ಬೈಬಲ್ ಒಂದು ವರ್ಷದಲ್ಲಿ ಸೆಪ್ಟೆಂಬರ್ ೯ಯೆಶಾಯನ ೯:೧-೨೧೧. ಆದರೂ ಕಷ್ಟಸಂಕಷ್ಟಗಳನ್ನು ಅನುಭವಿಸಿದ ಆ ನಾಡಿಗೆ ಇನ್ನು ಮುಂದೆ ಕತ್ತಲಿರುವುದಿಲ್ಲ. ಒಮ್ಮೆ ಜೆಬುಲೋನ್ ಮತ್ತು ನಪ್ತಾಲಿಯ ಗೋತ್ರಗಳಿಗೆ ಬೀಡಾಗಿದ್ದ ಆ ಪ್ರಾಂತ್ಯವು ಅವಮಾನಕ್ಕೆ ಗುರಿಯಾಗಿತ್ತು. ಆದರೆ ಇನ್ನು ಮುಂದೆ ಅದಕ್ಕೆ ಘನತೆಗೌರವ ಬರುವುದು: ಸಮುದ್ರದ ಹಾದಿಯಿಂದ ಹಿಡಿದು ಜೋರ್ಡನಿನ ಆಚೆಯಲ್ಲಿ ಇರುವ ಪ್ರಾಂತ್ಯದವರೆಗೆ ಮಾತ್ರವಲ್ಲ, ಅನ್ಯಜನರು ಇರುವ ಗಲಿಲೇಯ ಪ್ರಾಂತ್ಯದವರೆಗೂ ಘನತೆಗೌರವ ಬಂದೊದಗುವುದು.೨. ಕಾಣಿಸಿತೊಂದು ಮಹಾಜ್ಯೋತಿ ಕತ್ತಲಲಿ ಸಂಚರಿಸುತ್ತಿದ್ದ ಜನರಿಗೆ ಪ್ರಜ್ವಲಿಸಿತಾ ಜ್ಯೋತಿ ಕಗ್ಗತ್ತಲಲಿ ಬಾಳುತ್ತಿದ್ದಾ ನಾಡಿಗರಿಗೆ.೩. ವೃದ್ಧಿಗೊಳಿಸಿರುವೆ ನೀನು ಆ ದೇಶವನು ಅಧಿಕರಿಸಿರುವೆ ಅದರ ತೋಷವನು ಸುಗ್ಗಿಕಾಲದಲಿ ಹಿಗ್ಗುವವರಂತೆ ಕೊಳ್ಳೆ ಹಂಚಿಕೊಳ್ಳುವವರಂತೆ ಹರ್ಷಿಸುವರವರು ನಿನ್ನ ಮುಂದೆ.೪. ಮುರಿದುಹಾಕಿದೆ ಭಾರವಾದ ಅವರ ನೊಗವನು ಅವರ ಬೆನ್ನನ್ನು ಬಡಿದ ಬೆತ್ತವನು ದಬ್ಬಾಳಿಕೆ ನಡೆಸಿದವರ ದೊಣ್ಣೆಯನು; ಮಿದ್ಯಾನನ್ನು ಗೆದ್ದ ದಿನದಂದು ಹಾಗೆಯೆ ಮಾಡಿದೆಯಲ್ಲವೆ ನೀನು?೫. ಅಗ್ನಿಕುಂಡಕ್ಕೆ ಆಹುತಿಯಾಗುವುವು ಯುದ್ಧಕ್ಕೆ ಬಂದ ಯೋಧರ ಪಾದರಕ್ಷೆಗಳು ರಕ್ತಸಿಕ್ತವಾದವರ ದೇಹದ ಕವಚಗಳು.೬. ಮಗುವೊಂದು ಹುಟ್ಟಿತೆಮಗೆ ವರಪುತ್ರನನು ಕೊಟ್ಟರೆಮಗೆ. ಆತನ ಕೈಯಲ್ಲಿಹುದು ರಾಜ್ಯಾಡಳಿತ ‘ಅದ್ಭುತಶಾಲಿ’, ಮಂತ್ರಿಶ್ರೇಷ್ಠ’ ‘ಪರಾಕ್ರಮದೇವ’, ‘ಅನಂತ ಪಿತ’, ‘ಶಾಂತಿ ನೃಪ’ - ಇವು ಆತನ ನಾಮಾಂಕಿತ.೭. ಅಂತ್ಯವಿರದಾತನ ರಾಜ್ಯಾಭಿವೃದ್ಧಿಗೆ ಕೊನೆಯಿರದಾ ರಾಜ್ಯದ ಶಾಂತಿಗೆ. ಆಸೀನನಾಗುವನಾತ ದಾವೀದನ ಸಿಂಹಾಸನದ ಮೇಲೆ ಅಧಿಕಾರ ನಡೆಸುವನು ಆ ಸಾಮ್ರಾಜ್ಯದ ಮೇಲೆ. ಬಲಪಡಿಸುವನು ನ್ಯಾಯನೀತಿಯಿಂದದನು ಇಂದಿಗೂ ಎಂದೆಂದಿಗೂ ಸ್ಥಿರಪಡಿಸುವನದನು. ಸರ್ವಶಕ್ತಸ್ವಾಮಿಯ ಆಗ್ರಹವೆ ಸಾಧಿಸುವುದದನು.೮. ಯಕೋಬ ಕುಲದವರಿಗೆ ಶಾಪದ ಸಂದೇಶ ಒಂದನ್ನು ಸರ್ವೇಶ್ವರ ಕಳುಹಿಸಿರುವರು. ಅದು ಇಸ್ರಯೇಲರ ಮೇಲೆ ಎರಗುವುದು.೯. “ಇಟ್ಟಿಗೆಗಳು ಬಿದ್ದುಹೋಗಿವೆ. ಕೆತ್ತನೆ ಕಲ್ಲುಗಳಿಂದ ಮರಳಿ ಕಟ್ಟುವೆವು. ಕಡಿದಿರುವರು ಅತ್ತಿಮರಗಳನ್ನು, ಅಲ್ಲೇ ನೆಡುವೆವು ದೇವದಾರು ವೃಕ್ಷಗಳನ್ನು,” ಎಂದು ಗರ್ವದಿಂದ ಕೊಚ್ಚಿಕೊಳ್ಳುವ೧೦. ಎಫ್ರಯಿಮ್ ಜನರಿಗೂ ಸಮಾರ್ಯದ ನಿವಾಸಿಗಳಿಗೂ ಅದು ಗೊತ್ತಾಗುವುದು.೧೧. ಸ್ವಾಮಿಯು ರೆಚೀನನ ಶತ್ರುಗಳನ್ನು ಅವರ ವಿರುದ್ಧವಾಗಿ ಎತ್ತಿಕಟ್ಟಿರುವರು. ಅವರ ಮುಂದೆ ಸೀರಿಯರನ್ನು, ಅವರ ಹಿಂದೆ ಫಿಲಿಷ್ಟಿಯರನ್ನು - ಹೀಗೆ ಎಲ್ಲಾ ಶತ್ರುಗಳನ್ನು ಎಬ್ಬಿಸಿರುವರು.೧೨. ಇವರು ಇಸ್ರಯೇಲರನ್ನು ನುಂಗಿಬಿಡಲು ಬಾಯಿ ತೆರೆದಿದ್ದಾರೆ. ಇಷ್ಟಾದರೂ ಸ್ವಾಮಿಯ ಕೋಪ ತಣಿಯದು; ಹೊಡೆಯಲು ಎತ್ತಿದ ಕೈ ಇಳಿಯದು.೧೩. ಆದರೂ ತಮ್ಮನ್ನು ಶಿಕ್ಷಿಸಿದ ದೇವರಿಗೆ ಇಸ್ರಯೇಲರು ಅಭಿಮುಖರಾಗಲಿಲ್ಲ. ಸೇನಾಧೀಶ್ವರಸ್ವಾಮಿಯನ್ನು ಅರಸಲಿಲ್ಲ.೧೪. ಆದಕಾರಣ, ಇಸ್ರಯೇಲಿನ ತಲೆಬಾಲಗಳನ್ನೂ ತುದಿಬುಡವನ್ನೂ ಹುಲ್ಲಿನಂತೆ ಸ್ವಾಮಿ ಒಂದೇ ದಿನದಲ್ಲಿ ಕಡಿದುಬಿಡುವರು; ಅಂದರೆ ಸನ್ಮಾನ್ಯ ಹಿರಿಯರನ್ನು, ಸುಳ್ಳುಬೋಧನೆ ಮಾಡುವ ಪ್ರವಾದಿಗಳನ್ನು ಸಂಹರಿಸಿಬಿಡುವರು.೧೫. ***೧೬. ಈ ಜನರನ್ನು ನಡೆಸುವವರು ತಪ್ಪುದಾರಿಗೆ ಎಳೆಯುವಂಥವರು. ಅವರನ್ನು ಹಿಂಬಾಲಿಸುವವರೆಲ್ಲ ನಾಶವಾಗುವರು.೧೭. ಎಂದೇ ಅವರ ಯುವಕ ಯುವತಿಯರ ಬಗ್ಗೆ ಸ್ವಾಮಿಗೆ ಸಂತೋಷವಿಲ್ಲ; ಅವರ ಅನಾಥರ ಮತ್ತು ವಿಧವೆಯರ ಬಗ್ಗೆ ಸಹಾನುಭೂತಿಯಿಲ್ಲ. ಪ್ರತಿಯೊಬ್ಬನೂ ಧರ್ಮಭ್ರಷ್ಟನೂ ಅತಿ ದುಷ್ಟನೂ ಆಗಿದ್ದಾನೆ. ಪ್ರತಿಯೊಬ್ಬನ ಬಾಯಿ ನುಡಿಯುವುದು ಕೆಡುಕನ್ನೇ. ಇಷ್ಟಾದರೂ ಸರ್ವೇಶ್ವರನ ಕೋಪ ತಣಿಯದು; ಹೊಡೆಯಲು ಎತ್ತಿದ ಕೈ ಇಳಿಯದು.೧೮. ದುಷ್ಟತನ ಬೆಂಕಿಗೆ ಸಮಾನ. ಅದು ಮುಳ್ಳುಗಿಳ್ಳುಗಳನ್ನು ಸುಟ್ಟುಹಾಕುತ್ತದೆ. ಕಾಡುಪೊದೆಗಳನ್ನು ಭಸ್ಮಮಾಡುತ್ತದೆ. ಹೊಗೆಯಾಡುತ್ತಾ ಮುಗಿಲಂತೆ ಮೇಲೆ ಬೀಳುತ್ತದೆ.೧೯. ಸೇನಾಧೀಶ್ವರಸ್ವಾಮಿಯ ಕೋಪಾಗ್ನಿಯಿಂದ ನಾಡು ಸುಟ್ಟುಹೋಗಿದೆ. ಪ್ರಜೆಗಳು ಅಗ್ನಿಗೆ ಆಹುತಿಯಾಗಿದ್ದಾರೆ. ಅಣ್ಣನಿಗೆ ತಮ್ಮನ ಮೇಲೆ ದಯೆ ಇಲ್ಲದಾಗಿದೆ.೨೦. ಅತ್ತ ಕಿತ್ತುತಿಂದರೂ ಅವರಿಗೆ ತೃಪ್ತಿಯಿಲ್ಲ. ಇತ್ತ ಕುಡಿದು ಕಬಳಿಸಿದರೂ ಅವರ ಹಸಿವು ನೀಗುವುದಿಲ್ಲ. ಒಬ್ಬೊಬ್ಬನೂ ತನ್ನ ಕಂದನನ್ನೇ ಕೊಂದು ತಿನ್ನುತ್ತಾನೆ.೨೧. ಮನಸ್ಸೆ ಎಫ್ರಯಿಮನ್ನು ಎಫ್ರಯಿಮ್ ಮನಸ್ಸೆಯನ್ನು ಕಬಳಿಸುತ್ತದೆ. ಇವೆರಡೂ ಸೇರಿ ಜುದೇಯಕ್ಕೆ ವಿರುದ್ಧವಾಗಿ ಎದ್ದು ನಿಂತಿವೆ. ಇಷ್ಟಾದರೂ ಸಹ ಸ್ವಾಮಿಯ ಕೋಪ ತಣಿಯದು; ಹೊಡೆಯಲು ಎತ್ತಿದ ಕೈ ಇಳಿಯದು.ಯೆಶಾಯನ ೧೦:೧-೩೪೧. ಅನ್ಯಾಯವಾದ ನಿಬಂಧನೆಗಳನ್ನು ಕ್ರೂರವಾದ ಕಾನೂನುಗಳನ್ನು ರಚಿಸುವ ನಿಮಗೆ ಧಿಕ್ಕಾರ!೨. ನೀವು ದಲಿತರಿಗೆ ನ್ಯಾಯ ದೊರಕದಂತೆ ಮಾಡುತ್ತೀರಿ. ಬಡಬಗ್ಗರಿಂದ ಹಕ್ಕುಬಾಧ್ಯತೆಗಳನ್ನು ಕಸಿದುಕೊಳ್ಳುತ್ತೀರಿ. ವಿಧವೆಯರನ್ನು ಸೂರೆಮಾಡುತ್ತೀರಿ. ಅನಾಥರನ್ನು ಕೊಳ್ಳೆಹೊಡೆಯುತ್ತೀರಿ.೩. ದಂಡನೆಯ ದಿನದಂದು ಏನು ಮಾಡುವಿರಿ? ದೂರದಿಂದ ಬರುವ ವಿನಾಶದಿಂದ ಹೇಗೆ ಪಾರಾಗುವಿರಿ? ಸಹಾಯಕ್ಕಾಗಿ ಯಾರ ಬಳಿಗೆ ಓಡುವಿರಿ? ನಿಮ್ಮ ಆಸ್ತಿಪಾಸ್ತಿಯನ್ನು ಎಲ್ಲಿ ಅವಿತಿಡುವಿರಿ?೪. ಖೈದಿಗಳೊಂದಿಗೆ ಕಾರಾಗೃಹವನ್ನು ಸೇರುವಿರಿ; ಇಲ್ಲವೆ, ಇತರರ ಸಮೇತ ಹತರಾಗುವಿರಿ. ಇದೇ ನಿಮ್ಮ ಗತಿ. ಇಷ್ಟಾದರೂ ಸರ್ವೇಶ್ವರನ ಕೋಪ ತಣಿಯದು; ಹೊಡೆಯಲು ಎತ್ತಿದ ಕೈ ಇಳಿಯದು.೫. ಆಹಾ, ಅಸ್ಸೀರಿಯ ನಾಡೇ, ನೀನು ನನ್ನ ಕೋಪದ ದಂಡಾಯುಧ, ರೋಷದ ದೊಣ್ಣೆ.೬. ಆ ಧರ್ಮಭ್ರಷ್ಟ ಪ್ರಜೆಗೆ ಇದಿರಾಗಿ ಅಸ್ಸೀರಿಯವನ್ನು ಕಳುಹಿಸುತ್ತೇನೆ. ನನ್ನ ಕೋಪಕ್ಕೆ ಗುರಿಯಾದ ಜನರಿಗೆ ವಿರುದ್ಧ ಕಾರ್ಯವನ್ನು ಕೈಗೊಳ್ಳಲು ಆಜ್ಞೆ ಮಾಡುತ್ತೇನೆ. ನನ್ನ ಪ್ರಜೆಯನ್ನು ಸೂರೆಮಾಡಲು, ಕೊಳ್ಳೆಹೊಡೆಯಲು, ಬೀದಿಯ ಕಸದಂತೆ ತುಳಿದುಬಿಡಲು ಅದಕ್ಕೆ ಆಜ್ಞೆಮಾಡುತ್ತೇನೆ.೭. ಆದರೆ ಅಸ್ಸೀರಿಯದ ಆಲೋಚನೆಯೇ ಬೇರೆ. ಅನೇಕಾನೇಕ ಜನಾಂಗಗಳನ್ನು ತಾನೇ ಸಂಹರಿಸಿ ನಿರ್ಮೂಲಮಾಡಬೇಕೆಂಬ ಯೋಜನೆ ಅದರದು.೮. “ನನ್ನ ದಂಡನಾಯಕರೆಲ್ಲ ಅರಸರಲ್ಲವೇ?೯. ಕರ್ಕೆಮೀಷಿನ ಗತಿ ಕಲ್ನೋವಿಗೂ ಬಂತಲ್ಲವೇ? ಅರ್ಪದಿಗೆ ಬಂದ ಪಾಡು ಹಮಾತಿಗೂ ಬಂದಿತಷ್ಟೆ. ದಮಸ್ಕಸ್ಸಿನ ಅವಸ್ಥೆಯು ಸಮಾರ್ಯಕ್ಕೂ ಸಂಭವಿಸಿತು.೧೦. ಜೆರುಸಲೇಮ್ ಮತ್ತು ಸಮಾರ್ಯದ ವಿಗ್ರಹಗಳಿಗಿಂತ ಹೆಚ್ಚಿನ ಮೌಲ್ಯದ ಕೆತ್ತನೆಯ ಮೂರ್ತಿಗಳನ್ನು ಆರಾಧಿಸುವ ರಾಜ್ಯಗಳನ್ನು ನಾನು ಗೆದ್ದಿದ್ದೇನೆ.೧೧. ಸಮಾರ್ಯವನ್ನೂ ಅದರ ವಿಗ್ರಹಗಳನ್ನೂ ನಾಶಮಾಡಿದ ಪ್ರಕಾರ ಜೆರುಸಲೇಮನ್ನೂ ಅದರ ಮೂರ್ತಿಗಳನ್ನೂ ನಾಶಮಾಡುತ್ತೇನೆ” ಎಂದು ಅಸ್ಸೀರಿಯ ಕೊಚ್ಚಿಕೊಳ್ಳುತ್ತಿದೆ.೧೨. ಆದರೆ ಸರ್ವೇಶ್ವರನಾದ ನಾನು ಸಿಯೋನ್ ಪರ್ವತದಲ್ಲೂ ಜೆರುಸಲೇಮಿನಲ್ಲೂ ನನ್ನ ಗುರಿಯನ್ನು ಸಾಧಿಸಿದ ಮೇಲೆ ಆ ಅಸ್ಸೀರಿಯದ ಅರಸನನ್ನು ಅವನ ದುರಹಂಕಾರಕ್ಕಾಗಿ, ಗರ್ವದ ಭಾವನೆಗಳಿಗಾಗಿ ಸರಿಯಾಗಿ ದಂಡಿಸುವೆನು.೧೩. ಅಸ್ಸೀರಿಯದ ಅನಿಸಿಕೆಯಿದು: “ನಾನು ವಿವೇಕಿ, ನನ್ನ ಭುಜಬಲದಿಂದಲೇ ಇದನ್ನು ಮಾಡಿದ್ದೇನೆ. ನನ್ನ ಜ್ಞಾನಶಕ್ತಿಯಿಂದಲೇ ಇದನ್ನು ಸಾಧಿಸಿದ್ದೇನೆ. ನಾಡುಗಳ ಮಧ್ಯೆಯಿರುವ ಎಲ್ಲೆಗಳನ್ನು ಕಿತ್ತುಹಾಕಿದ್ದೇನೆ. ಅವು ಕೂಡಿಸಿಟ್ಟುಕೊಂಡಿದ್ದ ನಿಕ್ಷೇಪಗಳನ್ನು ಸೂರೆಮಾಡಿದ್ದೇನೆ. ಗದ್ದುಗೆಯ ಮೇಲೆ ಕುಳಿತಿರುವವರನ್ನು ಮಹಾ ವೀರನಂತೆ ಕೆಡವಿಬಿಟ್ಟಿದ್ದೇನೆ.೧೪. (ಬೇಡನು)ಹಕ್ಕಿಯ ಗೂಡನ್ನು ಕಂಡುಹಿಡಿಯುವಂತೆ ಜನಾಂಗಗಳ ಆಸ್ತಿಪಾಸ್ತಿಯನ್ನು ಹಿಡಿದುಕೊಂಡಿದ್ದೇನೆ. ಹಕ್ಕಿ ಬಿಟ್ಟುಹೋದ ಮೊಟ್ಟೆಗಳನ್ನು ಒಟ್ಟುಗೂಡಿಸಿಟ್ಟುಕೊಳ್ಳುವಂತೆ ಸಮಸ್ತ ರಾಷ್ಟ್ರಗಳನ್ನು ಒಟ್ಟುಗೂಡಿಸಿದ್ದೇನೆ. ರೆಕ್ಕೆಯಾಡಿಸಿ ಬೆದರಿಸಲು ಯಾರೂ ಇರಲಿಲ್ಲ. ಕೊಕ್ಕು ತೆರೆದು ಕೀಚುಗುಟ್ಟಲು ಯಾರೂ ಕಾಣಲಿಲ್ಲ.”೧೫. ಕೊಡಲಿ, ಕಡಿಯುವವನನ್ನೇ ಕಡಿಯಲು ನಿಂತೀತೆ? ಗರಗಸ, ಆಡಿಸುವವನನ್ನೇ ಕತ್ತರಿಸಲು ಎದೆಗೊಂಡೀತೆ? ಕೋಲು, ಹಿಡಿದವನನ್ನೇ ಹೊಡೆದಂತಾಯಿತು! ನಿರ್ಜೀವ ದೊಣ್ಣೆ ಸಜೀವ ಮನುಷ್ಯನನ್ನೇ ಬಡಿದಂತಾಯಿತು!೧೬. ಆದಕಾರಣ, ಒಡೆಯರಾದ ಸೇನಾಧೀಶ್ವರ ಸರ್ವೇಶ್ವರ ಅಸ್ಸೀರಿಯಾದ ಕೊಬ್ಬಿದ ಯೋಧರಿಗೆ ಕ್ಷಯರೋಗವನ್ನು ಬರಮಾಡುವರು. ಅವರ ದೇಹಕ್ಕೆ ಬೆಂಕಿಯಂತೆ ಉರಿಯುವ ಜ್ವರವನ್ನು ಉಂಟುಮಾಡುವರು.೧೭. ಇಸ್ರಯೇಲಿನ ಪರಂಜ್ಯೋತಿಯಾದ ದೇವರು ಅಗ್ನಿಯಂತಾಗುವರು; ಇಸ್ರಯೇಲಿನ ಪರಮಪಾವನ ಸ್ವಾಮಿ ಜ್ವಾಲೆಯಂತಾಗುವರು; ಅದು ಒಂದೇ ಒಂದು ದಿನದಲ್ಲಿ ಅಸ್ಸೀರಿಯರ ಮುಳ್ಳುಪೊದರುಗಳನ್ನೂ ಬಿಡದೆ ಎಲ್ಲವನ್ನೂ ದಹಿಸಿಬಿಡುವುದು.೧೮. ದೇಹಾತ್ಮದಂಥ ಅದರ ಉದ್ಯಾನವನವನ್ನೂ ಫಲಭರಿತ ತೋಟವನ್ನೂ ನಿರ್ಮೂಲ ಮಾಡುವುದು. ಮಾರಕರೋಗ ತಗಲಿದ ರೋಗಿಯಂತೆ ದೇಶವೆಲ್ಲವೂ ಕರಗಿಹೋಗುವುದು.೧೯. ಅದರ ಅಳಿದುಳಿದ ಮರಗಳು ಒಂದು ಕೂಸು ಕೂಡ ಎಣಿಸಿ ಬರೆಯುವಷ್ಟು ಕಡಿಮೆಯಾಗುವುವು.೨೦. ಆ ದಿನದಂದು ಅಳಿದುಳಿದ ಇಸ್ರಯೇಲರು, ತಪ್ಪಿಸಿಕೊಂಡ ಯಕೋಬ ಮನೆತನದವರು ತಮ್ಮನ್ನು ಬಾಧಿಸಿದವರನ್ನು ನೆಮ್ಮುವುದಿಲ್ಲ. ಬದಲಿಗೆ ಇಸ್ರಯೇಲರ ಪರಮಪಾವನ ಸ್ವಾಮಿಯಾದ ಸರ್ವೇಶ್ವರನನ್ನೇ ನಿಶ್ಚಯವಾಗಿ ಆಶ್ರಯಿಸುವರು.೨೧. ಯಕೋಬ ಮನೆತನದವರಲ್ಲಿ ಅಳಿದುಳಿದ ಕೆಲವರು ಪರಾಕ್ರಮಿಯಾದ ದೇವರ ಕಡೆಗೆ ತಿರುಗಿಕೊಳ್ಳುವರು.೨೨. ಇಸ್ರಯೇಲೇ, ನಿನ್ನ ಜನರು ಸಮುದ್ರದ ಮರಳಿನಂತೆ ಅಸಂಖ್ಯಾತರಾಗಿ ಇದ್ದರೂ ಅವರಲ್ಲಿ ಕೆಲವರು ಮಾತ್ರ ಉಳಿದು ಹಿಂದಿರುಗುವರು. ಅವರ ಅಳಿವು ಶಾಸನಬದ್ಧವಾದುದು ಹಾಗೂ ಸಂಪೂರ್ಣವಾಗಿ ನ್ಯಾಯಸಮ್ಮತವಾದುದು.೨೩. ಹೌದು, ಪ್ರಭುವಾದ ಸೇನಾಧೀಶ್ವರ ಸರ್ವೇಶ್ವರಸ್ವಾಮಿ, ತಮ್ಮ ಆಜ್ಞೆಯ ಪ್ರಕಾರ ನಾಡಿನಲ್ಲೆಲ್ಲಾ ಪೂರ್ಣ ವಿನಾಶವನ್ನು ಬರಮಾಡುವರು.೨೪. ಹೀಗಿರಲು ಪ್ರಭುವಾದ ಸೇನಾಧೀಶ್ವರ ಸರ್ವೇಶ್ವರಸ್ವಾಮಿ ಹೇಳುವುದೇನೆಂದರೆ: “ಸಿಯೋನಿನಲ್ಲಿ ವಾಸಿಸುವ ನನ್ನ ಜನರೇ, ಈಜಿಪ್ಟಿನವರು ನಿಮಗೆ ಮಾಡಿದಂತೆ ಅಸ್ಸೀರಿಯದವರು ನಿಮ್ಮನ್ನು ಬಡಿಗೆಯಿಂದ ಹೊಡೆದು, ನಿಮಗೆ ವಿರುದ್ಧ ದೊಣ್ಣೆಯನ್ನು ಎತ್ತುವಾಗ ಅವರಿಗೆ ಹೆದರಬೇಡಿ;೨೫. ನಿಮ್ಮ ಮೇಲಿರುವ ನನ್ನ ಕೋಪ ಬಹುಬೇಗನೆ ಇಳಿದು, ಅವರ ಮೇಲೆ ತಿರುಗಿಕೊಳ್ಳುವುದು.೨೬. ಸೇನಾಧೀಶ್ವರ ಸರ್ವೇಶ್ವರಸ್ವಾಮಿಯಾದ ನಾನು, ಒಮ್ಮೆ ಓರೇಬನ ಬಂಡೆಯ ಬಳಿ ಮಿದ್ಯಾನರಿಗೆ ಮಾಡಿದಂತೆ, ಅಸ್ಸೀರಿಯದವರನ್ನು ಚಾಟಿಯಿಂದ ಥಳಿಸುವೆನು. ಕೆಂಪುಸಮುದ್ರದಲ್ಲಿ ಈಜಿಪ್ಟರನ್ನು ದಂಡಿಸಿದಂತೆ ಅಸ್ಸೀರಿಯದವರನ್ನು ದಂಡಿಸಲು ದೊಣ್ಣೆಯನ್ನೆತ್ತುವೆನು.೨೭. ಆ ದಿನ ಬಂದಾಗ ಅವರು ನಿಮ್ಮ ಮೇಲೆ ಹೊರಿಸಿರುವ ಗುಲಾಮಗಿರಿಯನ್ನು ಕಳಚಿಹಾಕಲಾಗುವುದು. ನಿಮ್ಮ ಕೊರಳಿಗೆ ಕಟ್ಟಿದ ದಾಸ್ಯದ ನೊಗವನ್ನು ಮುರಿದುಹಾಕಲಾಗುವುದು.”೨೮. ಶತ್ರುಸೇನೆ ಅಯ್ಯಾಥಿನ ಮೇಲೆ ಬಂದು ಇಳಿದಿದೆ. ಮಿಗ್ರೋನನ್ನು ಹಾದುಹೋಗಿದೆ; ಮಿಕ್ಮಾಷಿನಲ್ಲಿ ತನ್ನ ಸಾಮಗ್ರಿಗಳನ್ನು ಬಿಟ್ಟಿದೆ.೨೯. ಕಣಿವೆಯನ್ನು ದಾಟಿದೆ; ‘ಗೆಬಾದಲ್ಲಿ ದಂಡಿಳಿಸೋಣ’ ಎಂದು ಹೇಳುತ್ತಿದೆ. ರಾಮಾ ಜನತೆ ನಡುಗುತ್ತಿದೆ, ಸೌಲನ ಗಿಬೆಯದ ಜನ ಪಲಾಯನ ಗೈದಿದೆ.೩೦. ಗಲ್ಲೀಮ್ ಗ್ರಾಮಸ್ಥರೇ, ಕೂಗಿ ಕಿರಿಚಿಕೊಳ್ಳಿ. ಲಯೇಷದ ಜನರೇ, ಕಿವಿಗೊಡಿರಿ. ಅನಾತೋತಿನ ಜನರೇ, ಪ್ರತ್ಯುತ್ತರ ಕೊಡಿ.೩೧. ದಿಕ್ಕುಪಾಲಾಗಿಹರು ಮದ್ಮೇನಿನ ಜನರು; ವಲಸೆ ಹೋಗಿಹರು ಗೇಬೆಮಿನ ನಿವಾಸಿಗಳು.೩೨. ಅದೇ ದಿನ ಬೀಡುಬಿಡುವರು ಶತ್ರುಗಳು ನೋಬಿನಲ್ಲಿ; ಸಿಯೋನ್ ಬೆಟ್ಟದ ಕಡೆಗೆ, ಜೆರುಸಲೇಮಿನ ಗುಡ್ಡದ ಕಡೆಗೆ ಮುಷ್ಟಿ ತೋರಿಸುತ್ತಿಹರಿದೊ ಆ ದಿಕ್ಕಿಗೆ.೩೩. ಇಗೋ, ಪ್ರಭುವಾದ ಸೇನಾಧೀಶ್ವರ ಸರ್ವೇಶ್ವರಸ್ವಾಮಿ ಮರದ ಕೊಂಬೆಗಳನ್ನು ದುಡುಮ್ಮನೆ ಬೀಳಿಸುವರು. ಉನ್ನತವಾದ ವೃಕ್ಷಗಳನ್ನು ಕಡಿದುಹಾಕುವರು. ಎತ್ತರದ ಮರಗಳನ್ನು ನೆಲಕ್ಕೆ ಉರುಳಿಸುವರು.೩೪. ಕಾಡಿನ ಪೊದೆಗಳನ್ನು ಕೊಡಲಿಯಿಂದ ಕಡಿದುಬಿಡುವರು. ಲೆಬನೋನಿನ ಭವ್ಯ ಮರಗಳು ಬಿದ್ದುಹೋಗುವುವು.ಕೀರ್ತನೆಗಳು ೧೦೬:೧-೫೧. ಪ್ರಭು ದಯಾಪೂರಿತ, ಆತನ ಪ್ರೀತಿ ಶಾಶ್ವತ I ತೋರಿ ಆತನಿಗೆ ನಿಮ್ಮ ಸ್ತೋತ್ರ ಕೃತಜ್ಞತಾ II೨. ವರ್ಣಿಸಬಲ್ಲವನಾರು ಆತನ ಮಹತ್ಕಾರ್ಯಗಳನು? I ಯೋಗ್ಯರೀತಿಯಲಿ ಹೊಗಳಬಲ್ಲವರಾರು ಆತನನು? II೩. ನ್ಯಾಯದಂತೆ ನಡೆಯುವವರು ಧನ್ಯರು I ಅವಿರತವಾಗಿ ನೀತಿವಂತರು ಧನ್ಯರು II೪. ಮರೆಯಬೇಡೆನ್ನನು ಪ್ರಭು, ನಿನ್ನ ಪ್ರಜೆಗೆ ದಯೆತೋರುವಾಗ I ನೆರವು ನೀಡೆನಗೆ ಸ್ವಾಮಿ, ನೀನಾ ಜನರನು ಉದ್ಧರಿಸುವಾಗ II೫. ನೀನಾರಿಸಿಕೊಂಡಿರುವ ಪ್ರಗತಿಯನು ನಾ ಕಾಣಮಾಡು I ನಿನ್ನ ಜನಾಂಗದವರ ಸಂತಸವನು ನಾ ಸವಿಯಮಾಡು I ನಿನ್ನ ಸ್ವಕೀಯರ ಮಹಿಮೆಯಲ್ಲೆನಗೆ ಪಾಲನ್ನು ನೀಡು IIಜ್ಞಾನೋಕ್ತಿಗಳು ೨೫:೧-೨೧. ಇವು ಕೂಡ ಸೊಲೊಮೋನನ ಜ್ಞಾನೋಕ್ತಿಗಳು. ಜುದೇಯದ ಅರಸ ಹಿಜ್ಕೀಯನ ಲೇಖಕರು ಸಂಗ್ರಹಿಸಿದ ನುಡಿಗಳು:೨. ವಿಷಯಗಳನ್ನು ರಹಸ್ಯವಾಗಿಡುವ ದೇವರಿಗೆ ಮಹಿಮೆ; ವಿಷಯಗಳನ್ನು ವಿಮರ್ಶಿಸುವ ರಾಜರಿಗೆ ಹಿರಿಮೆ.ಕೊರಿಂಥಿಯರಿಗೆ ೨ ೧:೧-೨೪೧. ಕೊರಿಂಥದಲ್ಲಿರುವ ದೇವರ ಸಭೆಗೂ ಅಖಾಯ ಸೀಮೆಯಲ್ಲಿರುವ ಎಲ್ಲಾ ದೇವಜನರಿಗೂ - ದೇವರ ಚಿತ್ತಾನುಸಾರ ಕ್ರಿಸ್ತಯೇಸುವಿನ ಪ್ರೇಷಿತನಾದ ಪೌಲನು ಸಹೋದರ ತಿಮೊಥೇಯನೊಡನೆ ಸೇರಿ ಬರೆಯುವ ಪತ್ರ.೨. ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸುಕ್ರಿಸ್ತರಿಂದಲೂ ನಿಮಗೆ ಆಶೀರ್ವಾದವೂ ಶಾಂತಿಸಮಾಧಾನವೂ ಲಭಿಸಲಿ!೩. ನಮ್ಮ ಪ್ರಭು ಯೇಸುಕ್ರಿಸ್ತರ ತಂದೆಯಾದ ದೇವರಿಗೆ ಸ್ತೋತ್ರವಾಗಲಿ. ಅವರು ಕರುಣಾಭರಿತ ತಂದೆ; ಸಕಲ ಸಾಂತ್ವನವನ್ನೀಯುವ ದೇವರು.೪. ನಮಗೆ ಒದಗುವ ಎಲ್ಲಾ ಸಂಕಷ್ಟಗಳಲ್ಲಿ ಅವರು ನಮ್ಮನ್ನು ಸಂತೈಸುತ್ತಾರೆ. ಹೀಗೆ ದೇವರಿಂದ ದೊರೆತ ಆದರಣೆಯಿಂದ ವಿವಿಧ ಸಂಕಷ್ಟಗಳಲ್ಲಿ ನರಳುತ್ತಿರುವವರನ್ನು ಸಂತೈಸುವುದಕ್ಕೆ ನಾವು ಶಕ್ತರಾಗುತ್ತೇವೆ.೫. ಕ್ರಿಸ್ತಯೇಸುವಿನ ಯಾತನೆಯು ನಮ್ಮ ಬಾಳಿನಲ್ಲಿ ತುಂಬಿರುವಂತೆ ಅವರ ಮುಖಾಂತರ ಲಭಿಸುವ ಸಾಂತ್ವನವೂ ನಮ್ಮಲ್ಲಿ ತುಂಬಿರುತ್ತದೆ.೬. ನಾವು ಕಷ್ಟಸಂಕಟಗಳನ್ನು ಸಹಿಸಬೇಕಾಗುವುದು ಸಹ ನಿಮ್ಮ ಉಪಶಮನ ಹಾಗೂ ಸಾಂತ್ವನಕ್ಕಾಗಿಯೇ. ನಮ್ಮ ಕಷ್ಟಸಂಕಟಗಳು ನಿವಾರಣೆಯಾದರೆ ಅದೂ ನಿಮ್ಮ ಆದರಣೆಗಾಗಿಯೇ. ನಾವು ಪಡುವ ಯಾತನೆಯನ್ನು ನೀವು ಸಹನೆಯಿಂದ ಅನುಭವಿಸುವಂತೆ ಅದು ಹುರಿದುಂಬಿಸುತ್ತದೆ.೭. ನಿಮ್ಮಲ್ಲಿ ನಮಗೆ ಅಚಲವಾದ ಭರವಸೆಯಿದೆ. ಏಕೆಂದರೆ, ನಮ್ಮ ಯಾತನೆಗಳಲ್ಲಿ ನೀವು ಪಾಲುಗೊಳ್ಳುವಂತೆ ನಾವು ಪಡೆಯುವ ಸಾಂತ್ವನದಲ್ಲಿಯೂ ನೀವು ಸಹಭಾಗಿಗಳಾಗಿದ್ದೀರಿ, ಎಂಬುದು ನಮಗೆ ಗೊತ್ತಿದೆ.೮. ಸಹೋದರರೇ, ಏಷ್ಯಾ ಪ್ರಾಂತ್ಯದಲ್ಲಿ ನಮಗೊದಗಿದ ಹಿಂಸೆಬಾಧೆಗಳು ನಿಮಗೆ ತಿಳಿದಿವೆಯಷ್ಟೆ. ಅಲ್ಲಿ ಸಹಿಸಲಸಾಧ್ಯವಾದಷ್ಟು ಸಂಕಟವನ್ನು ಅನುಭವಿಸಬೇಕಾಯಿತು. ನಾವು ಬದುಕುವ ಆಶೆಯನ್ನೇ ಬಿಡಬೇಕಾಯಿತು.೯. ನಿಜವಾಗಿಯೂ ನಮಗೆ ಮರಣದಂಡನೆ ವಿಧಿಸಲಾಗಿದೆಯೆಂದು ಭಾವಿಸಿದೆವು. ಇದರಿಂದ ನಾವು ನಮ್ಮ ಸ್ವಂತ ಶಕ್ತಿಯನ್ನೇ ನಂಬಿಕೊಳ್ಳದೆ, ಸತ್ತವರನ್ನು ಪುನರುತ್ಥಾನಗೊಳಿಸುವ ದೇವರಲ್ಲಿ ಭರವಸೆಯಿಡುವಂತೆ ಹೀಗಾಯಿತು.೧೦. ದೇವರೇ ನಮ್ಮನ್ನು ಈ ಭಯಂಕರ ಮರಣದಿಂದ ಪಾರುಮಾಡಿದರು. ಇನ್ನು ಮುಂದಕ್ಕೂ ಪಾರುಮಾಡುವರು. ಹೌದು, ನೀವು ಸಹ ನಮಗಾಗಿ ಪ್ರಾರ್ಥಿಸುತ್ತಾ ನಮ್ಮೊಡನೆ ಸಹಕರಿಸಿದರೆ, ಇನ್ನು ಮುಂದಕ್ಕೂ ನಮ್ಮನ್ನು ಪಾರುಮಾಡುವರು ಎಂಬ ಭರವಸೆಯಿಂದ ಇದ್ದೇವೆ. ಇದರ ಫಲವಾಗಿ ನಮಗೆ ದೊರೆಯುವ ವರದಾನಗಳಿಗಾಗಿ ಅನೇಕರು ನಮ್ಮ ಪರವಾಗಿ ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸುವರು.೧೧. ***೧೨. ಲೋಕದ ಜನರೊಡನೆ, ವಿಶೇಷವಾಗಿ ನಿಮ್ಮೊಡನೆ ವ್ಯವಹರಿಸುವಾಗ ನಾವು ಕೇವಲ ಮಾನವ ಜ್ಞಾನವನ್ನಾಶ್ರಯಿಸದೆ ದೇವರ ಅನುಗ್ರಹವನ್ನೇ ಆಶ್ರಯಿಸಿ ನಡೆದುಕೊಂಡೆವು. ದೇವದತ್ತವಾದ ನಿಷ್ಕಪಟ ಮನಸ್ಸಿನಿಂದಲೂ ಪರಿಶುದ್ಧತೆಯಿಂದಲೂ ವರ್ತಿಸಿದೆವು. ಇದಕ್ಕೆ ನಮ್ಮ ಮನಸ್ಸೇ ಸಾಕ್ಷಿ. ಇದಕ್ಕಾಗಿ ನಾವು ಹೆಮ್ಮೆಪಡುತ್ತೇವೆ.೧೩. ನೀವು ಓದಿ ಗ್ರಹಿಸಿಕೊಳ್ಳಬಲ್ಲ ವಿಷಯಗಳನ್ನು ಮಾತ್ರವೇ ನಾವು ನಿಮಗೆ ಬರೆದಿದ್ದೇವೆ. ನಮ್ಮನ್ನು ನೀವಿನ್ನೂ ಭಾಗಶಃ ಅರಿತುಕೊಂಡಿದ್ದೀರಿ. ಮುಂದಕ್ಕಾದರೂ ನೀವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವಿರೆಂಬ ಭರವಸೆ ನನಗಿದೆ. ಹಾಗೆಯೇ ‘ಪ್ರಭುವಿನ ದಿನದಂದು ನಾವು ನಿಮ್ಮನ್ನು ಕುರಿತು ಹೆಮ್ಮೆಪಡುವಂತೆ ನೀವೂ ನಮ್ಮನ್ನು ಕುರಿತು ಹೆಮ್ಮೆಪಡುವಿರಿ.೧೪. ***೧೫. ಈ ನಂಬಿಕೆಯಿಂದಲೇ ನಿಮಗೆ ಇಮ್ಮಡಿ ಸಂತೋಷ ಲಭಿಸಬೇಕೆಂದು ನಾನು ನಿಮ್ಮ ಬಳಿಗೆ ಈ ಮುಂಚಿತವಾಗಿಯೇ ಬರಬೇಕೆಂದಿದ್ದೆ.೧೬. ನಾನು ಮಕೆದೋನಿಯಕ್ಕೆ ಹೋಗುವ ದಾರಿಯಲ್ಲಿ ಒಮ್ಮೆ ನಿಮ್ಮನ್ನು ಭೇಟಿಮಾಡಬೇಕು ಎಂದಿದ್ದೆ; ಮಕೆದೋನಿಯದಿಂದ ಹಿಂದಿರುಗುವಾಗ ಇನ್ನೊಮ್ಮೆ ಭೇಟಿಯಿತ್ತು ನಿಮ್ಮ ನೆರವಿನಿಂದ ಜುದೇಯ ಪ್ರವಾಸವನ್ನು ಕೈಗೊಳ್ಳಬೇಕೆಂದು ಆಲೋಚಿಸಿದೆ.೧೭. ಹೀಗೆ ಆಲೋಚಿಸುತ್ತಿದ್ದಾಗ ನಾನು ಚಂಚಲಚಿತ್ತನಾಗಿದ್ದೆನೋ? ಕೇವಲ ಪ್ರಾಪಂಚಿಕನಂತೆ ಈ ಕ್ಷಣ ಹೌದು, ಮರುಕ್ಷಣ ಇಲ್ಲ ಎಂದು ಹೇಳುವವನಂತಿದ್ದೆನೋ?೧೮. ಎಂದಿಗೂ ಇಲ್ಲ, ನಾನು ನಿಮಗೆ ಕೊಟ್ಟ ಮಾತು ದ್ವಂದ್ವಾರ್ಥವುಳ್ಳದ್ದಾಗಿರಲಿಲ್ಲ. ಇದಕ್ಕೆ ದೇವರೇ ಸಾಕ್ಷಿ.೧೯. ನಾವು, ಅಂದರೆ ಸಿಲ್ವಾನ, ತಿಮೊಥೆಯ ಮತ್ತು ನಾನು, ಪ್ರಚಾರಮಾಡಿದ ದೇವರ ಪುತ್ರರಾದ ಯೇಸುಕ್ರಿಸ್ತರು, ಈ ಕ್ಷಣ ಹೌದು, ಮರುಕ್ಷಣ ಇಲ್ಲ ಎಂದು ಹೇಳುವವರಲ್ಲ, ಅವರು ದೇವರ ತಥಾಸ್ತು ಆಗಿದ್ದಾರೆ.೨೦. ಏಕೆಂದರೆ, ದೇವರು ಮಾಡಿದ ಸಮಸ್ತ ವಾಗ್ದಾನಗಳಿಗೂ ‘ಹೌದು’ ಎಂಬ ಉತ್ತರ ಸಾಕ್ಷಾತ್ ಅವರೇ. ಈ ಕಾರಣದಿಂದಲೇ ನಾವು ದೇವರ ಮಹಿಮೆಯನ್ನು ಸಾರುವಾಗ ಯೇಸುಕ್ರಿಸ್ತರ ಮುಖಾಂತರವೇ ‘ಆಮೆನ್’ ಎನ್ನುತ್ತೇವೆ.೨೧. ನಿಮ್ಮನ್ನೂ ನಮ್ಮನ್ನೂ ಕ್ರಿಸ್ತಯೇಸುವಿನಲ್ಲಿ ಒಂದಾಗಿಸಿ ಸ್ಥಿರಪಡಿಸಿದವರು ದೇವರೇ. ನಮ್ಮನ್ನು ಅಭಿಷೇಕಿಸಿದವರೂ ಮೀಸಲಾಗಿಟ್ಟವರೂ ದೇವರೇ.೨೨. ಅವರೇ ನಮ್ಮ ಮೇಲೆ ತಮ್ಮ ಮುದ್ರೆಯನ್ನೊತ್ತಿ ನಮ್ಮ ಅಂತರಂಗದಲ್ಲಿ ಪವಿತ್ರಾತ್ಮ ಅವರನ್ನು ಖಾತರಿಯಾಗಿ ಇರಿಸಿದ್ದಾರೆ.೨೩. ನಿಮಗೆ ತೊಂದರೆ ಆಗಬಾರದೆಂದು ನಾನು ಕೊರಿಂಥಕ್ಕೆ ಬರಲಿಲ್ಲ. ಇದನ್ನು ಹೃದಯಪೂರ್ವಕವಾಗಿ ಹೇಳುತ್ತಿದ್ದೇನೆ. ಇದಕ್ಕೆ ದೇವರೇ ಸಾಕ್ಷಿ.೨೪. ನಿಮ್ಮ ವಿಶ್ವಾಸದ ಬಗ್ಗೆ ನಾವು ದಬ್ಬಾಳಿಕೆ ನಡೆಸುತ್ತಿದ್ದೇವೆಂದು ತಿಳಿಯಬೇಡಿ; ವಿಶ್ವಾಸದಲ್ಲಿ ನೀವು ದೃಢರಾಗಿಯೇ ಇದ್ದೀರಿ. ನಿಮ್ಮ ಸಂತೋಷಕ್ಕಾಗಿ ನಾವು ನಿಮ್ಮೊಡನೆ ಸಹಕರಿಸುತ್ತೇವೆ. Kannada Bible (KNCL) 2016 No Data