ ಅವರು ಅಲ್ಲಿಂದ ಹೊರಬಂದು ನನ್ನನ್ನು ಈ ಸ್ಥಳದಲ್ಲೇ ಆರಾಧಿಸುವರು,’ ಎಂದರು.೮. ಆಮೇಲೆ ದೇವರು ಅಬ್ರಹಾಮನೊಡನೆ ಒಡಂಬಡಿಕೆಯನ್ನು ಮಾಡಿಕೊಂಡರು; ಆ ಒಡಂಬಡಿಕೆಯ ಚಿಹ್ನೆಯನ್ನಾಗಿ ಸುನ್ನತಿಯನ್ನು ವಿಧಿಸಿದರು.ಅದರಂತೆ ಅಬ್ರಹಾಮನು ತನ್ನ ಮಗ ಇಸಾಕನಿಗೆ ಹುಟ್ಟಿದ ಎಂಟನೆಯ ದಿನ ಸುನ್ನತಿಯನ್ನು ಮಾಡಿದನು. ಇಸಾಕನು ತನ್ನ ಮಗ ಯಕೋಬನಿಗೂ, ಯಕೋಬನು ತನ್ನ ಹನ್ನೆರಡು ಮಕ್ಕಳಾದ ನಮ್ಮ ಪಿತಾಮಹರಿಗೂ ಹಾಗೆಯೇ ಮಾಡಿದನು.೯. “ಈ ಪಿತಾಮಹರು ಜೋಸೆಫನ ಮೇಲೆ ಮತ್ಸರ ತಾಳಿ ಅವನನ್ನು ಈಜಿಪ್ಟಿನವರಿಗೆ ಗುಲಾಮನನ್ನಾಗಿ ಮಾರಿದರು. ಆದರೆ ದೇವರು ಅವನೊಂದಿಗೆ ಇದ್ದು,೧೦. ಎಲ್ಲಾ ಆಪತ್ತು ವಿಪತ್ತುಗಳಿಂದ ಅವನನ್ನು ಪಾರುಮಾಡಿದರು. ಅವನು ಈಜಿಪ್ಟಿನ ಅರಸ ಫರೋಹನ ಆಸ್ಥಾನಕ್ಕೆ ಬಂದಾಗ ದೇವರು ಅವನಿಗೆ ಜ್ಞಾನಸಂಪನ್ನತೆಯನ್ನಿತ್ತು ಅರಸನ ಮೆಚ್ಚುಗೆಗೆ ಪಾತ್ರನಾಗುವಂತೆ ಅನುಗ್ರಹಿಸಿದರು. ಫರೋಹನು ಅವನನ್ನು ರಾಜ್ಯಪಾಲನನ್ನಾಗಿಯೂ ಅರಮನೆಯ ಮೇಲ್ವಿಚಾರಕನನ್ನಾಗಿಯೂ ನೇಮಿಸಿದನು.೧೧. ಈಜಿಪ್ಟ್ ಹಾಗೂ ಕಾನಾನ್ ದೇಶಗಳಲ್ಲಿ ಕ್ಷಾಮ ತಲೆದೋರಿದಾಗ ಜನರು ಕಷ್ಟಸಂಕಟಗಳಿಗೆ ಒಳಗಾದರು. ನಮ್ಮ ಪೂರ್ವಜರು ಆಹಾರವಿಲ್ಲದೆ ಅವಸ್ಥೆಪಟ್ಟರು.೧೨. ಈಜಿಪ್ಟ್ ದೇಶದಲ್ಲಿ ಧಾನ್ಯ ಇರುವುದೆಂದು ಅರಿತು ಯಕೋಬನು, ಮೊದಲ ಬಾರಿಗೆ ತನ್ನ ಪುತ್ರರನ್ನು ಅಲ್ಲಿಗೆ ಕಳುಹಿಸಿದನು.೧೩. ಎರಡನೆಯ ಬಾರಿ ಅವರು ಬಂದಾಗ ಜೋಸೆಫನು ತನ್ನ ಗುರುತನ್ನು ಸಹೋದರರಿಗೆ ತಿಳಿಸಿದನು. ಆಗ ಫರೋಹನಿಗೆ ಜೋಸೆಫನ ವಂಶದ ಪರಿಚಯವಾಯಿತು.೧೪. ಅನಂತರ ತನ್ನ ತಂದೆ ಯಕೋಬನೂ ಅವನ ಬಂಧುಬಳಗದವರೂ ಈಜಿಪ್ಟಿಗೆ ಬರುವಂತೆ ಜೋಸೆಫನು ಹೇಳಿಕಳುಹಿಸಿದನು.೧೫. ಇವರ ಒಟ್ಟು ಸಂಖ್ಯೆ ಎಪ್ಪತ್ತೈದು. ಯಕೋಬನು ಈಜಿಪ್ಟಿಗೆ ಹೋದನು. ಅವನೂ ನಮ್ಮ ಪಿತಾಮಹರೂ ಅಲ್ಲೇ ನಿಧನರಾದರು.೧೬. ಅವರ ಅವಶೇಷಗಳನ್ನು ಮರಳಿ ಶೇಕೆಮಿಗೆ ಕೊಂಡೊಯ್ಯಲಾಯಿತು. ಅಲ್ಲಿ ಹಾಮೋರ್ ಎಂಬವನ ಮಕ್ಕಳಿಂದ ಅಬ್ರಹಾಮನು ಕ್ರಯಕ್ಕೆ ಕೊಂಡುಕೊಂಡಿದ್ದ ಸಮಾಧಿಯಲ್ಲಿ ಹೂಳಿದರು.೧೭. “ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸುವ ಕಾಲವು ಸಮೀಪಿಸಿತು. ಈಗಾಗಲೇ ಈಜಿಪ್ಟ್ ದೇಶದಲ್ಲಿ ನಮ್ಮ ಜನರ ಸಂಖ್ಯೆ ಅಧಿಕವಾಗಿ ಬೆಳೆದಿತ್ತು.೧೮. ಕಡೆಗೆ ಜೋಸೆಫನನ್ನೇ ಅರಿಯದ ಬೇರೊಬ್ಬ ಅರಸ ರಾಜ್ಯವಾಳಲಾರಂಭಿಸಿದನು.೧೯. ಅವನು ನಮ್ಮ ಜನರೊಡನೆ ಕುಯುಕ್ತಿಯಿಂದ ನಡೆದುಕೊಂಡನು. ಅವರ ಹಸುಳೆಗಳನ್ನು ನಿರ್ನಾಮಮಾಡಲು ಅವುಗಳನ್ನು ಹೊರಗೆ ಹಾಕಬೇಕೆಂದು ಬಲಾತ್ಕಾರಮಾಡಿದನು.೨೦. ಸುರಸುಂದರನಾದ ಮೋಶೆ ಜನಿಸಿದ್ದು ಈ ಸಂದರ್ಭದಲ್ಲೇ. ಅವನು ಮೂರು ತಿಂಗಳವರೆಗೆ ಮನೆಯಲ್ಲೇ ಬೆಳೆದನು.೨೧. ಅನಂತರ ಅವನನ್ನು ಮನೆಯಿಂದ ದೂರವಿಟ್ಟಿದ್ದಾಗ, ಫರೋಹನ ಮಗಳು ಅವನನ್ನು ತನ್ನ ಪಾಲನೆಗೆ ತೆಗೆದುಕೊಂಡು ಸ್ವಂತ ಮಗನಂತೆ ಸಾಕಿದಳು. Kannada Bible (KNCL) 2016 Kannada C.L. Bible - ಸತ್ಯವೇದವು C.L. Copyright © 2016 by The Bible Society of India Used by permission. worldwide