ಬೈಬಲ್ ಒಂದು ವರ್ಷದಲ್ಲಿ ಸೆಪ್ಟೆಂಬರ್ ೧೧ಯೆಶಾಯನ ೧೩:೧-೨೨೧. ಬಾಬಿಲೋನಿನ ವಿಷಯವಾಗಿ ಆಮೋಚನ ಮಗ ಯೆಶಾಯನಿಗೆ ಕೇಳಿಬಂದ ದೇವವಾಣಿ:೨. ಬೋಳುಬೆಟ್ಟದ ಮೇಲೆ ಧ್ವಜವನ್ನು ಏರಿಸಿರಿ. ಪ್ರಭುಗಳ ನಗರದ್ವಾರಗಳನ್ನು ಮುತ್ತುವಂತೆ ಸೈನಿಕರಿಗೆ ಸನ್ನೆಮಾಡಿ ಕೂಗಿ ಹೇಳಿರಿ.೩. ಆಯ್ಕೆಯಾದವರಿಗೆ ಅಪ್ಪಣೆಮಾಡಿದ್ದೇನೆ: ಹೌದು, ಹೆಮ್ಮೆಯಿಂದ ಮೆರೆಯುವ ಶೂರರು ನನ್ನ ಕೋಪವನ್ನು ತೀರಿಸಲಿ ಎಂದು ಅವರಿಗೆ ಕರೆನೀಡಿದ್ದೇನೆ.೪. ಇಗೋ, ಬೆಟ್ಟಗುಡ್ಡಗಳಿಂದ ಕೇಳಿಬರುತ್ತಿದೆ ಜನಜಂಗುಳಿಯಂಥ ಗದ್ದಲ; ಒಟ್ಟಿಗೆ ಕೂಡಿಕೊಂಡ ದೇಶವಿದೇಶಗಳ ಆರ್ಭಟ; ಸಜ್ಜಾಗಿ ನಿಂತಿದೆ ಸೇನಾಧೀಶ್ವರ ಸರ್ವೇಶ್ವರನ ಸೈನ್ಯ.೫. ಅವರು ಬಂದಿರುವುದು ಭೂಮಿಯ ಕಟ್ಟಕಡೆಯ ನಾಡುಗಳಿಂದ; ಇಡೀ ರಾಷ್ಟ್ರವನ್ನು ಹಾಳುಮಾಡಲಿರುವರು ಸರ್ವೇಶ್ವರ ಕೋಪೋದ್ರೇಕದಿಂದ.೬. ಪ್ರಲಾಪಿಸಿರಿ, ಸಮೀಪಿಸಿದೆ ಸರ್ವೇಶ್ವರನ ದಿನ; ಸನ್ನಿಹಿತವಾಗಿದೆ, ಸರ್ವನಾಶ ಮಾಡುವ ಸೇನಾಧೀಶ್ವರನ ದಿನ!೭. ಈ ಕಾರಣ ಜೋಲುಬೀಳುವುವು ಎಲ್ಲರ ಕೈಗಳು; ಕರಗಿ ನೀರಾಗುವುವು ಎಲ್ಲರ ಹೃದಯಗಳು.೮. ಭಯಭ್ರಾಂತರಾಗುವರು ಅವರೆಲ್ಲರು; ಆಕ್ರಮಿಸುವುವು ಅವರನ್ನು ಯಾತನೆ ವೇದನೆಗಳು. ಸಂಕಟಪಡುವರವರು ಹೆರುವ ಹೆಂಗಸಿನಂತೆ; ಒಬ್ಬರನ್ನೊಬ್ಬರು ನೋಡುವರು ದಿಗ್ಭ್ರಾಂತರಾದವರಂತೆ; ಅವರ ಮುಖಗಳು ಕೆಂಪೇರುವುವು ಬೆಂಕಿಯಂತೆ.೯. ಇಗೋ, ಸರ್ವೇಶ್ವರನ ದಿನ ಬರುತ್ತಿದೆ! ಭೂಮಿಯನ್ನು ಹಾಳುಮಾಡಲು, ಪಾಪಿಗಳನ್ನು ನಿರ್ಮೂಲಮಾಡಲು; ಕೋಪೋದ್ರೇಕದಿಂದ, ರೋಷಾವೇಶದಿಂದ, ಕ್ರೂರವಾಗಿ ಬರುತ್ತಿದೆ!೧೦. ಆಕಾಶದ ತಾರೆಗಳು, ನಕ್ಷತ್ರಗಳು ಬೆಳಗವು, ಸೂರ್ಯನು ಅಂಧಕಾರಮಯನಾಗುವನು, ಚಂದ್ರನು ಕಾಂತಿಹೀನನಾಗುವನು.೧೧. ಸರ್ವೇಶ್ವರ ಇಂತೆನ್ನುತ್ತಾರೆ: “ನಾನು ಲೋಕದವರಿಗೆ ಪಾಪದ ಫಲವನ್ನೂ ದುರುಳರಿಗೆ ದುಷ್ಕೃತ್ಯಗಳ ಫಸಲನ್ನೂ ತಿನ್ನಿಸುವೆನು. ಸೊಕ್ಕಿದವನ ಕೊಬ್ಬನ್ನು ಕರಗಿಸುವೆನು. ಬಲಾತ್ಕಾರ ಮಾಡುವವರ ಹೆಮ್ಮೆಯನ್ನು ಅಡಗಿಸುವೆನು.೧೨. ಅಳಿದುಳಿದ ಜನರು ಅಪರಂಜಿಗಿಂತಲೂ ಓಫೀರಿನ ಬಂಗಾರಕ್ಕಿಂತಲೂ ವಿರಳವಾಗಿರುವಂತೆ ಮಾಡುವೆನು.೧೩. ಸೇನಾಧೀಶ್ವರ ಸರ್ವೇಶ್ವರನು ಕೋಪೋದ್ರೇಕದಿಂದ ರೋಷಾವೇಶದಿಂದ ಕೆರಳುವ ದಿನದಂದು ಆಕಾಶಮಂಡಲ ನಡುಗುವುದು, ಭೂಮಂಡಲ ಸ್ಥಳಪಲ್ಲಟಗೊಳ್ಳುವುದು.೧೪. “ಬೇಟೆಗಾರನಿಂದ ತಪ್ಪಿಸಿಕೊಂಡು ಓಡುತ್ತಿರುವ ಜಿಂಕೆಯಂತೆಯೂ ಒಟ್ಟುಗೂಡಿಸಲು ಯಾರೂ ಇಲ್ಲದಂಥ ಕುರಿಗಳಂತೆಯೂ ಪ್ರತಿಯೊಬ್ಬನು ಸ್ವಜನರ ಕಡೆಗೆ ತಿರುಗುವನು; ಸ್ವದೇಶದ ಕಡೆಗೆ ಓಡುವನು.೧೫. ಸಿಕ್ಕಿಸಿಕ್ಕಿದವರೆಲ್ಲರು ಇರಿತಕ್ಕೆ ಗುರಿಯಾಗುವರು. ಅಟ್ಟಿಹಿಡಿಯಲಾದವರೆಲ್ಲರು ಕತ್ತಿಗೆ ತುತ್ತಾಗುವರು.೧೬. ಅವರ ಮಕ್ಕಳನ್ನು ಬಂಡೆಗೆ ಅಪ್ಪಳಿಸಲಾಗುವುದು. ಅವರ ಮನೆಗಳನ್ನು ಸೂರೆಮಾಡಲಾಗುವುದು. ಅವರ ಹೆಂಗಳೆಯರು ಅತ್ಯಾಚಾರಕ್ಕೆ ಈಡಾಗುವರು.೧೭. “ಇಗೋ, ಬಾಬಿಲೋನಿಯದ ಜನರಿಗೆ ವಿರುದ್ಧವಾಗಿ ಮೇದ್ಯರನ್ನು ಎತ್ತಿಕಟ್ಟುವೆನು. ಇವರು ಬೆಳ್ಳಿಬಂಗಾರಕ್ಕೆ ಮಾರುಹೋಗರು.೧೮. ಇವರ ಬಿಲ್ಲುಗಳು ಯುವಜನರನ್ನು ಚೂರುಚೂರು ಮಾಡುವುವು; ಇವರು ಕರುಳ ಕುಡಿಗಳನ್ನೂ ಕನಿಕರಿಸರು; ಮಕ್ಕಳುಮರಿಗಳನ್ನೂ ಕರುಣಿಸದು ಇವರ ಕಣ್ಣು.೧೯. ಬಾಬಿಲೋನ್ ರಾಜ್ಯಗಳಿಗೆ ಶಿರೋಮಣಿ, ಕಸ್ದೀಯರ ಭವ್ಯಭೂಷಣ. ಆದರೆ ದೇವರಾದ ನಾನು ಸೊದೋಮ್ ಮತ್ತು ಗೊಮೋರಾ ನಾಡುಗಳನ್ನು ನಾಶಮಾಡಿದಂತೆ ಇದನ್ನೂ ಕೆಡಿಸಿ ನಾಶಮಾಡುವೆನು.೨೦. ಅದು ಎಂದಿಗೂ ನಿವಾಸಕ್ಕೆ ಯೋಗ್ಯವಾಗದು. ತಲತಲಾಂತರಕ್ಕೂ ಅಲ್ಲಿ ಜನರು ಒಕ್ಕಲು ಮಾಡರು. ಯಾವ ಅರಬ್ಬಿಯನೂ ಅಲ್ಲಿ ಗುಡಾರಹಾಕನು. ಕುರುಬರು ಅಲ್ಲಿ ಮಂದೆಗಳನ್ನು ತಂಗಿಸರು.೨೧. ಆ ನಾಡು ಕಾಡುಮೃಗಗಳಿಗೆ ಬೀಡಾಗುವುದು. ಅದರ ಮನೆಗಳು ಗೂಬೆಗಳ ಗೂಡಾಗುವುವು. ಉಷ್ಟ್ರಪಕ್ಷಿಗಳು ಅಲ್ಲಿ ವಾಸಮಾಡುವುವು. ಕಾಡುಮೇಕೆಗಳು ಕುಣಿದಾಡುವುವು.೨೨. ಅದರ ಅರಮನೆಗಳಲ್ಲಿ ನರಿಗಳು, ಮೋಜಿನ ಮಹಲುಗಳಲ್ಲಿ ತೋಳಗಳು ಕೂಗಾಡುವುವು. ಬಾಬಿಲೋನಿಗೆ ಕಾಲ ಬಂದಿದೆ. ಅದರ ದಿನಗಳು ಮುಗಿಯುತ್ತಿವೆ.ಯೆಶಾಯನ ೧೪:೧-೩೨೧. ದಯೆತೋರಿಸುವರು ಸರ್ವೇಶ್ವರ ಯಕೋಬ್ಯರಿಗೆ, ಆರಿಸಿಕೊಳ್ಳುವರು ಮತ್ತೆ ಇಸ್ರಯೇಲರನ್ನೆ, ನೆಲೆಗೊಳಿಸುವರವರನ್ನು ತಾಯಿನಾಡಿನಲ್ಲೆ. ಹೊರನಾಡಿಗರು ಕೂಡಿಕೊಳ್ಳುವರು ಅವರೊಡನೆ, ಸೇರಿಕೊಳ್ಳುವರವರು ಯಕೋಬ ಮನೆತನಕ್ಕೆ.೨. ರಾಷ್ಟ್ರಗಳೇ ಇಸ್ರಯೇಲರನ್ನು ಕರೆತಂದು ಸೇರಿಸುವುವು ಸ್ವಂತ ನಾಡಿಗೆ ಸರ್ವೇಶ್ವರನ ಆ ನಾಡಿನಲಿ ದಾಸದಾಸಿಯರನ್ನಾಗಿಸಿಕೊಳ್ಳುವುದು ಇಸ್ರಯೇಲ್ ಮನೆತನವು ಆ ರಾಷ್ಟ್ರಗಳನ್ನೇ. ಸೆರೆಹಿಡಿಯುವರು ತಮ್ಮನ್ನು ಸೆರೆಹಿಡಿದವರನ್ನೇ ಅಧೀನಪಡಿಸುವರು ತಮ್ಮನ್ನು ಹಿಂಸಿಸಿದವರನ್ನೇ.೩. ಸಂಕಟದಿಂದಲೂ ನೋವುನಷ್ಟದಿಂದಲೂ ಕ್ರೂರವಾದ ಬಿಟ್ಟಿಜೀತದಿಂದಲೂ ಸರ್ವೇಶ್ವರ ನಿಮ್ಮನ್ನು ಬಿಡುಗಡೆಮಾಡುವರು. ಆ ದಿನದಂದು ಬಾಬಿಲೋನಿನ ಅರಸನನ್ನು ಮೂದಲಿಸಿ ಈ ಪದ್ಯವನ್ನು ನೀವು ಹಾಡಬೇಕು:೪. ಬಿದ್ದುಹೋದನಿದೊ ವಿಧ್ವಂಸಕ ಸದ್ದಿಲ್ಲದಾಗಿದೆ ಅವನ ಅಟ್ಟಹಾಸದ ಬಿಂಕ.೫. ಮುರಿದಿಹನು ಸರ್ವೇಶ್ವರ ದುರುಳರಾ ಗದೆಯನು ಮುರಿದಿಹನು ಅರಸರ ರಾಜದಂಡವನು.೬. ಏಕೆನೆ, ಎಡೆಬಿಡದೆ ದಂಡಿಸಿದರು ಪ್ರಜೆಗಳನು ಕೋಪೋದ್ರೇಕದಿಂದ ತಡೆಯಿಲ್ಲದೆ ದಬ್ಬಾಳಿಕೆ ನಡೆಸಿದರು ರಾಷ್ಟ್ರಗಳ ಮೇಲೆ ಸಿಟ್ಟಿನಿಂದ.೭. ಕಟ್ಟಕಡೆಗೆ ಶಾಂತಿಯಿಂದ ಸುರಕ್ಷಿತವಾಗಿದೆ ಜಗವೆಲ್ಲ ಹರ್ಷಧ್ವನಿಗೈಯುತ ಹಾಡುತಿಹರು ಜನರೆಲ್ಲ.೮. ನಲಿಯುತಿಹವು ತುರಾಯಿ, ಲೆಬನೋನಿನ ದೇವದಾರು ವೃಕ್ಷಗಳು ಕೂಡಾ, ‘ಮಡಿದು ಹೋದನಿವನು, ಇನ್ನು, ಕಡಿವವರಾರು ನಮ್ಮನು?’ ಎನ್ನುತಾ.೯. ನಿನ್ನ ಸ್ವಾಗತಿಸಲು ಸಡಗರದಿಂದಿದೆ ಪಾತಾಳಲೋಕವು, ಚೇತನಗೊಂಡಿವೆ ಲೋಕಮುಖಂಡರ ಪ್ರೇತಗಳು, ಎದ್ದು ನಿಂತಿಹರು ಸಕಲ ರಾಷ್ಟ್ರಗಳ ಅರಸರುಗಳು.೧೦. ಇವರೆಲ್ಲರು ಇಂತೆನ್ನುವರು ನಿನಗೆ: ‘ನೀನು ಸಹ ದುರ್ಬಲ ನಾದೆ ನಮ್ಮ ಹಾಗೆ ನೀನೂ ಸರಿಸಮಾನನಾದೆ ನಮಗೆ’.೧೧. ಇಳಿದಿದೆ ನಿನ್ನ ವೈಭವ, ವೀಣಾನಾದ ಪಾತಾಳಕೆ ನಿನಗೀಗ ಹುಳುಗಳೇ ಹಾಸಿಗೆ, ಕ್ರಿಮಿಗಳೇ ಹೊದಿಕೆ.೧೨. ಮುಂಜಾನೆಯ ನಕ್ಷತ್ರವೆ, ಉದಯ ಕುಮಾರನೆ, ಆಗಸದಿಂದ ಹೇಗೆ ಬಿದ್ದೆ? ರಾಷ್ಟ್ರಗಳನ್ನು ಗೆದ್ದ ನೀನು, ನೆಲಕ್ಕೆ ಅದು ಹೇಗೆ ಉರುಳಿದೆ?೧೩. ‘ಹತ್ತಿಹೋಗುವೆನು ನಾನು ಆಕಾಶಮಂಡಲಕೆ ಉತ್ತರದಿಕ್ಕಿನ ಕೊನೆಗಿರುವ ಸುರಗಣ ಪರ್ವತಕ್ಕೆ ಎತ್ತುವೆ ಸಿಂಹಾಸನವನ್ನು ದೇವ ನಕ್ಷತ್ರಗಳ ಮೇಲಕೆ ‘ಕುಳಿತಲ್ಲಿ ರಾಜ್ಯವಾಳುವೆ’ ಎಂದುಕೊಂಡೆ ನಿನ್ನೊಳಗೆ.೧೪. ‘ಏರುವೆ ಉನ್ನತ ಮೇಘಮಂಡಲದ ಮೇಲಕೆ, ಸರಿಸಮಾನನಾಗುವೆ ಉನ್ನತೋನ್ನತನಿಗೆ’.೧೫. ಇಂತೆಂದ ನೀನು ದೂಡಲಾಗಿರುವೆ ಪಾತಾಳಕೆ ಅಧೋಲೋಕದ ಅಗಾಧ ಕೂಪಗಳಿಗೆ.೧೬. ಸತ್ತವರು ದಿಟ್ಟಿಸಿ ನಿನ್ನನು: ‘ಭುವಿಯನು ನಡುಗಿಸಿದವನು, ರಾಜ್ಯಗಳನು ಕದಲಿಸಿದವನು,೧೭. ನಗರಗಳನು ಕೆಡವಿಸಿದವನು, ನಾಡನು ಕಾಡಾಗಿಸಿದವನು, ಖೈದಿಗಳನು ಬಂಧನದಿಂದ ಬಿಡಿಸಿದವನು ಈತನೇ ಅಲ್ಲವೆ?’ ಎಂದಾಡಿಕೊಳ್ವರು.೧೮. ಸಂಭ್ರಮದಿ ಸ್ವಂತ ಸಮಾಧಿಗಳಲಿ ನಿರಂತರ ನಿದ್ರಿಸುತಿಹರು ಸಕಲ ರಾಷ್ಟ್ರಗಳ ಅರಸರು, ಸಮಸ್ತ ರಾಜರು.೧೯. ನಿನ್ನನ್ನಾದರೊ ಕೊಳೆತ ಕಡ್ಡಿಯಂತೆ ಬಿಸಾಡಿಹರು ಕೆಳಕೆ ಗೋರಿಯಿಲ್ಲದ ನಿನ್ನ ಶವ ಈಡಾಗಿದೆ ಪರರ ತುಳಿತಕ್ಕೆ, ಕತ್ತಿ ತಿವಿದ, ಕಲ್ಲುಗುಂಡಿಗೆ ಪಾಲಾದ ಹೆಣಗಳೇ ನಿನ್ನ ಹೊದಿಕೆ.೨೦. ಸ್ವಂತ ಜನರನೇ ಕೊಂದ ನಿನಗೆ ಸ್ವಂತ ನಾಡನೇ ನಾಶಗೈದ ನಿನಗೆ ಸಿಗದು ರಾಜ್ಯವೈಭವದ ಸಂಸ್ಕಾರ ಗೋರಿಗೆ, ‘ಹೇಳಹೆಸರಿಲ್ಲದ ಗತಿ ದುರುಳರ ಸಂತಾನಕೆ’.೨೧. ತಲೆಯೆತ್ತಿ ಪೃಥ್ವಿಯನೇ ವಶಪಡಿಸಿಕೊಳ್ಳದಂತೆ, ಧರೆಯ ಮೇಲೆಲ್ಲ ನಗರಗಳನ್ನು ಕಟ್ಟಿಕೊಳ್ಳದಂತೆ, ಸಿದ್ಧಮಾಡಿರಿವನ ಮಕ್ಕಳಿಗೆ ವಧ್ಯಸ್ಥಾನ, ಈತನ ಪಿತಾಪಿತೃಗಳ ಪಾಪಕೃತ್ಯಗಳ ಕಾರಣ.೨೨. ಸೇನಾಧಿಶ್ವರ ಸರ್ವೇಶ್ವರ ಸ್ವಾಮಿಯ ನುಡಿಗಳು: “ನಾನವರಿಗೆ ವಿರುದ್ಧವಾಗಿ ಎದ್ದು ನಿರ್ನಾಮಮಾಡುವೆನು, ಬಾಬಿಲೋನಿನ ಹೆಸರನು, ಜನಶೇಷವನು, ಪುತ್ರಪೌತ್ರರನು.೨೩. ಪರಿವರ್ತಿಸುವೆನಾ ನಾಡನು ಜವುಗು ನೆಲವನ್ನಾಗಿ, ಅಹುದು, ಮುಳ್ಳುಹಂದಿಗಳ ರೊಪ್ಪವನ್ನಾಗಿ, ಗುಡಿಸಿಬಿಡುವೆನು ನಾಶವೆಂಬ ಪೊರಕೆಯಿಂದ ಪೂರ್ತಿಯಾಗಿ\.೨೪. ಸೇನಾಧೀಶ್ವರ ಸರ್ವೇಶ್ವರ ಸ್ವಾಮಿಯ ಪ್ರತಿಜ್ಞೆಯಿದು: “ನೆರವೇರಿಯೇ ತೀರುವುದು ನಾ ಸಂಕಲ್ಪಿಸಿದ್ದು, ಈಡೇರಿಯೇ ತೀರುವುದು ನಾ ಯೋಚಿಸಿದ್ದು.೨೫. ನಶಿಸಿಬಿಡುವೆನಾ ಅಸ್ಸೀರಿಯರನು ನನ್ನ ನಾಡಿನಲಿ, ತುಳಿದುಬಿಡುವೆನು ಅವರನು ನನ್ನ ಬೆಟ್ಟಗಳಲಿ, ನೀಗುವುದಾಗ ನನ್ನ ಜನರಿಂದ ಅವರು ಹೂಡಿದ ನೊಗವು, ತೊಲಗುವುದಾಗ ಅವರು ಹೊರಿಸಿದ ಹೊರೆಯು.೨೬. ವಿಶ್ವದ ಬಗ್ಗೆ ನಾ ಮಾಡಿರುವ ಯೋಜನೆಯಿದು, ರಾಷ್ಟ್ರಗಳನ್ನು ದಂಡಿಸಲೆತ್ತಿರುವ ಕೈಯಿದು\.೨೭. ವ್ಯರ್ಥಗೊಳಿಸುವವರಾರು ಸೇನಾಧಿಶ್ವರ ಸರ್ವೇಶ್ವರ ಸ್ವಾಮಿಯ ಯೋಜನೆಯನು? ಹಿಂತೆಗೆವವರಾರು ಅವರೆತ್ತಿದ ಕೈಯನು?.೨೮. ಅರಸ ಆಹಾಜನು ಕಾಲವಾದ ವರುಷದಲಿ ಕೇಳಿಬಂದಿತು ಈ ದೈವೋಕ್ತಿ:೨೯. “ನಲಿಯದಿರಿ, ಎಲೈ ಫಿಲಿಷ್ಟಿಯರೇ, ನಿಮ್ಮನ್ನು ಹೊಡೆದ ಕೋಲು ಮುರಿಯಿತೆಂದು. ಹಾವು ಸತ್ತರೂ ಅದರ ಮೂಲದಿಂದ ಹುಟ್ಟುವುದು ಕ್ರೂರ ಕಾಳಿಂಗವು, ಅದರ ಮೊಟ್ಟೆಯಿಂದ ಹೊರಬರುವುದು ಹಾರುವ ಘಟಸರ್ಪವು.೩೦. ಪೋಷಣೆ ಪಡೆಯುವರು ದೀನದಲಿತರು, ನಿರ್ಭಯದಿಂದ ನಿದ್ರಿಸುವರು ದಿಕ್ಕಿಲ್ಲದವರು. ನಿನ್ನ ಸಂತಾನದವರಾದರೋ ಸಾಯುವರು ಕ್ಷಾಮದಿಂದ, ಅಳಿದುಳಿದವರು ಹತರಾಗುವರು ಆ ಘಟಸರ್ಪದಿಂದ.೩೧. ಪುರದ್ವಾರವೇ, ಗೋಳಾಡು; ಪಟ್ಟಣವೇ, ಬೊಬ್ಬೆಯಿಡು, ಫಿಲಿಷ್ಟಿಯವೇ, ಕರಗಿಹೋಗು, ಉತ್ತರದಿಂದ ಬರುತ್ತಿದೆ ಧೂಮಧೂಳಿ ಆ ದಂಡಿನಲ್ಲಿಲ್ಲ ನೋಡು, ಯಾವ ಹೇಡಿ.೩೨. ಹೊರನಾಡಿನ ರಾಯಭಾರಿಗಳಿಗೆ ನಮ್ಮ ಉತ್ತರವೇನು? “ಸರ್ವೇಶ್ವರ ಸ್ವಾಮಿ ಸ್ಥಾಪಿಸಿಹರು ಸಿಯೋನನ್ನು, ದೀನದಲಿತರು ಆಶ್ರಯಿಸಿಕೊಳ್ಳುವರು ಅದನ್ನು.”ಕೀರ್ತನೆಗಳು ೧೦೬:೧೯-೨೩೧೯. ಹೋರೇಬಿನಲಿ ಮಾಡಿದರು ಬಸವನನು I ಆರಾಧಿಸಿದರು ಆ ಎರಕದ ಶಿಲೆಯನು II೨೦. ಈಪರಿ ತೊರೆದುಬಿಟ್ಟರು ತಮ್ಮ ಮಹಿಮಾ ದೇವರನು I ಆರಿಸಕೊಂಡರು ಹುಲ್ಲು ತಿನ್ನುವ ಬಸವನ ವಿಗ್ರಹವನು II೨೧. ಮರೆತುಬಿಟ್ಟರವರು ತಮ್ಮ ಮುಕ್ತಿದಾತ ದೇವನನು I ಈಜಿಪ್ಟಿನಲ್ಲಾತ ಎಸಗಿದ ಮಹತ್ಕಾರ್ಯಗಳನು II೨೨. ಹಾಮನಾಡಿನಲಿ ಮಾಡಿದ ಅದ್ಭುತಗಳನು I ಕೆಂಗಡಲಬಳಿ ನಡೆದ ಘೋರ ಕೃತ್ಯಗಳನು II೨೩. ಎಂತಲೇ ‘ಸಂಹರಿಸುವೆ’ ಎನ್ನಲು ಪ್ರಭು ಅವರನು I ಆಪ್ತ ಮೋಶೆಯು ಮಧ್ಯಸ್ಥನಾಗಿ ಬಂದನು I ಸಂಹರಿಸದಂತೆ ಶಮನಗೊಳಿಸಿದನಾ ಕೋಪವನು IIಜ್ಞಾನೋಕ್ತಿಗಳು ೨೫:೬-೭೬. ರಾಜನ ಸನ್ನಿಧಾನದಲ್ಲಿ ನಿನ್ನನ್ನೇ ಹೆಚ್ಚಿಸಿಕೊಳ್ಳಬೇಡ; ದೊಡ್ಡವರಿಗೆ ಏರ್ಪಡಿಸಿದ ಸ್ಥಾನದಲ್ಲಿ ನಿಂತುಕೊಳ್ಳಬೇಡ.೭. ಘನವಂತರ ಮುಂದೆ ಕೆಳಗಣ ಸ್ಥಾನಕ್ಕೆ ನೂಕಿಸಿಕೊಳ್ಳುವುದಕ್ಕಿಂತ “ಇನ್ನೂ ಮೇಲಕ್ಕೆ ಬಾ” ಎಂದು ಕರೆಸಿಕೊಳ್ಳುವುದು ಲೇಸು.ಕೊರಿಂಥಿಯರಿಗೆ ೨ ೩:೧-೧೮೧. ನಾವೀಗ ಆತ್ಮಸ್ತುತಿಯನ್ನು ಮಾಡಲು ಆರಂಭಿಸಿದಂತೆ ತೋರುತ್ತದೆಯೇ? ಅಥವಾ ನಿಮಗೆ ತೋರಿಸಲು ಯೋಗ್ಯತಾಪತ್ರ ಇತರರಿಗೆ ಬೇಕಾಗಿರುವಂತೆ ನಮಗೂ ಬೇಕಾಗಿದೆಯೇ? ಇಲ್ಲವೆ, ಯೋಗ್ಯತಾಪತ್ರವನ್ನು ನಿಮ್ಮಿಂದ ಪಡೆಯುವ ಅವಶ್ಯಕತೆ ನಮಗೂ ಇದೆಯೇ?೨. ನೀವೇ ನಮ್ಮ ಯೋಗ್ಯತಾಪತ್ರ, ನಮ್ಮ ಹೃದಯ ಪಟಲದ ಮೇಲೆ ಬರೆಯಲಾದ ಪತ್ರ. ಅದನ್ನು ಯಾರು ಬೇಕಾದರೂ ಗುರುತಿಸಬಹುದು. ಓದಿ ತಿಳಿದುಕೊಳ್ಳಬಹುದು.೩. ಕ್ರಿಸ್ತಯೇಸುವೇ ನಮ್ಮಿಂದ ಬರೆಸಿದ ಪತ್ರ ನೀವು; ಇದು ಸ್ಪಷ್ಟ. ಬರೆದಿರುವುದು ಶಾಯಿಯಿಂದಲ್ಲ, ಜೀವಂತ ದೇವರ ಪವಿತ್ರಾತ್ಮರಿಂದ. ಕೊರೆದದ್ದೂ ಕಲ್ಲಿನ ಮೇಲೆ ಅಲ್ಲ, ಮಾನವ ಹೃದಯದ ಮೇಲೆ.೪. ಕ್ರಿಸ್ತಯೇಸುವಿನ ಮುಖಾಂತರ ನಮಗೆ ದೇವರಲ್ಲಿ ಇಂಥ ಭರವಸೆ ಇರುವುದರಿಂದಲೇ ಇದನ್ನು ಹೇಳುತ್ತಿದ್ದೇವೆ.೫. ನಮ್ಮ ಸ್ವಂತ ಶಕ್ತಿಯಿಂದಲೇ ಏನನ್ನೋ ಸಾಧಿಸಿಬಿಟ್ಟಿದ್ದೇವೆ ಎಂದು ಹೇಳಿಕೊಳ್ಳುವ ಸಾಮರ್ಥ್ಯ ನಮಗಿಲ್ಲ. ನಮ್ಮ ಸಾಮರ್ಥ್ಯವೆಲ್ಲ ದೇವರಿಂದಲೇ ಬಂದುದು.೬. ನಮಗೆ ಹೊಸ ಒಡಂಬಡಿಕೆಯ ಸೇವಕರಾಗುವಂಥ ಸಾಮರ್ಥ್ಯವನ್ನು ನೀಡಿದವರು ದೇವರೇ. ಈ ಒಡಂಬಡಿಕೆ ಲಿಖಿತ ಶಾಸನಕ್ಕೆ ಸಂಬಂಧಿಸಿದ್ದಲ್ಲ, ಪವಿತ್ರಾತ್ಮರಿಗೆ ಸಂಬಂಧಿಸಿದ್ದು. ಲಿಖಿತವಾದುದು ಮೃತ್ಯುಕಾರಕವಾದುದು; ಪವಿತ್ರಾತ್ಮ ಸಂಬಂಧವಾದುದು ಸಜ್ಜೀವದಾಯಕವಾದುದು.೭. ಕಲ್ಲಿನ ಮೇಲೆ ಕೊರೆಯಲಾದ ಶಾಸನ ಪ್ರಕಟವಾದಾಗ ದೇವರ ಮಹಿಮೆ ಕಾಣಿಸಿಕೊಂಡಿತು. ಆಗ ಮೋಶೆಯ ಮುಖವನ್ನು ಆವರಿಸಿದ್ದ ಪ್ರಭೆ ಕುಂದಿಹೋಗುವಂಥದ್ದಾಗಿದ್ದರೂ ಆ ಪ್ರಭೆಯಿಂದಾಗಿ ಆತನ ಮುಖವನ್ನು ದಿಟ್ಟಿಸಿನೋಡಲು ಇಸ್ರಯೇಲರಿಗೆ ಆಗಲಿಲ್ಲ.೮. ಮೃತ್ಯುಕಾರಕವಾದ ಈ ಶಾಸನ ಅಷ್ಟು ಮಹಿಮೆಯಿಂದ ಕೂಡಿತ್ತಾದರೆ ಪವಿತ್ರಾತ್ಮ ಚೈತನ್ಯದಿಂದ ಕೂಡಿದ ಸೇವೆಯು ಇನ್ನೆಷ್ಟು ಮಹಿಮೆಯಿಂದ ಕೂಡಿರಬೇಕು?೯. ದಂಡನೆಗೆ ಗುರಿಮಾಡುವ ಈ ಶಾಸನ ಸೇವೆ ಇಷ್ಟು ಮಹಿಮೆಯಿಂದ ಕೂಡಿದ್ದಾದರೆ, ಸದ್ಧರ್ಮಿಗಳೆಂದು ನಿರ್ಣಯಿಸುವ ಸೇವೆ ಇನ್ನೆಷ್ಟು ಮಹಿಮೆಯಿಂದ ಕೂಡಿರಬೇಕು?೧೦. ಈ ಸೇವೆಯ ಅಪರಿಮಿತ ಮಹಿಮೆಯ ಮುಂದೆ ಹಿಂದಿನ ಶಾಸನದ ಮಹಿಮೆ ಇಲ್ಲದಂತಾಗಿದೆ.೧೧. ಅಳಿದು ಹೋಗುವಂಥದ್ದೇ, ಅಷ್ಟು ಮಹಿಮೆಯಿಂದ ಕೂಡಿತ್ತಾದರೆ, ಶಾಶ್ವತವಾಗಿ ಉಳಿಯುವಂಥದ್ದು ಮತ್ತೆಷ್ಟು ಮಹಿಮೆಯಿಂದ ಕೂಡಿರಬೇಕು?೧೨. ನಮಗೆ ಇಂಥ ಭರವಸೆ ಇರುವುದರಿಂದಲೇ ನಾವು ಇಷ್ಟು ಧೈರ್ಯದಿಂದ ಇದ್ದೇವೆ.೧೩. ಕುಂದಿಹೋಗುವಂಥ ಮಹಿಮೆಯು ನಂದಿಹೋಗುವುದನ್ನು ಇಸ್ರಯೇಲರು ಕಾಣದಂತೆ ಮೋಶೆಯು ತನ್ನ ಮುಖಕ್ಕೆ ಮುಸುಕುಹಾಕಿಕೊಳ್ಳುತ್ತಿದ್ದನು. ನಾವು ಆತನಂತೆ ಅಲ್ಲ.೧೪. ಆ ಜನರ ಬುದ್ಧಿಗೆ ಮಂಕು ಕವಿದಿತ್ತು. ಇಂದಿನವರೆಗೂ ಹಳೆಯ ಒಡಂಬಡಿಕೆಯನ್ನು ಓದುವಾಗಲೆಲ್ಲಾ ಅದೇ ಮಂಕಿನ ಮುಸುಕು ಕವಿದಿದೆ. ಅದನ್ನು ಕ್ರಿಸ್ತಯೇಸುವಿನ ಮುಖಾಂತರವೇ ತೆಗೆಯಲು ಸಾಧ್ಯ.೧೫. ಹೌದು, ಮೋಶೆ ಬರೆದುದನ್ನು ಓದುವಾಗಲೆಲ್ಲಾ ಅವರ ಮನಸ್ಸು ಇಂದಿಗೂ ಅದೇ ಮುಸುಕಿನಿಂದ ಮುಚ್ಚಿದೆ.೧೬. ‘ಪ್ರಭುವಿಗೆ ಅಭಿಮುಖರಾದಾಗ ಮಾತ್ರ ಆ ಮುಸುಕನ್ನು ತೆಗೆಯಲಾಗುತ್ತದೆ.’೧೭. ಈ ವಾಕ್ಯದಲ್ಲಿ, ‘ಪ್ರಭು’ ಎಂದರೆ ದೇವರ ಆತ್ಮವೇ. ಪ್ರಭುವಿನ ಆತ್ಮ ಎಲ್ಲಿದೆಯೋ ಅಲ್ಲಿ ವಿಮೋಚನೆಯೂ ಇದೆ.೧೮. ಮುಸುಕು ತೆರೆದ ಮುಖವುಳ್ಳ ನಾವೆಲ್ಲರೂ ಪ್ರಭುವಿನ ಮಹಿಮೆಯನ್ನು ಪ್ರತಿಬಿಂಬಿಸುವ ಕನ್ನಡಿಯಂತೆ ಇದ್ದೇವೆ. ಆ ಪ್ರಭುವಿನಿಂದ ಹೊರಹೊಮ್ಮುವ ಮಹಿಮೆ ನಮ್ಮನ್ನು ಅಧಿಕಾಧಿಕವಾಗಿ ಮಾರ್ಪಡಿಸಿ ಅವರನ್ನೇ ಹೋಲುವಂತೆ ಮಾಡುತ್ತದೆ. ಇದೆಲ್ಲಾ ದೇವರಾತ್ಮವಾಗಿರುವ ಪ್ರಭುವಿನ ಕಾರ್ಯವೇ ಸರಿ. Kannada Bible (KNCL) 2016 Kannada C.L. Bible - ಸತ್ಯವೇದವು C.L. Copyright © 2016 by The Bible Society of India Used by permission. worldwide