ಬೈಬಲ್ ಒಂದು ವರ್ಷದಲ್ಲಿ ಸೆಪ್ಟೆಂಬರ್ ೧೦ಯೆಶಾಯನ ೧೧:೧-೧೬೧. ಜೆಸ್ಸೆಯನ ಬುಡದಿಂದ ಒಡೆಯುವುದೊಂದು ಚಿಗುರು; ಅದರ ಬೇರಿನಿಂದ ಫಲಿಸುವುದೊಂದು ತಳಿರು.೨. ನೆಲಸುವುದಾತನ ಮೇಲೆ ಜ್ಞಾನವಿವೇಕದಾಯಕ ಆತ್ಮ; ಶಕ್ತಿ ಸಮಾಲೋಚನೆಯನ್ನೀಯುವ ಆತ್ಮ; ಸರ್ವೇಶ್ವರನ ಅರಿವನು, ಭಯವನು ಹುಟ್ಟಿಸುವ ಆತ್ಮ ಅಹುದು, ನೆಲಸುವುದಾತನ ಮೇಲೆ ಸರ್ವೇಶ್ವರನ ಆತ್ಮ.೩. ಸರ್ವೇಶ್ವರನ ಭಯಭಕ್ತಿ ಅವಗೆ ಪರಿಮಳದಂತೆ. ತೀರ್ಪಿಡನಾತ ಕಣ್ಣಿಗೆ ತೋಚಿದಂತೆ ನಿರ್ಣಯಿಸನಾತ ಕಿವಿಗೆ ಬಿದ್ದಂತೆ.೪. ಆದರೆ ಬಡಬಗ್ಗರಿಗೆ ತೀರ್ಪಿಡುವನು ನ್ಯಾಯನೀತಿಯಿಂದ ನಾಡ ದಲಿತರಿಗೆ ನಿರ್ಣಯಿಸುವನು ಯಥಾರ್ಥತೆಯಿಂದ ದಂಡಿಸುವನು ಲೋಕವನು ನುಡಿಯೆಂಬ ದಂಡದಿಂದ ಕೊಲ್ಲುವನು ಕೆಡುಕರನು ಉಸಿರೆಂಬ ಕತ್ತಿಯಿಂದ.೫. ಸದ್ಧರ್ಮವೇ ಆತನಿಗೆ ನಡುಕಟ್ಟು ಪ್ರಾಮಾಣಿಕತೆಯೇ ಸೊಂಟಪಟ್ಟಿ.೬. ಬಾಳುವುವು ತೋಳಕುರಿಮರಿಗಳು ಒಂದಿಗೆ ಮಲಗುವುವು ಮೇಕೆಚಿರತೆಗಳು ಜೊತೆಗೆ ಮೊಲೆಯುಣ್ಣುವುವು ಕರುಕೇಸರಿಗಳು ಒಟ್ಟಿಗೆ ನಡೆಸುವುದವುಗಳನು ಚಿಕ್ಕಮಗು ಮೇಯಿಸುವುದಕೆ.೭. ಮೇಯುವುವು ಕರಡಿ, ಆಕಳುಗಳು ಒಟ್ಟಿಗೆ ಮಲಗುವುವು ಅವುಗಳ ಮರಿಗಳು ಜೊತೆಗೆ ಎತ್ತಿನ ಹುಲ್ಲು ಮೇವಾಗುವುದು ಸಿಂಹಕೆ.೮. ಆಡುವುದು ಮೊಲೆಗೂಸು ನಾಗರ ಹುತ್ತದ ಮೇಲೆ ಕೈಹಾಕುವುದು ಮೊಲೆಬಿಟ್ಟ ಮಗು ಹಾವಿನ ಬಿಲದ ಒಳಗೆ.೯. ಹಾನಿಯನು, ಕೇಡನು ಮಾಡರಾರೂ ನನ್ನ ಪರ್ವತದ ಮೇಲೆ. ಸಮುದ್ರದಂತೆ ತುಂಬಿರುವುದು ಸರ್ವೇಶ್ವರನ ಜ್ಞಾನ, ಧರೆಯ ಮೇಲೆ.೧೦. ಆ ದಿನದಂದು ಜೆಸ್ಸೆಯನ ಸಂತಾನದ ಕುಡಿ ಸರ್ವಜನಾಂಗಗಳಿಗೆ ಧ್ವಜಪ್ರಾಯವಾಗಿ ನಿಲ್ಲುವುದು. ಆತನನ್ನು ರಾಷ್ಟ್ರಗಳು ಆಶ್ರಯಿಸುವುವು; ವೈಭವದಿಂದಿರುವುದಾತನ ವಿಶ್ರಾಂತಿನಿಲಯವು.೧೧. ಆ ದಿನದಂದು ಅಸ್ಸೀರಿಯ, ಈಜಿಪ್ಟ್, ಪತ್ರೋಸ್, ಸುಡಾನ್, ಏಲಾಮ್, ಬಾಬಿಲೋನಿಯ, ಹಮಾಥ್ ಹಾಗೂ ಸಮುದ್ರದ ಕರಾವಳಿ - ಈ ಸ್ಥಳಗಳಿಂದ ಸರ್ವೇಶ್ವರ ತಮ್ಮ ಅಳಿದುಳಿದ ಜನರನ್ನು ಬಿಡಿಸಿ ಬರಮಾಡಿಕೊಳ್ಳಲು ಮತ್ತೆ ಕೈನೀಡುವರು.೧೨. ಇಸ್ರಯೇಲರಲ್ಲಿ ಸೆರೆಹೋದವರನ್ನು, ಜುದೇಯದಿಂದ ಚದರಿಹೋದವರನ್ನು ಕರೆತರಲು, ಧರೆಯ ಚತುರ್ದಿಕ್ಕುಗಳಿಂದವರನ್ನು ಬರಮಾಡಲು, ರಾಷ್ಟ್ರಗಳಿಗೆ ಗುರುತಾಗಿ ಧ್ವಜವನ್ನು ಆತ ಏರಿಸುವನು.೧೩. ತೊಲಗುವುದು ಎಫ್ರಯಿಮಿನ ಹೊಟ್ಟೆಕಿಚ್ಚು, ನಿರ್ಮೂಲವಾಗುವುದು ಜುದೇಯದ ವೈರಿಗಳ ಒಳಸಂಚು. ಎಫ್ರಯಿಮ್, ಜುದೇಯವನ್ನು ಮತ್ಸರಿಸದು; ಜುದೇಯ, ಎಫ್ರಯಿಮನ್ನು ವಿರೋಧಿಸದು.೧೪. ಒಟ್ಟಿಗೆ ಎರಗುವರು ಫಿಲಿಷ್ಟಿಯರ ಮೇಲೆ ಪಶ್ಚಿಮದಲ್ಲಿ; ಜೊತೆಯಾಗಿ ಸೂರೆಮಾಡುವರು ಜನರನ್ನು ಪೂರ್ವದಲ್ಲಿ; ಗೆಲ್ಲುವರು ಎದೋಮ್ ಮೊವಾಬ್ ನಾಡುಗಳನ್ನು; ಅಧೀನವಾಗಿಸುವರು ಅಮೋನ್ಯ ಜನರನ್ನು.೧೫. ಆತ ಬತ್ತಿಸುವನು ಈಜಿಪ್ಟಿನ ಕೊಲ್ಲಿಯನ್ನು, ಒಣಗಿಸುವನು ಬಿಸಿಗಾಳಿಯಿಂದ ಯೂಫ್ರೆಟಿಸ್ ನದಿಯನ್ನು, ಸೀಳುವನದನ್ನು ಏಳು ತೊರೆಗಳನ್ನಾಗಿ. ಈ ಪರಿ ದಾಟುವರು ಜನರು ಕೆರ ಮೆಟ್ಟಿದವರಾಗಿ.೧೬. ಈಜಿಪ್ಟನ್ನು ಬಿಟ್ಟು ಬಂದ ಇಸ್ರಯೇಲರಿಗೆ ಮಾರ್ಗವೊಂದು ಸಿದ್ಧವಾಯಿತು ಅಂತೆಯೆ ಸಿದ್ಧವಾಗುವುದು ರಾಜಮಾರ್ಗವೊಂದು ಅಸ್ಸೀರಿಯದಲ್ಲಿ ಅಳಿದುಳಿದ ಜನರಿಗೆ.ಯೆಶಾಯನ ೧೨:೧-೬೧. ಆ ದಿನದಂದು ಹಾಡುವುದು ಜನತೆ ಹೀಗೆಂದು: “ಹೇ ಸರ್ವೇಶ್ವರಾ, ನಿನಗೆನ್ನ ವಂದನ; ನಿನಗಿತ್ತು ಎನ್ನ ಮೇಲೆ ಕೋಪ ಮನ. ಆದರೆ ಅದೀಗ ಆಗಿದೆ ಶಮನ, ಬಂದಿತೆನ್ನ ಮನಕೆ ಸಾಂತ್ವನ.೨. ದೇವರೇ ಉದ್ಧಾರಕನೆನಗೆ ಆತನಲ್ಲಿದೆ ನನಗೆ ನಿರ್ಭೀತ ನಂಬಿಕೆ. ದೇವಾದಿದೇವನೇ ಎನಗೆ ಶಕ್ತಿ ಆತನೆನ್ನ ಕೀರ್ತನೆಯ ವ್ಯಕ್ತಿ ತಂದಿಹನಾತ ಎನಗೆ ಮುಕ್ತಿ.”೩. ಉದ್ಧರಿಸುವಾ ಒರತೆಗಳಿಂದ ಸೇದುವಿರಿ ನೀರನು ಹರುಷದಿಂದ.೪. ಹೇಳುವಿರಿ ನೀವು ಆ ದಿನದಂದು ಈ ಪರಿ - “ಸಲ್ಲಿಸಿರಿ ಸರ್ವೇಶ್ವರನಿಗೆ ಕೃತಜ್ಞತೆಯನು ಸ್ಮರಿಸಿರಿ ಆತನ ಶ್ರೀನಾಮವನು ಸಾರಿರಿ ಜನತೆಗೆ ಆತನ ಕಾರ್ಯಗಳನು ಘೋಷಿಸಿರಿ ಆತನ ನಾಮಘನತೆಯನು.೫. ಹಾಡಿರಿ ಸರ್ವೇಶ್ವರನಿಗೆ ಸ್ತುತಿಯನು ಎಸಗಿಹನಾತ ಮಹಿಮಾಕಾರ್ಯಗಳನು ತಿಳಿಸಿರಿ ಜಗದಾದ್ಯಂತಕೆ ಈ ವಿಷಯವನು.೬. ಸಿಯೋನಿನ ನಿವಾಸಿಗಳೇ, ಹಾಡಿರಿ, ಮಾಡಿರಿ ಭಜನ ನಿಮ್ಮ ಮಧ್ಯೆಯಿರುವ ಆ ಘನವಂತನ ಇಸ್ರಯೇಲಿನಾ ಸ್ವಾಮಿ ಪರಮಪಾವನ.”ಕೀರ್ತನೆಗಳು ೧೦೬:೬-೧೮೬. ನಮ್ಮ ಪಿತೃಗಳಂತೆಯೆ ಪಾಪಿಗಳು ನಾವು I ಅಕ್ರಮಗೈದೆವು, ಅಪರಾಧಿಗಳಾದೆವು II೭. ಗ್ರಹಿಸಲಿಲ್ಲಾ ಪಿತೃಗಳು ನಿನ್ನದ್ಭುತಗಳನು ಈಜಿಪ್ಟಿನಲಿ I ಸ್ಮರಿಸಲಿಲ್ಲವರು ನಿನ್ನಚಲ ಪ್ರೇಮಾತಿಶಯಗಳನು ಅಲ್ಲಿ I ಬದಲಿಗೆ ಮಹೋನ್ನತನನೆ ಪ್ರತಿಭಟಿಸಿದರು ಕೆಂಗಡಲಬಳಿ II೮. ಆದರೂ ತನ್ನ ನಾಮಪ್ರಯುಕ್ತ ರಕ್ಷಿಸಿದನವರನು I ಪ್ರಕಟಿಸಿದನಾತ ಹೀಗೆ ತನ್ನ ಶಕ್ತಿಸಾಮರ್ಥ್ಯವನು II೯. ಒಣಗಿಹೋಯಿತಾ ಕೆಂಗಡಲು ಆತನ ಗದರಿಕೆಗೆ I ದಾಟಿಸಿದನಾ ಸಾಗರವನು ಅಡವಿಯೋ ಎಂಬ ಹಾಗೆ II೧೦. ತಪ್ಪಿಸಿದನವರನು ವೈರಿಗಳ ಕೈಯಿಂದ I ರಕ್ಷಿಸಿದನು ಆ ಶತ್ರುಗಳ ಹಿಡಿತದಿಂದ II೧೧. ಮುಳುಗಿಸಿತು ಜಲರಾಶಿ ಆ ಶತ್ರುಗಳನು I ಉಳಿಯಗೊಡಿಸಲಿಲ್ಲ ಅವರಲ್ಲೊಬ್ಬನನು II೧೨. ಆಗ ನಂಬಿದರು ಪ್ರಭುವಿನಾ ಮಾತನು I ಮಾಡಿದರಾಗ ಆತನ ಗುಣಗಾನವನು II೧೩. ಆದರೆ ಮರೆತರು ಬೇಗನೆ ಆತನ ಸತ್ಕಾರ್ಯಗಳನು I ಕಾಯದೆ ಹೋದರು ಆತನಾ ಸಂಕಲ್ಪ ಸಾದನೆಯನು II೧೪. ಆಶಾಪಾಶಗಳಿಗೆ ಈಡಾದರು ಅಡವಿಯೊಳು I ದೇವನನೇ ಪರಿಶೋಧಿಸಿದರು ಅರಣ್ಯದೊಳು II೧೫. ಪೂರೈಸಿದನಾತ ಅವರ ಕೋರಿಕೆಯನು I ಕಳುಹಿಸಿದನಾದರೆ ಭೀಕರ ರೋಗವನು II೧೬. ಅಸೂಯೆಗೊಂಡರು ಪಾಳೆಯದೊಳು ಮೋಶೆಯ ಮೇಲೆ I ಪ್ರಭುವಿಗೆ ಪ್ರತಿಷ್ಠಿತನಾದ ಆ ಆರೋನನ ಮೇಲೆ II೧೭. ಭೂಮಿ ಬಾಯ್ದೆರೆದು ನುಂಗಿತು ದಾತಾನನನು I ಮುಚ್ಚಿಬಿಟ್ಟಿತು ಅಭಿರಾಮನ ಕಡೆಯವರನು II೧೮. ಆ ಜನರ ಮಧ್ಯದಲಿ ಬೆಂಕಿ ಹಬ್ಬಿತು I ಅಗ್ನಿಜ್ವಾಲೆ ದಹಿಸಿಬಿಟ್ಟಿತು ಆ ದುಷ್ಟರನು IIಜ್ಞಾನೋಕ್ತಿಗಳು ೨೫:೩-೫೩. ಆಕಾಶವು ಉನ್ನತ, ಭೂಮಿಯು ಅಗಾಧ, ಅಂತೆಯೇ ರಾಜರ ಮನಸ್ಸು ಅಗೋಚರ.೪. ಬೆಳ್ಳಿಯಿಂದ ಕಲ್ಮಷವನ್ನು ತೆಗೆದುಹಾಕಿದರೆ ಅಕ್ಕಸಾಲಿಗನಿಗೆ ದಕ್ಕುವುದು ಚೊಕ್ಕ ಒಡವೆ.೫. ಅಂತೆಯೆ ರಾಜನ ಸನ್ನಿಧಾನದಿಂದ ದುಷ್ಟರನ್ನು ತೆಗೆದುಹಾಕಿದರೆ ಅವನ ರಾಜ್ಯಭಾರ ನೀತಿಯಾಧಾರದಿಂದ ಸುಸ್ಥಿರ.ಕೊರಿಂಥಿಯರಿಗೆ ೨ ೨:೧-೧೭೧. ಇನ್ನೊಮ್ಮೆ ನಿಮ್ಮ ಬಳಿಗೆ ಬಂದು, ನಿಮ್ಮನ್ನು ದುಃಖಕ್ಕೀಡುಮಾಡಬಾರದೆಂದು ನಾನು ನಿರ್ಧರಿಸಿಕೊಂಡೆ.೨. ನಾನೇ ನಿಮ್ಮನ್ನು ದುಃಖಪಡಿಸಿದೆನಾದರೆ, ನನ್ನನ್ನು ಸಂತೋಷಪಡಿಸುವವರು ಯಾರು? ನನ್ನಿಂದ ದುಃಖಕ್ಕೆ ಒಳಗಾದ ನೀವೇ ಅಲ್ಲವೇ?೩. ಇದಕ್ಕಾಗಿಯೇ ನಾನು ಆ ಪತ್ರವನ್ನು ಬರೆದದ್ದು; ನನ್ನನ್ನು ಸಂತೋಷಪಡಿಸಬೇಕಾದವರೇ ನನ್ನನ್ನು ದುಃಖಕ್ಕೆ ಈಡುಮಾಡಬಾರದೆಂದು ನಾನು ಬರಲಿಲ್ಲ. ನನ್ನ ಸಂತೋಷವೇ ನಿಮ್ಮ ಸಂತೋಷವೆಂದು ನೀವು ಭಾವಿಸುತ್ತೀರೆಂದು ಬಲ್ಲೆ.೪. ಮನೋವ್ಯಥೆಯಿಂದಲೂ ಹೃದಯವೇದನೆಯಿಂದಲೂ ಕಣ್ಣೀರಿಡುತ್ತಾ ನಾನು ನಿಮಗೆ ಪತ್ರ ಬರೆದೆ. ನಿಮ್ಮನ್ನು ದುಃಖಕ್ಕೀಡುಮಾಡಬೇಕೆಂದಲ್ಲ, ನಿಮ್ಮನ್ನು ಎಷ್ಟರಮಟ್ಟಿಗೆ ಪ್ರೀತಿಸುತ್ತಿರುವೆನೆಂದು ನೀವು ತಿಳಿದುಕೊಳ್ಳಬೇಕೆಂದು ಬರೆದೆ.೫. ಒಬ್ಬನು ದುಃಖವನ್ನುಂಟುಮಾಡಿದ್ದಾನಾದರೆ, ಅವನು ಹಾಗೆ ಮಾಡಿದ್ದು ನನಗೊಬ್ಬನಿಗೇ ಅಲ್ಲ. ಒಂದು ವಿಧದಲ್ಲಿ ನಿಮಗೆಲ್ಲರಿಗೂ ಸಹ ದುಃಖವನ್ನುಂಟುಮಾಡಿದ್ದಾನೆ. ಅವನ ಮೇಲೆ ಹೆಚ್ಚು ಕಠಿಣನಾಗಿರಲು ನನಗೆ ಇಷ್ಟವಿಲ್ಲ.೬. ನಿಮ್ಮಲ್ಲಿ ಬಹುಮಂದಿ ಅವನಿಗೆ ವಿಧಿಸಿರುವ ಶಿಕ್ಷೆಯೇ ಸಾಕಾಗಿದೆ.೭. ಈಗ ನೀವು ಅವನನ್ನು ಕ್ಷಮಿಸಿ ಸಂತೈಸಿರಿ. ಇಲ್ಲವಾದರೆ ಅವನು ಅತೀವ ದುಃಖದಲ್ಲಿಯೇ ಮುಳುಗಿಹೋದಾನು.೮. ನಿಮ್ಮ ಪ್ರೀತಿ ಅವನಿಗೆ ಮನದಟ್ಟಾಗುವಂತೆ ನಡೆದುಕೊಳ್ಳಬೇಕೆಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ.೯. ನೀವು ಎಲ್ಲ ವಿಷಯಗಳಲ್ಲೂ ನನಗೆ ವಿಧೇಯರಾಗಿದ್ದೀರೋ ಇಲ್ಲವೋ ಎಂದು ಪರೀಕ್ಷಿಸಲು ನಾನು ಬರೆದದ್ದು.೧೦. ನೀವು ಯಾರನ್ನು ಕ್ಷಮಿಸುತ್ತೀರೋ ಅವನನ್ನು ನಾನೂ ಕ್ಷಮಿಸುತ್ತೇನೆ. ನಾನು ಯಾವುದನ್ನಾದರೂ ಕ್ಷಮಿಸಿದ್ದರೆ ಅಥವಾ ಕ್ಷಮಿಸಬೇಕಾಗಿದ್ದರೆ ಅದನ್ನು ಕ್ರಿಸ್ತಯೇಸುವಿನ ಸಮ್ಮುಖದಲ್ಲಿ ನಿಮಗೋಸ್ಕರ ಕ್ಷಮಿಸುತ್ತೇನೆ.೧೧. ಸೈತಾನನ ಕುತಂತ್ರಗಳನ್ನು ನಾವು ಅರಿಯದವರಲ್ಲ; ಅವನ ಕೈ ಮೇಲಾಗದಂತೆ ನಾವು ನೋಡಿಕೊಳ್ಳಬೇಕು.೧೨. ಯೇಸುಕ್ರಿಸ್ತರ ಶುಭಸಂದೇಶವನ್ನು ಸಾರುವುದಕ್ಕೆ ನಾನು ತ್ರೋವಕ್ಕೆ ಬಂದಾಗ, ಪ್ರಭುವಿನ ಕೃಪೆಯಿಂದ ನನಗೆ ಸದವಕಾಶದ ಬಾಗಿಲು ತೆರೆದಿತ್ತು.೧೩. ಆದರೆ ನನ್ನ ಸಹೋದರ ತೀತನನ್ನು ಅಲ್ಲಿ ಕಾಣದೆಹೋದುದರಿಂದ ನನ್ನ ಮನಸ್ಸಿಗೆ ನೆಮ್ಮದಿ ಇಲ್ಲವಾಯಿತು. ಕೂಡಲೇ ಅಲ್ಲಿಯ ಜನರಿಂದ ಬೀಳ್ಕೊಂಡು ಮಕೆದೋನಿಯಕ್ಕೆ ಹೊರಟೆ.೧೪. ಯೇಸುಕ್ರಿಸ್ತರ ಅನ್ಯೋನ್ಯತೆಯಲ್ಲಿ ನಮ್ಮನ್ನು ಸದಾ ವಿಜಯೋತ್ಸವದತ್ತ ನಡೆಸುವ ಹಾಗು ಕ್ರಿಸ್ತಜ್ಞಾನವೆಂಬ ಪರಿಮಳವನ್ನು ಎಲ್ಲೆಡೆಯಲ್ಲೂ ನಮ್ಮ ಮೂಲಕ ಪಸರಿಸುವ ದೇವರಿಗೆ ವಂದನೆಗಳು.೧೫. ಹೌದು, ಉದ್ಧಾರದ ಮಾರ್ಗದಲ್ಲಿರುವವರಿಗೂ ವಿನಾಶಮಾರ್ಗದಲ್ಲಿರುವವರಿಗೂ ಕ್ರಿಸ್ತಯೇಸುವೇ ದೇವರಿಗರ್ಪಿಸಿದ ಪರಿಮಳದಂತೆ ನಾವು ಇದ್ದೇವೆ.೧೬. ವಿನಾಶ ಮಾರ್ಗದಲ್ಲಿರುವವರಿಗೆ ಇದು ಮೃತ್ಯುಕಾರಕ ಗಂಧ; ಉದ್ಧಾರ ಮಾರ್ಗದಲ್ಲಿರುವವರಿಗೆ ಇದು ಸಜ್ಜೀವದಾಯಕ ಸುಗಂಧ. ಇಂಥ ಕಾರ್ಯಕ್ಕೆ ಸಮರ್ಥರು ಯಾರು?೧೭. ಎಷ್ಟೋ ಮಂದಿ ದೇವರ ವಾಕ್ಯವನ್ನು ಕಲಬೆರಕೆ ಮಾಡಿ ವ್ಯಾಪಾರಮಾಡುತ್ತಾರೆ. ನಾವು ಹಾಗಲ್ಲ; ದೇವರಿಂದಲೇ ನಿಯೋಜಿತರಾಗಿ, ದೇವರ ಸಮಕ್ಷಮದಲ್ಲಿ ಕ್ರಿಸ್ತಯೇಸುವಿನ ಅನ್ಯೋನ್ಯತೆಯಲ್ಲಿ ನಾವು ಯಥಾರ್ಥವಾದುದನ್ನೇ ಉಪದೇಶಿಸುವವರು. Kannada Bible (KNCL) 2016 Kannada C.L. Bible - ಸತ್ಯವೇದವು C.L. Copyright © 2016 by The Bible Society of India Used by permission. worldwide