ಬೈಬಲ್ ಒಂದು ವರ್ಷದಲ್ಲಿ ಜುಲೈ ೧೩ಕ್ರಾನಿಕಲ್ಸ್ ೨ ೨೧:೧-೨೦೧. ಯೆಹೋಷಾಫಾಟನು ಮೃತನಾಗಿ ಪಿತೃಗಳ ಬಳಿಗೆ ಸೇರಿ ದಾವೀದನಗರದಲ್ಲಿದ್ದ ಪೂರ್ವಿಕರ ಸ್ಮಶಾನಭೂಮಿಯಲ್ಲಿ ಸಮಾಧಿಹೊಂದಿದ ಮೇಲೆ, ಅವನ ಸ್ಥಾನದಲ್ಲಿ ಅವನ ಮಗ ಯೆಹೋರಾಮನು ಅರಸನಾದನು.೨. ಇವನಿಗೆ ಅಜರ್ಯ, ಯೆಹೀಯೇಲ್, ಜೆಕರ್ಯ, ಅಜರ್ಯ, ಮೀಕಾಯೇಲ್, ಶೆಫಟ್ಯ ಎಂಬ ತಮ್ಮಂದಿರಿದ್ದರು. ಇವರೆಲ್ಲರು ಯೆಹೂದ್ಯರ ಅರಸ ಯೆಹೋಷಾಫಾಟನ ಮಕ್ಕಳು.೩. ಇವರ ತಂದೆ ಇವರಿಗೆ ಜುದೇಯದ ಕೋಟೆಕೊತ್ತಲಗಳುಳ್ಳ ಪಟ್ಟಣಗಳನ್ನು ಅಲ್ಲದೆ, ಬೆಳ್ಳಿಬಂಗಾರ, ಅಮೂಲ್ಯ ವಸ್ತು ಇತ್ಯಾದಿ ವಿಶೇಷ ದಾನಗಳನ್ನು ಕೊಟ್ಟನು. ಆದರೆ ಯೆಹೋರಾಮನು ಹಿರಿಯ ಮಗನಾಗಿದ್ದುದರಿಂದ ಅವನಿಗೆ ರಾಜ್ಯವನ್ನು ಕೊಟ್ಟನು.೪. ಯೆಹೋರಾಮನು ತನ್ನ ತಂದೆಯ ರಾಜ್ಯವನ್ನು ಪಡೆದುಕೊಂಡು, ತನ್ನ ಆಳ್ವಿಕೆಯನ್ನು ಸ್ಥಿರಗೊಳಿಸಿಕೊಂಡ ಮೇಲೆ, ತನ್ನ ಎಲ್ಲ ಸಹೋದರರನ್ನೂ ಕೆಲವು ಮಂದಿ ಇಸ್ರಯೇಲ್ ಪ್ರಮುಖರನ್ನೂ ಕತ್ತಿಯಿಂದ ಸಂಹರಿಸಿದನು.೫. ಯೆಹೋರಾಮನು ಪಟ್ಟಕ್ಕೆ ಬಂದಾಗ ಇವನಿಗೆ ಮೂವತ್ತೆರಡು ವರ್ಷ ವಯಸ್ಸು. ಇವನು ಜೆರುಸಲೇಮಿನಲ್ಲಿ ಎಂಟು ವರ್ಷ ಆಳಿದನು.೬. ಅಹಾಬನ ಮಗಳನ್ನು ಇವನು ಮದುವೆಮಾಡಿಕೊಂಡದ್ದರಿಂದ ಅಹಾಬನ ಕುಟುಂಬದವರಾದ ಇಸ್ರಯೇಲ್ ಅರಸರ ಹೆಜ್ಜೆಯಲ್ಲೇ ನಡೆದು ಸರ್ವೇಶ್ವರನ ಚಿತ್ತಕ್ಕೆ ವಿರುದ್ಧವಾಗಿ ನಡೆದನು.೭. ಆದರೂ ಸರ್ವೇಶ್ವರ ದಾವೀದನಿಗೆ, “ನಿನ್ನ ಮತ್ತು ನಿನ್ನ ಸಂತಾನದವರ ದೀಪವನ್ನು ಎಂದೂ ನಂದಿಸುವುದಿಲ್ಲ,” ಎಂದು ಪ್ರಮಾಣ ಮಾಡಿ ಹೇಳಿದ್ದರಿಂದ ಆ ದಾವೀದನ ಮನೆತನದವರನ್ನು ನಾಶಮಾಡುವುದಕ್ಕೆ ಇಷ್ಟಪಡಲಿಲ್ಲ.೮. ಯೆಹೋರಾಮನ ಕಾಲದಲ್ಲಿ ಎದೋಮ್ಯರು ಯೆಹೂದ್ಯರಿಗೆ ವಿರುದ್ಧ ದಂಗೆಯೆದ್ದರು; ಸ್ವತಂತ್ರರಾಗಿ ತಾವೇ ತಮಗೊಬ್ಬ ಅರಸನನ್ನು ನೇಮಿಸಿಕೊಂಡರು.೯. ಆಗ ಯೆಹೋರಾಮನು ತನ್ನ ಸರದಾರರನ್ನೂ ಎಲ್ಲ ರಥಬಲವನ್ನೂ ಕೂಡಿಸಿಕೊಂಡು ಜೋರ್ಡನ್ ನದಿಯನ್ನು ದಾಟಿದನು. ಎದೋಮ್ಯರು ಬಂದು ಅವನನ್ನು ಸುತ್ತಿಕೊಳ್ಳಲು ಅವನು ರಾತ್ರಿಯಲ್ಲೇ ದಂಡೆತ್ತಿಹೋಗಿ ಅವರನ್ನೂ ಅವರ ರಥಬಲದ ಅಧಿಪತಿಗಳನ್ನೂ ಸೋಲಿಸಿ ಪಾರಾದನು.೧೦. ಯೆಹೂದ್ಯರಿಗೆ ವಿರುದ್ಧ ದಂಗೆಯೆದ್ದ ಎದೋಮ್ಯರು ಅಂದಿನಿಂದ ಇಂದಿನವರೆಗೂ ಸ್ವತಂತ್ರರಾಗಿದ್ದಾರೆ. ಆ ಕಾಲದಲ್ಲೇ ಲಿಬ್ನದವರೂ ಅವನ ಕೈಯಿಂದ ತಪ್ಪಿಸಿಕೊಂಡು ಸ್ವತಂತ್ರರಾದರು. ಯೆಹೋರಾಮನು ತನ್ನ ಪಿತೃಗಳ ದೇವರಾದ ಸರ್ವೇಶ್ವರನನ್ನು ಬಿಟ್ಟದ್ದೇ ಇದಕ್ಕೆ ಕಾರಣ.೧೧. ಅವನು ಜುದೇಯದ ಗುಡ್ಡಗಳಲ್ಲಿ ಪೂಜಾಸ್ಥಳಗಳನ್ನು ಏರ್ಪಡಿಸಿ, ಜೆರುಸಲೇಮಿನವರು ದೇವದ್ರೋಹ ಮಾಡುವಂತೆ ಪ್ರೇರೇಪಿಸಿ, ಯೆಹೂದ್ಯರನ್ನು ಸನ್ಮಾರ್ಗದಿಂದ ತಪ್ಪಿಸಿದನು.೧೨. ಹೀಗಿರಲು, ಪ್ರವಾದಿ ಎಲೀಯನು ಪತ್ರದ ಮೂಲಕ ಅವನಿಗೆ, “ನಿನ್ನ ಪೂರ್ವಜ ದಾವೀದನ ದೇವರಾಗಿರುವ ಸರ್ವೇಶ್ವರನ ಮಾತನ್ನು ಕೇಳು: ನೀನು ನಿನ್ನ ತಂದೆ ಯೆಹೋಷಾಫಾಟನ ಮಾರ್ಗದಲ್ಲಿ ಹಾಗು ಯೆಹೂದ್ಯರ ಅರಸ ಆಸನ ಮಾರ್ಗದಲ್ಲಿ ನಡೆಯಲಿಲ್ಲ;೧೩. ಇಸ್ರಯೇಲ್ ಅರಸರ ಹೆಜ್ಜೆಯಲ್ಲೇ ನಡೆದು, ಅಹಾಬನ ಮನೆಯವರಲ್ಲಿ ಪ್ರಬಲವಾಗಿದ್ದ ದೇವದ್ರೋಹವನ್ನು ಮಾಡುವಂತೆ ಯೆಹೂದ್ಯರನ್ನೂ ಜೆರುಸಲೇಮಿನವರನ್ನೂ ಪ್ರೇರೇಪಿಸಿದೆ; ಮತ್ತು ನಿನ್ನ ತಂದೆಯ ಕುಟುಂಬದವರೂ ನಿನಗಿಂತ ಉತ್ತಮರೂ ನಿನ್ನ ಸಹೋದರರೂ ಆಗಿದ್ದವರನ್ನು ವಧಿಸಿದೆ;೧೪. ಆದುದರಿಂದ ಸರ್ವೇಶ್ವರ ನಿನ್ನ ಪ್ರಜೆಯನ್ನೂ ಮಡದಿಮಕ್ಕಳನ್ನೂ ಸರ್ವಸ್ವವನ್ನೂ ಮಹಾ ಆಪತ್ತಿಗೆ ಗುರಿಮಾಡುವರು.೧೫. ನಿನಗಾದರೋ ಕರುಳುಬೇನೆಯ ಕಠಿಣರೋಗ ಬರುವುದು. ಅದು ಬಹುದಿನಗಳವರೆಗೂ ವಾಸಿ ಆಗದು; ಕಡೆಯಲ್ಲಿ ನಿನ್ನ ಕರುಳುಗಳು ಹೊರಗೆ ಬೀಳುವುವು,” ಎಂದು ತಿಳಿಸಿದನು.೧೬. ಸರ್ವೇಶ್ವರ ಫಿಲಿಷ್ಟಿಯರನ್ನೂ ಸುಡಾನಿನ ನೆರೆಯವರಾದ ಅರೇಬಿಯರನ್ನೂ ಯೆಹೋರಾಮನಿಗೆ ವಿರೋಧಿಗಳಾಗುವಂತೆ ಪ್ರಚೋದಿಸಿದರು.೧೭. ಅವರು ಜುದೇಯದ ಮೇಲೆ ಯುದ್ಧಕ್ಕೆ ಬಂದು, ನಾಡಿನೊಳಗೆ ನುಗ್ಗಿ, ಅರಮನೆಯಲ್ಲಿ ಸಿಕ್ಕಿದ ಎಲ್ಲ ಸೊತ್ತನ್ನೂ ಅರಸನ ಮಡದಿ ಮಕ್ಕಳನ್ನೂ ಸೆರೆಗೆ ಒಯ್ದರು. ಅವನಿಗೆ ಕಿರಿಯಮಗ ಯೆಹೋವಾಹಾಜನ ಹೊರತು ಮಕ್ಕಳೇ ಉಳಿಯಲಿಲ್ಲ.೧೮. ಇಷ್ಟೆಲ್ಲಾ ಆದ ಮೇಲೆ, ಸರ್ವೇಶ್ವರ ಅವನ ಕರುಳುಗಳಲ್ಲಿ ವಾಸಿಯಾಗಲಾರದ ರೋಗವನ್ನು ಉಂಟುಮಾಡಿದರು.೧೯. ಕಾಲಾಂತರದಲ್ಲಿ ಅಂದರೆ, ಸುಮಾರು ಎರಡು ವರ್ಷಗಳಾದ ಮೇಲೆ, ಅದೇ ರೋಗದ ನಿಮಿತ್ತ ಕರುಳುಗಳು ಹೊರಬಿದ್ದವು. ಅವನು ಕಡುಬೇನೆಯಿಂದ ಸತ್ತನು. ಅವನ ಪೂರ್ವಿಕರಿಗೆ ಧೂಪಹಾಕಿದಂತೆ ಅವನ ಪ್ರಜೆಗಳು ಅವನಿಗೆ ಹಾಕಲಿಲ್ಲ.೨೦. ಅವನು ಪಟ್ಟಕ್ಕೆ ಬಂದಾಗ ಮೂವತ್ತ ಎರಡು ವರ್ಷದವನಾಗಿದ್ದನು. ಜೆರುಸಲೇಮಿನಲ್ಲಿ ಎಂಟುವರ್ಷ ಆಳಿದನು. ಅವನು ತೀರಿಹೋದಾಗ ಯಾರೂ ಶೋಕಿಸಲಿಲ್ಲ. ಅವನ ಶವವನ್ನು ದಾವೀದನಗರದಲ್ಲಿ ಸಮಾಧಿಮಾಡಿದರು; ಆದರೆ ರಾಜಸ್ಮಶಾನದಲ್ಲಿ ಮಾಡಲಿಲ್ಲ.ಕ್ರಾನಿಕಲ್ಸ್ ೨ ೨೨:೧-೧೨೧. ಜೆರುಸಲೇಮಿನವರು ಯೆಹೋರಾಮನಿಗೆ ಬದಲಾಗಿ ಅವನ ಕಿರಿಯಮಗ ಅಹಜ್ಯನನ್ನು ಅರಸನನ್ನಾಗಿ ಮಾಡಿದರು. ಅರೇಬಿಯರೊಡನೆ ಯೆಹೋರಾಮನ ಪಾಳೆಯಕ್ಕೆ ಬಂದ ಕೊಳ್ಳೆಗಾರರು ಅವನ ಹಿರಿಯ ಮಕ್ಕಳನ್ನೆಲ್ಲಾ ಕೊಂದುಬಿಟ್ಟಿದ್ದರು. ಆದುದರಿಂದ ಜುದೇಯದ ಅರಸ ಯೆಹೋರಾಮನ ಮಗ ಅಹಜ್ಯನು ಅರಸನಾದನು.೨. ಪಟ್ಟಕ್ಕೆ ಬಂದಾಗ ಅವನಿಗೆ ನಲ್ವತ್ತೆರಡು ವರ್ಷ ಪ್ರಾಯ. ಇವನು ಜೆರುಸಲೇಮಿನಲ್ಲಿ ಒಂದು ವರ್ಷ ಆಳಿದನು; ಒಮ್ರಿಯ ಮೊಮ್ಮಗಳಾದ ಅತಲ್ಯ ಎಂಬಾಕೆ ಇವನ ತಾಯಿ;೩. ತನ್ನ ತಾಯಿಯ ದುರ್ಬೋಧನೆಗೆ ಕಿವಿಗೊಟ್ಟು ಇವನೂ ದುರಾಚಾರಿಯಾಗಿ ಅಹಾಬನ ಮನೆಯವರ ಹೆಜ್ಜೆ ಜಾಡಿನಲ್ಲೇ ನಡೆದನು.೪. ಇವನ ತಂದೆ ತೀರಿಹೋದ ಮೇಲೆ ಅಹಾಬನ ಕುಟುಂಬದವರೇ ಇವನಿಗೆ ಸಲಹೆಕೊಟ್ಟು ಇವನನ್ನು ಕೆಡಿಸುತ್ತಾ ಬಂದರು. ಈ ಕಾರಣ ಸರ್ವೇಶ್ವರನಿಗೆ ದ್ರೋಹಿಯಾಗಿ ನಡೆದನು.೫. ಆ ಪ್ರೇರಣೆಯಿಂದಲೇ ಇಸ್ರಯೇಲರ ಅರಸನೂ ಅಹಾಬನ ಮಗನೂ ಆದ ಯೋರಾಮನ ಜೊತೆಯಲ್ಲಿ ಸಿರಿಯಾದ ಅರಸ ಹಜಾಯೇಲನಿಗೆ ವಿರುದ್ಧ ಯುದ್ಧಮಾಡುವುದಕ್ಕೆ ರಾಮೋತ್ಗಿಲ್ಯಾದಿಗೆ ಹೋದನು. ಸಿರಿಯಾದವರು ಯೋರಾಮನನ್ನು ಯುದ್ಧದಲ್ಲಿ ಗಾಯಪಡಿಸಿದರು.೬. ಆ ಗಾಯಗಳನ್ನು ಮಾಯಿಸಿಕೊಳ್ಳುವುದಕ್ಕಾಗಿ ಅವನು ಜೆಸ್ರೀಲಿಗೆ ಬಂದನು. ಅವನು ಅಸ್ವಸ್ಥನಾಗಿದ್ದುದರಿಂದ ಯೆಹೂದ್ಯರ ಅರಸ ಯೆಹೋರಾಮನ ಮಗನಾದ ಅಹಜ್ಯನು ಅವನನ್ನು ನೋಡುವುದಕ್ಕೆ ಅಲ್ಲಿಗೆ ಹೋದನು.೭. ಅಹಜ್ಯನು ಯೋರಾಮನ ಬಳಿಗೆ ಹೋಗಿ ನಾಶವಾದದ್ದು ದೈವಸಂಕಲ್ಪದಿಂದಲೇ. ಅವನು ಆ ಸ್ಥಳವನ್ನು ಮುಟ್ಟಿದ ಕೂಡಲೆ ಯೋರಾಮನ ಜೊತೆಯಲ್ಲಿ ನಿಂಷಿಯ ಮಗ ಯೇಹುವನ್ನು ಎದುರುಗೊಳ್ಳುವುದಕ್ಕೆ ಹೋದನು. ಸರ್ವೇಶ್ವರ ಅಹಾಬನ ಮನೆಯನ್ನು ನಿರ್ನಾಮ ಮಾಡುವುದಕ್ಕಾಗಿಯೇ ಯೇಹುವಿಗೆ ರಾಜಾಭಿಷೇಕ ಮಾಡಿಸಿ ಇದ್ದರು.೮. ಯೇಹುವು, ಅಹಾಬನ ಮನೆಯವರ ಮೇಲೆ ಆ ನಿರ್ಣಯವನ್ನು ನೆರವೇರಿಸುತ್ತಿರುವಾಗ ತನಗೆ ಸಿಕ್ಕಿದ ಯೆಹೂದ್ಯ ಪ್ರಮುಖರನ್ನೂ ಅಹಜ್ಯನಿಗೆ ಸೇವೆಮಾಡುತ್ತಿದ್ದ ಅವನ ಅಣ್ಣತಮ್ಮಂದಿರ ಮಕ್ಕಳನ್ನೂ ಕೊಲ್ಲಿಸಿದನು;೯. ಆಮೇಲೆ ಅಹಜ್ಯನನ್ನು ಹುಡುಕಿಸಿದನು; ಅವನು ಸಮಾರಿಯದಲ್ಲಿ ಅಡಗಿಕೊಂಡಿದ್ದನು. ಜನರು ಅವನನ್ನು ಯೇಹುವಿನ ಬಳಿಗೆ ಹಿಡಿದುತಂದು, ವಧಿಸಿದರು. “ಇವನು ಸರ್ವೇಶ್ವರನ ನೈಜಭಕ್ತನಾದ ಯೆಹೋಷಾಫಾಟನ ಮೊಮ್ಮಗನಲ್ಲವೇ?” ಎಂದುಕೊಂಡು ಅವನನ್ನು ಸಮಾಧಿಮಾಡಿದರು. ರಾಜ್ಯಾಧಿಕಾರವನ್ನು ವಹಿಸಿಕೊಳ್ಳಲು ಅಹಜ್ಯನ ಮನೆಯವರಲ್ಲಿ ಸಮರ್ಥರಾರೂ ಉಳಿಯಲಿಲ್ಲ.೧೦. ಅಹಜ್ಯನು ಮರಣಹೊಂದಿದನೆಂಬುದನ್ನು ಅವನ ತಾಯಿ ಅತಲ್ಯಳು ಕೇಳಿದ ಕೂಡಲೆ ಜುದೇಯರ ರಾಜಸಂತಾನದವರನ್ನೆಲ್ಲಾ ಸಂಹರಿಸಿಬಿಟ್ಟಳು.೧೧. ಆದರೆ ರಾಜಪುತ್ರಿಯಾದ ಯೆಹೋಷಬತ್ ಎಂಬಾಕೆ, ಹತರಾಗುವುದಕ್ಕಿದ್ದ ರಾಜಪುತ್ರರ ಮಧ್ಯೆಯಿಂದ ಅಹಜ್ಯನ ಮಗ ಯೆಹೋವಾಷನನ್ನು, ಯಾರಿಗೂ ತಿಳಿಯದಂತೆ ಅವನ ದಾದಿಯೊಡನೆ ತೆಗೆದುಕೊಂಡು ಹೋಗಿ ಮಲಗುವ ಕೋಣೆಯಲ್ಲಿ ಅಡಗಿಸಿಟ್ಟಳು. ಅರಸ ಯೆಹೋರಾಮನ ಮಗಳೂ ಅಹಜ್ಯನ ಸಹೋದರಿಯೂ ಯಾಜಕ ಯೆಹೋಯಾದನ ಹೆಂಡತಿಯೂ ಆಗಿದ್ದ ಯೆಹೋಷಬತಳು ಹೀಗೆ ಅವನನ್ನು ಅತಲ್ಯಳಿಂದ ಹತನಾಗದಂತೆ ರಕ್ಷಿಸಿದಳು.೧೨. ಅವನು ಆರು ವರ್ಷಗಳವರೆಗೂ ಅವರೊಡನೆ ಗುಪ್ತವಾಗಿ ದೇವಾಲಯದಲ್ಲಿ ಇದ್ದನು. ಆಗ ಅತಲ್ಯಳೇ ದೇಶವನ್ನಾಳುತ್ತಿದ್ದಳು.ಕೀರ್ತನೆಗಳು ೮೩:೧-೮೧. ಮಾತನಾಡದೆ ದೇವಾ, ಸುಮ್ಮನಿರಬೇಡ I ಮೌನದಿಂದ ಸ್ವಾಮೀ, ನಿಶ್ಚಿಂತನಿರಬೇಡ II೨. ದಂಗೆಯೆದ್ದಿಹರಿದೋ ನಿನ್ನ ಶತ್ರುಗಳು I ತಲೆಯೆತ್ತಿಕೊಂಡಿಹರು ನಿನ್ನ ದ್ವೇಷಿಗಳು II೩. ಕುತಂತ್ರಮಾಡುತಿಹರು ನಿನ್ನ ಪ್ರಜೆಗೆ ವಿರುದ್ಧ I ಆಲೋಚಿಸುತಿಹರು ನಿನ್ನ ಶರಣರಿಗೆ ವಿರುದ್ಧ II೪. ಇಂತೆನ್ನುತಿಹರು: “ಬನ್ನಿ ಸಂಹರಿಸೋಣ I ಆತನ ಜನಾಂಗ ಉಳಿಯದಂತೆ ಮಾಡೋಣ I ಇಸ್ರಯೇಲೆಂಬ ನಾಮವನಳಿಸಿಬಿಡೋಣ” II೫. ಎದೋಮ್ಯರ ಪಾಳೆಯದವರು ಇಷ್ಮಾಯೇಲ್ಯರು, I ಗೇಬಾಲ್ಯರು, ಅಮ್ಮೋನಿಯರು, ಅಮಾಲೇಕ್ಯರು, II೬. ಮೊವಾಬ್ಯ, ಹಗ್ರೀಯ, ಫಿಲಿಷ್ಟಿಯ, ಟೈರ್ ಜನರು I ಒಮ್ಮತದಿಂದಿವರೆಲ್ಲರು ಒಟ್ಟುಗೂಡಿಹರು I ನಿನ್ನ ವಿರುದ್ಧವಾಗಿ ಒಳಸಂಚು ಮಾಡಿಹರು II೭. ೮. ಇವರೊಡನೆ ಕೂಡಿಕೊಂಡಿಹ ಅಸ್ಸೀರ್ಯರು I ಲೋಟನ ವಂಶಕ್ಕೆ ಭುಜಬಲವಾಗಿಹರು IIಜ್ಞಾನೋಕ್ತಿಗಳು ೨೧:೧-೧೧. ರಾಜನ ಹೃದಯ ಸರ್ವೇಶ್ವರನ ಕೈಯಲ್ಲಿ; ತಿರುಗಿಸಬಲ್ಲ ಆತ ಅದನ್ನು ನೀರಿನ ಕಾಲುವೆಯ ಪರಿ.ಪ್ರೇಷಿತರ ೧೭:೧೬-೩೪೧೬. ಅಥೆನ್ಸಿನಲ್ಲಿ ಪೌಲನು, ಸೀಲ ಮತ್ತು ತಿಮೊಥೇಯರನ್ನು ಎದುರುನೋಡುತ್ತಿದ್ದನು. ಆ ಪಟ್ಟಣದಲ್ಲಿ ಎಲ್ಲಿ ನೋಡಿದರಲ್ಲಿ ವಿಗ್ರಹಗಳಿರುವುದನ್ನು ಕಂಡು, ಅವನ ಮನಸ್ಸು ಕುದಿಯಿತು.೧೭. ಆದುದರಿಂದ ಅವನು ಪ್ರಾರ್ಥನಾಮಂದಿರಕ್ಕೆ ಹೋಗಿ ಯೆಹೂದ್ಯರೊಡನೆ ಮತ್ತು ಯೆಹೂದ್ಯಮತಾವಲಂಬಿಗಳೊಡನೆ ಚರ್ಚಿಸತೊಡಗಿದನು. ಸಾರ್ವಜನಿಕ ಚೌಕದ ಬಳಿ, ಕಂಡಕಂಡವರೊಡನೆ ಪ್ರತಿದಿನವೂ ತರ್ಕಮಾಡಿದನು.೧೮. ಕೆಲವು ಎಪಿಕೂರಿಯ ಮತ್ತು ಸ್ತೋಯಿಕ ತತ್ವಶಾಸ್ತ್ರಜ್ಞರೂ ಕೂಡ ಅವನೊಡನೆ ವಾದಿಸಿದರು. ಕೆಲವರು “ಈ ಬಾಯಿಬಡುಕ ಹೇಳುವುದಾದರೂ ಏನು?” ಎಂದರು. ಪೌಲನು ಯೇಸುಸ್ವಾಮಿಯ ವಿಷಯವಾಗಿಯೂ ಪುನರುತ್ಥಾನದ ವಿಷಯವಾಗಿಯೂ ಬೋಧಿಸುತ್ತಿದ್ದುದರಿಂದ ಮತ್ತೆ ಕೆಲವರು ‘ಇವನು ವಿದೇಶೀಯ ದೇವರುಗಳ ಬಗ್ಗೆ ಮಾತನಾಡುವಂತೆ ಕಾಣುತ್ತದೆ,’ ಎಂದರು.೧೯. ಅವರು ಪೌಲನನ್ನು ಅರಿಯೊಪಾಗ ಎಂಬ ಸ್ಥಳಕ್ಕೆ ಕರೆತಂದು, “ನೀನು ಸಾರುತ್ತಿರುವ ನೂತನ ತತ್ವವನ್ನು ನಾವು ತಿಳಿದುಕೊಳ್ಳಬಹುದೇ?೨೦. ನೀನು ಹೇಳುತ್ತಿರುವ ಕೆಲವು ಸಂಗತಿಗಳು ನಮಗೆ ವಿಚಿತ್ರವಾಗಿ ತೋರುತ್ತವೆ. ಆದ್ದರಿಂದ ಅವುಗಳ ಅರ್ಥವೇನೆಂದು ತಿಳಿಯಬಯಸುತ್ತೇವೆ,” ಎಂದರು. (೨೧. ಅಥೆನ್ಸಿನ ನಿವಾಸಿಗಳು ಮತ್ತು ಅಲ್ಲಿ ವಾಸಿಸುತ್ತಿದ್ದ ವಿದೇಶೀಯರು ಅತ್ಯಾಧುನಿಕ ವಿದ್ಯಮಾನಗಳನ್ನು ಕುರಿತು ಮಾತನಾಡುವುದರಲ್ಲೂ ಕೇಳಿತಿಳಿಯುವುದರಲ್ಲೂ ಸಮಯ ಕಳೆಯುತ್ತಿದ್ದರು).೨೨. ಪೌಲನು ಅರಿಯೊಪಾಗಿನ ಸಭೆಯ ಮುಂದೆ ನಿಂತು ಹೀಗೆಂದನು: “ಅಥೆನ್ಸಿನ ಮಹಾಜನರೇ, ನೀವು ಎಲ್ಲಾ ವಿಧದಲ್ಲೂ ಬಹು ಧರ್ಮನಿಷ್ಠರೆಂದು ನನಗೆ ತೋರುತ್ತದೆ.೨೩. ನಿಮ್ಮ ಪಟ್ಟಣದಲ್ಲಿ ನಾನು ತಿರುಗಾಡುತ್ತಾ, ನೀವು ಪೂಜಿಸುವ ವಿಗ್ರಹಗಳನ್ನು ಗಮನಿಸುತ್ತಾ ಇದ್ದಾಗ ಒಂದು ಬಲಿಪೀಠವು ಕಣ್ಣಿಗೆ ಬಿದ್ದಿತು. ಅದರ ಮೇಲೆ ‘ಅಜ್ಞಾತ ದೇವರಿಗೆ’ ಎಂಬ ಲಿಖಿತವಿತ್ತು. ನೀವು ಅರಿಯದೆ ಆರಾಧಿಸುವ ಆ ದೇವರನ್ನೇ ಅರುಹಿಸಲು ನಾನು ಬಂದಿರುತ್ತೇನೆ.೨೪. ಜಗತ್ತನ್ನು ಹಾಗೂ ಅದರಲ್ಲಿರುವ ಸಮಸ್ತವನ್ನೂ ಸೃಷ್ಟಿಸಿದ ದೇವರು ಇಹಪರಗಳಿಗೆ ಒಡೆಯರು; ಮಾನವನು ನಿರ್ಮಿಸಿದ ಗುಡಿಗಳಲ್ಲಿ ಅವರು ಮನೆಮಾಡುವಂಥವರಲ್ಲ.೨೫. ಎಲ್ಲಾ ಜೀವಿಗಳಿಗೆ ಪ್ರಾಣವನ್ನೂ ಶ್ವಾಸವನ್ನೂ ಸಮಸ್ತವನ್ನೂ ಕೊಡುವವರು ಅವರೇ; ಎಂದೇ ಅವರಿಗಾಗಿ ಮಾನವನು ದುಡಿಯಬೇಕಾದ ಅವಶ್ಯಕತೆ ಇಲ್ಲ. ಅಂಥ ಕೊರತೆ ಅವರಿಗೇನೂ ಇಲ್ಲ.೨೬. ಒಂದೇ ಮೂಲದಿಂದ ಅವರು ಎಲ್ಲಾ ಜನಾಂಗಗಳನ್ನು ಸೃಷ್ಟಿಸಿ ಭೂಮಂಡಲದಲ್ಲೆಲ್ಲಾ ಜೀವಿಸುವಂತೆ ಮಾಡಿದ್ದಾರೆ. ಆಯಾ ಜನಾಂಗದ ಕಾಲಾವಧಿಯನ್ನೂ ಅವರವರ ನೆಲೆಯ ಎಲ್ಲೆಮೇರೆಗಳನ್ನೂ ಮುಂಚಿತವಾಗಿ ಅವರೇ ನಿರ್ಧರಿಸಿದ್ದಾರೆ.೨೭. ಜನರು ತಮ್ಮನ್ನು ಅರಸಬೇಕೆಂಬುದೇ ಅವರ ಉದ್ದೇಶ; ಹೀಗಾದರೂ ತಮ್ಮನ್ನು ಅರಸಿ ಸಾಕ್ಷಾತ್ಕರಿಸಿಕೊಂಡಾರು ಎಂದು ದೇವರು ಹೀಗೆ ಮಾಡಿದರು. ಆದರೂ, ನಮ್ಮಲ್ಲಿ ಯಾರೊಬ್ಬರಿಂದಲೂ ದೇವರು ದೂರವಿಲ್ಲ.೨೮. ಏಕೆಂದರೆ, ‘ನಾವು ಜೀವಿಸುವುದೂ ಚಲಿಸುವುದೂ ಇರುವುದೂ ಅವರಲ್ಲೇ’; ನಿಮ್ಮ ಕವಿಗಳಲ್ಲೇ ಕೆಲವರು ಹೇಳಿರುವಂತೆ, ‘ನಾವು ನಿಜವಾಗಿ ದೇವರ ಮಕ್ಕಳು.’೨೯. “ನಾವು ದೇವರ ಮಕ್ಕಳಾಗಿರುವುದರಿಂದ ಜನರು ಕಲಾಕುಶಲತೆಯಿಂದಲೂ ಕಲ್ಪನೆಯಿಂದಲೂ ರೂಪಿಸಿದ ಚಿನ್ನ, ಬೆಳ್ಳಿ, ಶಿಲೆಗಳ ಪ್ರತಿಮೆಗೆ ದೇವರು ಸಮಾನರೆಂದು ಭಾವಿಸಲಾಗದು.೩೦. ಮಾನವರು ತಮ್ಮನ್ನು ಅರಿಯದೆ ಬಾಳಿದ ಕಾಲವನ್ನು ದೇವರು ಗಮನಕ್ಕೆ ತಂದುಕೊಳ್ಳಲಿಲ್ಲ. ಆದರೆ ಈಗ ಎಲ್ಲೆಡೆಯಲ್ಲಿರುವ ಸರ್ವಮಾನವರು ದುರ್ಮಾರ್ಗಗಳನ್ನು ಬಿಟ್ಟು ತಮಗೆ ಅಭಿಮುಖರಾಗಬೇಕೆಂದು ಆಜ್ಞಾಪಿಸುತ್ತಾರೆ.೩೧. ಏಕೆಂದರೆ, ಅವರು ಒಂದು ದಿನವನ್ನು ಗೊತ್ತುಮಾಡಿದ್ದಾರೆ; ಆ ದಿನದಂದು ತಾವು ನೇಮಿಸಿದ ಒಬ್ಬ ವ್ಯಕ್ತಿಯ ಮುಖಾಂತರ ಇಡೀ ಜಗತ್ತಿಗೆ ನ್ಯಾಯನಿರ್ಣಯ ಮಾಡುವರು. ಇದನ್ನು ಎಲ್ಲರಿಗೂ ಖಚಿತಪಡಿಸಲೆಂದೇ ಆ ವ್ಯಕ್ತಿಯನ್ನು ಮರಣದಿಂದ ಪುನರುತ್ಥಾನಗೊಳಿಸಿದ್ದಾರೆ.”೩೨. ಸತ್ತವರ ಪುನರುತ್ಥಾನದ ಬಗ್ಗೆ ಪೌಲನು ಮಾತಾಡಿದಾಗ ಕೆಲವರು ಪರಿಹಾಸ್ಯಮಾಡಿದರು. ಉಳಿದವರು, “ಈ ವಿಷಯದ ಬಗ್ಗೆ ನೀನು ಇನ್ನೊಮ್ಮೆ ಹೇಳಬಹುದು, ಆಗ ಕೇಳುತ್ತೇವೆ,” ಎಂದರು.೩೩. ಹೀಗೆ ಪೌಲನು ಆ ಸಭೆಯಿಂದ ನಿರ್ಗಮಿಸಿದನು.೩೪. ಕೆಲವರು ಅವನನ್ನು ಸೇರಿಕೊಂಡು ಭಕ್ತವಿಶ್ವಾಸಿಗಳಾದರು. ಇವರಲ್ಲಿ ಅರಿಯೊಪಾಗದ ದಿಯೊನಿಸಿಯನೂ ದಮಾರಿ ಎಂಬ ಸ್ತ್ರೀಯೂ ಮತ್ತಿತರರೂ ಇದ್ದರು. Kannada Bible (KNCL) 2016 Kannada C.L. Bible - ಸತ್ಯವೇದವು C.L. Copyright © 2016 by The Bible Society of India Used by permission. worldwide